Monday, July 18, 2016

ನಾದಬೇಕು ವಿಠಲ ’ನಾದ ವಿಠಲ’


’ಸುಮ್ಮನೇ ಇರೋದಕ್ಕಿಂತ ಸುತ್ತುವುದೇ ಸುಲಭ’; ಅರೆ! ಆಷಾಢದಲ್ಲಿ ಇದು ಹೇಗೆ ಸಾಧ್ಯ ಮಾರಾಯಾ ಎಂದು ಐನ್ ಸ್ಟಿನ್ ಗೆ ಈಗ ಕೇಳಲಾದೀತೆ? ಇವನ ಹುರ‍್ರನೆಯ ಬೂದುಗೂದಲಿನಂತೆ ಈಗ ಆಕಾಶರಾಯ. ಬಪ್ಪನೋ ಬಾರನೋ ಎಂದು ಆಕಾಶ ನೋಡುತ್ತ ಕುಳಿತಾಗ ಎಪ್ಪತ್ನಾಲ್ಕರ ಹರೆಯಕ್ಕೆ ಕಾಲಿಟ್ಟ ಕಾವ್ಯಗುಚ್ಛವೊಂದು ಮಿಂಚಿ, “ಕಣ್ಣ ಕಣ ತೊಳಿಸಿ/ಉಸಿರ ಎಳೆ ಎಳಿಸಿ/ನುಡಿಯ ಸಸಿ ಮೊಳಸಿ ಹಿಗ್ಗಿ ಬಾ; ಎದೆಯ ನೆಲೆಯಲ್ಲಿ ನೆಲೆಸಿ ಬಾ/ಜೀವ ಜಲದಲ್ಲಿ ಚಲಿಸಿ ಬಾ/ಮೂಲ ಹೊಲದಲ್ಲಿ ನೆಲೆಸಿ ಬಾ’ ಎಂದು ಸಂಚಲನ ಮೂಡಿಸುತ್ತದೆ. ಬೇಂದ್ರೆಯವರ ಈ ’ಗಂಗಾವತರಣ’ ಅವತರಿಸಿದ್ದು ಇದೇ ಆಷಾಢ ಏಕಾದಶಿಯ ದಿನವೇ. ಏಕಾದಶಿ ಎಂದಾಗ ಮಹಾರಾಷ್ಟ್ರದ ಚಂದ್ರಭಾಗಾ ನದಿದಂಡೆಯಲ್ಲಿ ಇಟ್ಟಿಗೆಯ ಮೇಲೆ ನಿಂತ ವಿಠಲ, ಉಡುಪಿಯ ಶ್ರೀಕೃಷ್ಣ, ತಿರುಪತಿಯ ವೆಂಕಟೇಶ ಕಣ್ಮುಂದೆ ಬರುತ್ತಾರೆ. ಇವರ ಹಿಂದಿಂದೆ ಬೇಂದ್ರೆಯವರದೇ ಈ ಸಾಲೂ...“ಟೊಂಕದ ಮ್ಯಾಲೆ ಕೈ ಇಟ್ಟಾನ/ಭಕ್ತಿ ಸುಂಕ ಬೇಡತಾನ/ಅಂಕ ಇಲ್ಲ ಡೊಂಕ ಇಲ್ಲ/ಅಭಂಗ ಪದದವಗ’.

ಭಜನೆ ಎಂದರೆ ಭಜಿಸುವುದು, ಸ್ಮರಿಸುವುದು. ಈ ಅಭಂಗ್ ಅಥವಾ ಭಜನೆಗಳ ಧಾಟಿ ಕೂಡ ಈ ವಿಠಲನಂತೆಯೇ ಅಂಕುಡೊಂಕಿಲ್ಲದಂತೆ ಸಾಗುವಂಥದ್ದು. ಶಾಸ್ತ್ರ-ಪಾಂಡಿತ್ಯದ ಭಾರವಿಲ್ಲದೆ, ಕೇವಲ ನಾದ ಮತ್ತು ಲಯದ ಮೂಲಕ ಸಾಮಾನ್ಯರೂ ಅನುಕರಿಸುವಂಥ ಧಾಟಿಗಳಲ್ಲಿ ದಾಟಿ ಆ ದೇವನನ್ನು ತಲುಪುವಂಥದ್ದು. ಇಂಥ ನಾದಸಂಕೀರ‍್ತನೆಯನ್ನು ಬಿಜಾಪುರೆ ಹಾರ‍್ಮೋನಿಯಂ ಫೌಂಡೇಶನ್, M/S ಕಾಮತ್ ಅಂಡ್ ಕಾಮತ್ ಅಕಾಡೆಮಿ ಆಫ್ ಮ್ಯೂಸಿಕ್ ಸಹಯೋಗದಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ’ನಾದ ವಿಠಲ-ಶೃತಿ ಸ್ಮೃತಿ’ ಶೀರ‍್ಷಿಕೆಯಡಿ ಹಮ್ಮಿಕೊಳ್ಳಲಾಗಿತ್ತು.

ನೀ ಪೇಳಮ್ಮಯ್ಯ...
ತುಂಗಾ ತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮಯ್ಯ...” ವಿಠಲದಾಸರ ಈ ಭಜನೆ ಭೂಪಾಲಿಯಲ್ಲಿ ಘನಗಂಭೀರವಾಗಿ ಪವಡಿಸುತ್ತಿದ್ದರೆ, ಜೋಡುತಂಬೂರಿಯ ಮಧ್ಯೆ ಕುಳಿತ ಭೀಮಸೇನ್ ಜೋಶಿಯವರ ನಾದಚಿತ್ರವೇ ತೇಲಿಬರುತ್ತಿತ್ತು. ಅದೇ ನಾದಕ್ಕಿರುವ ಶಕ್ತಿ, ಶಬ್ದವನ್ನೂ ಮೀರಿಸುವಂಥದ್ದು. ಇಂಥ ಶಕ್ತಿಯ ಜಾಡು ಹಿಡಿದೇ ಹಾರ‍್ಮೋನಿಯಂ ನಲ್ಲಿ ಸತತ ಒಂದೂವರೆಗಂಟೆಗಳ ಭಜನವೈಭವ ಕಟ್ಟಿಕೊಟ್ಟರು ಡಾ ರವೀಂದ್ರ ಕಾಟೋಟಿ. ಶಾಸ್ತ್ರೀಯ ಕಲಾವಿದರು ಗಾಯನ ಅಥವಾ ವಾದನದ ಮೂಲಕ ನಾದಭಾವವನ್ನು ಸುಲಭಕ್ಕೆ ಕಟ್ಟಿಕೊಟ್ಟುಬಿಡಬಹುದು. ಆದರೆ ವಾದನದಲ್ಲಿ ಲಘು ಸಂಗೀತ ಪ್ರಕಾರಗಳನ್ನು ನುಡಿಸಲು ವಿಶೇಷ ಜಾಣ್ಮೆ ಬೇಕಾಗುತ್ತದೆ. ಸಾಹಿತ್ಯಲೋಪವಾಗದಂತೆ, ಸ್ಪಷ್ಟವಾಗಿ ನುಡಿಸುವುದರ ಜೊತೆಗೆ ಸೂಕ್ತ ಭಾವ ಹೊಮ್ಮಿಸುವ ಕಸುಬುಗಾರಿಕೆ ಕಲಾವಿದರಿಗೆ ಬೇಕಾಗುತ್ತದೆ. ಇಂಥ ಕಸುಬುಗಾರಿಕೆ ಕಾಟೊಟಿಯವರಿಗೆ ಸಿದ್ಧಿಸಿದೆ ಎಂಬುದಕ್ಕೆ ಸಾಕ್ಷಿ, ಅವರ ನುಡಿಸಾಣಿಕೆಯ ಜೊತೆಜೊತೆಗೆ ಶ್ರೋತೃಗಳು ಆಯಾ ಭಜನಾ ಸಾಹಿತ್ಯವನ್ನು ಗುನುಗಿಕೊಂಡಿದ್ದು. ಆದರೆ, ಎಷ್ಟೇ ಸರಳಧಾಟಿ ಅನುಕರಿಸುತ್ತೇನೆಂದರೂ, ಸೃಜನಶೀಲ ಮನಸ್ಸು ಒಂದೇ ಮಾದರಿಯೊಳಗೆ ಸುತ್ತಲಾರದು. ಆಗಾಗ ಲಹರಿ ಹಿಡಿದೇ ಹಿಡಿಯುತ್ತದೆ. ಆದರೂ ನೆನಪಿಸಿಕೊಂಡು, ಮತ್ತದೇ ಮೂಲಜಾಡಿಗೆ ಬರಲೇಬೇಕು. ಅಂಥ ಸೃಜನಶೀಲ ’ಒದ್ದಾಟ’ ಅವರ ವಾದನಪೂರ‍್ತಿ ಇಣುಕುತ್ತಿತ್ತು.

ತೊರೆದು ಜೀವಿಸಬಹುದೇ...
ಹಿಂದೂಸ್ತಾನಿ ಶೈಲಿಯಲ್ಲಿ ಲಘುಸಂಗೀತ ಪ್ರಕಾರಗಳಿಗೆಂದೇ ಕೆಲ ರಾಗಗಳು ಮೀಸಲಿವೆ. ಆಯಾ ಸಾಹಿತ್ಯಕ್ಕನುಗುಣವಾಗಿ ಭಾವ ಮತ್ತು ಸೌಂದರ‍್ಯಪ್ರಜ್ಞೆ ವೃದ್ಧಿಸುವುದು ಇದರ ಹಿನ್ನೆಲೆ. ಆ ಪೈಕಿ ಕಾಫಿ ಕೂಡ ಒಂದು. ಇಲ್ಲಿ ಪಂಚಮ ವಾದಿಯಾದರೆ ಷಡ್ಜ ಸಂವಾದಿ. ಮುಂದೆ ಕಾಟೋಟಿಯವರ ಬೆರಳುಗಳಲ್ಲಿ ಆಕಾರಪಡೆದುಕೊಂಡಿದ್ದು, ’ಮೂರುತಿಯನು ನಿಲ್ಲಸೋ’. ನಂತರ ಕ್ರಮಿಸಿದ್ದು, ಮಿಶ್ರಮಾಂಡ್ ರಾಗಕ್ಕೆ. ವಿಶೇಷವಾಗಿ ಭಜನ್ ಮತ್ತು ಗಝಲ್ ಪ್ರಕಾರಕ್ಕೆ ಹೇಳಿಮಾಡಿಸಿದ ರಾಗವಿದು. ಷಡ್ಜ ಮತ್ತು ಪಂಚಮದಲ್ಲೇ ಇದರ ಜೀವವಡಗಿರುವುದು. ಈ ಸ್ವರಗಳ ಮೂಲಕ ಶಾಂತ ಮತ್ತು ಭಕ್ತಿ ರಸವನ್ನಾಳುವಂಥ ಸ್ವರಸಂಯೋಜನೆ ’ಮಾಝೆ ಮಾಹೇರ‍್ ಪಂಡರಿ’ ಭಜನೆಯದ್ದು. ಇದನ್ನು ಅವರು ಪ್ರಸ್ತುತಪಡಿಸಿದಾಗ ಮತ್ತದೇ ಭೀಮಸೇನರು ಅಲೆಅಲೆಯಾಗಿ ತೇಲಿಬಂದರು. ನಂತರದ್ದು ಭಕ್ತಿಕರುಣಾರಸಲಹರಿ... ಪಂ ಎಂ ವೆಂಕಟೇಶಕುಮಾರ‍್ ಎಂದರೆ ಆ ದಾಸಪದ. ಆ ದಾಸಪದವೆಂದರೆ ವೆಂಕಟೇಶಕುಮಾರ‍್, ಅದೇ “ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ’; ಎಷ್ಟೂ ಕೇಳಿದರೂ ಆರ‍್ದ್ರವಾಗಿಸುವಂಥ ಕೀರ‍್ವಾಣಿ ರಾಗ ಮತ್ತು ಕನಕದಾಸರ ಸಾಹಿತ್ಯ. ’ಬಾರೇ ಭಾಗ್ಯದ ನಿಧಿಯೇ’, ’ಕ್ಷೇತ್ರ ವಿಠಲ ತೀರ‍್ಥ ವಿಠಲ’ ನುಡಿಸಿದ ನಂತರ ಭೈರವಿಯೊಂದಿಗೆ ಕಾರ‍್ಯಕ್ರಮ ಸಂಪನ್ಮವಾಯಿತಾದರೂ ಮಳೆಹನಿಗಳಿಗೆ ಭಜನೆಯ ಗುಂಗು ಹಿಡಿದಿತ್ತು. ಸಹ ಹಾರ‍್ಮೋನಿಯಂ ನಲ್ಲಿ ಮಧುಸೂದನ್ ಭಟ್, ತಬಲಾದಲ್ಲಿ ಉದಯರಾಜ್ ಕರ‍್ಪೂರ‍್, ಪಖಾವಾಜ್ ದಲ್ಲಿ ಗುರುಮೂರ‍್ತಿ ವೈದ್ಯ, ಮ್ಯಾಂಡೊಲಿನ್ ನಲ್ಲಿ ಎನ್ ಎಸ್ ಪ್ರಸಾದ್, ಕೀಬೋರ‍್ಡ್ ನಲ್ಲಿ ಸಾತ್ವಿಕ್ ಚಕ್ರವರ‍್ತಿ, ತಾಳದಲ್ಲಿ ವೆಂಕಟೇಶ ಪುರೋಹಿತ ಜೊತೆಗಾರರಾಗಿದ್ದರು. ಧ್ವನಿವರ‍್ವ್ಯಧಕ ವ್ವವಸ್ಥೆ ಅಬ್ಬರ ಕಡಿಮೆ ಮಾಡಿದ್ದಲ್ಲಿ, ತಬಲಾ ಮತ್ತು ಮ್ಯಾಂಡೊಲಿನ್ ಸುಶ್ರಾವ್ಯವಾಗಿ ಮೂಡಿಬರುತ್ತಿದ್ದವು. ಪಖಾವಾಜ್ ನ ನಾದ ಹೆಚ್ಚಿ, ಕಾರ‍್ಯಕ್ರಮ ಇನ್ನಷ್ಟು ಸಾತ್ವಿಕ ಕಳೆ ಪಡೆದುಕೊಳ್ಳುತ್ತಿತ್ತು.  

ಕಾಲುಭಾಗದಷ್ಟೂ ಜನವಿರಲಿಲ್ಲವಲ್ಲ, ಏಕಾದಶಿ ವಾರಾಂತ್ಯಕ್ಕೆ ಬರುವಂತಿದ್ದರೆ... ಎಂದಿದ್ದಕ್ಕೆ, "ಇದು ಕೇಳುಗರಿಗೇ ನಷ್ಟ. ನಮ್ಮದೇನಿದ್ದುದರೂ ನಿರಂತರ ನಾದಕಾಯಕ. ಧಾರವಾಡ ಮತ್ತು ಬೆಳಗಾವಿಯಲ್ಲಿ ಇದೇ ಕಾರ‍್ಯಕ್ರಮಕ್ಕೆ ಭರಪೂರ ಜನ ಸೇರಿದ್ದರು’ ವಾಸ್ತವ ಹಂಚಿಕೊಂಡರು ಆಯೋಜಕ ಕಾಟೋಟಿ. 

ಮೃದಂಗ ಮಾಧುರ‍್ಯ 
ಇದಕ್ಕಿಂತ ಮೊದಲು ಕೊಳಲು ವಿದ್ವಾನ್ ಎಂ ಕೆ ಪ್ರಾಣೇಶ್ ಅವರು ನಾದಸಮರ‍್ಪಣೆ ಮಾಡಿದರು. ಪುರಂದರದಾಸರ ’ಜಯ ಜಯ ಜಯ ಜಾನಕೀಕಾಂತ’ ನಾಟರಾಗ, ಖಂಡಚಾಪು ತಾಳದಲ್ಲಿದ್ದರೆ, ಕನಕದಾಸರ ’ಬಾರೋ ಕೃಷ್ಣಯ್ಯ’ ರಾಗಮಾಲಿಕೆ, ಆದಿತಾಳ. ಕಮಲೇಶ ವಿಠಲರ ’ ತುಂಗಾತೀರ ವಿಹಾರಂ; ಆದಿತಾಳದಲ್ಲಿದ್ದರೆ, ಪುರಂದರ ದಾಸರ ’ನಾರಾಯಣ ನಿನ್ನ ನಾಮನದ ಸ್ಮರಣೆ’ ಶುದ್ಧ ಧನ್ಯಾಸಿ ರಾಗ ಮತ್ತು ಖಂಡಛಾಪುತಾಳ. ಜನಸಮ್ಮೋದಿನಿ ರಾಗದಲ್ಲಿ ಸಂಯೋಜಿಸಿದ “ಗೋವಿಂದ ನಿನ್ನ ನಾಮವೇ ಚೆಂದ’ ಆದಿ ತಾಳ. ಪಿಳ್ಳಂಗೋವಿಯ ಚೆಲುವ ಕೃಷ್ಣನ’ ಮೋಹನ ರಾಗದಲ್ಲಿದ್ದು, ತಿಶ್ರ ನಡೆಯಲ್ಲಿ ನಡೆಯಿತು. ಕೊನೆಗೆ ಎಂ ಎಸ್ ಸುಬ್ಬುಲಕ್ಷ್ಮೀಯವರನ್ನು ನೆನಪಿಸಿದ್ದು ’ಜಗದೋದ್ಧಾರನ’. ಒಟ್ಟಾರೆ ಇಲ್ಲಿ ಪ್ರಾಣೇಶ್ ಅವರ ನುಡಿಸುವಿಕೆ ಭಜನಾಕ್ರಮದ ಸರಳನಡೆ ಮಾದರಿಗಷ್ಟೇ ಸೀಮಿತವಾಯಿತು. ಆದರೆ ಇಲ್ಲಿ ಗಮನಸೆಳೆದದ್ದು ವಿದ್ವಾನ್ ತುಮಕೂರು ಚಂದ್ರಶೇಖರ‍್ ಅವರ ಮೃದಂಗವಾದನ. ಒಂದು ಖಾದ್ಯ ತಯಾರಿಸಿದಾಗ, ಯಾವುದೋ ಒಂದು ಪದಾರ‍್ಥ ತನ್ನದೇ ಆದ ರುಚಿಯನ್ನು ಪ್ರತ್ಯೇಕವಾಗಿ ಕಾಯ್ದುಕೊಂಡು ಹೋದಂತೆ ಇವರ ವಾದನವಿತ್ತು. ಸಾಮಾನ್ಯವಾಗಿ ತಬಲಾದಲ್ಲಿ ’ಆಸ್’ ಹುಟ್ಟಿಸಿದಂತೆ ಮೃದಂಗದಲ್ಲಿ ಆಸ್ ಹುಟ್ಟಿಸುವುದು ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಆದರೆ ಚಂದ್ರಶೇಖರ‍್ ಮೃದಂಗದಲ್ಲಿ ಆಸ್ ಹುಟ್ಟಿಸುತ್ತ ಮಾಧುರ‍್ಯ ಕಾಪಿಟ್ಟುಕೊಂಡಿದ್ದು ವಿಶೇಷ. ವಾಯೊಲಿನ್ ನಲ್ಲಿ ವಿದ್ವಾನ್ ಶ್ರೀನಿಧಿ ಮಾಥೂರ‍್ ಸಾಥ್ ನೀಡಿದರು.

ವರ‍್ತಮಾನವೆಂದರೆ ಸಂಗೀತ
ಕಾರ‍್ಯಕ್ರಮದ ಆರಂಭದಲ್ಲಿ ವಾಗ್ಮಿ ರವಿಕುಮಾರ‍್ ಆಡಿದ ಮಾತುಗಳು ಮಾತ್ರ ಇನ್ನೂ ಅನುರಣಿಸುತ್ತಿವೆ. “ಮನುಷ್ಯನ ಮನಸ್ಸನ್ನ ವರ‍್ತಮಾನದ ಗಳಿಗೆಯಲ್ಲಿ ಹಿಡಿದಿಟ್ಟು, ಧ್ಯಾನದ ಉತ್ತುಂಗ ಶಿಖರ ತಲುಪಿಸುವುದೇ ಸಂಗೀತ. ವರ‍್ತಮಾನವೆಂದರೆ ದೇವರು. ದೇವರೆಂದರೆ ಮಕ್ಕಳು. ಮಕ್ಕಳು ಯಾವಾಗಲೂ ವರ‍್ತಮಾನದಲ್ಲೇ ಇರುತ್ತವೆ. ಇಲ್ಲಿ ಭೂತದ ಪಶ್ಚಾತ್ತಾಪ, ಭವಿಷ್ಯದ ಆತಂಕ ಎರಡೂ ಇರುವುದಿಲ್ಲ. ಇಂಥ ಧ್ಯಾನಸ್ಥಿತಿಯಲ್ಲೇ ನಮ್ಮ ಮನಸ್ಸು ವರ‍್ತಮಾನಕ್ಕೆ ತಲುಪುತ್ತದೆ. ಮನುಷ್ಯನ ಮನಸ್ಸೇ ಎಲ್ಲದಕ್ಕೂ ಕಾರಣ. ಅದಕ್ಕೇ ಮನಸ್ಸನ್ನು ಹದವಾಗಿರಿಸಿಕೊಳ್ಳಬೇಕು. ಸಂಗೀತವೇ ವರ‍್ತಮಾನದಲ್ಲಿಡುವಂಥ ಉತ್ತಮ ಪ್ರಯತ್ನ. ಭಾರತೀಯ ಸಂಗೀತ ಶಾಸ್ತ್ರ ಪದ್ಧತಿ ಇದಕ್ಕೊಂದು ಅದ್ಭುತ ಮಾದರಿ. ಅದಕ್ಕೇ ಇದು ದೇಹಪ್ರಚೋದನೆಗಿಂತ ಮನಸ್ಸು ಮತ್ತು ಆತ್ಮಕೇಂದ್ರಿತ.

ಇಷ್ಟೆಲ್ಲ ನಾದದ ಹರಿವಿನಲ್ಲಿ ತೇಲಿಮುಳುಗಿದ ಮೇಲೆ ಐನ್ ಸ್ಟಿನ್ ಸೋದರಿ ಮಝಾ ತನ್ನ ಸೋದರನ ಬಗ್ಗೆ ಹೇಳಿರುವುದು ನೆನಪಾಗುತ್ತಿದೆ. “After playing piano, he would get up saying 'There, now I've got it', Something in the music would guide his thoughts in new and creative directions."

-ಶ್ರೀದೇವಿ ಕಳಸದ 

2 comments:

sunaath said...

ಬೇಂದ್ರೆಯವರ ಸಾಲುಗಳು ಅದ್ಭುತವಾಗಿವೆ.

ಆಲಾಪಿನಿ said...

😊 😊