Wednesday, December 20, 2017

ಆಮೆಬಾಗಿಲು ತೆರೆದೆ ಬಾಬಮ್ಮ ನಕ್ಕಳು. ಮೂರು ಲೀಟರಿನ ಕ್ಯಾನ್ ತೋರಿಸಿ, ನೀರು ಬೇಕು ಬೇಳೆಗಿಡಲು  ಎಂದಾಗ... ಆಯ್ತು ಬಾ ಒಳಗೆ ಎಂದು ಫಿಲ್ಟರ್ ಆನ್ ಮಾಡಿದೆ. ಬೇಳೆಗಿಡಲು ಎಂದರೆ ಅಡುಗೆ ಮಾಡಲು ಎಂಬುದನ್ನೇ ಸೂಚ್ಯವಾಗಿ ಹೇಳುತ್ತಿದ್ದಾಳಾ ಎಂದು ಐದು ನಿಮಿಷ ಯೋಚಿಸಿದ ಮೇಲೆ ಕೇಳಿಯೇ ಬಿಟ್ಟೆ. ಅದಕ್ಕೆ ಬಾಬಮ್ಮ, 'ಬೋರ್ ನೀರ್ಗೆ ಬ್ಯಾಳಿ ಕುದ್ಯಲ್ ಚಾನೂ ಸವ್ಳು ಇಷ್ಟು ಸಾಕ್, ಈ ನೀರು ನಾಕ್ ದಿನ ಬರ್ತಾವ್ ಆಂಟಿ' ಅಂದ್ಲು. ಅಲ್ಲಿಗೆ ಅನ್ನ ಯಾವ ನೀರಲ್ಲಾದರೂ ಕುದಿಯುತ್ತೆ ಬೇಳೆ ಮತ್ತು ಚಹಾಕ್ಕೆ ಮಾತ್ರ ಕಾರ್ಪೋರೇಷನ್ ನೀರೇ ಆಗಬೇಕು ಎಂದು ಮೊದಲ ಬಾರಿಗೆ ನನಗೆ ನಾನೇ ಅರ್ಥೈಸಿಕೊಳ್ಳುತ್ತ ಯಾಕೆ ಹಾಗೆ ಎಂಬ ಪ್ರಶ್ನೆ ಮತ್ತು ಹುಡುಕಾಟಕ್ಕೆ ಅಭ್ಯಾಸಬಲದಂತೆ ಸರ್ಚ್ ಎಂಜಿನ್ ಗೆ ಕೀವರ್ಡ್ ಕೊಡಲು ಅನುವಾಗಬೇಕು...

'ಅಮ್ಮಾ ಬಾಬಮ್ಮ ಅಂದ್ರೆ ಏನು? ಮಗಳು ಹಿಂದಿನಿಂದ ಬಂದು ಟೀಶರ್ಟ್ ನ ಚುಂಗು ಹಿಡಿದೆಳೆದು ಕೇಳಿದಳು. ಬಾಬಮ್ಮ ಅಂದ್ರೆ ಬಾಬಮ್ಮ ಪುಟ್ಟಾ ಅಂದೆ. ಬಾ...‌ಬ...ಮ್ಮ ಎಂದು‌ ಪುಟ್ಟ ಬಾಯಲ್ಲಿ ಸ್ಪಷ್ಟವಾಗಿ ಅವಳ ಹೆಸರನ್ನು ಬಿಡಿಸಿ, ಬಾ ಅಂದ್ರೆ ಬ್ ಅಲ್ವಾಮ್ಮಾ ಫೋನಿಕ್ ಸೌಂಡ್, ಮ ಅಂದ್ರೆ ಮ್? ಬಾಬಮ್ಮ ಬಾಬಮ್ಮ ಎಂದು ನಾಲ್ಕೈದು ಸಲ ಪುನರುಚ್ಚರಿಸುತ್ತಾ ಚಪ್ಪಾಳೆ ಹೊಡೆದು ಕೊನೆಗೆ ಅವಳೇ ‘ಬಾ… ಅಮ್ಮಾ’ ಅಂದ್ರೆ ಬಾಬಮ್ಮಾ ಎಂದಳು. ಅರ್ರೆ ಹೌದಲ್ಲ! ಎಂದು ಕೆನ್ನೆ ತಟ್ಟಿ ಅವಳಿಗೆ ಬಣ್ಣ ಮತ್ತು ಡ್ರಾಯಿಂಗ್ ಶೀಟ್ ಕೊಟ್ಟು ಪಡಸಾಲೆಯಲ್ಲಿ ಕೂರಿಸಿ ಬಂದೆ. ಆದರೆ ತಾನೂ ಬಾಬಮ್ಮನಿಗೆ ನೀರು ತುಂಬಿಸಿಕೊಡುವುದಾಗಿ ಹೇಳಿ, ನೀಲಿ ಬಣ್ಣದ ಬಾಟಲಿ ಮತ್ತು ಪುಟ್ಟ ಸ್ಟೂಲಿನೊಂದಿಗೆ ಅಡುಗೆ ಮನೆಗೆ ಬಂದು ಫಿಲ್ಟರಿನ ಬಳಿ ನಿಂತಳು.

ಚೆಲ್ಲದೇ, ಹರುವದೇ, ಸುರಿಯದೆ, ಗೀಚದೆ, ಮುರಿಯದಿರೆ ಆಟವೇ ಆಡಿದಂತಲ್ಲ ಎಂಬ ಅವಳ ಈ ವಯಸ್ಸಿಗೆ ಸರಿಯಾಗಿ ನಾನೂ ಹೊಂದಿಕೊಂಡುಬಿಟ್ಟಿದ್ದೇನೆ. ಯಾವುದನ್ನೂ ನಿರಾಕರಿಸಲು ಹೋಗುವುದಿಲ್ಲ. ತುಂಬು ತುಂಬು ನೀನೂ… ತುಂಬುವುದರೊಂದಿಗೆ ಚೆಲ್ಲಿದ ಸಮಾಧಾನ ನಿನಗೂ ಇರಲಿ. ನಂತರ ಅದನ್ನು ಒಪ್ಪ ಮಾಡುವಾಗ ಮೈಬಗ್ಗಿಸಿದ ಸಮಾಧಾನ ನನಗೂ ಇರಲಿ ಎಂಬ ಒಪ್ಪಂದದ ಮೇರೆಗೆ ನಾನು ಅವಳನ್ನು ಯಾವುದಕ್ಕೂ ತಡೆಯಲು ಹೋಗುವುದಿಲ್ಲ. ಹತ್ತಿಕ್ಕಿದಷ್ಟೂ ನಾವೂ ಹತ್ತಿಕ್ಕಲ್ಪಡುತ್ತೇವೆ ಎಂಬುದು ಅರಿವಾದಾಗಿನಿಂದ ನಾನೂ ಸ್ವಲ್ಪ ನಿರಾಳವಾಗಿದ್ದೇನೆ ಹಾಗೇ ಮಗಳ ಹಟವೂ ಕಮ್ಮಿಯಾಗಿದೆ.

ಗೋಡೆಗೆ ಆತು ಒಂದು ಕೈಲಿ ಸರ ಹಿಡಿದುಕೊಂಡು ಒಳಗೊಳಗೇ ನಗುತ್ತ ನಿಂತಿದ್ದ ಬಾಬಮ್ಮ, ನಾ ದೃಷ್ಟಿ ಕೊಡುವುದನ್ನೇ ಕಾಯುತ್ತಿದ್ದಳೇನೋ, 'ಚೆನಾಗೈತ್ರಾ ಆಂಟಿ' ಎಂದಳು. ಓಹೋ ಚೆಂದ ಬಾಬಮ್ಮ, ಹೊಸ ಬಂಗಾರ ಗುಂಡುಗಳು ಅಂದೆ. ನಾಚಿಕೊಂಡು, 'ಹನ್ನೆರಡ್ ಅವೆ ಆದೋನಿಂದ ತರಸ್ದ್, ಇಲ್ಲೆಲ್ಲ ಚೆನಾಗಿರಲ್ ಬಂಗಾರಾ. ಎಡ್ನೂರಕ್ ಒಂದ್ ಗುಂಡ್, ಮ್ಯಾಗ್ ರೊಕ್ಕಾ ಕೊಡ್ಬೇಕಿನ್' ಎಂದಿದ್ದಕ್ಕೆ ಓಹ್ ಒಟ್ಟು ಎಷ್ಟಾತು ಅಂದೆ. ‘ಕೈಗಿನ ರೊಕ್ಕಾ ತೋರಸ್ತಿನ್ ತಂದ್ಕೊಟ್ಟವ್ರಿಗ್, ಅವರೇ ಎಷ್ಟ್ ಬೇಕಷ್ಟ್ ತಕ್ಕೊಂತಾರ್. ಕಮ್ಮಿ ಬಿದ್ರ ಮತ್ ಕೇಳ್ತಾರ್, ಊರವ್ರಕಡಿಂದ ತರ್ಸಿದ್ನ್ ಇನ್ನೂ ಎಡ್ಸಾವ್ರಾ ಕೇಳ್ಯಾರ್ ' ಎಂದು ಮತ್ತೆ ಮತ್ತೆ ಕರಿಮಣಿಯೊಳಗಿನ ಬಂಗಾರ ಗುಂಡು ಮುಟ್ಟಿಕೊಂಡಳು. ಹೌದೇನು ಭಾಳಾ ಚುಲೊ ಆತು, ಖುಷಿಯಾಗಿರು ನೋಡು ಎನ್ನುವಾಗ ಒಲೆಮೇಲಿಟ್ಟ ಹಾಲು ಇನ್ನೇನು ಉಕ್ಕುವುದರಲ್ಲಿತ್ತು ಗಡಬಡಿಸಿ ಒಲೆಯ ಕಿವಿ ತಿರುವಿದೆ‌.

ಮತ್ತೆ ಏನಂತಾನೆ ಗಂಡ ಅಂದಿದ್ದಕ್ಕೆ, 'ಅದಾರ್, ಅವ್ರು ಮತ್ ಅವ್ರು ಮಾತಾಡ್ಕೊಂಡ ಅದಾರ್' ಒಮ್ಮೆಲೆ ಹುಬ್ಬುಗಂಟುಹಾಕಿ ಗಂಭೀರವಾಗಿಬಿಟ್ಟಳು. ಆದರೂ ಹುಬ್ಬುಸ್ವಸ್ಥಾನಕ್ಕೆ ತಂದುಕೊಂಡು ಕಣ್ಣು ಕದಲಿಸಿ ಬಂಗಾರಕ್ಕೇ ಮಾತು ಎಳೆದು, 'ಇನ್ ನನ್ ಮಗ್ಳಿಗ್ ಸಣ್ ಜುಮುಕಿ ತಗೋಬೇಕ್ ನೋಡಾಂಟಿ' ಎಂದಾಗ ಉಬ್ಬುಹಲ್ಲುಗಳು ಪೂರ್ತಿ ಹೊರಬಂದಿದ್ದವು. ಒಲೆಯಾರಿದರೂ ಹಾಲಿನ  ಒಂದು ಸೆಳಕು ಕುದಿತ ಮಾತ್ರ ಹಾಗೇ ಪಾತ್ರೆಯೊಳಗಿತ್ತು. ಪ್ಲೇಟು ಮುಚ್ಚುವಾಗ ಜಾಳಿಗೆಯ ತೂತುಗಳಿಂದ ಕುದ್ದ ವಾಸನೆ ಒಮ್ಮಲೆ ಮೂಗಿಗಡರಿತು. ವಾಸನೆ ಬರದಿದ್ದರೆ ಅದು ಕುದಿತಕ್ಕೇ ಅವಮಾನ! ಇಷ್ಟು ವರ್ಷವೂ ಇಲ್ಲದ ಈ ಬಂಗಾರ ವ್ಯಾಮೋಹ ಇದ್ದಕ್ಕಿದ್ದ ಹಾಗೆ ಇವಳಿಗೆ ಈಗೇಕೆ? ಎಂದು ಯೋಚಿಸುತ್ತಿರುವಾಗ ಕಾಲು ಥಣ್ಣಗಾಗತೊಡಗಿದ್ದವು. ಬಗ್ಗಿ ನೋಡಿದರೆ ನೀಲಿಬಾಟಲಿಯಿಂದ ಉಕ್ಕಿಹರಿದ ನೀರು. ಅರೆ ಈ ಫಿಲ್ಟರಿನ ಪೈಪೊಂದು. ಎಲ್ಲ ಗಂಟಲಲ್ಲೇ ಇಟ್ಟುಕೊಂಡು ನಿಶ್ಯಬ್ದವಾಗಿ ಹರಿಯುತ್ತದೆ. ಹರಿಯುತ್ತದೆ ಎಂದ ಮಾತ್ರಕ್ಕೆ ತನ್ನಪಾಡಿಗೆ ತಾ ಎಂದಲ್ಲ. ನಿನಗೆ ಬೇಕಿದ್ದರೆ ನನ್ನತ್ತಲೇ  ಚಿತ್ತ ನೆಟ್ಟಿರು ಎಂಬಂತೆ ಮೌನದಲ್ಲೇ ಹುಕುಮ್. ಆದರೆ, ಚಿಕ್ಕಂದಿನ ನಲ್ಲಿಗಳು ಹಾಗಲ್ಲ, ತನ್ನ ಕೆಳಗೊಂದು ತಾಮ್ರ ಬಿಂದಿಗೆ ಇಟ್ಟರೆ ಸಾಕು. ಅದರತ್ತಲೇ ಕಣ್ಣು ನೆಟ್ಟಿರಬೇಕು ಅಂತಿಲ್ಲ. ಕಂಠಮಟ್ಟ ಬಂದಾಗ ಕಿವಿ ಗ್ರಹಿಸಿಬಿಟ್ಟಿರುತ್ತದೆ. ಇನ್ನೇನು ಬಾಯುಕ್ಕುವುದೆಂದಾದಾಗ ಪಟ್ಟನೆ ತಿರುಗಿ ನಲ್ಲಿಯ ನೆತ್ತಿ ತಿರುಗಿಸಿಬಿಟ್ಟರೆ ಸಾಕಿತ್ತು.

ನಾನೇ ಮಾಡಿಕೊಂಡ ಒಪ್ಪಂದದಂತೆ ಬಾಯಿಮುಚ್ಚಿಕೊಂಡು ಮೈಬಗ್ಗಿಸಿ ಕಾಲಡಿಯ ನೀರನ್ನು ಇನ್ನೇನು ಒರೆಸಬೇಕು. ಬಾಬಮ್ಮ ಮುಂದೆ ಬಂದು, ‘ನಾ ಮಾಡ್ತೀನ್ ಬಿಡಿ’ ಎಂದು ಬಟ್ಟೆ ಕಸಿದುಕೊಂಡಳು. ಇತ್ತ ಪಡಸಾಲೆಗೆ ಕಾಲಿಡುತ್ತಿದ್ದಂತೆ ಮನೆಯ ಪುಟ್ಟರಕ್ಕಸಿ ಹಾರಿಬಂದು ಹೆದರಿಸಿಬಿಟ್ಟಿತು. ಈ ಚಳಿಗಾಲಕ್ಕೆಂದು ನಿನ್ನೆಯಷ್ಟೇ ತಂದ ವ್ಯಾಸಲೀನ್‍ ಡಬ್ಬಿಯೊಳಗೆ ಬಣ್ಣಗಳನ್ನು ಕಲೆಸಿ ಮುಖ ಮೈಕೈ ಮುಳಗಿಸಿಕೊಂಡು ಅವತಾರವೆತ್ತಿದ್ದಳು. ಯಾವ ಒಪ್ಪಂದ ಮಾಡಿಕೊಂಡರೂ ತುಸು ಜಾಸ್ತಿ ಬಗ್ಗುವುದು ನನ್ನದೇ ಮೈಕೈ ಎಂದು ಮತ್ತೂ ಸಮಾಧಾನಿಸಿಕೊಳ್ಳುತ್ತ ಅವಳನ್ನು ಬಚ್ಚಲುಮನೆಗೆ ಎಳೆದುಕೊಂಡು ಹೋದೆ.

ಬಾಬಮ್ಮ ಇಂದೀವತ್ತು ನಮ್ಮನೆಗೆ ಬಂದಿದ್ದು ನೀರ ನೆಪವಷ್ಟೇ. ಎಂಟು ವರ್ಷಗಳ ತನಕ ಒಂದೇ ಎಳೆ ಕರಿಮಣಿ ಮಾತ್ರ ಪೋಣಿಸಿಕೊಂಡಿದ್ದ ಈಕೆಗೆ ನಡುನಡುವೊಂದು ಜೋಳಗಾತ್ರದ ಬಂಗಾರ‌ಮಣಿ ಮಿಣುಕಿಸಿಕೊಂಡು ಮೆರೆಯುವುದು ಇತ್ತೀಚೆಗೆ ಹೊಕ್ಕ ಹುಕಿ. ತಾನು ಆಯಾ ಕೆಲಸ ಮಾಡುವ ಶಾಲೆಯ ಸುತ್ತಮುತ್ತಲಿನ ಪರಿಚಯಸ್ಥರ ಮನೆಗೆ ತೆರಳಿ, ಅವರೆಲ್ಲರಿಗೂ ಆ ಹನ್ನೆರಡೂ ಗುಂಡು ತೋರಿಸುವುದು ಖುಷಿ ಹಂಚಿಕೊಳ್ಳುವುದು ಮೂರು ನಾಲ್ಕು ದಿನಗಳಿಂದ ಚಾಲ್ತಿಯಲ್ಲಿತ್ತು. 'ನಮ್ ಮಂದ್ಯಲ್ ಗುಂಡ್ ಇದ್ರ ಚೆನಾಗಿರತ್' ಎಂದಳು ನೀರಿನ‌ ಕ್ಯಾನಿನ ಮುಚ್ಚಳ ಬಿಗಿಮಾಡುತ್ತಾ, ಸೆರಗಿನಿಂದ ಕ್ಯಾನಿನ ಹೊರಮೈ ಒರೆಸುತ್ತಾ... ಹೂಂ ಹೌದೌದು ಗುಂಡು ಬೇಕೇಬೇಕು, ಗಂಡ ಏನಂತಾನೆ ಅಂದಿದ್ದಕ್ಕೆ, 'ಬರ್ತರ್ ಅವ್ರ್ ಜತೀಗೇ, ಏನ್ ಮಾಡೋದಾಂಟಿ? ಇಬ್ರೂ ಮಾತಾಡ್ತನ ಇರ್ತಾರ್ ಹಂಗಾ' ಎಂದಳು. ಯಾರು ಎಂದಿದ್ದಕ್ಕೆ… ‘ಈಗಾ ನನ ಮಗ್ಳಿಗೆ ಏಳು ತುಂಬದ್ವಾ, ಮೈನೆರೀತಿದ್ದಂಗ್ಗೆ ಒಂದ್ ಮದ್ವೆ ಮಾಡ್ಬುಟ್ರೆ ಸರಿ ಹೊಕ್ಕೈತ್. ಮೊದಲ್ ಒಂದ್ ಶೀಟಿನ ಕ್ವಾಣಿ ಹಿಡಿಬೇಕಾಂಟಿ ಒಂದ್‍ ಮಂಚಾ, ಬೀರು, ಸ್ಟೀಲು ಸಾಮಾನಾ ಎಲ್ಲಾ ಈಗಿಂದ್ಲೇ ಮಾಡಿಟ್ಕಾಬೇಕ್. ಮದ್ವೆ ಮಾಡ್ ಕಳ್ಸವಾಗ್ ಯಾಬ್ದೂ ಕಮ್ಮಿ ಬೀಳ್ಬಾರ್ದ್’ ಎಂದು ಹೇಳುತ್ತ, ತಲೆಮೇಲೆ ಹುರ್ರೆಂದು ನಿಲ್ಲುವ ಮೊಂಡುಗೂದಲನ್ನು ಸಾಪು ಮಾಡಿಕೊಳ್ಳುತ್ತ ಇನ್ನೇನು ಎಲ್ಲಾ ಕೈಗೂಡೇಬಿಟ್ಟಿತು ಎಂಬಂತೆ  ಹಲ್ಲುಹೊರಹಾಕಿ ನಗತೊಡಗಿದಳು.

ಗಂಟೆ, ಲೆಕ್ಕ, ದೂರ ಯಾವುದೂ ತಿಳಿಯದ ಈಕೆ ನಾಳೆ ಕೆಲಸಕ್ಕೆ ಬಾ ಎಂದರೆ ಬೆಳಗಿನ ನಾಲ್ಕಕ್ಕೇ ಬಾಗಿಲು ಬಡಿದುಬಿಡುತ್ತಾಳೆ. ತಿಕ್ಕಿದ್ದನ್ನೇ ತಿಕ್ಕುತ್ತ, ಹೇಳಿದ್ದನ್ನೆಲ್ಲ ಮಾಡುತ್ತ ಕೂರುವ ಈಕೆಗೆ ಕೈಸೋತಿದ್ದು ಬಾಯಿತನಕವೂ ಬರುವುದೇ ಇಲ್ಲ. ಮಾರನೇ ದಿನಕ್ಕೆ ಜ್ವರ ಬಂದಾಗಲೂ ಆಕೆಗೆ ಪರಿಣಾಮದ ಅರಿವಿರುವುದಿಲ್ಲ. ೧,೯೦೦ ರೂಪಾಯಿ ಸಂಬಳಕ್ಕೆ ಶಾಲೆಯ ಕೋಣೆಗಳನ್ನೆಲ್ಲ ಗುಡಿಸಿ ಒರೆಸಿ, ಬಿಸಿಯೂಟದ‌ ಪಾತ್ರೆ ತೊಳೆದು, ಮನೆಗೆ ಹೋಗುವಾಗ ಉಳಿದ ಹಾಲನ್ನು ಡಬ್ಬಿಯಲ್ಲಿ ತುಂಬಿಸಿಕೊಂಡು ಮಗಳ ಕೈ ಹಿಡಿದು ತಾರಾಬಾರಾ ಓಡಾಡುವ ಬಸ್ಸು, ಲಾರಿಗಳ ಮಧ್ಯೆ ನುಸುಳುತ್ತ ಮೋರಿಯಾಚೆಯ ಜೋಪಡಿ ತಲುಪಿಬಿಡುತ್ತಾಳೆ. ಸುತ್ತಮುತ್ತಲಿನ ಜೋಪಡಿಯ ಎಂಟ್ಹತ್ತು ಮಕ್ಕಳಿಗೆ ಇವಳೊಂದು ಕಪ್ಪುಕಾಗೆ! ಸೊಂಟ ಕತ್ತರಿಸಿಕೊಂಡು ಮೋಟು ಹಲಗೆಯ ಮೇಲೆ ಕುಳಿತ ಎರಡು ಪ್ಲಾಸ್ಟೀಕಿನ ಬಾಟಲಿಗಳೇ ಗ್ಲಾಸುಗಳು. ಮಗಳು ಓಡಿಹೋಗಿ ಆ ಗ್ಲಾಸುಗಳನ್ನು ಊದಿ ಶುಚಿಗೊಳಿಸುತ್ತಾಳೆ. ಬಾಬಮ್ಮ ಬಗ್ಗಿಸುವ ಹಾಲಿನ ಡಬ್ಬಿಯ ಬಾಯಿಗೆ ಆ ಗ್ಲಾಸನ್ನು ಹಿಡಿದು ಒಬ್ಬೊಬ್ಬರಿಗೇ ಹಾಲು ಕೊಡುತ್ತಾಳೆ. ತನ್ನ ಪಾಳಿ ಬರುತ್ತಿದ್ದಂತೆ ಒಂದೊಂದ ಮಗುವಿನ ಕಣ್ಣಲ್ಲೂ ಹಾಲಬೆಳದಿಂಗಳು. ಗಟಗಟನೆ ಹಾಲು ಕುಡಿದ ಮಕ್ಕಳು, ಬಾಯೊರೆಸಿಕೊಳ್ಳದೇ ಚಡ್ಡಿ ಏರಿಸಿಕೊಳ್ಳುತ್ತ ಆಟಕ್ಕೆ ಓಡಿಬಿಡುತ್ತವೆ. ಬಾಬಮ್ಮನ ಕಣ್ಣೊಳಗೂ ಬೆಳಕ ತುಣುಕೊಂದು ಈಜಾಡಿ ಇನ್ನೇನು ಒಳಬಂದು ಹಸಿದ ಹೊಟ್ಟೆ ತಣಿಸಿಕೊಳ್ಳುವ ಎಂದು ಬೋಗುಣಿಯ ಪ್ಲೇಟು ತೆಗೆಯುತ್ತಾಳೆ. ಖಾಲೀ! ಪಕ್ಕದಲ್ಲೇ ಮುಸುರೆಯಂಟಿಸಿಕೊಂಡು ಕುಳಿತ ಎರಡು ತಟ್ಟೆಗಳು… ಒಂದು ತನ್ನ ಗಂಡನದು. ಇನ್ನೊಂದು?

ಅಮ್ಮಾ ಅಮ್ಮಾ… ನೋಡಮ್ಮಾ ಬಾಬಮ್ಮ ಮಗ್ಳು ಗೆ ಶೇರಿಂಗ್ ಶೇರಿಂಗ್‍ ಅಂತ ಆ್ಯಪಲ್ ಕೊಟ್ರೆ ಬಾಬಮ್ಮ ತಗೊಳ್ತಿಲ್ಲ ಎಂದು ಹಳದೀ ಕುರ್ಚಿಯ ಮೇಲೆ ಬೇಸರಿಸಿಕೊಂಡು ಕುಳಿತಿದ್ದಳು. ಯಾಕೆ ಬಾಬಮ್ಮ ತಗೋ ಎಂದು ಹೇಳಿದಾಗ, ಈಟಿತ್ ಏಟಾತ್ ಎಂದು ನಟಿಕೆ ಮುರಿದು ಸೇಬನ್ನು ತನ್ನ ಚೀಲದೊಳಗೆ ಹಾಕಿಕೊಂಡಳು.

ನಾನಿತ್ತ ಕೋಣೆಗೆ ಹೋದವಳೇ, ಕಪಾಟು ತೆರೆದು ಮಂಡಿಯೂರಿ ಸುಮ್ಮನೇ ಕುಳಿತೆ. ಬಂದವಳನ್ನು ಬರಿಗೈಲಿ ಹೇಗೆ ಕಳಿಸುವುದು? ಸೀರೆ... ತಂದಿಟ್ಟ ಹೊಸ ಸೀರೆಗಳು‌ ಸದ್ಯಕ್ಕಿಲ್ಲ. ಹಾಗಿದ್ದರೆ ಏನು ಮಾಡುವುದು ಎಂದು ಒಂಬತ್ತು ವರ್ಷಗಳ ಹಿಂದೆ ಬೆಳಗಾವಿಯ ಭೆಂಡಿ ಬಝಾರಿನಲ್ಲಿ ಖರೀದಿಸಿದ ಸೀರೆಯನ್ನೇ ಹೊರತೆಗೆದು ತೊಡೆ ಮೇಲಿಟ್ಟುಕೊಂಡು ನೆಲಕ್ಕೆ ಕುಳಿತೆ. ಕುದ್ದುಕುದ್ದು ಪಾತ್ರೆಗಂಟಿದ ಕೆನೆಪದರ‌ಬಣ್ಣದ ಒಡಲಿಗೆ ಕಂದುಗೆಂಪು ಬಣ್ಣದ ಅಂಚು ಮತ್ತದರೊಳಗೆ ಬಂಗಾರಬಣ್ಣಜರಿಯೊಳಗೆ ಹೂ ಎಲೆ ಸುಳುವು. ಒಡಲೊಳಗೆ ಅಲ್ಲಲ್ಲಿ ಅದದೇ ಮೂರೂ ಬಣ್ಣಗಳಿಂದ ಎಂಬ್ರಾಯ್ಡರಿ ಮಾಡಿದ ಅರಳಿಯೆಲೆಯಾಕಾರ. ನನ್ನವನ ಅಕ್ಕನಿಗೆ ಅದು ಇಷ್ಟವಾಗಿತ್ತು, ಅವರಿಗೇಕೆ ಬೇಸರ ಮಾಡುವುದೆಂದು ಹೂಂ ಎಂದಿದ್ದೆನಾದರೂ ಉಟ್ಟಿದ್ದು ಒಂದೇಸಲ. ಬೆಂಗಳೂರಿಗೆ ಮರಳಿದ ಮೇಲೆ ಅದೊಂದು ಭಾನುವಾರದ ಮಧ್ಯಾಹ್ನ ಒಡಲು ಮುಗಿದು ಸೆರಗು ಶುರುವಾಗುವ ಮೂಲೆಯಲ್ಲಿ ಎರಡು ಹೂವುಗಳನ್ನು ಒಂದೇ ಬಳ್ಳಿಯಲ್ಲಿ ರೇಶಿಮೆ ಕಸೂತಿಯೊಳಗೆ ಬಂಧಿಸಿಟ್ಟಿದ್ದೆ. ಒಮ್ಮೆ ಆ ಕಸೂತಿಯ ಮೇಲೆಲ್ಲ ಕೈಯಾಡಿಸಿದೆ. ಇಷ್ಟು ದಿನ ಉಡದೇ ಇದ್ದಿದ್ದನ್ನು ಇನ್ನೆಂದು ಉಟ್ಟೇನು ಎನ್ನಿಸಿ, ಬಾಬಮ್ಮನಿಗೆ ಕೊಡುವುದೆಂದು ನಿರ್ಧರಿಸಿದೆನಾದರೂ ನಾನೇ ಹಾಕಿದ ಕಸೂತಿ, ಮದುವೆಯಾದ ಮೊದಲ ವರ್ಷ ನನ್ನವ ಕೊಡಿಸಿದ ಆ ಸೀರೆ ಎಂಬ ನೆನಪು ಯಾಕೋ ಮನಸಿನ ಎಳೆಯನ್ನೊಮ್ಮೆ ಜಗ್ಗಾಡತೊಡಗಿತು.  ಆದರೆ, ತನ್ನಷ್ಟಕ್ಕೆ ತಾನೇ ಮೈಮೇಲೆ ನಿಂತು ಹಿತ ಕೊಡದ ಸೆರಗು, ಉಟ್ಟಿ ಬಿಚ್ಚಿಟ್ಟಮೇಲೂ ಕಿರಿಕಿರಿ ಮಾಡುವ ಆ ಜರಿಯಂಚು, ನೆಲವನಪ್ಪದ ನೆರಿಗೆಗಳು ಮತ್ತು ಅದಕ್ಕಿರುವ (ಅ)ಪಾರದರ್ಶಕತನದಿಂದ ಯಾಕೋ ಆ ಸೀರೆ ಆಪ್ತವೆನ್ನಿಸಿರಲಿಲ್ಲ. ಏನು ಮಾಡುವುದು? ಬೇಕೋ ಬೇಡವೋ ಎಲ್ಲವನ್ನೂ ಆಯಾ ನೆನಪುಗಳೊಂದಿಗೆ ವರ್ಷಾನುಗಟ್ಟಲೇ ಕೂಡಿಡುವ ನನಗೆ, 'ಇಟ್ಟು ಹಾಳು ಮಾಡುವುದಕ್ಕಿಂತ ಕೊಟ್ಟು ಖಾಲಿಮಾಡು, ಅವರಿಗಾದರೂ ಉಪಯೋಗಕ್ಕೆ ಬರಲಿ' ಎಂದು ಆಗಾಗ ಹೇಳುವ ನನ್ನವನ ಮಾತೇ ಈ ಸಂದರ್ಭಕ್ಕೂ ಸೂಕ್ತವೆನ್ನಿಸಿತು.

ಬಾಬಮ್ಮನಿಗೆ ಸೀರೆ ಕೊಡಲು ಹೋದರೆ, ನಂಗಾ ಯಾಕ್‍ ಎಂದಳು. ಸುಮ್ಮನೇ ಅಂದೆ. ಬೇಡಬೇಡ ಎಂದು ನಾಚಿಕೊಂಡಳು. ಇರಲಿ ಎಂದು ಒತ್ತಾಯಿಸಿದಾಗ ಆ ಸಿಂಥೆಟಿಕ್ ಸೀರೆ ಅವಳ ಚೀಲದೊಳಗೆ ಸೇರಿತು‌. ಹೊರಟವಳು ತಿರುಗಿ ನೋಡಿ, ಅದು ಖರೇನ? ಎಂದಳು. ಯಾವುದು ಅಂದೆ. ಅದೇ ಎಂದು ಪಡಸಾಲೆಯ ಚೌಕಟ್ಟಿನ ಮೂಲೆಗೆ ಇಳಿಬಿದ್ದ ಗೀಜಗನ ಗೂಡಿನೆಡೆ ಕೈ ಮಾಡಿದಳು. ಹಾಂ ಆ ಗೂಡು ನಿಜವೇ ಅಂದೆ. ಒಳಗೂ ಅದಾವೇನ್? ತತ್ತಿ ಇಟ್ಟಾವೇನ್? ಎಂದಳು‌. ಛೆ ಇಲ್ಲ ಆ ಪಕ್ಷಿಗಳು ಸುಮ್ನೆ ಅಂದೆ. ಅಂದ್ರ? ಗೊಂಬಿ ಇದ್ದಂಗೇನ್? ಎಂದಳು ಬಾಯಿಗೆ ಸೆರಗು ಹಿಡಿದು ಕೌತುಕದಿಂದ ಆ ಗೂಡಿನ ಹೊರಬಾಗಿಲಿಗೆ ಅಂಟಿಕೊಂಡ ನಾಲ್ಕೂ ಪಕ್ಷಿಯನ್ನು ನೋಡಿ. ಹಾಂ ಒಂಥರಾ ಹಂಗ ಅಂದೆ.  ಚೆನಾಗೈತ್ ಚೆನಾಗೈತ್ ಚಂದ್‍ ಕುಂತಾವ್‍ ಎಂದು ಹೇಳುವಾಗ ಅವಳ ಕಣ್ಣಲ್ಲಿ ಬೆಳದಿಂಗಳು. ನಾ ಬರ್ತನಾಂಟಿ, ಹೊತ್ತಾತ್ ಎಂದು ಮುಂಬಾಗಿಲಿನ ಬೆನ್ನಹಿಡಿಕೆಗೆ ಕೈ ಹಾಕಿದಳು.

ಓಯ್ ಬಾಬಮ್ಮ ಬಾ ಇಲ್ಲಿ, ಒಂದು ಫೋಟೋ ತೆಗೀತೀನಿ, ಹೊಸ ಸರ, ಖುಷಿಯಲ್ಲಿದೀಯ ಅಂದೆ. ನಂದಾ? ಛಿಛೀ ಎಂದು ನಾಚಿಕೊಂಡಳಾದರೂ ಅವಳ ಉಬ್ಬು ಹಲ್ಲು ತುಟಿಯ ಹೊರಗೇ ಇದ್ದವು. ಬಾ ಹೀಗೆ ಇತ್ತಬಾ…  ಬೆಳಕಿಗೆ ಮುಖ ಮಾಡು, ಕತ್ತಲಿಗೆ ಬೆನ್ನು ಮಾಡು, ನೇರ ನೋಡು, ಇಲ್ನೋಡು ನನ್ನ ಎಡಹಸ್ತವನ್ನೇ ದಿಟ್ಟಿಸುತ್ತಿರು ಎಂದು ಹೇಳುತ್ತಿದ್ದಂತೆ ತಕರಾರಿಲ್ಲದೆ ಎಣ್ಣೆ ಹಾಕಿಟ್ಟ ಯಂತ್ರದಂತೆ ಸಾಪುಸಾಪಾಗಿ ನಡೆದುಕೊಂಡಳು. ಕೀಲುಗೊಂಬೆ ಥರ ಆಡಬೇಡ್ವೆ ಬಾಬಮ್ಮ, ಚೂರು ನಗೇ ಅಂದಿದ್ದಕ್ಕೆ, ಬ್ಯಾಡಾಂಟಿ ಹಲ್ಲು ಕಾಣ್ತಾವೆ ಎಂದು ಬಾಯಿಗೆ ಕೈ ಅಡ್ಡ ಹಿಡಿದಳು. ಸರಿ ನಿನಗೆ ಸರಿ ಅನ್ನಿಸುವ ಹಾಗೆ ನಿಲ್ಲು, ಒತ್ತಾಯವಿಲ್ಲ ಅಂದೆ. ಐದು ನಿಮಿಷ ಈ ಫೋಟೋಶೂಟ್ ನ ಮಾಯೆ ಅವಳ ಮೈಮುಖದ ನರಗಳನ್ನು ಸಡಿಲಗೊಳಿಸಿತ್ತು. ಫೋಟೋ ನೋಡಿದವಳೇ ಹಾಂ ಈಗ್ನೋಡಾಂಟಿ ಗುಂಡ್ ಹಾಕ್ಕೊಂಡ್ಮೇಲೆ ಕಳಾ ಬಂತು ಎಂದು ನಕ್ಕೇ ನಕ್ಕಳು. ನೋಡ್ನೋಡು ಈ ನಗು ಬೇಕಿತ್ತು ನನಗೆ ಫೋಟೋ ತೆಗೆಯುವಾಗ ಎಂದೆ. ತೆಗೆದ ಒಂದೊಂದೇ ಫೋಟೋ ತೋರಿಸುವಾಗ ಬಾಯಿಗೆ ಅಡ್ಡ ಸೆರಗು ಹಿಡಿದು ತನ್ನ ಫೋಟೋಗೆ ತಾನೇ ಅಂಕ ಕೊಡುತ್ತಿದ್ದಳು. ಕೊನೆಗೆ ಆದ್ವಾ? ಎಂದಳು. ಹೂಂ ಅಂದೆ. ಈ ಫೋಟೋ ತೊಳಸಬಹುದಾ? ಎಂದಳು. ಓಹ್ ಖಂಡಿತ ಎಂದೆ. ತೊಳಿಸಿಕೊಡಿ ಎನ್ನದೆ ತೊಳಿಸಬಹುದಾ ಎಂದಷ್ಟೇ ಕೇಳಿಹೋದ ಆಕೆಯ ಅಂತರ ನನಗಿಷ್ಟವಾಯಿತು.

'ಕೈಗೂಸು ಇದ್ದ ಮನಿ, ಎರಡು ದಿನ ಅವರ ಮನೆಗೆಲಸದವಳು ರಜೆ‌. ಭಾಂಡೀ, ಕಸ, ಬಟ್ಟೆ, ನೆಲ ಮಾಡಿ ಬಾ' ಎಂದು ಗೆಳತಿ ಮಾಧುರಿ ಹೋದ ವರ್ಷ ನಮ್ಮ ಮನೆಗೆ ಕಳಿಸಿದವಳೇ ಈ ಬಾಬಮ್ಮ. ಅಪ್ಪ ಯಾರೆಂದು ಗೊತ್ತಿಲ್ಲ. ಮೂರು ವರ್ಷದ ಕೂಸಿದ್ದಾಗ ಇವಳ ಅಮ್ಮ ಯಾರೊಂದಿಗೋ ಹೋಗಿಬಿಟ್ಟಳಂತೆ. ಅವರಿವರ ಕಟ್ಟೆ ಮೇಲೆ ಮಲಗೆದ್ದು, ಕೊಟ್ಟಿದ್ದನ್ನು ತಿನ್ನುತ್ತ, ಓಣಿಯೊಳಗಾಡುತ್ತ ಬೆಳೆಯತೊಡಗಿದಳು ಕೂಸು ಬಾಬಮ್ಮ. ರೆಕ್ಕೆ ಬಲಿಯದ ಮರಿಯ ನಡುಬೀದಿಯಲಿ ಬಿಟ್ಟರೆ ಏನೆಲ್ಲ ಪಾಡುಪಟ್ಟೀತು? ಹೊತ್ತುಮುಳುಗುವ ತನಕ ಅವರಿವರು ಕೊಟ್ಟ ತಿನಿಸು ತಿಂದು ಕತ್ತಲಾಗುತ್ತಿದ್ದಂತೆ  ಯಾರದೋ ಕಟ್ಟೆಯ ಮೇಲೆ ಮುದುಡಿ ಮಲಗಿಬಿಟ್ಟರೆ ದಿನ ಕಳೆದಂತೆ. ಚಳಿಯೋ ಮಳೆಯೋ ಎಂಬಂತಾದಾಗ ನಿಧಾನಕ್ಕೆ ಯಾರದಾದರೂ ಕೊಟ್ಟಿಗೆ ಹೊಕ್ಕು ಗೋಣಿತಾಟಿನೊಳಗೆ ಮೈಹುದುಗಿಸಿಕೊಂಡರೆ ಬೆಳಕು ಹರಿದಂತೆ. ರಟ್ಟೆಬಲಿಯುವ ಮೊದಲೇ ತಿಂಡಿತಿನಿಸಿನ ಆಸೆಗೆ ಕಸಮುಸುರೆ ಮಾಡುವುದು. ಸೆಗಣಿ ಬಾಚುವುದು, ಮಕ್ಕಳನ್ನು ಆಡಿಸುವುದು ನಿತ್ಯಕರ್ಮ.

ಬೆಳೆದ ಪೋರಿಗೆ ಊರ ಪುಂಡಹೋರಿಗಳು ಅಡ್ಡಡ್ಡ ಹಾಯುತ್ತ ಹಾಯುತ್ತ ಗಾಯದ ಮೇಲೆ ಗಾಯ ಮಾಡುತ್ತಿರುವ ಹೊತ್ತಿಗೆ, ಅವಳಿಗಿಂತ ಐದು ವರ್ಷ ದೊಡ್ಡವನಾದ ಅವ್ವ-ಅಪ್ಪನನ್ನು ಚಿಕ್ಕಂದಿನಲ್ಲೇ ಕಳೆದುಕೊಂಡ ಹುಡುಗನೊಬ್ಬನನ್ನು ಊರ ಹಿರಿಯರು ಪೇಟೆಯ ದ್ಯಾಮವ್ವನ ಗುಡಿಯ ಮುಂದೆ ತಂದು ನಿಲ್ಲಿಸಿದರು. ಗುಜ್ಜರ ಅಣ್ಣಪ್ಪನಂಗಡಿಯ ಮೆಟ್ಟಿಲ ಮೇಲೆ ಉಡಿಯೊಳಗೆ ಮುಷ್ಟಿ ಚುರುಮುರಿ ಸುರುವಿಕೊಂಡು, ಒಣಗಿದ ಭಜ್ಜಿ ತಿನ್ನುತ್ತ, ಅಲ್ಲೇ ನಿಂತಿದ್ದ ನಾಯಿಗೂ ನಾಲ್ಕು ಕಾಳು ಹಾಕಿ ಕುಳಿತಿದ್ದಳು. ಇಬ್ಬರು ಹೆಣ್ಣುಮಕ್ಕಳು ಬಂದವರೇ, ಅವಳ ಬಗಲಿಗೆ ಕೈಹಾಕಿ ಬರಬರನೇ ಅವಳನ್ನು ಎಳೆದುಕೊಂಡು ಹೋಗಿಬಿಟ್ಟರು. ಚುರುಮುರಿ ಭಜ್ಜಿ ಎಂದು ಆಕೆ ಅಳತೊಡಗಿದರೂ ಅದನ್ನು ಲೆಕ್ಕಿಸದ ಅವರು ನಡಿಗೆಯನ್ನು ತೀವ್ರಗೊಳಿಸಿಬಿಟ್ಟರು. ಅಷ್ಟೊಂದು ಚುರುಮುರಿ ಇನ್ನು ತನಗೇ ಎಂಬ ಖುಷಿಯಲ್ಲಿ ಕಿವಿನೆಟ್ಟಗೆ ಮಾಡಿಕೊಂಡು ತಿನ್ನತೊಡಗಿತು ನಾಯಿ.

ಇತ್ತ ತೊಟ್ಟ ಲಂಗ ಬ್ಲೌಸಿನ ಮೇಲೆಯೇ ಆ ಅನಾಥ ಹುಡುಗನಿಂದ ಒಂದೆಳೆ ಕರಿಮಣಿ ಕಟ್ಟಿಸಿ, ಅವರಿಬ್ಬರನ್ನೂ ರಾತ್ರೋರಾತ್ರಿ ಬೆಂಗಳೂರಿನ ಬಸ್ಸು ಹತ್ತಿಸಿ ಕಳಿಸಿ ಕೈತೊಳೆದುಕೊಂಡುಬಿಟ್ಟರು
ಊರವರು. ಕಣ್ಬಿಟ್ಟಾಗ ಬೆಂಗಳೂರಿನ ಗದ್ದಲಕ್ಕೆ, ಗಡಿಬಿಡಿಗೆ ಹೌಹಾರಿದ ಹಕ್ಕಿಯಂತಾಗಿದ್ದಳು ಬಾಬಮ್ಮ. ಫ್ಲೈಓವರಿನ ಮೇಲೆ ಕುಳಿತು ಏನೇನೋ ಸಾಮಾನುಗಳ ಮಾರುವ ಅವರೆಲ್ಲ ಉಳಿದವರನ್ನೆಲ್ಲ ಬಿಟ್ಟು ನನ್ನನ್ನೇ ಯಾಕೆ ಕರೆಯುತ್ತಿದ್ದಾರೆ ಎಂದು ತಲೆಕೆರೆದುಕೊಳ್ಳುತ್ತ ನಿಂತ ಅವಳನ್ನು, ಗಂಡನೆನ್ನಿಸಿಕೊಂಡವನು ರಟ್ಟೆ ಹಿಡಿದು ಎಳೆದುಕೊಂಡು ಹೋದ. ಅದ್ಯಾವುದೋ ಬಸ್ಸು ಹತ್ತಿದಾಗ ಯಾವುದ್ಯಾವುದೋ ಸಂದಿಯೊಳಗೆ ತಿರುಗಿ ಜೋಪಡಿಗಳಿದ್ದಲ್ಲಿಗೆ ತಂದಿಳಿಸಿತು. ಒಂದೆರಡು ಮುಖಗಳನ್ನು ಚಿಕ್ಕಂದಿನಲ್ಲಿ ನೋಡಿದ ನೆನಪಾಯಿತಾದರೂ ಯಾರೋ ಏನೋ ಎಂದು ಸುಮ್ಮನಾದಳು ಬಾಬಮ್ಮ. ಎರಡು ದಿನ ಬೇರೊಬ್ಬರ ಜೋಪಡಿಯೊಳಗಿದ್ದು, ನಂತರ ತಮ್ಮದೂ ಒಂದು ಪ್ರತ್ಯೇಕ ಜೋಪಡಿಯನ್ನೂ ಕಟ್ಟಿಕೊಂಡರು ಹೊಸ ಗಂಡ-ಹೆಂಡತಿ. ಗೌಂಡಿ ಕೆಲಸಕ್ಕೆ ಗಂಡ ಸೇರಿದರೆ ಇವಳು ಮನೆಗೆಲಸ, ಶಾಲೆಕೆಲಸಕ್ಕೆ. ಹೀಗೆ ಹೇಗೋ ಹೊಟ್ಟೆಬಟ್ಟೆ ಸರಿದೂಗಿದರೂ ಸಂಸಾರ ಮಾಡುವುದೆಂದರೆ ಮಾತ್ರ ಒಲ್ಲೇ ಎನ್ನುತ್ತಿದ್ದಳು. ಗಂಡ ಹತ್ತಿರ ಬಂದಾಗೆಲ್ಲ ಮೈಮೇಲೆ ಚೇಳು ಹರಿದಂತಾಗಿ ದೂಡಿಬಿಡುತ್ತಿದ್ದಳು. ಆದರೂ ಗಂಡ ಅವಳ ಗರ್ಭದೊಳಗೊಂದು ಬೀಜವನ್ನು ವರ್ಷತುಂಬುದವುದರೊಳಗೆ ಬಿತ್ತೇಬಿಟ್ಟ…

ಮುಂದೊಂದು ದಿನ‌, ದಿನಗಳು ತುಂಬಿ ಜೋಪಡಿಯೆದುರಿನ ಮೋರಿಯಲ್ಲಿ ತಲೆಸುತ್ತಿ ಬಿದ್ದಾಗ, ಯಾರೋ ಹಾದಿಹೋಕರು ಆ್ಯಂಬುಲೆನ್ಸ್ ನೊಳಗೆ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ಅವಳನ್ನು ಸೇರಿಸಿಬಂದಿದ್ದರು. ಹೆರಿಗೆಯೂ ಆಗಿ, ಅಲ್ಲಿದ್ದವರೆಲ್ಲ ಚೆಂದ ಕೂಸನ್ನು ಬಂದುಬಂದು ನೋಡಿ ಮುದ್ದಾಡಿ ಹೋಗುತ್ತಿದ್ದರೆ ವಿನಾ ನೀರು ನೀರು ಎಂದು ಅರಚಿದರೂ ಹನಿ ನೀರು ಬಾಯಿಗೆ ಬೀಳುತ್ತಿರಲಿಲ್ಲ, ಇನ್ನು ಊಟವೆಲ್ಲಿ! ಹೇಗೋ ಹೆಂಗೂಸನ್ನು ಸೆರಗೊಳಗೆ ಸುತ್ತಿಕೊಂಡು ಯಾರ್ಯಾರಿಗೋ ಕೇಳಿಕೊಂಡು ಬಸ್ಸು ಹತ್ತಿ ಜೋಪಡಿ ಸೇರಿದ್ದಳು ಬಾಬಮ್ಮ. ಅವಳು ಕೆಲಸ ಮಾಡುತ್ತಿದ್ದ ಶಾಲೆಬಳಿಯ ಮನೆಗಳವರು ಕೂಸಿಗೆ ಅವಳಿಗೆ ಬಟ್ಟೆಬರೆ ಕೊಟ್ಟು ಚೆಂದ ಗುಂಡುಗುಂಡು ಕೂಸನ್ನು ಮುದ್ದಾಡಿದ್ದರು. ಹಸುಗೂಸನ್ನು ಕಟ್ಟಿಕೊಂಡೇ ವಾರ ತುಂಬುವುದರೊಳಗೆ ಶಾಲೆಯ ಆಯಾ ಕೆಲಸಕ್ಕೆ ಹೊರಟಿದ್ದಳು ಬಾಬಮ್ಮ.

ಮನೆಯಲ್ಲಿ ಅಡುಗೆ ಮಾಡಿದರೆ ಮಾಡಿದಳು ಇಲ್ಲವಾದರೆ ಇಲ್ಲ. ಗಂಡನಾದವನು ತಾನೂ ತಿಂಡಿ ತಿಂದು ಅವಳಿಗೂ ತಂದುಕೊಟ್ಟು ಗೌಂಡಿ ಕೆಲಸಕ್ಕೆ ಹೋಗುತ್ತಿದ್ದ. ಮಗಳೂ ಶಾಲೆಗೆ ಹೋಗುವಷ್ಟು ದೊಡ್ಡವಳಾದಳು. 'ಈ ಮಧ್ಯೆ ಬಾಬಮ್ಮನಿಗೆ ಗಂಡುಕೂಸಿನ ಆಸೆ ಉಂಟಾಯಿತು. ಗಂಡನೊಂದಿಗೆ ಕೂಡುವುದು ಬೇಡ ಆದರೆ ತನಗೊಂದು ಗಂಡುಕೂಸು ಬೇಕು‌' ಈ ವಿಚಿತ್ರ ಆಸೆ ತಳಬುಡ ಏನೊಂದೂ ಇಲ್ಲದೇ ಸುಮ್ಮನೇ ಹೊಯ್ದಾಡುತ್ತಿರುವಾಗಲೇ ಬಾಬಮ್ಮನಿಗೆ ಬದುಕು ಮತ್ತೊಂದು ಬರೆ ಎಳೆದಿತ್ತು.

ಫ್ಯಾನ್‍ ಆನ್ ಮಾಡಿ, ಸೋಫಾದ ಮೇಲೆ ಒರಗಿದೆ. ಸೀಲಿಂಗಿನ ನೆತ್ತಿಗೆ ಫ್ಯಾನ್‍ ತಿರುಗುತ್ತಿದ್ದರೆ, ನನ್ನ ತಲೆಯೊಳಗೆ ಬಾಬಮ್ಮ ತಿರಗುತ್ತಿದ್ದಳು. ನಾಲ್ಕೈದು ತಿಂಗಳ ಹಿಂದೆ, ಎಂದೂ ತರದವ ಅಂದು ಒಂದು ಕೆಜಿ ಚಿಕನ್ ತಂದು ಬಾಬಮ್ಮನ ಕೈಗೆ ಕೊಟ್ಟಿದ್ದ ಗಂಡ. ಇದೇನಿದು ಯಾವ ಮೋಡ ಸರಿಯಿತೆಂದು ಜೋಪಡಿಯಿಂದ ಹೊರಬಂದು, ಆಕಾಶ ನೋಡಿದ್ದಳು. ಒಳಗೊಳಗೇ ಹಿಗ್ಗುತ್ತ, ಕೋಳಿಯನ್ನು ಪಾತ್ರೆಯೊಳಗೆ ಕುದಿಯಲಿಟ್ಟು ಬಂದಳು. ಮುಂದೇನು ಮಾಡುವುದೆಂಬುದೇ ಗೊತ್ತಿರದ ಬಾಬಮ್ಮ, ಪಕ್ಕದ ಜೋಪಡಿಯ ಪಾರ್ವತಿಗೆ ಮಸಾಲೆ ಅರೆಯುವುದು ಹೇಗೆಂದು ಮತ್ತದಕ್ಕೆ ಬೇಕಾದ ಸಾಮಾನುಗಳನ್ನು ಆಕೆಯ ಬಳಿಯೇ ಕೇಳಿ ತೆಗೆದುಕೊಂಡುಬಂದಿದ್ದಳು. ಈಗ ಬಂದೆ ಎಂದು ಹೊರಗೆ ಹೋಗಿದ್ದ ಗಂಡ, ಬರುವಾಗ ಸಣ್ಣ ಕೈಚೀಲದೊಂದಿಗೆ ಮರಳಿದ. ಅದನ್ನು ಮೊಳೆಗೆ ನೇತುಹಾಕಿ ಅತ್ತ ಕಾಲುತೊಳೆಯಲೆಂದು ಹೊರಹೋದಾಗ ಬಾಬಮ್ಮ, ಆ ಚೀಲದೊಳಗೆ ಇಣುಕಿದಳು. ಕೆಂಪು ಬಣ್ಣದ ಸೀರೆ ಮತ್ತು ಪುಟ್ಟ ಕೆಂಪು ಡಬ್ಬಿ ಕಂಡಿತು. ಇದೆಲ್ಲ ತನಗೇಯಾ ಎಂದು… ಸೀರೆಯನ್ನೊಮ್ಮೆ ಬೆರಗಿನಿಂದ ಸವರಿ ಹಾಗೇ ಚೀಲದೊಳಗಿಟ್ಟಳು. ಪುಟ್ಟಡಬ್ಬಿ ತೆಗೆಯುವುದರೊಳಗೆ ಗಂಡ ಬಂದೇಬಿಟ್ಟ. ಬೆದರಿದ ಆಕೆ ಕೈಯಿಂದ ನಾಲ್ಕೈದು ಬಂಗಾರ ಗುಂಡುಗಳುರುಳಿ ಕೆಳಗೆ ಬಿದ್ದೇಬಿಟ್ಟವು. ಅವ ತನ್ನನ್ನು ನೋಡಿ ಬೈದಾನು ಹೊಡೆದಾನು ಎಂದುಕೊಂಡಿದ್ದ ಆಕೆಗೆ ಆಶ್ಚರ್ಯ ಕಾದಿತ್ತು. ತಾನೇ ನೆಲಕ್ಕೆ ಕೂತು ಆ ಗುಂಡುಗಳನ್ನು ಆಯ್ದು ಮರಳಿ ಡಬ್ಬಿಯೊಳಗಿಟ್ಟು ಚೀಲ ನೇತುಹಾಕಿದ.

ಕತ್ತಲಾವರಿಸುತ್ತಿತ್ತು ಕೋಳಿಗೆ ಮಸಾಲೆಯೂ ಅಂಟಿ ಬೆಂದಾಗಿತ್ತು. ಪರಿಮಳವೆಲ್ಲ ಜೋಪಡಿಯಿಂದ ಆಚೆಗೂ ದಾಟಿತ್ತು. ಬೆಂದದ್ದು ಮಾತ್ರ ಬೋಗುಣಿಯೊಳಗಿತ್ತು. ಬಾಬಮ್ಮನ ನರನಾಡಿಗಳಲ್ಲೆಲ್ಲ ಎಂಥದೋ ಶಕ್ತಿ ಸಂಚಯಿಸಿ, ಅವತ್ತು ಓಣಿಯ ಪುಟ್ಟ ಹುಡುಗನೊಬ್ಬ ತಂದುಕೊಟ್ಟ ಯಾವುದೋ ಗಾಡಿಯ ಕನ್ನಡಿಯನ್ನು ತನ್ನ ಜೋಪಡಿಯೊಳಗೆ ಸಿಕ್ಕಿಸಿಟ್ಟುಕೊಂಡವಳು ಮರೆತೇ ಹೋಗಿದ್ದಳು. ಅದೀಗ ಇದ್ದಕ್ಕಿದ್ದಂತೆ ನೆನಪಾಗಿ ಒಮ್ಮೆ ತನ್ನ ಮುಖ ನೋಡಿಕೊಂಡಳು. ಹೇಳಿಕೇಳಿ ಸೀಳಿದ ಕನ್ನಡಿ. ಎಷ್ಟು ಕತ್ತು ವಾಲಿಸಿ ನೋಡೇ ನೋಡಿದಳು. ಒಡಕುಬಿಂಬದೊಳಗೆ ತನ್ನ ಹುಡುಕೇ ಹುಡುಕಿದಳು. ಕೊನೆಗೆ ಯಾರದೋ ನೆರಳು ತನ್ನೆಡೆಗೆ ನಡೆದು ಬಂದಂತಾಯಿತು. ಬಾಗಿಲಿಗೆ ಬಂದ ಕಾಲುಗಳಲ್ಲಿ ಬೆಳ್ಳಿ ಗೆಜ್ಜೆಗಳು, ಕಾಲುಂಗುರಗಳು ಹೊಳೆಯುತ್ತಿದ್ದವು. ಹಾಗೇ ಮೇಲಕ್ಕೆ ಆ ವ್ಯಕ್ತಿಯನ್ನು ನೋಡಿದಳು. ಹಸಿರು ಸೀರೆಯೊಳಗೆ ಮಿಣಕು ಹೂಗಳು ಹೊಳೆಯುತ್ತಿದ್ದವು, ಕಣ್ಣಕೊಳದ ಸುತ್ತ ಕಾಡಿಗೆಯು ಒಡ್ಡು ಕಟ್ಟಿತ್ತು. ತುಟಿಗಳು ಕೆಂಬಣ್ಣದಲ್ಲಿ ತೇಲಾಡುತ್ತಿದ್ದವು. ಒತ್ತಾಗಿ ಹೆಣೆದ ಜಡೆ ಎಣ್ಣೆಯೊಳಗೆ ಸರೀ ಮಿಂದೆದ್ದಿತ್ತು. ಎದೆಯ ಮೇಲಿನ ತೆಳುಸೀರೆ ಭುಜದ ಮೇಲೆ ನಿಂತೂನಿಲ್ಲದಂತಿತ್ತು. ಬಾಬಮ್ಮ ದಂಗುಬಡಿದು ನಿಂತುಬಿಟ್ಟಳು. ನೋಡನೋಡುತ್ತಿದ್ದಂತೆಯೇ ಬೆಳ್ಳಿಗೆಜ್ಜೆ ಕಾಲುಗಳು ತನ್ನ ನೆರಳನ್ನು ತಾನೇ ತುಳಿಯುತ್ತ ಜೋಪಡಿ ಹೊಕ್ಕಿತು. ಹಾಗೆ ಹೊಕ್ಕಿಕೊಳ್ಳುವಾಗ ಬಾಬಮ್ಮನ ಪಕ್ಕದಲ್ಲಿದ್ದ ಅವಳ ಗಂಡ ಹೆಜ್ಜೆ ಮುಂದಿಡುತ್ತಿದ್ದಂತೆ ಅವನ ನೆರಳು ಆ ಗೆಜ್ಜೆಕಾಲುಗಳ ನೆರಳುಗಳೊಂದಿಗೆ ಸೇರಿ ಅದೊಂದು ಕಪ್ಪುಗೋಡೆಯಂತೆ ಕಂಡಿತು. ಬವಳಿಬಿಟ್ಟಳು ಬಾಬಮ್ಮ.

ತನಗರಿವಿಲ್ಲದೆಯೇ ಎರಡು ತಟ್ಟೆಗಳೊಳಗೆ ಊಟ ಬಡಿಸಿದಳು. ಮೂಲೆತಿರುವಿನ ಜೋಪಡಿಯ ಫಾತೀಮಾ ಮತ್ತು ಬಾಬಮ್ಮನ ಗಂಡ ಒಬ್ಬರಿಗೊಬ್ಬರು ಕಣ್ಣೊಳಗೇ ಮಾತನಾಡಿಕೊಳ್ಳುತ್ತ ಊಟ ಮಾಡತೊಡಗಿದರು. ಫಾತೀಮಾಳ ಈ ಅವತಾರ ಕಂಡು ಕರೆಂಟು ಹೊಡೆದ ಕಾಗೆಯಂತಾಗಿದ್ದ ಬಾಬಮ್ಮನಿಗೆ ಮಗಳ ನೆನಪಾಗಿ ಹೊರಗೆ ಓಡಿಬಿಟ್ಟಳು. ಅಲ್ಲೆಲ್ಲೋ ಆಡುವ ಮಗಳನ್ನು ಕರೆದುಕೊಂಡು ಗಣಗಣ ಎಂದು ಗಾಣದೆತ್ತಿನಂತೆ ಬರಿಗಾಲಿನಲ್ಲಿ ಆ ಕತ್ತಲಲ್ಲಿ ನಾಯಿಗಳು ಊಳಿಡುವ ಹೊತ್ತಿನ ತನಕ ಓಣಿಓಣಿ ತಿರುಗೇ ತಿರುಗಿದಳು ಬಾಬಮ್ಮ. ಅಮ್ಮನ ಈ ವಿಚಿತ್ರ ವರ್ತನೆಯಿಂದ ಕಂಗಾಲಾದ ಮಗಳು, ಅಳುತ್ತಲೇ ಅಮ್ಮನೊಂದಿಗೆ ಓಡುತ್ತಿದ್ದಳು. ಕೊನೆಗೊಂದು ಉದ್ಯಾನವನದಲ್ಲಿ ಕುಳಿತು ಮಗಳನ್ನು ಗಟ್ಟಿ ತಬ್ಬಿಕೊಂಡು ಜೋರಾಗಿ ಅಳತೊಡಗಿದಳು. ಬೀದಿನಾಯಿಗಳು ಜೋರಾಗಿ ಊಳಿಡುತ್ತ ಸುತ್ತುವರಿಯತೊಡಗಿದವು. ಗಸ್ತುತಿರುಗುತ್ತಿದ್ದ ಪೊಲೀಸನ ಲಾಟಿಸದ್ದು ಮಗಳೊಂದಿಗೆ ಜೋಪಡಿಗೇ ಮರಳಿಸಿತು.

ಜೋಪಡಿಯ ಬಾಗಿಲಲ್ಲಿ ಕಂಡ ಆಕೃತಿಯೊಂದು ಸರಿದಾಡಿದಂತಾಗಿ ಕ್ರಮೇಣ ಪ್ರತ್ಯೇಕ ಆಕೃತಿಗಳಾಗಿ ದೂರ ಸರಿದವು. ಮಗಳು ನಿದ್ದೆಗಣ್ಣಲ್ಲೇ ಬಾಯಿಚಪ್ಪರಿಸಿ ಊಟ ಮಾಡಿ ಮಲಗಿದಳು. ಹೊಟ್ಟೆಯಲ್ಲಿ ಬೆಂಕಿಯೇ ಬಿದ್ದಿದ್ದರಿಂದ ಮತ್ತೆ ಬೆಂದ ಕೋಳಿಯನ್ನೇ ಹೊಟ್ಟೆಗೆ ತುರುಕಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದುಕೊಂಡು ಗಳಗಳನೆ ನೀರು ಕುಡಿದು ಮಗಳ ಪಕ್ಕ ಅಡ್ಡಾದಳು ಬಾಬಮ್ಮ. ಜೋಪಡಿಯ ಬಾಗಿಲೊಳಗೆ ಎರಡಾಗಿದ್ದ ಆಕೃತಿಗಳು ಮೆಲ್ಲನೇ ಎದ್ದುಬಂದು ತನ್ನ ಪಕ್ಕವೇ ಉದ್ದುದ್ದವಾದವು. ಕಣ್ಣೆದುರೇ ಹಕ್ಕಿಗಳು ಬೆದೆಗೆ ಬಂದಿದ್ದನ್ನು ಕಂಡ ಬಾಬಮ್ಮ ಮಗಳನ್ನು ಅವುಚಿಕೊಂಡು ಆ ಎರಡೂ ಆಕೃತಿಗಳಿಗೆ ಬೆನ್ನು ಮಾಡಿಬಿಟ್ಟಳು. ಇಡೀ ರಾತ್ರಿ ಒಲೆಯ ಕೆಂಡ ಕಿವಿಯೊಳಗೇ ಕುಳಿತಂತಿತ್ತು.  ಉಬ್ಬುಹಲ್ಲಿನ ಬಾಯನ್ನು ಗಟ್ಟಿಹಿಡಿದುಕೊಂಡು ಕಣ್ಣೀರೆಲ್ಲ ಖಾಲಿ ಮಾಡಿದರೂ ಹೊಟ್ಟೆಯೊಳಗೆ ನಿಗಿನಿಗಿ. ಬೆಳಗಿಗೆ ಹೇಗೋ ಒಂದು ಜೋಂಪು ಆವರಿಸಿತ್ತು. ಕಣ್ಬಿಟ್ಟಾಗ ಜೋಪಡಿಯ ಸಂದಿಯಿಂದೆಲ್ಲ ಬಿಸಿಲ ಕೋಲುಗಳು ದಾಂಗುಡಿ ಇಟ್ಟಿದ್ದವು. ಪಕ್ಕದಲ್ಲಿ ಗಂಡ ಬಾಯಿತೆರೆದುಕೊಂಡು ಗೊರಕೆ ಹೊಡೆಯುತ್ತಿದ್ದ. ನೇತುಹಾಕಿದ್ದ ಆ ಕೆಂಪು ಸೀರೆ ಮತ್ತು ಕೆಂಪು ಡಬ್ಬವಿದ್ದ ಚೀಲ ಮಾಯವಾಗಿತ್ತು.

ಇದ್ದಕ್ಕಿದ್ದಂತೆ ನನ್ನ ಬಲಗಾಲಿನ ಮೀನಗಂಡದಲ್ಲಿ ಸೆಳೆತ ಶುರುವಾಗಿ ಮೇಲಿನ ಉಸಿರು ಮೇಲಾಗತೊಡಗಿತು. ಆ ಹಗಲಲ್ಲೂ ಪೂರ್ತಿ ಕತ್ತಲಾವರಿಸಿ, ಆ ಕತ್ತಲಲ್ಲೂ ನೀಲಿ ಬೆಟ್ಟಗಳು ನನ್ನ ಸುತ್ತ ಗಿರಿಗಿರ ತಿರುಗಲಾರಂಭಿಸಿದವು. ಕಿಟಕಿಯ ಪರದೆಗಳು ಪಟಪಟನೆ ಬಡಿದುಕೊಳ್ಳುತ್ತಿದ್ದವು. ನಿಧಾನ ಕಣ್ಬಿಟ್ಟಾಗ  ನೆಲ್ಲಿಗಾತ್ರದ ಗಂಟೊಂದು ಬುರಬುರನೆ ಮೀನಗಂಡದ ಮೇಲೆ ಉಬ್ಬಿನಿಂತಿತು.  ಅದನ್ನೊಮ್ಮೆ ಜೋರಾಗಿ ನೀವಿಕೊಂಡರೆ ನರಗಳು ತೊಡಕು ಬಿಟ್ಟಾವು. ಆದರೆ, ಕೈಯೇ ಎಟುಕುತ್ತಿಲ್ಲ. ನೂರಾರು ಜನ ನನ್ನ ಕಾಲ್ಹಿಡಿದು ಒಮ್ಮೆಲೆ ಎಳೆಯುತ್ತಿರುವಂತೆ… ಕಿರುಚಿಕಿರುಚಿ ಗಂಟಲೊಣಗಿದೆ.  ಫ್ಯಾನ್ ನಿಂತು ಎಷ್ಟೊತ್ತಾಗಿದೆಯೋ? ಮೈಯೆಲ್ಲ ತಪತಪ, ದಳದಳ ಕಣ್ಣೀರು.  

ದಬದಬ ಸದ್ದು. ಅದು ಬಾಗಿಲಿನದೋ ಎದೆಯದೋ? ಬೆಚ್ಚಿಬಿದ್ದು ಎದ್ದುಕುಳಿತೆ. ಕಾಲು ಕೆಳಗಿಡುವುದೇ ತಡ ಸರಕ್ಕನೇ ಪಾತಾಳ. ಪಡಸಾಲೆತನಕ ನೀಲಿಬಾಟಲಿಯ ಬಾಯುಕ್ಕಿದೆ. ದಬದಬ ಸದ್ದು… ಮುಂಬಾಗಿಲ ತನಕ ಹಣ್ಣಣ್ಣಾದ ಕಾಲೆಳೆದುಕೊಂಡು ಬೆನ್ನಹಿಡಿಕೆಗೆ ಕೈಹಾಕಹೋದರೆ ಹಿಡಿಕೆ ತಾಕುತ್ತಲೇ ಇಲ್ಲ. ಆಯತಪ್ಪಿ ಬೀಳುವಷ್ಟರಲ್ಲಿ ಗೋಡೆ ಆಸರೆಯಾಯಿತು. ಮೈಯೆಲ್ಲ ಬಿಗಿದು ಚಿಟಿಚಿಟಿ ಎನ್ನುವಾಗಲೇ ಎದುರಿನ ಗೋಡೆಯ ಕನ್ನಡಿ ತನ್ನ ನೋಡೆಂದಿತು. ನೋಡನೋಡುತ್ತಿದ್ದಂತೆ ಎರಡು  ಗುಲಾಬಿ ದಳಗಳಂಥ ತುಟಿಗಳು… ಕನ್ನಡಿ ದಾಟಿ ಮುಖದತ್ತಲೇ ಬರತೊಡಗಿದವು. ಬೇಡಬೇಡವೆಂದು ಬಾಯಿಮುಚ್ಚಿಕೊಳ್ಳಹೋಗುವುದೇ ತಡ ಬೆರಳಗುಂಟ ದಬದಬನೆ ಉದುರಿದ ನನ್ನವೇ ಹಲ್ಲುಗಳು.

-ಶ್ರೀದೇವಿ ಕಳಸದ