Monday, July 18, 2016

ದುರಗವ್ ನುಂಗ್ಲಿ

”Hello... dnt be selfish by taking care of your children only !" ದೂರದಲ್ಲೆಲ್ಲೋ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆಕೆ ಎದ್ದುಬಂದು ಕೂಗಿದಾಗ, ಒಂದು ನಿಮಿಷವೂ ಈ ಬೆಂಗಳೂರಿನಲ್ಲಿರಲಾರೆ ಎನ್ನುವಷ್ಟು ಕುಸಿದುಹೋದೆ. ಹೆಚ್ಚುತ್ತಿದ್ದ ಉಸಿರಿನ ವೇಗವನ್ನು ತಗ್ಗಿಸಿಕೊಳ್ಳುತ್ತಲೇ ಮೆಟ್ಟಿಲಿಳಿದು ಓಡುತ್ತಿದ್ದ ಮಗುವನ್ನು ಎತ್ತಿಕೊಂಡು ಬಂದೆ. ಸಿನೆಮಾ ಶುರುವಾದಾಗಿನಿಂದಲೂ ಓಡಾಡಿಕೊಂಡಿದ್ದ ಮಕ್ಕಳೊಂದಿಗೆ ನನ್ನ ಮಗಳನ್ನೂ ಸೇರಿಸಿ ಅವರಿನ್ನೇನು ಮೆಟ್ಟಿಲಿಳಿಯುತ್ತಾರೆ ಎನ್ನುವ ಹೊತ್ತಿಗೆ, ಹಿಡಿದುಕೊಂಡು ಬರುವ ಕೆಲಸವನ್ನು ನಾನೇ ವಹಿಸಿಕೊಂಡಿದ್ದೆ.

ಐದು ವರ್ಷದೊಳಗಿನ ಮಕ್ಕಳಲ್ಲಿ ಅವನಿ ಎಂಬ ಪುಟ್ಟಿಯ ಅಜ್ಜ ಅಜ್ಜಿ ಮತ್ತು ಅಮ್ಮ ನಮ್ಮ ಹಿಂಬದಿಯೇ ಕುಳಿತಿದ್ದರು. ಅವನಿ ಇಷ್ಟೊಂದು ಓಡಾಡುತ್ತಿದ್ದರೂ ಸುಮ್ಮನೇ ಕುಳಿತಿದ್ದಾರಲ್ಲ ಎನ್ನಿಸಿತು. ಮಗಳಿಗೆ ಚಕ್ಕುಲಿ ಕೊಡುವಾಗ, ಅವಳಿಗೂ ಕೊಡಹೋದರೆ, 'no my mom wl scold' ಎಂದಳು. ಎಷ್ಟು ಒತ್ತಾಯಿಸಿದರೂ ಅದೇ ಉತ್ತರ. ಮಗು ಅಲ್ಲವೆ? ಮತ್ತೆ ಮತ್ತೆ ಬಂದು ಬಳಿ ನಿಲ್ಲುತ್ತಿತ್ತು. 'Want to sleep' ಎನ್ನುತ್ತಿದ್ದಳು. ಹೋಗು ಅಮ್ಮನ ಬಳಿ ಮಲಗು ಎಂದರೆ ಸುಮ್ಮನಾಗುತ್ತಿದ್ದಳು. ಕೊನೆಗೆ, ಅವರಮ್ಮನೆಡೆ ತಿರುಗಿದ ಹಾಗೆ ಮಾಡಿದೆ. ಹೇಯ್ ತಗೋ ಚಕ್ಕುಲಿ, ಅಮ್ಮ ಪರ್ಮಿಷನ್ ಕೊಟ್ಟಿದಾರೆ ಅಂದೆ. Really? ಎಂದು ಕತ್ತಲಲ್ಲೇ ಕಣ್ಣರಳಿಸಿದ್ದು ನಿಚ್ಚಳವಾಗಿ ಕಂಡಿತು.

ಅರೆ ಈ ಅವನಿಯ ಮನೆಯವರೆಲ್ಲ ಯಾಕೆ ಹೀಗೆ ಸಂಬಂಧವಿಲ್ಲದವರಂತೆ ಕುಳಿತಿದ್ದಾರೆ? ಎಂದುಕೊಳ್ಳುತ್ತಲೆ, ಸಂಭಾಳಿಸುತ್ತಿದ್ದೆ. ಉಳಿದೆರಡು ಹುಡುಗರ ಅಪ್ಪ ಅಮ್ಮ ಎಲ್ಲಿ ಕುಳಿತಿದ್ದರೋ ಗೊತ್ತಿಲ್ಲ. ಇಷ್ಟೆಲ್ಲ ಆಗುತ್ತಿರುವಾಗಲೇ ಅದ್ಯಾರೋ ಹೆಣ್ಣುಮಗಳೊಬ್ಬಳು ನನ್ನ ಮೇಲೆ ಕೂಗಿ ಹೋಗಿದ್ದಳು; "Hello... dnt be selfish by taking care of your children only! ಹೀಗಾದಾಗಲೂ ಆ ಎರಡು ಮಕ್ಕಳ ಅಪ್ಪ ಅಮ್ಮಂದಿರು ಮುಂದೆ ಬರಲಿಲ್ಲ. 'ಬಾಯ್ಮುಚ್ಕೊಂಡ್ ಕೂತಿದ್ರೆ ಸರಿ ಈಗ' ಹಿಂದಿನಿಂದೊಂದು ಧ್ವನಿ ಬಂದಿತು. ಆಗಷ್ಟೇ ಅವನಿಯ ಅಮ್ಮನ ಧ್ವನಿಯ ಪರಿಚಯವಾಯಿತು. ಸಿನೆಮಾ ಮುಗಿಯಿತು, ನನ್ನೊಳಗೆ ನಾ ಒದ್ದಾಡಿಕೊಂಡು ಎದ್ದು ಬರುವಾಗ ಇಂಗ್ಲಿಷಿನಲ್ಲಿ ಒದರಿ ಹೋಗಿದ್ದವಳು ಕಂಡಳು. ಜೊತೆಗಿದ್ದವನ ತೋಳಿಗೆ ಕೈಹಾಕಿ ಕೊಕ್ಕಾಡಿಸಿ ನಗುತ್ತಿದ್ದಳು. ಬಹಳೇ ಒಪ್ಪವಾಗಿ ಅಲಂಕರಿಸಿಕೊಂಡಿದ್ದ ಅವಳು ಮತ್ತೊಮ್ಮೆ ತಿರುಗಿ ನೋಡಬಹುದಾದಷ್ಟು ಚೆಂದ ಕಾಣುತ್ತಿದ್ದಳು. ಕನ್ನಡದವಳಂತೂ ಅಲ್ಲ, ಬಹುಶಃ ಸಿನೆಮಾ ನೋಡುವಾಗ ಭಾಷೆ ಅರ್ಥವಾಗದೇ, ಹೀಗೆ ಕಿರಿಕಿರಿ ಮಾಡಿಕೊಂಡಳೋ ಏನೋ ಎಂದು ಮನಸನ್ನು ಸಮಾಧಾನಗೊಳಿಸಲು ನೋಡಿದೆ. ಆದರೆ, ಇಂಥ ಹುಸಿಕಾರಣಕ್ಕೆಲ್ಲ ನಾ ಸುಮ್ಮನಾಗಲಾರೆ ಎಂದಿತು ಒಳಮನಸ್ಸು.

ಈವತ್ತು ಮಧ್ಯಾಹ್ನ ಮಗಳನ್ನು ಶಾಲೆಯಿಂದ ಕರೆದುಕೊಂಡು ಬರುವಾಗಲೂ ಆಕೆ ಕಾಡುತ್ತಿದ್ದಳು, ಏಯ್ ನಿನ್ ದುರಗವ್ ನುಂಗ್ಲಿ ಎಂದು ಗಾಡಿ ಓಡಿಸುತ್ತಿದ್ದೆ. ಇನ್ನೇನು ತಲೆಮೇಲೊಂದ್ ಸಣ್ಣ ಟೊಂಗೆ ಮುರಿದುಕೊಂಡು ಬಿದ್ದು ಅದು ದೊಡ್ಡ ಸುದ್ದಿಯಾಗಿ... ಯಾಕ್ ಉಸಾಬರಿ ಅಂತ ಗಾಡಿ ಸೈಡಿಗೆ ಹಾಕೇಬಿಟ್ಟೆ. ಆ ಪರಿ ಗಾಳಿ ರೊಚ್ಚಿಗೆದ್ದಿತ್ತು, ಮರದ ಕೈ-ಬೆರಳುಗಳು ಉದುರಿ ಬೀಳುತ್ತಿದ್ದವು. ಅಲ್ಲೊಂದು ಅಂಗಡಿ ಹೊಕ್ಕೆ. ಸೊಪ್ಪಿನಜ್ಜನೂ ಸೈಕಲ್ ನಿಲ್ಲಿಸಿದ. ಎಲ್ಲಾ ಸೊಪ್ಪುಗಳ ಮಧ್ಯೆ ತಾಜಾ ಅನ್ಸಿದ್ದು ಈರುಳ್ಳಿಸೊಪ್ಪು. ಸೇಟಮ್ಮಂಗಾದ್ರೆ ಇಪ್ಪತ್ತು ನಿಮಗಾದ್ರೆ ಹತ್ತು ಅಂದ. ಅಷ್ಟೊತ್ತಿಗೆ ಗಾಳಿ ಶಾಂತಗೊಂಡು ಮಳೆ ಹನಿಯತೊಡಗಿತು. ಅಲ್ಲಿಗೆ ದುರಗವ್ವ ಪ್ರತ್ಯಕ್ಷಳಾಗೇಬಿಟ್ಟಳು. ಎದೆಗೆ ಕೂಸುಕಟ್ಟಿಕೊಂಡು, ತಲೆಮೇಲೆ ದುರುಗವ್ವನನ್ನು ಹೊತ್ತುಕೊಂಡು ದ್ಯಾಮವ್ವ ಬಂದಳು. ಶಿರಸಿಯ ದೇವಿಕೆರೆ ಅವಳ ಊರು. ಅವಳ ಜೊತೆಗಿದ್ದ ಹುಡುಗಿ ಗಿರಿಜಾ.

'ನಮ್ಮೂರ್ಕಡೆ ಈಗ ಜೋರ್ಮಳಿ, ದುಡಕಂಡ್ ತಿನ್ನಕ್ಕಾಗಲ್ರಿ. ವರ್ಸದಾಗ ಆರ್ತಿಂಗ್ಳು ಬೆಂಗ್ಳೂರಿಗ್ ಬರ್ತೀವ್ರಿ. ಇಲ್ಲೇ ಗೊಲ್ರಹಟ್ಟ್ಯಾಗ್ ಗುಡಸ್ಲ ಹಾಕ್ಕೊಂಡೇವಿ, ಒಂದೈವತ್ ಮಂದಿ ಬಂದೇವಿ' ಕುಸುಕುಸು ಮಾಡಿ ಎದೆಗೆ ಮುಖ ತಿಕ್ಕುತ್ತಿದ್ದ ನಾಲ್ಕು ತಿಂಗಳ ಸಂದೀಪನಿಗೆ ನಿಂತುಕೊಂಡೇ ಹಾಲು ಕುಡಿಸತೊಡಗಿದಳು ದ್ಯಾಮವ್ವ. ಅವಳ ಜತೆಗಿದ್ದ ಸಂಬಂಧಿಕರ ಹುಡುಗಿಯ ಶಾಲೆ ಬಗ್ಗೆ ಕೇಳಿದಾಗ, ಆಕೆ ಹೋಗುವುದಿಲ್ಲ ಎಂದಳು. ಮತ್ತೆ ನಿಮ್ಮ ಮಕ್ಕಳ ಶಾಲೆ ಗತಿಯೇನು? ಹೀಗಾದ್ರೆ ಎಂದಿದ್ದಕ್ಕೆ, ಎಲ್ಲಿರುತ್ತೀವೋ ಅಲ್ಲಿಗೆ ಕಳಿಸುತ್ತೇವೆ ಎಂದಳು. ಈ ಹುಡುಗಿಗೆ ವಯಸ್ಸೆಷ್ಟು ಅಂದಿದ್ದಕ್ಕೆ ಇಬ್ಬರೂ ಗೊತ್ತಿಲ್ಲ ಎಂದು ನಕ್ಕರು. ಪಿಚ್ಚರ್ ನೋಡ್ತೀಯಾ ಅಂದಿದ್ದಕ್ಕೆ ಆ ಹುಡುಗಿ, 'ಹಾಂ ದರ್ಶನ್ ಸೇರ್ತಾನ' ಅಂದ್ಲು. ನೀವ್ ಯಾವ ಪಿಚ್ಚರ್ ನೋಡಿದ್ರಿ ಎಂದು ದ್ಯಾಮವ್ವನಿಗೆ ಕೇಳಿದ್ದಕ್ಕೆ, 'ನಾವೆಲ್ ನೋಡಾಕ್ ಹೋಗುಣ್ರಿ. ಒಂದೂ ಪಿಚ್ಚರ್ ನೋಡೇ ಇಲ್ಲ. ನಮ್ ಗಂಡಸ್ರು ಕರ್ಕೊಂಡ್ ಹೋಗೂದಿಲ್ಲ, ನೀವ್ ಹೋಗಬಾಡದು ಅಂಥಲ್ಲೆಲ್ಲ, ಮನ್ಯಾಗ ಇರಬೇಕು ಮಕ್ಕಳ್ನ್ ನೋಡ್ಕೊಂಡ್ ಅಂತ ಹೇಳಿ ಹೋಗ್ಬಿಡ್ತಾರರಿ. ಮಕ್ಕಳ್ ಕೇಳೂದಿಲ್ ನೋಡ್ರಿ, ಬೆನ್ ಹತ್ತಿ ಹೊಕ್ಕಾವ್ರಿ' ಆಕೆ ಹೀಗೆ ಹೇಳುವಾಗ ಸಿಟ್ಟು, ಬೇಸರ, ನೋವು, ಹತಾಶೆ, ನಿರೀಕ್ಷೆ ಏನೊಂದೂ ಕಾಣಲಿಲ್ಲ. ಮಳೆ ಸೆಳಕು ಜೋರಾಯ್ತು. ದುರುಗವ್ವನ ಅಲಂಕಾರ ನೋಡಬೇಕೆಂದರೆ ಆಕೆಯೋ ಗೋಡೆಕಡೆ ಮುಖ ತಿರುವಿದ್ದಳು.

ಈಗೇನೋ ಮಳೆ. ಊರಿಗೆ ಹೋದಮೇಲೆಯೂ ದುರಗವ್ವನೇ ಹೊಟ್ಟೆ ತುಂಬಿಸುತ್ತಾಳೇನು ಅಂದಿದ್ದಕ್ಕೆ,'ಬೆಂಗ್ಳೂರ್ನ್ಯಾಗಷ್ಟ ದುರಗವ್ರಿ. ನಮ್ಮೂರಾಗ ಇಕಿಂದೇನೂ ನಡ್ಯಾಂಗಿಲ್ರಿ. ತಿರಕ್ಕೊಂಡ್ ದುಡಕೊಂಡ ತಿನಬೇಕು ನಾವು. ಹಾವೇರಿಂದ ಹೋಲ್ಸೇಲ್ ಪಿನ್ನಾ, ಬಾಚಣಕಿ, ಟಿಕಳಿ, ಏರ್ಪಿನ್ನಾ ತಂದು ಮಾರ್ತೇವ್ರಿ. ಈ ಸಂದೀಪಗ ಮೂರು ಅಕ್ಕಗೋಳು ಅದಾರ್ರಿ' ಬಗಲೊಳಗಿನ ಕೂಸಿನ ಕೊಂಚಿಗಿ ಸರಿ ಮಾಡಿ ನಕ್ಕಳು. ಮಳೆ ನಿಲ್ಲುತ್ತಿದ್ದಂತೆ, ತಲೆ ಮೇಲೆ ದುರಗವ್ವನನ್ನು ಹೊತ್ತುಕೊಂಡು ಹೊರಟೇಬಿಟ್ಟಳು.
ಈಗಲೂ ದುರಗವ್ವ ನನಗೆ ಬೆನ್ನು ಮಾಡೇ ಹೊರಟಳು.

-ಶ್ರೀದೇವಿ ಕಳಸದ


2 comments:

sunaath said...

ಇದುವೇ ಜೀವನ?!

ಆಲಾಪಿನಿ said...

ಹೂಂ....