Saturday, January 27, 2018

ಭಿನ್ನಷಡ್ಜಪಾಪ ಟ್ರೀ ಕಾಲು ಮಣ್ಣೊಳಗೆ ಹೋಗ್ಬಿಟ್ಟಿವೆ. ಅದಕ್ ನಡ್ಯಕ್ಕೇ ಆಗಲ್ಲ ಅಲ್ವಾಮ್ಮಾ? ಅಲ್ಲಿ ಅದ್ಕೆ ಎಷ್ಟೋಂದ್ ಬವ್ವಾ ಕಚ್ತಿರ್ತಾವಲ್ಲ? ಒಂದ್ ಕೆಲ್ಶಾ ಮಾಡಣ, ಟೆರೆಶ್ ಮೇಲೆಹತ್ತಿ ನಾವಿಬ್ರೂ ಶೇರಿ ಜೋರಾಗಿ ಟ್ರೀನ್ನಾ ಎಳದ್ಬಿಡಣ. ಆಗ, ಟ್ರೀ ಕಾಲು ಮಣ್ಣಿಂದ ಬಂದ್ಬಿಡತ್ತೆ, ಅದಕ್ ಆರಾಮ್ ಅನ್ಶತ್ತೆ. ಬವ್ವಾ ಕಚ್ಚಿದಲ್ಲೆಲ್ಲ ಅದಕ್ಕೆ ಡೆಟಾಲ್ ಹಾಕೋಣ. ಆಮೇಲೆ ಆಯಿಂಟ್ಮೆಂಟ್ ಹಚ್ಚೋಣ. ಶಾಫ್ಟ್ ಪ್ಯಾಂಟ್ ಹಾಕಿ ನಮ್ಮನೇಲೆ ಇಟ್ಕೊಂಬಿಡಣ. ಅವತ್ತೊಂದಿನ ಮಳೆ‌ ಬಂತಲ್ಲಾ ಆಗ ಎಷ್ಟ್ ಜೋರ್ ನಡಗ್ತಿತ್ ಗೊತ್ತಾಮ್ಮಾ? ಮತ್ತೆಜೋರಾಗ್ ಗಾಳಿ ಬೀಶಿತ್ತಲ್ಲ ಆಗ ಎಲೇಲ್ಲಾ ಹೆಂಗ್ ಉದ್ರಿ ಹೋಗಿತ್ ಗೊತ್ತಾಮ್ಮಾ? ಪಾಪ ಅದೆಷ್ಟ್ ಗಾಯ ಆಗಿರಬೇಕಲ್ಲ ಮೈತುಂಬಾ. ಮತ್ತೆ… ಇಷ್ಟು ದೊಡ್ ಟ್ರೀಗೆ ದೊಡ್ಆಯಿಂಟ್ಮೆಂಟ್ ಬೇಕಲ್ಲ ಎಲ್ಲಿ ಶಿಗುತ್ತೆ? ನನ್ಹತ್ರ ಶೊಲ್ಪೇ ಇದೆ. ತುಂಬಾ ತುಂಬಾ ದೊಡ್ಡ ಆಯಿಂಟ್ಮೆಂಟ್ ಬೇಕದಕ್ಕೆ, ತುಂಬಾ ತುಂಬಾ…


ಲಯ ರೂಪಿತಾ ತನ್ನೆರಡೂ ಕೈಗಳನ್ನೆತ್ತಿ ಅಗಲಗೊಳಿಸುತ್ತ, ಪುಟ್ಟ ಸ್ಟೂಲಿನ ಮೇಲೆ ಹತ್ತಿ ನಿಂತಳು. ಆರೇಳು ಸೆಕೆಂಡುಗಳ ನಂತರ ಪಕ್ಕದಲ್ಲೇ ಇದ್ದ ಕುರ್ಚಿ ಮೇಲೆಯೂ ಹತ್ತಿ ಮತ್ತೆ ಕೈಗಳನ್ನು ಇಷ್ಟಗಲ ಮಾಡಿದಳು. ತುಂಬಾ ಅಂದ್ರೆ ತುಂಬಾ ದೊಡ್ಡ ಆಯಿಂಟ್ಮೆಂಟ್ ಎಂದು ತನ್ನಮ್ಮನಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿ ತಾನು ಸಫಲಳಾಗಲಿಲ್ಲ ಎಂಬ ಸಣ್ಣ ಅಸಮಾಧಾನದಲ್ಲೇ ಧಪ್‍ ಎಂದು ಕುರ್ಚಿಯಿಂದ ಜಿಗಿದಳು. ತಾಸಿನಿಂದ ಆರಾಮ್ ಕುರ್ಚಿಗಾತು ಸುಸ್ತಾಗಿ ಕುಳಿತಿದ್ದ ಚೈತ್ರಗೌರಿ ಇದ್ದಕ್ಕಿದ್ದಂತೆ ಕಿಬ್ಬೊಟ್ಟೆಯಲ್ಲಿ ನೋವಸೆಳಕು ಹೆಚ್ಚಿ ನರಳತೊಡಗಿದಳು. ಮುಚ್ಚಿದ ಕಣ್ಣುಗಳ ಕೋಣೆಯೊಳಗಿಂದ ಬೂದುಬಣ್ಣದ ಸಣ್ಣಸಣ್ಣ ಪಕಳೆಗಳು ಕಪ್ಪುಆಕಾಶದೊಳಗೆ ತೂರಿಹೋದಂತಾದವು. ಅದ್ಯಾರೋ ತನ್ನ ತೊಡೆಗಳೊಳಗೆ ಕೈಹಾಕಿ ನರಗಳನ್ನೆಲ್ಲ ಮುರುಗೆ ಹೊಡೆಸಿ ಕೆಳಮುಖವಾಗಿ ಎಳೆಯುತ್ತಿದ್ದಾರೆಂಬ ಭಯಂಕರ ನೋವು ಏಳತೊಡಗುತ್ತಿದ್ದಂತೆ ಪಕ್ಕದ ಟೇಬಲ್ಲಿನ ಮೇಲಿದ್ದ ಬಿಸಿನೀರಚೀಲವನ್ನು ಕಿಬ್ಬೊಟ್ಟೆ ಮೇಲಿಟ್ಟುಕೊಂಡಳು. ಮುಖ ಕಿವುಚಿದ ಜೋರಿಗೆ ಹುಬ್ಬುಗಳ ಮಧ್ಯೆ ಎದ್ದ ಸಣ್ಣಸಣ್ಣ ನೆರಿಗೆಗಳಿಗೆ ಬಲ ಬಂದು, ಹಣೆಬೊಟ್ಟು ಪೂರಾ ಅಂಟುಗೇಡಿಯಾಗಿ ಅವಳ ಎದೆಸೀಳಿನೊಳಗೆ ಬಂದು ಬಿದ್ದಿತು. ಹಣೆಗಳಿಂದ ಸಾಸಿವೆಯಾಕಾರದ ಸಣ್ಣಸಣ್ಣ ಬೆವರಸಾಲುಗಳೇಳುತ್ತಿದ್ದರೆ, ಗಂಟಲು ನೀರು ಕೇಳುತ್ತಿತ್ತು. ಭುಜ ಅಲ್ಲಾಡಿಸಿ ಜೋತುಬಿದ್ದ ಲಯ, ‘ಅಮ್ಮಾ, ಟ್ರೀ ಗೆ ಹಾರ್ಟ್ ಇರುತ್ತಾ?’ ಎಂದಳು. ಏನು ಹೇಳುವುದು? ಎಲ್ಲವೂ ಕೇಳುತ್ತಿದೆ. ಆದರೆ ಅವಳ ವಯಸ್ಸಿಗೆ ತಿಳಿಹೇಳುವಷ್ಟು ತ್ರಾಣ ಈಗ ತನ್ನೊಳಗಿಲ್ಲ ಎಂಬುದೂ ಅರಿವಾಗುತ್ತಿದೆ. ಪಾಪ ಲಯ ತನ್ನದೇ ಲೋಕದಲ್ಲಿದೆ.

ಪಕ್ಕದಲ್ಲಿದ್ದ ಖಾಲಿ ಬಾಟಲಿಯೆಡೆ ಕೈತೋರೇ ತೋರುತ್ತಿದ್ದಾಳೆ ಚೈತ್ರಗೌರಿ. ಆದರೆ ಧ್ವನಿ ಹೊರಡುತ್ತಿಲ್ಲ. ಅಮ್ಮಾ, ಹೇಳಮ್ಮಾ ಟ್ರೀ ಗೆ ಹಾರ್ಟ್ ಇರುತ್ತಾ? ಎಂದು ಅವಳನ್ನು ಅಪ್ಪಿಕೊಂಡು ಒಂದೇ ಸಮ ಕೇಳುತ್ತಿದ್ದಾಳೆ ಲಯ. ಅವಳನ್ನು ತಳ್ಳಿಬಿಡುವಷ್ಟು ಕೋಪಬಂದರೂ, ಖಾಲಿ ಬಾಟಲ್‍ ಅನ್ನು ಹೇಗೋ ಕೈಗೆಟಕಿಸಿಕೊಂಡು ಮಗಳ ಕೈಗಿಟ್ಟಳು. ‘ನಂಗೆ ನೀರು ಬೇಡಾಮ್ಮಾ, ಆಗಷ್ಟೇ ಕುಡಿದೆ ತಾನೆ?’ ಎಂದು ಕೈಕೊಸರಿಕೊಂಡು ಖಾಲಿಬಾಟಲಿಯನ್ನು ಅಡುಗೆಮನೆಯ ಸ್ಟ್ಯಾಂಡಿನ ಎರಡನೇ ಖಾನೆಯಲ್ಲಿಟ್ಟು, ಬಾಟಲಿಯನ್ನು ಅದರ ಬಳಗಕ್ಕೆ ಸೇರಿಸಿಬಂದಳು. ಮೊದಲನೇ ಖಾನೆಯಲ್ಲಿ ತುಂಬಿದ ಬಾಟಲಿಗಳೊಳಗೆ ಒಂದಾದರೂ ತಂದಾಳು ಎಂದು ಚೈತ್ರಗೌರಿ ಎಣಿಸಿದರೆ, ಫ್ರಿಡ್ಜಿನ ಪಕ್ಕದಲ್ಲಿ ಬಿದ್ದಿದ್ದ ಗೊಂಬೆಯ ಒಂದು ಕೈ, ಮಂಚದಡಿ ಬಿದ್ದ ಅದರ ಒಂದು ಕಾಲನ್ನು ಎತ್ತಿಕೊಂಡುಬಂದು, ಆಟಿಕೆಸಾಮಾನಿನ ಡಬ್ಬಿಯನ್ನು ಉರುಳಿಸಿ, ರಾಶಿಗೊಂಬೆಗಳ ನಡುವೆ ಕೈ-ಕಾಲು ಕಳೆದುಕೊಂಡ ಬಾರ್ಬಿಯನ್ನು ಹುಡುಕತೊಡಗಿದಳು. ಚೈತ್ರಗೌರಿ ನೋವು ತಾಳಲಾರದೆ ಕಣ್ಣುಕಿವುಚುವ ರೀತಿಗೆ ಈ ಸಲ ಅವಳ ಕಣ್ಣಕೋಣೆಯೊಳಗೆ ಬೂದುಬಣ್ಣದ ಕಲ್ಲುಗಳು ಸಿಡಿಸಿಡಿದು ಕತ್ತಲಆಕಾಶಕ್ಕೆ ಅಪ್ಪಳಿಸತೊಡಗಿದವು. ಲಯಾಆಆ ನೀರು… ಎಂದು ಕೈ ಮಾಡೇಮಾಡುತ್ತಿದ್ದಾಳೆ. ಆದರೆ, ತನಗೆ ಬೇಡಮ್ಮಾ ಎಂದು ಕೈ ಮುಖ ತಿರುವುತ್ತಿದ್ದಳು ಲಯ.

***

ಆ ದಿನ ಬೆಳಗ್ಗೆ ಚೈತ್ರಗೌರಿ, ರಿಷಭನನ್ನು ಬಾತ್‍ರೂಮಿಗೆ ಕರೆದು, ಕಮೋಡಿನ ಮೇಲಿಟ್ಟ ಪುಟ್ಟ ಸಾಧನದೊಳಗೆ ನೇರಳೆ ಗೆರೆಯೊಂದು ಮೂಡುವತನಕ ಅವನನ್ನು ತಬ್ಬಿಹಿಡಿದಿದ್ದಳು. ಯಾವಾಗ ಅದು ದಟ್ಟವಾಯಿತೋ ಗಟ್ಟಿಯಾಗಿ ರಿಷಭನನ್ನು ಅಪ್ಪಿಕೊಂಡಳು. ಆದರೆ ರಿಷಭನ ಕೈಗಳು ಅಪ್ಪಿಕೊಳ್ಳುವುದು ಹೋಗಲಿ ಅವಳನ್ನು ಬಳಸಿರಲೂ ಇಲ್ಲ. ಒಳಗೊಳಗೆ ಕುಸಿದಂತಾದರೂ ಸಾವರಿಸಿಕೊಂಡು ಡಾಕ್ಟರ್ ಅಪಾಯಿಂಟ್ಮೆಂಟ್ ತೆಗೆದುಕೊಳ್ಳೋಣ ಎಂದಳು. ನೀನು ತೆಗೆದುಕೋ ಎಂದು ಅವ ಹೇಳಿ, ಸ್ನಾನ ತಿಂಡಿ ಮುಗಿಸಿ ಹೋದ. ಸಂಜೆ ಬೇಗ ಬರಬೇಕೆಂದು ಪದೇಪದೆ ಫೋನ್ ಮಾಡಿ ಹೇಳಿದರೂ ಅವತ್ತು ತಾನು ಡೆಡ್‍ಲೈನಿನ ಒತ್ತಡದಲ್ಲಿದ್ದೇನೆಂದು ಹೇಳಿ, ದಿನಕ್ಕಿಂತ ತಡವಾಗಿಯೇ ಮನೆಗೆ ಬಂದ. ಸರಿ ಎಂದು ಮಾರನೇ ದಿನ ಅಪಾಯಿಂಟ್‍ಮೆಂಟ್ ತೆಗೆದುಕೊಂಡರೂ ಮತ್ತೊಂದು ಕಾರಣ. ನಾಳೆ ಹೋದರಾಯಿತು ಬಿಡು ಏನೀಗ ಎಂಬ ಅಸಡ್ಡೆ.

ಇಷ್ಟು ದಿನ ಎರಡನೇ ಮಗು ಬೇಕು ಎಂದು ಹಂಬಲಿಸಿದವನೂ ಅವನೇ. ಆದರೆ ಈಗ ಹೀಗೇಕೆ? ಎಂದು ಚಿಂತೆಗೆ ಬಿದ್ದು ಮಾರನೇ ದಿನ ತಾನೇ ಡಾಕ್ಟರ್ ಬಳಿ ಹೋಗಿಬಂದಳು. ಹಾಗೂ ಹೀಗೂ ಸುಸ್ತು ಸಂಕಟಗಳ ನಡುವೆ ಎರಡೂವರೆ ತಿಂಗಳುಗಳೂ ಕಳೆದವು. ಅದೊಂದು ರಾತ್ರಿ ಬೇಗ ಬಂದ ರಿಷಭ್‍, ಬೇಗ ರೆಡಿಯಾಗು ನಿನಗೆ ನೈಟ್‍ ಬೈಕ್ ರೈಡ್‍ ಹೋಗಬೇಕೆನ್ನುವ ಆಸೆ ಬಹಳ ದಿನಗಳಿಂದ ಇತ್ತಲ್ಲವಾ ಎಂದು ಅವಸರಮಾಡಿದ. ಒಂದು ಕ್ಷಣ ಖುಷಿಯಾದರೂ, ಹೊಟ್ಟೆಮುಟ್ಟಿಕೊಂಡವಳೇ ಈಗ ಬೇಡ ಎಂದಳು. ಬಹಳೇ ಜೋಷ್‍ ನಲ್ಲಿದ್ದ ರಿಷಭ್ ಒತ್ತಾಯಮಾಡಿ ಮಗಳನ್ನೂ ಹೆಂಡತಿಯನ್ನೂ ನೈಟ್ ರೈಡ್ ಕರೆದುಕೊಂಡ ಹೋದ. ಹೈವೇಯೆಡೆ ಕರೆದುಕೊಂಡು ಹೋಗುತ್ತಾನೆಂದರೆ, ಇದ್ಯಾವುದೋ ಸ್ಲಮ್ಮಿನಲ್ಲಿ ಅಡ್ಡತಿಡ್ಡ ರಸ್ತೆಗಳಲ್ಲಿ ಕರೆದುಕೊಂಡು ಹೋಗುತ್ತಿದ್ದಾನೆ. ಏನಿದು? ಎಂದು ಅವನ ಭುಜವನ್ನು ಹಿಡಿದುಕೊಳ್ಳುತ್ತಲೇ ತುಸು ಆತಂಕದಲ್ಲೇ ಕುಳಿತಳು. ನಿಧಾನ ಓಡಿಸು ಯಾಕೆ ಹೀಗೆ ಓಡಿಸುತ್ತಿದ್ದೀಯಾ? ಈ ರಾತ್ರಿ ಇಂಥ ರಸ್ತೆಯಲ್ಲಿ ಯಾಕೆ ಕರೆದುಕೊಂಡು ಬಂದಿದ್ದೀಯಾ? ನನ್ನ ಪರಿಸ್ಥಿತಿ ಗೊತ್ತು ತಾನೆ ನಿನಗೆ ಎಂದು ಹೇಳುತ್ತಿದ್ದ ಚೈತ್ರಗೌರಿ ಕ್ರಮೇಣ ಆತಂಕದಿಂದ ಕಿರುಚತೊಡಗಿದಳು. ಸುಮ್ಮನೆ ಬಾ ಆಕಡೆ ರಸ್ತೆಯಲ್ಲಿ ಟ್ರಾಫಿಕ್ ಜಾಸ್ತಿ. ಅದಕ್ಕೇ ಒಳದಾರಿಯಿಂದ ಕರೆದುಕೊಂಡು ಹೋಗುತ್ತಿದ್ದೇನೆ. ಇದೂ ಹೈವೇಗೇ ಕೂಡುತ್ತದೆ ಎಂದು ಜೋರಾಗಿ ಹೇಳಿದ ರಿಷಭ್.

ಅಡ್ಡಬಂದವರಿಗೆಲ್ಲ ಹುಯ್‍ ಹುಯ್‍ ಎಂದು ಕಿರುಚುತ್ತ, ಹಾರ್ನೂ ಒತ್ತುತ್ತ, ಅಡ್ಡಾದಿಡ್ಡಿ ಗಾಡಿ ಓಡಿಸುವ ಅವನ ರೀತಿಗೆ ಚೈತ್ರಗೌರಿ, ನಿಲ್ಲಿಸಿಬಿಡು ಎಂದು ಕೂಗಿದಳು. ಓಹ್ ಸಾರಿ ಸಾರಿ ಎಂದವನೇ ಹೈವೇ ದಾರಿ ಹಿಡಿದ. ಆ ಕುಳಿರ್ಗಾಳಿಯೊಳಗೂ ಆಕೆ ಒಳಗೊಳಗೇ ಬೆವರತೊಡಗಿದಳು. ಉಸಿರು ಬಿಗಿಹಿಡಿದಿದ್ದಕ್ಕೆ ಕಿಬ್ಬೊಟ್ಟೆಯಲ್ಲಿ ಚಳಕು ಹಿಡಿದಂತಾಗಿತ್ತು. ಬೆನ್ನಹುರಿಯೊಳಗೆ ಸಣ್ಣಗೆ ನೋವು ಕಾಣಿಸಿಕೊಳ್ಳತೊಡಗಿತು. ದಯವಿಟ್ಟು ಮನೆದಾರಿ ಹಿಡಿ ಎಂದು ಸಂಕಟದಿಂದ ರಿಷಭನಿಗೆ ಕೇಳಿಕೊಳ್ಳಲಾಗಿ, ಇಷ್ಟು ಬೇಗ? ಎಂದವನೇ ಮನೆಯೆಡೆ ಗಾಡಿತಿರುಗಿಸಿದ. ರಾತ್ರಿಯಿಡೀ ಎದೆಯುರಿಯೊಂದಿಗೆ ಹೊಟ್ಟೆ ಊದಿಕೊಂಡಂತಾಗಿ ಕಾಲುಗಳೆಲ್ಲ ಸೆಳೆತಕ್ಕೆ ಒಳಗಾಗಿದ್ದವು. ಕುಂತರೂ ನಿಂತರೂ ಸಮಾಧಾನವಿಲ್ಲದಂತಾಗಿ ಬೆಳಗ್ಗೆದ್ದು ಬಾತ್‍ರೂಮಿಗೆ ಹೋದಾಗ, ಎಣಿಸಿಕೊಂಡಂತೇ ಆಗಿತ್ತು. ಡಾಕ್ಟರಿಗೆ ಫೋನ್ ಮಾಡಿದ್ದಕ್ಕೆ, ಈತನಕವೂ ಹಾರ್ಟ್‍ ಬೀಟ್ ಶುರುವಾಗಿರಲಿಲ್ಲವಲ್ಲ? ಗರ್ಭ ಜಾರಿದ್ದು ಒಳ್ಳೆಯದೇ ಆಯಿತು ಬಿಡು ಎಂದು ಸಲೀಸಾಗಿ ಅವಳು ಹೇಳಿದ ರೀತಿಗೆ ಕಾಲು ಮತ್ತಷ್ಟು ಬಳಬಳ ಎನ್ನತೊಡಗಿದವು. ಬಹಳ ನೋವಾದರೆ ಈ ಮಾತ್ರೆ ತೆಗೆದುಕೋ ಮೆಸೇಜ್ ಮಾಡುತ್ತೇನೆ ಎಂದು ಫೋನಿಟ್ಟರು ಡಾಕ್ಟರ್.
 
***
ಕಟ್ಟಿಕೊಂಡಿದ್ದ ಕೋಶ ಒಡೆದು ಹನಿಹನಿಯಾಗಿ ಬಸಿಯುತ್ತಲೇ ಇದ್ದರೂ, ರಿಷಭನಿಗೆ ಬೇಕೆಂತಲೇ ಏನೊಂದೂ ಹೇಳದ ಚೈತ್ರಗೌರಿ ಉಪ್ಪಿಟ್ಟು ಮಾಡಿ, ಬಾಕ್ಸಿಗೆ ಚಪಾತಿ ಪಲ್ಯ ಮಾಡಿ ಕಳಿಸಿದಳು. ಮೊಂಡಾಟ ಹಿಡಿದ ಮಗಳಿಗೆ ಒಂದೆರಡು ಏಟು ಹಾಕಿ ತಿಂಡಿ ತಿನ್ನಿಸಿದಳು. ತಾನು ನೀರನ್ನಷ್ಟೇ ಕುಡಿದು ಕುರ್ಚಿಯಲ್ಲಿ ಬಂದು ಕುಳಿತಳು. ಬಿಟ್ಟುಬಿಟ್ಟು ಬರುವ ನೋವು ಕರುಳನ್ನು, ಕಿಬ್ಬೊಟ್ಟೆಯನ್ನು ಹಿಂಡುತ್ತಲೇ ಇದ್ದರೂ, ರಿಷಭ್ ತನ್ನನ್ನು ಉದ್ದೇಶಪೂರ್ವಕವಾಗಿ ಲಾಂಗ್‍ರೈಡ್‍ ಗೆ ಕರೆದುಕೊಂಡು ಹೋದನೆ? ಎಂಬ ಅನುಮಾನ ಅವಳ ನೋವನ್ನು ಹೆಚ್ಚುಮಾಡಿತು.

ಇತ್ತ ತನ್ನದೇ ಜಗತ್ತಿನಲ್ಲಿರುವ ಲಯ, ಬಾಲ್ಕನಿಯೊಳಗೆ ಬಾಗಿದ ಕಾಗದದಹೂ ಟೊಂಗೆಯ ತುದಿಯಿಂದ ಹೂ ಹರಿದುಕೊಳ್ಳಲು ಜಿಗಿದೇ ಜಿಗಿಯುತ್ತಿದ್ದಳು. ಎಲೆಯುಳ್ಳ ಟೊಂಗೆ ಕೈಗೆ ಸಿಗುತ್ತಾದರೂ ಹೂಗಳು ಸಿಗುತ್ತಿರಲಿಲ್ಲ. ನೋಡಮ್ಮ, ಮರ ಬಾಗುವುದೇ ಇಲ್ಲ, ನಾ ಶಣ್ಣ ಕೂಶು ಅಂತ ಗೊತ್ತಾಗಲ್ವಾ ಇದಕ್ಕೆ? ಮತ್ತೂಮತ್ತೂ ತಲೆ ಮೇಲೆಮೇಲೆ ಮಾಡ್ಕೊಂಡೇ ನಿಲ್ಲುತ್ತೆ. ಅದರ ತಲೆಗೊಂದು ಹತ್ತಾ ಮಾಡ್ಬೇಕು ನೋಡು. ಅಲ್ಲಾ… ನಂಗೆ ಹೂ ಬೇಕು ಅಂತ ಗೊತ್ತಾಗ್ತಿಲ್ವಾ? ಶೊಲ್ಪ ಬಾಗ್ಬೇಕು ತಾನೆ ಅದು? ಎಂದು ಅಮ್ಮನಬಳಿ ಬಂದು ನಿಲುಕದ ಹೂ ಮತ್ತು ಬಾಗದ ಮರದ ಬಗ್ಗೆ ಕಂಪ್ಲೆಂಟ್‍ ಹೇಳಿದವಳೇ ಪುನಾ ಜಿಗಿಯತೊಡಗಿದ್ದಳು. ಸುಮಾರು ಹೊತ್ತಿಗೆ ಎರಡೇ ಹರಕುಹೂಗಳು ಮುಷ್ಟಿಯೊಳಗೆ ಸಿಕ್ಕು, ಅಷ್ಟಕ್ಕೇ ಇಷ್ಟು ಸಂಭ್ರಮಿಸಿ ಒಳಬಂದು, ಸಣ್ಣಸಣ್ಣ ತುಂಡು ಮಾಡಿ ಆಟಿಕೆಬಟ್ಟಲಿನೊಳಗೆ ತುಂಬಿಟ್ಟಳು. ಅಡುಗೆಮನೆಗೆ ಹೋಗಿ, ಸ್ಟ್ಯಾಂಡಿನ ಮೊದಲ ಖಾನೆಯಿಂದ ಬಾಟಲಿ ಕೈಗೆತ್ತಿಕೊಂಡುಬಂದು ನಿಧಾನಕ್ಕೆ ಬಟ್ಟಲಿನೊಳಗೆ ನೀರು ಬಗ್ಗಿಸಲಾರಂಭಿಸಿದಳು. ಈಗಲಾದರೂ ನೀರು ಕೊಟ್ಟಾಳು ಎಂದು ಕೈ ಚಾಚಿದವಳೇ ಚೈತ್ರಗೌರಿ ಒಮ್ಮೆಲೆ ಕೆಳಹೊಟ್ಟೆಯನ್ನು ಒತ್ತಿಹಿಡಿದುಕೊಂಡಳು. ನೀರು, ನೀರು ಎಂದು ಕಿರುಚಿದಷ್ಟೂ ಗಂಟಲ ಪದರಗಳು ಅಂಟಿಕೊಳ್ಳತೊಡಗಿದವು. ಪುಟ್ಟ ಲಯ ಮತ್ತೊಮ್ಮೆ ಅಡುಗೆ ಮನೆಗೆ ಓಡಿಹೋದಳೆಂದು ಗೊತ್ತಾಗಿ, ಮೈಕಸುವನ್ನೆಲ್ಲ ಹಾಕಿ ನೀರು ಪುಟ್ಟಾ… ಎಂದು ಕಿರುಚೇಬಿಟ್ಟಳು.

ಗೆಜ್ಜೆಸಪ್ಪಳ ಮಾಡುತ್ತ ಅಡುಗೆಮನೆಯಿಂದ ಹೊರಬಂದಾಗ ಲಯಳ ಕೈಗಳಲ್ಲಿ ಎಣಿಸಿದಂತೆ ನೀರಿರಲಿಲ್ಲ, ಆದರೆ ಸ್ಟೀಲಿನ ಎರಡು ಮುಳ್ಳುಚಮಚಗಳಿದ್ದವು. ಅಯ್ಯೋ ದೇವ್ರೆ… ಎಂದುಕೊಳ್ಳುತ್ತ, ಎರಡೂ ಕೈಗಳಿಂದ ಕುರ್ಚಿಯ ಕೈಗಳನ್ನೊಮ್ಮೆ ಒತ್ತಿ ಮೇಲೇಳಲು ಪ್ರಯತ್ನಿಸಿದಳಾದರೂ ಸಾಧ್ಯವಾಗದೆ ಹಾಗೇ ಕುಸಿದುಬಿಟ್ಟಳು. ಒಮ್ಮೆಲೆ ಮೈತಣ್ಣಗಾದಂತೆ. ಕೈಕಾಲಶಕ್ತಿಯೆಲ್ಲ ಉಡುಗುತ್ತ ಹೋದಂತೆ. ಕಣ್ಣಮುಂದೆ ಯಾರೋ ಟ್ರೇಸಿಂಗ್ ಪೇಪರ್ ಅಡ್ಡಹಿಡಿದಂತೆಯೂ ಮತ್ತದನ್ನು ತಾನು ಹಿರಿದೆಸೆಯಲು ಕೈ ಮಾಡಿದಂತೆಯೂ ತನ್ನ ಕೈಗಳನ್ನು ಯಾರೋ ಹಿಂದಿಂದೆ ಹಿಡಿದೆಳೆದಂತೆಯೂ ಭಾಸವಾಗುತ್ತಿತ್ತು. ಆ ಮಂಜಗಣ್ಣಲ್ಲೇ ಮಗಳು ಮಾಡುತ್ತಿರುವುದೆಲ್ಲ ಕಾಣುತ್ತಿತ್ತು. ಆಟಿಗೆಬಟ್ಟಲಿನೊಳಗೆ ನೀರು ಮತ್ತು ಕಾಗದದ ಹೂಚೂರನ್ನು ಹಾಕಿದ ಲಯ ಇತ್ತ ಕಲುಕುತ್ತಿರುವಂತೆಯೂ ಅಲ್ಲ ಕಲೆಸುತ್ತಿರುವಂತೆಯೂ ಅಲ್ಲ, ಒಟ್ಟಿನಲ್ಲಿ ಕೈಯಂತೂ ಆಡಿಸುತ್ತಿದ್ದಳು.

ಎರಡು ನಿಮಿಷಗಳ ನಂತರ, ಟಣ್‍ಟಡಾಣ್ ಅಮ್ಮಾ, ಜ್ಯೂಸ್ ರೆಡಿ! ಎಂದು ಅಮ್ಮನೆಡೆ ನೋಡಿ ನಕ್ಕಳು. ಅಮ್ಮಾ ನೀ ನೀರು ನೀರು ಅಂತಿದೀಯಾ ಆವಾಗ್ನಿಂದ. ನಂಗ್ ನೀರೆಲ್ಲ ಬೇಡಮ್ಮ, ಜ್ಯೂಸ್ ಬೇಕು. ನೋಡು ನಿಂಗೂ ನಂಗೂ ಜ್ಯೂಸ್! ಎಂದು ಚಮಚವನ್ನೊಮ್ಮೆ ಮೇಲೆತ್ತಿ ಪುಳಕಿತಗೊಂಡಳು ಲಯ. ಪುಳಕ್ ಎಂದು ಚಮಚದಿಂದ ಹನಿಗಳು ಜಾರಿಬಿದ್ದವು, ಸದ್ದುಹೊರಡಿಸಲಿಲ್ಲ. ತನಗೊಂದು ಅಮ್ಮನಿಗೊಂದು ಆಟಿಕೆಗ್ಲಾಸಿನಲ್ಲಿ ಕಾಗದದ ಹೂವಿನ ಜ್ಯೂಸ್ ಹಾಕಿಕೊಂಡು ಪುಟ್ಟ ಟ್ರೇಯೊಳಗೆ ಇಟ್ಟುಕೊಂಡು, ತಗೋ ಅಮ್ಮಾ… ಎಂದು ಚೈತ್ರಗೌರಿಯ ಮುಂದೆ ಬಂದು ನಿಲ್ಲುವುದಕ್ಕೂ, ಕುರ್ಚಿ ಬಿಟ್ಟು ನಿಲ್ಲಲು ಹೋಗಿ ಆಕೆ ಕುಸಿಯುವುದಕ್ಕೂ ಸಮ. ಗಾಬರಿಯಾದ ಲಯ, ಕೈಬಿಟ್ಟಿದ್ದೇ ಕಾಗದದಹೂವಿನ ಜ್ಯೂಸೆಲ್ಲ ಅಮ್ಮನ ತೊಡೆಯ ನಡುವೆ ಬಿದ್ದು  ಹರಿದು ಹೋಯಿತು, ಅಲ್ಲಲ್ಲಿ ಕೆಂಪಗಿನ ಕಾಗದಹೂವಿನ ಚೂರುಗಳು ಮಾತ್ರ ಹಾಗೇ ಉಳಿದುಕೊಂಡವು. ನೀರು ಎಂದು ಬಡಬಡಿಸುತ್ತಲೇ ಹಾಗೇ ಕಣ್ಣುಮುಚ್ಚಿದಳು ಚೈತ್ರಗೌರಿ. ಎದ್ದೇಳಮ್ಮಾ ಎಂದು ಅಳುತ್ತಳುತ್ತಲೇ ಭುಜ ಅಲ್ಲಾಡಿಸತೊಡಗಿತ್ತು ಪುಟ್ಟ ಕೂಸು…

***

ಅದೊಂದು ದಟ್ಟಡವಿಯ ಹಚ್ಚಹಸೀವಾಸನೆ. ಬೆಳ್ಳನೆಯ ಬೆಳಗಾಗಿದ್ದರಿಂದ ಹಕ್ಕಿಪಕ್ಷಿಗಳ ಉಲಿಯೂ ಇತ್ತು. ಪಕ್ಕದಲ್ಲೇ ಜುಳುಜುಳು ಝರಿಯೂ ಇತ್ತು. ರೆಂಬೆಯಿಂದ ರೆಂಬೆಗೆ ಮಂಗಗಳು ಜೋಲಿಜಿಗಿತವೂ ಜಾರಿಯಲ್ಲಿತ್ತು. ಚೈತ್ರಗೌರಿಯ ಕಾಲುಗಳು ಮಣ್ಣೊಳಗೆ ಹೂತುಹೋಗಿವೆ.  ಕೈಗಳನ್ನು ಬಳ್ಳಿಗಳಿಂದ ಕಟ್ಟಲಾಗಿದೆ. ಬೆನ್ನಿಗಾಸರೆಯಾಗಿ ನಡುವಯಸ್ಸಿನ ಮರವೊಂದರ ಬೊಡ್ಡೆ ಇದೆ. ಒಂದೇ ಗೇಣು ಹಳದೀ ವಸ್ತ್ರ ಅವಳ ಎದೆಯಭಾಗವನ್ನು ಮತ್ತು ಹೊಕ್ಕಳಿನ ಕೆಳಭಾಗವನ್ನು ಆವರಿಸಿದೆ. ಮೈಲೆಲ್ಲ ಕಪ್ಪು ಕಟ್ಟಿರುವೆಗಳು ಕಚ್ಚದೆ ಹರಿಯುತ್ತಿದ್ದರೂ ಒಂದೇ ಒಂದು ಕಟ್ಟಿರುವೆ ಅವಳ ಮುಂಗೈ ಕಚ್ಚುತ್ತ ರಾತ್ರಿಯಿಡೀ ಕುಳಿತಿದೆ. ಬೆಳಗು ಹರಿಯುವ ಹೊತ್ತಿಗೆ ತನ್ನ ರುಂಡವನ್ನು ಚೈತ್ರಗೌರಿಯ ಮುಂಗೈಯೊಳಗೆ ತೂರಿ ಹಿಂಗಾಲುಗಳನ್ನು ಮೇಲಕ್ಕೆತ್ತೆತ್ತಿ ಹೊರಬರುವ ಪ್ರಯತ್ನ ಕೊನೆಗೂ ವಿಫಲಗೊಂಡು, ಅರ್ಧಗೊಂಡ ಇರುವೆ ಉರುಳಿ ನೆಲಕ್ಕೆ ಬಿದ್ದಿತ್ತು. ಇಡೀರಾತ್ರಿ ತನ್ನನ್ನು ಕಚ್ಚಿದ್ದು ಇದೇ ಕಟ್ಟಿರುವೆಯೇ? ಎಂದು ನಿಟ್ಟುಸಿರುಬಿಟ್ಟಳು ಚೈತ್ರಗೌರಿ. ಆಗಷ್ಟೇ ಆಕೆಗೆ ಚಳಿಕಳಚಿದ ಎಳೆಬಿಸಿಲು ಮತ್ತು ರುಂಡಕಳಚಿದ ಇರುವೆಯಿಂದ ಮುಕ್ತಿ ದೊರಕಿ, ಹಾಗೇ ನಿದ್ದೆ ಹೋದಳು. ಟೊಂಗೆಗಳ ಸಂದಿಯಿಂದ ತೂರಿಬಂದ ಬಿಸಿಲಕೋಲುಗಳು ಅಲ್ಲಲ್ಲಿ ಅವಳ ಮೈಮೇಲೆ ನೆಟ್ಟುನಿಂತಿದ್ದವು. ಆ ಕೋಲಕೊಳವೆಗಳೊಳಗೆ ತೇಲಾಡುವ ದೂಳಕಣಗಳು ಯಾವುದೋ ಹೊಸ ಚೈತನ್ಯವನ್ನು ಅವಳೊಳಗೆ ತುಂಬುತ್ತಿದ್ದವು. ಏಳಲು ನೋಡಿದರೆ, ಅದೆಷ್ಟೋ ತಿಂಗಳಿಂದ ಕೆಚ್ಚಿದ ನೂಲಿನ ಲಡಿಯಂಥ ಕೂದಲನ್ನು ಆ ಮರ ತನ್ನ ಬೇರಿಗೆ ಹೆಣಿಗೆಹಾಕಿಕೊಂಡಿತ್ತು. ಆಗೊಮ್ಮೆ ಈಗೊಮ್ಮೆ ಹಿಂಬದಿನ ನೀರಝರಿ ಹೆಚ್ಚಿಸಿಕೊಂಡ ಒತ್ತಡಕ್ಕೆ ಮುಖದ ಮೇಲೆ ನೀರ ಸಿಂಚನವಾಗುತ್ತಿತ್ತು. ಹಾಗೇ ದೊಡ್ಡ ಹಂಡೆಗೆ ಹನಿ ನೀರು ಬಿಟ್ಟಂತೆ ಆಗಾಗ ಆಕೆಯ ಬಾಯಿ ಸೇರುತ್ತಿದ್ದವು ಅವೇ ಹನಿಗಳು. ಪಕ್ಷಿಗಳೋ, ಕೋತಿಗಳೋ ತಮ್ಮ ಮರಿಗಳಿಗೆ ಬೀಜವನ್ನೋ, ಹಣ್ಣನ್ನೋ ಹೆಕ್ಕಿಕೊಂಡು ಅಕಸ್ಮಾತ್ ಇವಳ ಬಾಯಿಗೇನಾದರೂ ಅದು ಅರ್ಧಹೋಳಾಗಿ ಬಿದ್ದರೆ, ಅದೇ ಅವಳ ಊಟ. ಎರಡು-ಮೂರು ದಿನಗಳಿಗೊಮ್ಮೆ ಆನೆಗೊಂದು ಬಾಳೆಹಣ್ಣೋ ಸೇಬನ್ನೋ ಕೊಟ್ಟಂತೆ.

ಭೂಕಂಪವೋ, ಸುನಾಮಿಯೋ ಅಪ್ಪಳಿಸಿ ತನ್ನನ್ನು ಸಂಪೂರ್ಣ ಒಳಗೆಳೆದುಕೊಳ್ಳುವ ಶಕ್ತಿಯೊಂದು ಬಂದರೆ ಸಾಕು ಎಂದುಕೊಂಡವಳು, ತಾನಿಲ್ಲಿ ಬಂದು ಬೀಳುವುದಕ್ಕಿಂತ ಮೊದಲೇ ತಳೆದಿದ್ದ ಕಾಲುದಾರಿಯೊಂದರ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದಳು. ಈ ದಾರಿ ಎನ್ನುವುದು ಎಂದಿಗೂ ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುವುದಿಲ್ಲ. ಬೇಕಾದವರೆಲ್ಲ ಬೇಕಾದಂತೆ ನಡೆದು, ತುಳಿದು ಸವೆಸಿದಾಗಲೇ ಅದು ಕಾಲುದಾರಿ, ಕಿರುದಾರಿ, ಮುಖ್ಯದಾರಿ ಹೆದ್ದಾರಿಯಾಗುವುದು. ಹೌದು. ಎಂದೂ ಯಾವ ದಾರಿಯೂ ತನ್ನಷ್ಟಕ್ಕೆ ತಾನೇ ಹುಟ್ಟಿಕೊಂಡೇ ಇಲ್ಲ, ಹುಟ್ಟಿಕೊಳ್ಳುವುದೂ ಇಲ್ಲವಲ್ಲ ಎಂದು ಯೋಚಿಸುತ್ತಿದ್ದವಳಿಗೆ ತನ್ನೆದುರಿನ ಕಾಲುದಾರಿಯಲ್ಲಿ ಧೊಪಧೊಪನೆ ಹೆಜ್ಜೆ ಸಪ್ಪಳಗಳು ಕಿವಿಗೆ ಅಪ್ಪಳಿಸತೊಡಗಿದವು. ಅಚ್ಚರಿ, ಆತಂಕಗಳೆರಡೂ ಒಮ್ಮೆಲೆ ಉಂಟಾಗಿ ಕತ್ತುಹೊರಳಿಸಿ ನೋಡಿದರೆ; ಎತ್ತರೆತ್ತರವಿದ್ದ ಅವರ ಎದೆಯ ಮೇಲೆಲ್ಲ ಒತ್ತಾಗಿ ಕಣ್ಣುಗಳಿದ್ದವು. ಮೂಗು ಮುಖದ ಮೇಲೇ ಇದ್ದರೂ ಕಣ್ಣುಗಳಿರುವ ಜಾಗದಿಂದ ಕಾಗದದಹೂಗೊಂಚಲುಗಳು ಜೋತುಬಿದ್ದಿದ್ದವು. ತಲೆಯ ಮೇಲೆ ಟೊಂಗೆಯಂಥ ಕೈಗಳು. ಅದರೊಳಗಿನಿಂದ ಸದಾ ಸುರಿಯುವಂಥದ್ದೊಂದು ಹಸಿರು ಸೆಲೆ. ಆ ಏಳೆಂಟು ಜನರ ಪಕ್ಕೆಲಬುಗಳಿಂದಲೇ ಎರಡು ಅಡಿಗಳಷ್ಟು ಚಾಚಿಕೊಂಡ ಕತ್ತರಿಯಾಕಾರದ ಎರಡು ರೆಕ್ಕೆಗಳು. ಚೈತ್ರಗೌರಿಗೆ ತುಸು ಜೀವವೂ ಬಂದಿತು ಹಾಗೇ ಅಂಜಿಕೆಯೂ.

ಅದರಲ್ಲಿ ಒಬ್ಬ ಪೆಟ್ಟಿಗೆ ಹಿಡಿದುಕೊಂಡು ಮುಂದೆ ಬಂದ. ಅದರಲ್ಲೇನಿದೆ ಎಂದು ನೋಡುವ ಹೊತ್ತಿಗೆ ಇಂಟೀರಿಯರ್ ಡಿಸೈನಿಗೆ ಸಂಬಂಧಿಸಿದ ವಸ್ತುಗಳೆಲ್ಲವೂ ಅದರಲ್ಲಿದ್ದವು. ಆಕೆ ಖುಷಿಯಿಂದ ಏಳಲು ನೋಡುತ್ತಿದ್ದಂತೆ ಅವಳ ಬೆನ್ನು ಹಿಡಿತದಿಂದ ತಾನಾಗೇ ಬಿಡಿಸಿಕೊಂಡಿತು. ಕಣ್ಣಲ್ಲಿ ದಳದಳ ನೀರು ಸುರಿಯುತ್ತಿತ್ತು, ಇನ್ನೊಬ್ಬ ಮುಂದೆ ಬಂದು ಕಪ್ಪುಹೊದಿಕೆಯ ಆಯತಾಕಾರದ ವಸ್ತುವೊಂದನ್ನು ಬಿಡಿಸಿದಾಗ ಅದರಿಂದ ನೀಲಿಬೆಳಕೊಂದು ತೂರಿಬಂದಿತು. ಅರೆ ಇದು ಲ್ಯಾಪ್‍ಟಾಪ್ ಎಂದು ಕೈ ಎತ್ತಿದಳು, ಬಳ್ಳಿಗಳೆಲ್ಲ ಬಿಡಿಸಿಕೊಂಡುಬಿಟ್ಟವು. ಇನ್ನೊಬ್ಬ ಮಣ್ಣಿನ ಹೂಜಿಯೊಂದಿಗೆ ಮುಂದೆ ಬಂದ. ಅದರಲ್ಲೇನಿರಬಹುದು ಎಂದು ಬಾಗಲು ನೋಡಿದಳು, ಮಣ್ಣು ತಾನೇತಾನಾಗಿ ಸರಿದು ಅವಳ ಕಾಲುಗಳನ್ನು ಬಿಡುಗಡೆಗೊಳಿಸಿದವು. ಅವನು ಹೂಜಿಯನ್ನು ಬಾಗಿಸಿದ. ಅವಳು ಎರಡೂ ಕೈಚಾಚಿದಳು. ಸುರಿದಷ್ಟೂ ನೀರು ಹರಿಯುತ್ತಲೇ ಇತ್ತು. ಚೈತ್ರಗೌರಿ ಒಂದು ಹನಿಯನ್ನೂ ಕೆಳಬೀಳಿಸದೆ ನೀರು ಕುಡಿಯುತ್ತಿದ್ದಳು.

***

ಆಸ್ಪತ್ರೆಯ ಮೆಟ್ಟಿಲಿಳಿದು, ನಿತ್ರಾಣಗೊಂಡ ದೇಹದೊಂದಿಗೆ ಕಾರಿನಲ್ಲಿ ಕುಳಿತಾಗ ಪಕ್ಕದಲ್ಲಿ ಲಯನೀರಿನ ಬಾಟಲಿ ಹಿಡಿದುಕೊಂಡು ಕುಳಿತಿದ್ದಳು. ಇಡ್ಲಿ ಪಾರ್ಸೆಲ್‍ ತೆಗೆದುಕೊಂಡು ಮನೆಗೆ ಹೋಗೋಣವಾ ಎಂದು ಕಾರ್ ಓಡಿಸಲು ಶುರುಮಾಡಿದ ರಿಷಭ್. ನೀರು ಬೇಕಾಮ್ಮಾ ನಿಂಗೆ? ಎಂದು ಲಯ ಅಕ್ಕರೆಯಿಂದ ಕೇಳಿದಾಗ, ಇಲ್ಲವೆನ್ನಲು ಮನಸ್ಸಾಗದೆ ಗಟಗಟನೆ ಬಾಟಲಿ ಖಾಲಿ ಮಾಡಿ ಕೂಸನ್ನು ತಬ್ಬಿಕೊಂಡಳು. ಬೆಚ್ಚನೆಯ ಕಣ್ಣಹನಿಯೊಂದು ಕೂಸಿನ ಹಣೆಮೇಲೆ ಬೀಳುತ್ತಿದ್ದಂತೆ, ‘ಅಮ್ಮಾ ಮನೆಯಲ್ಲಿ ನೀನು ನೀರು ನೀರು ಅಂದಾಗ ನನಗೆ ಗೊತ್ತೇ ಆಗಿರಲಿಲ್ಲ ಅಮ್ಮಾ ನಿಂಗೆ ನೀರು ಬೇಕಿತ್ತು ಅಂತ. ಯಾವಾಗಲೂ ನನಗೆ ನೀರು ಕುಡಿ ನೀರು ಕುಡಿ ಅಂತ ಹೇಳ್ತಾ ಇರ್ತೀಯಲ್ಲ ನೀನು… ಹಾಗೆ ನೀ ಹೇಳ್ತಿದ್ದೀಯಾ ಅನ್ಕೊಂಡೆ. ಶಾರಿ ಅಮ್ಮ. ಡಾಕ್ಟರ್ ಅಂಕಲ್ ಚುಚ್ಚು ಮಾಡಿದ್ದು ಬಹಳ ನೋಯ್ತಿದೆಯಾ ಅಮ್ಮಾ? ಅಳಬೇಡ. ನಾನಿನ್ಮೇಲೆ ಹಟ ಮಾಡಲ್ಲ. ನಿನ್ ಮಾತು ಕೇಳ್ತೀನಿ. ನೀ ಕೇಳಿದ ತಕ್ಷಣ ನೀರು ತಂದುಕೊಡ್ತೀನಿ. ಆಗ ನಿಂಗೆ ಮತ್ತೆ ಹಾಯಿ ಆಗಲ್ಲ ಅಮ್ಮಾ…’ ಎಂದು ಚೈತ್ರಗೌರಿಯನ್ನು ತಬ್ಬಿ ಬಿಕ್ಕತೊಡಗಿತು ಲಯ.

‘ಇದೇ ಆಯ್ತು ನಿಮ್ಮಿಬ್ಬರದು ಕಥೆ. ಅಳೋದ್ ಬಿಟ್ಟು ಬೇರೆ ಏನೂ ಗೊತ್ತಿಲ್ವಾ ನಿಮಗೆ? ಎಂದು ತಿರುಗಿಯೂ ನೋಡದೆ ಜೋರಾಗಿ ಎಫ್‍ ಎಂ ಆನ್ ಮಾಡಿದ. ಕಟ್ಟಿಕೊಂಡಿದ್ದ ಮೋಡ ಸರಿದು ಮಳೆಸೆಳಕು ಶುರುವಾಗುತ್ತಿದ್ದಂತೆ ವೈಪರ್ ಆನ್ ಮಾಡಿದ. ಲಯಳನ್ನು ಮೌನದಲ್ಲೇ ಸಮಾಧಾನಗೊಳಿಸಿದಳು ಚೈತ್ರಗೌರಿ. ಅಪ್ಪನ ಈ ವರಸೆ ಅದಕ್ಕೂ ಅಭ್ಯಾಸವಾಗಿತ್ತು. ಹಾಡು ಕೇಳುತ್ತ ನಿದ್ದೆಹೋಯಿತದು ಕೂಸು. ಮೊಬೈಲ್ ಕೈಗೆತ್ತಿಕೊಂಡಾಗ, ಮೇಲ್‍ಬಾಕ್ಸ್ ತುಂಬಿ ತುಳುಕುತ್ತಿತ್ತು. ಮೂರು ತಿಂಗಳ ಹಿಂದೆ ಇಂಟರ್ವ್ಯೂ ಕೊಟ್ಟುಬಂದ ಕಂಪೆನಿಯಿಂದ ಆಫರ್ ಲೆಟರ್ ಬಂದಿತ್ತು. ಇದುವರೆಗೂ ಎಂಥ ಸಣ್ಣಪುಟ್ಟ ಸಂಗತಿಯನ್ನೂ ಹಂಚಿಕೊಳ್ಳುವಂತೆ ಖುಷಿಯಿಂದ ರಿಷಭ್ ಗೆ ಹೇಳಿಕೊಳ್ಳೋಣ ಎಂದು ಬಾಯಿತೆರೆದವಳು ಯಾಕೋ ಒಂದು ಕ್ಷಣ ಸುಮ್ಮನಾದಳು. ಆ ಹೊತ್ತಿಗೆ ಸಿಗ್ನಲ್‍ ಬಿದ್ದ ಕಾರಣ ರಿಷಭ್ ತುಸು ಜೋರಾಗಿಯೇ ಬ್ರೇಕ್ ಹಾಕಿದ.

***
ಅಂದು ಸಿತಾರ್ ರೆಸ್ಟೋರೆಂಟ್‍ನ ಮಂದಬೆಳಕಲ್ಲಿ ಕುಳಿತು ಊಟ ಮಾಡುವಾಗ, ರಿಷಭ್ ಬಹಳೇ ಅಕ್ಕರೆಯಿಂದ ಹತ್ತಿರ ಬಂದು ಇನ್ನೊಂದು ಮಗುವಿನ ಪ್ರಸ್ತಾಪ ಮಾಡಿದ್ದು ನೆನಪಾಯಿತು. ಅದು ತನ್ನ ಅಪ್ಪಅಮ್ಮನ ಆಸೆಯಾಗಿತ್ತು ಎನ್ನುವುದರ ನೆರಳು ಎಳ್ಳಷ್ಟೂ ಬೀಳದೆ ಮಾತಿನಲ್ಲೇ ನಿಭಾಯಿಸಿದ್ದ. ಇನ್ನಾದರೂ ಅವನು ಕಂಪೆನಿಯಿಂದ ತಡರಾತ್ರಿ ಬರುವುದನ್ನು ನಿಲ್ಲಿಸಿಯಾನು. ವೀಕೆಂಡ್ ಪಾರ್ಟಿಗಳನ್ನು ದೂರ ಇಟ್ಟಾನು. ತನ್ನ ಅಪ್ಪ-ಅಮ್ಮನೂ ಇನ್ನುಮುಂದೆ ಮನೆಗೆ ಬಂದುಹೋಗಿ ಮಾಡಬಹುದು. ಎರಡೂ ಕುಟುಂಬಗಳ ಸಂಬಂಧ ಸುಧಾರಿಸಬಹುದು ಎಂದುಕೊಂಡು ಚೈತ್ರಗೌರಿ, ತಾನು ಮತ್ತೆ ಕಂಪೆನಿಗೆ ಸೇರುವ ಆಲೋಚನೆಯನ್ನು ಬದಿಗಿಟ್ಟು, ಅವನ ಆಲೋಚನೆಗೆ ಮಹತ್ವ ಕೊಟ್ಟು ಮುಂದುವರಿಯುವುದಾಗಿ ಒಪ್ಪಿದಳು. ಆದರೆ, ಮುಂದೊಂದು ದಿನ ತಾನು ಗರ್ಭಿಣಿ ಎಂದು ಗೊತ್ತಾಗುವ ಹೊತ್ತಿಗೆ ಅವ ಕಲ್ಲೆದೆ ಮಾಡಿಕೊಂಡು ನಿಂತಿದ್ದು ಮಾತ್ರ ಒಡೆಯದ ಒಗಟಿನಂತಾಗಿತ್ತು.  ಏನೇನೋ ಯೋಚನೆಗಳು ಹೊಕ್ಕಾಡಿ ಸಣ್ಣಗೆ ತಲೆ ನೋಯತೊಡಗಿತು. ಕಣ್ಣುಮುಚ್ಚಿ ಕಿಟಕಿಗೆ ಒರಗಿದಳು.

ಅಂಥ ಮಳೆಯಲ್ಲೂ ಮಲ್ಲಿಗೆ ಮಾರುವ ಪುಟ್ಟ ಹುಡುಗಿ ಕಾರಿನ ಕಿಟಕಿ ತಟ್ಟಿದಾಗ ಸುಮ್ಮನಿರಲಾಗದೆ, ಎಲ್ಲ ಹೂವನ್ನೂ ಕೊಂಡು ಇನ್ನೂರು ರೂಪಾಯಿಯನ್ನು ಕೊಟ್ಟು ಹಾಗೇ ಅದಕ್ಕೊಂದು ಬಿಸ್ಕೆಟ್ ಪೊಟ್ಟಣವನ್ನೂ ಕೊಟ್ಟುಬಿಟ್ಟಳು ಚೈತ್ರಗೌರಿ. ಮಳೆಯಲ್ಲೇ ಬೆಳದಿಂಗಳಂಥ ಅದರ ನಗುವನ್ನು ಆಸ್ವಾದಿಸಿದಳು. ಮಳೆಯ ಸೀಳಿ ಕಾರು ಚಲಿಸುತ್ತಿತ್ತು. ರಿಷಭ್‍ನ ಬಗ್ಗೆ ಅಸಮಾಧಾನ ಹೆಡೆಯಾಡುತ್ತಿತ್ತು. ಏನೋ ಗುಟ್ಟು ಮಾಡುತ್ತಿದ್ದಾನೆ ಎನ್ನಿಸತೊಡಗಿತು. ಅಷ್ಟಕ್ಕೂ ಯಾವಾಗ ಅವನು ತನ್ನ ಮನಸ್ಸನ್ನು ತೆರೆದು ಮಾತನಾಡಿಯಾನು? ಎಲ್ಲವೂ ನಿಗೂಢ. ಯಾವಾಗ ಖುಷಿಯಿಂದ ವರ್ತಿಸುತ್ತಾನೋ ಮುಂದೊಂದು ದಿನ ಅವನ ದಾರಿಗೆ ತಕ್ಕಂತೆ ತಾನು ನಡೆದುಕೊಳ್ಳಬೇಕೆಂಬ ಸುಳಿವೇ ಅದಾಗಿರುತ್ತದೆ ಎಂಬುದೂ ಅವಳಿಗೆ ಅರ್ಥವಾಗಿದೆ. ಆದರೂ ತಾನು ಪ್ರತೀ ಬಾರಿಯೂ ಹೀಗೆ ಮಳ್ಳುಬಿದ್ದು ಹಳ್ಳ ಸೇರಿದ್ದು ಸಾಕಿನ್ನು. ಹೇಗಿದ್ದರೂ ಆಫರ್ ಲೆಟರ್ ಬಂದಿದೆ. ಲಯಳನ್ನು ಡೇಕೇರ್ ಗೆ ಹಾಕಿ, ತಾನು ಕೆಲಸಕ್ಕೆ ಸೇರುವುದೆಂದು ತೀರ್ಮಾನಿಸಿದಳು. ಈಗಾಗಲೇ ಆರು ವರ್ಷ ಎಕ್ಸ್ಪೀರಿಯನ್ಸ್ ಲ್ಯಾಪ್ಸ್ ಆಗಿದೆ. ಆದರೂ ಈ ಹಿಂದಿನ ನನ್ನ ಪ್ರಾಜೆಕ್ಟಗಳನ್ನು ಗಮನಿಸಿದ ಎಮ್‍ ಡಿ ತಾನು ಕೇಳಿದಷ್ಟು ಸಂಬಳ ಕೊಡಲು ಒಪ್ಪಿದ್ದಾರೆ ಹಾಗೇ ಹುದ್ದೆಯನ್ನೂ. ಇನ್ನು ರಿಷಭನೊಂದಿಗಿನ ಗುದ್ದಾಟಗಳು ಸಾಕು ಎಂದು ಗಟ್ಟಿ ನಿರ್ಧಾರ ಮಾಡಿದಳು.

ಅಷ್ಟೊತ್ತಿಗೆ ರಿಷಭನ ಮೊಬೈಲ್‍ ಸದ್ದಾಯಿತು. ಕಾರನ್ನು ಪಕ್ಕಕ್ಕೆ ನಿಲ್ಲಿಸಿದವನೆ, “ಹಾಂ. ಈಗ ಪಕ್ಕಾ ಮಾರಾಯಾ. ಸಾರಿ ಎರಡೂವರೆ ತಿಂಗಳು ಕಾಯಿಸಿಬಿಟ್ಟೆ ನಿನಗೆ. ಮುಂದಿನ ತಿಂಗಳು ಹೊರಡುವುದೇ. ಟೀಮ್‍ನವರಿಗೆ ಹೇಳಿಬಿಡು. ಎಂ ಡಿ ಗೆ ಮೇಲ್ ಮಾಡು. ಏರ್‍ ಟಿಕೆಟ್‍ ವ್ಯವಸ್ಥೆ ಮಾಡು. ಒಂದು ವರ್ಷದ ಪ್ರಾಜೆಕ್ಟ್‍ ಇದು. ಈ ಸಲ ಭೂಪಾಲಿ ನಮ್ಮ ಜೊತೆಗಿರಲಿ, ಹೇಗೂ ಅವಳಿಗೆ ಮದುವೆಯಾಗಿಲ್ಲ. ಆ ಜೀವಿಕಾಗೆ ಮಗು ಇದೆ, ಸುಮ್ನೆ ಕೊಂಯಾ ಕೊಂಯಾ ಯಾಕೆ? ಹಾಂ ನಾಳೆ ಆಫೀಸಿನಲ್ಲಿ ಸಿಗೋಣ'’ ಎಂದು ಹೇಳಿದಾಗ ಎಫ್‍ ಎಂನ ಹಾಡಿಗೆ ಸಿಳ್ಳೆ ಹೊಡೆಯಲಾರಂಭಿಸಿದ. ಕಾರು ವೇಗದಲ್ಲಿ ಮಳೆ ಸೀಳಿಕೊಂಡು ಓಡತೊಡಗಿತು.  

ಇನ್ನೇನು ಕಂಪೆನಿಯ ಮೇಲ್ ಗೆ ಸ್ವೀಕೃತಿ ಪತ್ರ ಕಳಿಸಬೇಕೆಂದುಕೊಂಡು ಕುಳಿತವಳಿಗೆ ಒಮ್ಮೆಲೆ ತಲೆ ಗಿರ್ ಎಂದಿತು. ಬವಳಿ ಬಂದಂತಾಗಿ ಕಾರಿನ ಕಿಟಕಿ ತೆರೆದಳು. ಅದೇ ಹೊತ್ತಿಗೆ ಕತ್ತಲಿನಲ್ಲಿ ಹಳ್ಳದೊಳಗೆ ನುಗ್ಗಿದ ಕಾರು ತಾನೂ ಜಳಕ ಮಾಡಿ ಚೈತ್ರಗೌರಿಯನ್ನೂ ಜಳಕ ಮಾಡಿಸಿಬಿಟ್ಟಿತು. ತೊಡೆಮೇಲಿದ್ದ ಲಯ ಒಮ್ಮೆಲೆ ಬೆಚ್ಚಿ, “ಅಮ್ಮ ನೀರು!’’ ಎಂದಳು. ಬೇಡ ಎಂದು ಕಿರುಚಿದಳು ಚೈತ್ರಗೌರಿ.

-ಶ್ರೀದೇವಿ ಕಳಸದ
http://kpepaper.asianetnews.com/articlenew.php?articleid=KANNADA_BHA_20180128_3_2

Thursday, January 11, 2018

ನಿಲ್ಲು ಕಾಲವೇ ನಿಲ್ಲು‘ಚೆಂದ-ಚಾಲಿನೂ ಬೇಕು. ಹಣಾನೂ ಬೇಕು, ಬಲಾನೂ ಬೇಕು. ಈ ಬದಲಾವಣೆ ಅನ್ನೋದು ನಮ್ ನಮ್ ಮನೆಗಳಿಂದ್ಲೇ ಆಗಬೇಕು. ಮೊದಲು ನಾವು ಉದ್ಧಾರ ಆಗಬೇಕು. ಆಮೇಲೆ ಓಣಿ ಊರು ಕೇರಿ. ಮುಂದಿನ ವರ್ಷದ ಹೊತ್ತಿಗೆ ನಾ ನನ್ನ ಮಗಳನ್ನ ರ್ಯಾಂಪ್ ಏರಿಸೇ ಏರಸ್ತೀನಿ. ಯಾ ನನ ಮಗ ಅಡ್ಡ ಬಂದ್ರೂ ನಾ ಕೇಳಂಗಿಲ್ಲ…’’
ಮಾಲಿಕಾ ಆ ಕಮ್ಯೂನಿಟಿ ಹಾಲ್ ಗೆ ಕಾಲಿಟ್ಟಾಗ, ಮೈ ಪಿಟಿಪಿಟಿ ಎನ್ನುವಂಥ ಟಾಪ್ ಮತ್ತು ಜೀನ್ಸ್  ಧರಿಸಿದ ನಲವತ್ತರ ಹೆಣ್ಣುಮಗಳೊಬ್ಬಳು ಟೇಬಲ್  ಕುಟ್ಟಿ ಕುಟ್ಟಿ ಇಡುತ್ತಿದ್ದಳು. ಏದುಸಿರು ಬರುತ್ತಿದ್ದರೂ  ಎಡೆಬಿಡದೇ ಮಾತನಾಡುತ್ತಿದ್ದ ಅವಳಿಗೆ ಪಕ್ಕದಲ್ಲಿ ಕುಳಿತ ಹೆಣ್ಣುಮಗಳೊಬ್ಬರು ಗ್ಲಾಸಿಗೆ ನೀರು ಬಗ್ಗಿಸಿ ಕೊಟ್ಟಳು. ಉಳಿದವರೆಲ್ಲರೂ ಬಿಟ್ಟ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರು. ಒಂದಿಬ್ಬರು ದಂಗಾಗಿ ಬಾಯಿಗೆ ದುಪಟ್ಟಾ ಅಡ್ಡ ಹಿಡಿದು ಕುಳಿತಿದ್ದರು. ಇನ್ನೊಂದಿಬ್ಬರು ಗೋಡೆಯನ್ನೋ, ತಿರುಗುವ ಫ್ಯಾನನ್ನೋ ನೋಡುತ್ತ  ಕತ್ತಿಗೆ ವ್ಯಾಯಾಮ ಕೊಡುತ್ತಿದ್ದರು. ಮಾಲಿಕಾ ದೂರದಲ್ಲಿ ಕುರ್ಚಿಯೊಂದರ ಮೇಲೆ ಕುಳಿತಿದ್ದನ್ನು ಗಮನಿಸಿದ ಆ ಹೆಣ್ಣುಮಗಳು ಟೇಬಲ್ ಕುಟ್ಟುವುದನ್ನು ನಿಲ್ಲಿಸಿ, ಮುಂದೆ ಬಂದು ಕುಳಿತುಕೊಳ್ಳುವಂತೆ ಸನ್ನೆ ಮಾಡಿದಳು. ಪರವಾಗಿಲ್ಲ ಎಂಬಂತೆ ಮಾಲಿಕಾ ಕುಳಿತಲ್ಲಿಂದಲೇ ಮರುಸನ್ನೆ ಮಾಡಿದಳು. ಹಾಂ ನೀವೇವೋ ಡಿಸೈನ್ ಮಾಡ್ತೀರಂತೆ, ನನ್ ಮಗಳ ಕಾಸ್ಟ್ಯೂಮ್ ನೀವೇ ಮಾಡಿಕೊಡೋದು ಮತ್ತೆ. ಈಗ್ಲೇ ಹೇಳಿದೀನಿ ಎಂದು ಹಕ್ಕಿನಿಂದ ಹೇಳಿಬಿಟ್ಟಳು, ಸದ್ಯ ಟೇಬಲ್ ಕುಟ್ಟಲಿಲ್ಲ.. ಮಾಲಿಕಾ ಮುಟ್ಟಿಗೆ ಬಿಗಿ ಮಾಡಿಕೊಂಡವಳೇ, ಮುಖದ ಮೇಲೆ ನಗು ತಂದುಕೊಳ್ಳುತ್ತಲೇ ಏನೋನೆಪ ಹೇಳಿ  ಆ ಮೀಟಿಂಗ್ನಿಂದ ಎದ್ದುಬಂದು ಮನೆ ಸೇರಿಬಿಟ್ಟಿದ್ದಳು.    

ಈ ಏರಿಯಾಗೆ ಮಾಲಿಕಾ ಬಂದು ವರ್ಷವಾದರೂ ಕಾಲೊನಿಯ ಈ ಲೇಡೀಸ್ ಟೀಮ್ ಸೇರಿಲ್ಲ ಎಂಬ ಆರೋಪ ಆಗಾಗ ಕೇಳಿಬರುತ್ತಿದ್ದರೂ ಅದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕಾಲೊನಿಯಲ್ಲಿ ವಾಸವಾಗಿದ್ದೀವಿ ಎಂದ ಮಾತ್ರಕ್ಕೆ ನಮಗೆ ಆಸಕ್ತಿ ಇಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲೇಬೇಕೆಂಬ ನಿಯಮವಿಲ್ಲ. ಸದಸ್ಯರಾಗಬೇಕಾ? ಸರಿ ಇಷ್ಟು ಹಣ ತೆಗೆದುಕೊಳ್ಳಿ ರಸೀತಿ ಹರಿದು ಕೊಡಿ. ಆದರೆ ಬೇರೆ ಯಾವ ಚಟುವಟಿಕೆಗಳಿಗೂ ಒತ್ತಾಯಿಸುವ ಹಾಗಿಲ್ಲವಷ್ಟೇ ಎನ್ನುವುದು ಅವಳ ಇರಾದೆ.. ಅಷ್ಟಕ್ಕೂ ತನಗಿರುವ ಡೆಡ್‍ಲೈನ್‍ ವರ್ಕ್‍ಗಳಲ್ಲಿ ಇಂಥವಕ್ಕೆಲ್ಲ ಸಮಯವೂ ಇರುವುದಿಲ್ಲ. ಒಂದು ಕಾಲು ಮನೆಯೊಳಗಿದ್ದರೆ ಇನ್ನೊಂದು ಸದಾ ಹೊರಗಿರುತ್ತದೆ. ಆದರೆ, ಮೊನ್ನೆ ಶುಕ್ರವಾರ ಒಂದಿಬ್ಬರು ಹೆಣ್ಣುಮಕ್ಕಳು ಮನೆತನಕ ಬಂದು ಖುದ್ದಾಗಿ ಕರೆದು ನಾಳಿನ ಮೀಟಿಂಗ್ ಅಟೆಂಡ್ ಮಾಡಲೇಬೇಕೆಂದು ಕೇಳಿಕೊಂಡಾಗ ಅವರ ಕರೆಗೆ ಇಲ್ಲವೆನ್ನಲಾಗದೆ ಮಾಲಿಕಾ ಈ ತಲೆನೋವು ತಂದುಕೊಂಡಿದ್ದಳು..

ಅದೇ ಇಲ್ಲ, ಆಗಲ್ಲ ಎಂದು ಖಂಡತುಂಡವಾಗಿ ಹೇಳುವುದನ್ನು ಕಲಿತಿದ್ದರೆ ಹೀಗೆ ತಲೆನೋವು ಬರಿಸಿಕೊಳ್ಳುವುದು ತಪ್ಪುತ್ತಿತ್ತೇನೋ. ಇದುವರೆಗೂ ಹೀಗೆ ಇಲ್ಲವೆನ್ನುವುದನ್ನು ಕಲಿಯಲಾರದ್ದಕ್ಕೇ ಇಷ್ಟೆಲ್ಲ ಆಗಿದ್ದು ತಾನೆ? ಎಂದು ತನ್ನಷ್ಟಕ್ಕೆ ತಾನು ಹೇಳಿಕೊಳ್ಳುತ್ತ ಮಲಗಲು ಯತ್ನಿಸಿದಷ್ಟೂ ಆ  ಟೇಬಲ್ ಕುಟ್ಟಿ ಕುಟ್ಟಿ ಮಾತನಾಡುತ್ತಿದ್ದ ಹೆಣ್ಣುಮಗಳು ಮತ್ತು ಆಕೆಯ ಮಾತುಗಳು ಕಾಡಿಕಾಡಿಡುತ್ತಿದ್ದವು. ರಾತ್ರಿ ಸಾರಂಗ್ ಅದೆಷ್ಟೊತ್ತಿಗೆ ಬಂದು ಮಲಗಿದ್ದನೋ ಗೊತ್ತಿಲ್ಲ. ಮಧ್ಯರಾತ್ರಿ ಎಚ್ಚರವಾದಾಗಲೇ ತಾನು ಊಟ ಮಾಡದಿರುವುದು ಆಕೆಗೆ ಅರಿವಾಗಿದ್ದು. ಎದ್ದೇಳಲೂ ಆಗದೆ, ನಿದ್ದೆಯಲ್ಲಿದ್ದ ಅವನ ಎಡಗೈ ಎತ್ತಿಕೊಂಡು ತನ್ನ ಹಣೆಯ ಮೇಲಿಟ್ಟುಕೊಂಡಿದ್ದಳು. ಮಲಗಿದನೆಂದರೆ ಸತ್ತಂತೇ ಎಂದು ನಿದ್ರಿಸುವ ಸಾರಂಗನಿಗೆ ಇದ್ಯಾವುದೂ ಅರಿವಿರಲಿಲ್ಲ. ಯಾರಾದರೂ ಸ್ವಲ್ಪ ಹೊತ್ತು ತಲೆ ಒತ್ತಿದರೆ ಸಾಕು ಎಂಬಂತೆ ಒದ್ದಾಡಿ ಹೋಗಿದ್ದಳು ಮಾಲಿಕಾ.

ಬೆಳಗಿನ ಐದಕ್ಕೆ ಇನ್ನೇನು ಜೋಂಪು ಹತ್ತಬೇಕು. ಸಾರಂಗ್ ಹಾಲ್ನಲ್ಲಿ ಟಿವಿ ಹಾಕಿಕೊಂಡು ಜೋರಾಗಿ ವಾಲ್ಯೂಮ್ ಕೊಟ್ಟುಕೊಂಡು ಕುಳಿತಿದ್ದ. ಒಂದಲ್ಲ ಎರಡಲ್ಲ ಸತತ ಹದಿನಾಲ್ಕು ವರ್ಷದಿಂದಲೂ ಇದು ಹೀಗೇ. ಈಗ ಹೇಳಿದರೆ ಟಿವಿ ಬಾಯಿ ಬಂದ್ ಆದೀತೇ? ಎಂದುಕೊಂಡು ತಾನೂ ಎದ್ದು ಅಂಗಳದ ಆರಾಮ್ ಚೇಯರಿನಲ್ಲಿ ಕುಳಿತಳು. ಚಳಿಯಲ್ಲೂ ಆ ಹೊರಗಿನ ಗಾಳಿ ಹಾಯೆನಿಸಿತ್ತು. ಹೂತಲ್ಲೇ ಹುಗಿದುಕೊಂಡು ಒಂಟಿಕಾಲಲ್ಲಿ ನಿಂತು ಓಣಿಗೆ ಹಳದಿಬೆಳಕ ಹಾಸುವ ಲೈಟುಕಂಬ, ಪೇಪರ್-ಹಾಲಿನ ಹುಡುಗರ ಟ್ರಿಣ್ ಟ್ರಿಣ್, ಹೋಳುಮಗ್ಗಲು ಮಲಗಿದ ಮಗುವಿನಂತೆ ಕಂಡ ತನ್ನದೇ ಟೂ ವ್ಹೀಲರ್, ಪಕ್ಕದ ಮನೆಯ ಹಿತ್ತಲಿನಿಂದ ಸುತಿಹಿಡಿದ ನಲ್ಲಿಯ ಲಯ, ಡಬಡಬ ಪಾತ್ರೆಗಳ ಮಧ್ಯೆಯೂ ಎಲ್ಲಾ ಹಿತವೇ ಎನ್ನಿಸುತ್ತಿತ್ತು ಸಾರಂಗ್ ಐದೇ ನಿಮಿಷಕ್ಕೆ ಆಕೆ ಪಕ್ಕ ಬಂದು ನಿಲ್ಲುವತನಕ.

'’ಆ ಹೊಗೆ ದೂಳು ಕುಡೀತಾ ಸಂದಿಗೊಂದಿಯಲ್ಲಿ ಓಡಾಡ್ಕೊಂಡು ಊರು ಉಸಾಬರಿ ಮಾಡೋವಾಗೆಲ್ಲ ನಿನಗೆ ತಲೆನೋವು ಬರಲ್ಲ, ಸುಸ್ತೂ ಆಗಲ್ಲ. ಬೇಕಾದ್ದು ಸಿಗೋತನ ಮೂರುನಾಲ್ಕು ತಾಸು ತಿರಗೋವಾಗ ನಿನಗೇನೂ ಆಗ್ತಿರಲ್ಲ. ಅದ್ಯಾವಳೋ, ಅದ್ಯಾವನೋ ಅಲ್ಲಿ ರ್ಯಾಂಪ್ ಮೇಲೆ  ನಡೆದು ಕಿರೀಟ ತೊಟ್ ಮೇರೀತಾರಂತೆ ಈಕೆ ಅವರನ್ನೆಲ್ಲ ಮೆರಸ್ತಾಳಂತೆ… ಜನ ಎಲ್ಲ ಚಪ್ಪಾಳೆ ಹೊಡೀತಾರಂತೆ. ಇವಳ ಆತ್ಮ ಸಂತೋಷದಿಂದ ಕುಣಿಯತ್ತಂತೆ. ಅದೆಷ್ಟ್ ಕುಣೀತೀಯೋ ಕುಣಿಯೇ ನೋಡ್ತೀನಿ ನಾನೂ… ಮನೆಯಲ್ಲೊಂದು ಢಣಢಣ ಘಂಟೆ. ಮೂಲೆಯಲ್ಲಿದ್ದ ಸ್ಟ್ಯಾಂಡಿನಿಂದ ಶೂ ಕೈಗೆತ್ತಿಕೊಂಡು ಕತ್ತಲಲ್ಲೇ ಒಮ್ಮೆ ಕೆಕ್ಕರಿಸಿ ನೋಡಿ ಜಾಗಿಂಗ್ ಹೋಗಿಬಿಟ್ಟ.

ತನ್ನ ಪ್ರಾಜೆಕ್ಟ್‍ ಡೆಡ್‍ಲೈನಿನ ನೆನಪಾಗಿದ್ದೇ ಮಾಲಿಕಾ ಒಳಬಂದು ಲ್ಯಾಪ್‍ಟಾಪ್ ಹಿಡಿದು ಕುಳಿತಳು. ತಾನು ಡಿಸೈನ್ ಮಾಡುವ ಹುಡುಗಿಯರ ಮೈಬಣ್ಣವನ್ನು, ಮೈಮಾಟವನ್ನೊಮ್ಮೆ ಕಣ್ಣುಮುಂದೆ ತಂದುಕೊಂಡು ಅವರಿಗೆ ಒಪ್ಪುವಂಥ ಕಲರ್ ಆಯ್ಕೆ ಮಾಡಿಕೊಂಡು ವಸ್ತ್ರ ವಿನ್ಯಾಸ ಮಾಡತೊಡಗಿದಳು. ಇನ್ನೇನು ಫೈನಲ್ ಟಚ್ ಕೊಟ್ಟರೆ ಮುಗಿದೇಹೋಯಿತು ಎನ್ನುವಾಗ ಗಡಿಯಾರ ನೋಡಿದಳು. ಆರೂವರೆ, ಚಹಾ ಮಾಡಿಡಲೇಬೇಕು ಎಂದು ಅಡುಗೆಮನೆಗೆ ಓಡಿದಳು. ಗೇಟಿನ ಶಬ್ದ ಕೇಳಿಯೇ ಮುಂಬಾಗಿಲ ತೆರೆದು ಓಡಿ ಬಂದು ಉಕ್ಕುವ ಚಹಾ ಊದಿಊದಿ ಒಲೆ ಸಣ್ಣ ಮಾಡಿದಳು. ತಕ್ಷಣವೇ ಕಪ್‍ಗೆ ಚಹಾ ಸುರಿದು ಟ್ರೇಯೊಂದಿಗೆ ಬಾಲ್ಕನಿಗೆ ಬಂದರೆ ಸಾರಂಗ ಬಾತ್‍ರೂಮಿಗೆ ಹೋಗಿದ್ದ. ಹೀಗಾಗಿ ಅದರ ಮೇಲೊಂದು ಪ್ಲೇಟು ಮುಚ್ಚಿಟ್ಟು ವಾಪಸ್ ಕೋಣೆಗೆ ಬರುವ ಸಣ್ಣ ಅವಧಿಯಲ್ಲೇ ಸಾರಂಗ್‍ ಎದುರಾದ. ಚಹಾ ಎಂದ. ಟೀಪಾಯಿ ತೋರಿಸಿ ಒಳಬಂದು ಲ್ಯಾಪ್‍ಟಾಪ್‍ ತೊಡೆಮೇಲಿಟ್ಟುಕೊಂಡು ಕುಳಿತಳು. ಜೇನುಬಣ್ಣ ಆ ಚಿಕ್ಕಹುಡುಗಿಗೆ ಒಪ್ಪುತ್ತದೆ ಎಂದುಕೊಳ್ಳುತ್ತ ಆ ಬಣ್ಣದ ಮೇಲೆ ಟೂಲ್ ತಂದುಕೊಂಡಳು. ಆ ಬಣ್ಣ ಅವಳನ್ನು ಕಳೆದವಾರ ಸೇತುವೆಯ ಕೆಳಗಿನ ದೃಶ್ಯವನ್ನು ನೆನಪಿಸಿತು.

ಸಂಜೆ ಐದರ ಸೂರ್ಯ. ಕೆಳಗೆ ಸೇತುವೆಯ ಕೆಳಗೆ ಹರಿವ ನೀರು. ನಟ್ಟನಡುವಿನ ಕರೀಕಲ್ಲಮೇಲೆ ಕುಳಿತಿದ್ದ ಆ ನಾಲ್ಕು ಹುಡುಗಿಯರು. ಆಗಷ್ಟೇ ಹರೆಯ ಚಿಗಿತಂತಿತ್ತು. ಅಲ್ಯೂಮಿನಿಯಂ ಬುಟ್ಟಿಯೊಳಗೆ ಒಂದಿಷ್ಟು ಬಟ್ಟೆಗಳನ್ನಿಟ್ಟುಕೊಂಡು ಅದೇನೇನೋ ಮಾತನಾಡಿಕೊಂಡು ನಗುತ್ತ ಕುಳಿತಿದ್ದರು. ಸಂಜೆಗಾಳಿಗೆ ಅವರ ಕೆಂಚಗೂದಲು ಜೊಂಪೆಜೊಂಪೆಯಾಗಿ ಹಾರುತ್ತಿದ್ದವು. ಪಕ್ಕದಲ್ಲೇ ಹಾಲಿನ ನಾಲ್ಕೈದು ಕ್ಯಾನುಗಳನ್ನು ಆ ಹೊಳೆನೀರಿನಲ್ಲಿ ತೊಳೆದುಕೊಳ್ಳಲೆಂದು ಅವರಿಗಿಂತ ಮೂರು ನಾಲ್ಕು ವರ್ಷ ದೊಡ್ಡ ವಯಸ್ಸಿನ ಮೂರು ಹುಡುಗರೂ ಇದ್ದರು. ಆಗಾಗ ಗೂಳಿಗಳಂತೆ ಕಾದಾಟಕ್ಕೆ ಬೀಳುತ್ತ, ಕ್ಷಣದಲ್ಲೇ ಕೇಕೆ ಹಾಕುತ್ತ ಕ್ಯಾನು ತೊಳೆಯುವ ರಭಸಕ್ಕೆ ನೀರು ಚಿಮ್ಮಿ, ಆ ಚಿಮ್ಮುವಿಕೆಯ ಹನಿಹನಿಗಳಲ್ಲೆಲ್ಲ  ಮರಿಸೂರ್ಯಂದಿರು ನಕ್ಕು ಮಾಯವಾಗುತ್ತಿದ್ದರು. ಈ ಮಾಯಕವನ್ನೆಲ್ಲ ತನ್ನ ಕ್ಯಾಮೆರಾದಲ್ಲಿ ಸೇತುವೆಯ ಮೇಲಿಂದಲೇ ಸೆರೆ ಹಿಡಿಯುತ್ತಿದ್ದಳು ಮಾಲಿಕಾ.

ಇಂದಿನ ಖುಷಿಗಿಷ್ಟು ಸಾಕು ಎಂದು ಕೊರಳಿನಿಂದ ಕ್ಯಾಮೆರಾ ತೆಗೆಯುತ್ತಿರುವಾಗ, “ಸೋಪಿನ ಪುಡಿ ಬೇಕಾ?’’ ಎಂದು ಅವರಲ್ಲೊಬ್ಬ ಧೈರ್ಯ ಮಾಡಿ ಕೂಗಿದ. ಯಾರಿಗವ ಕರೆದಿದ್ದು ಎಂದು ತಿಳಿಯದೆ ತಮ್ಮ ತಮ್ಮ ಮುಖವನ್ನು ನೋಡಿಕೊಂಡರು ಆ ಹುಡುಗಿಯರು. ಬೇಕಾ? ಎಂದು ಮತ್ತೆ ಕೂಗಿದ್ದಕ್ಕೆ, ಅವರಲ್ಲೊಬ್ಬಳು ಬೇಕು ಎಂದು ಕೂಗಿದಳು. ಹಾಗಿದ್ದರೆ ಇಲ್ಲಿ ಬಾ ಎಂದು ಕೂಗು ಹಾಕಿದ. ಒಮ್ಮೆ ಹಿಂತಿರುಗಿ ತನ್ನ ಅಕ್ಕಂದಿರನ್ನು ನೋಡಿದ ಆ ಹುಡುಗಿ, ಅವರ ಸಮ್ಮತಿಯನ್ನೂ ನಿರೀಕ್ಷಿಸದೆ, ಸಣ್ಣಸಣ್ಣ ಜಾರುಗಲ್ಲುಗಳನ್ನು ದಾಟಿಕೊಂಡು ಆ ಹುಡುಗನಿದ್ದಲ್ಲಿಗೆ ಹೋದಳು. ಆಳ ಕಡಿಮೆ ಇದ್ದಿದ್ದರಿಂದ ಹರಿವೂ ಕಡಿಮೆ ಇತ್ತು. ಆ ಹುಡುಗಿ ಹತ್ತಿರ ಬರುತ್ತಿದ್ದಂತೆ ಅವನ ಕಣ್ಣುಗಳಲ್ಲಿ ಸೂರ್ಯಂದಿರು ಕುಣಿಯತೊಡಗಿದರು. ಆ ಹುಡುಗಿ ಬಲಗೈ ಚಾಚಿನಿಂತಳು. ಬೇಕೆಂದರೆ ಮುಂದೆ ಬರಬೇಕು ಎಂದ. ಎರಡು ಹೆಜ್ಜೆ ಮುಂದೆ ಹೋಗಿ ನಿಂತಳು. ಆಗ ಅವನೂ ಎರಡು ಹೆಜ್ಜೆ ಮುಂದೆ ಬಂದ. ತಗೋ ಎಂದು ಅವನು ಕಿಸೆಯಲ್ಲಿದ್ದ ಪೊಟ್ಟಣದಿಂದ ಸೋಪಿನ ಪುಡಿ ಕೊಟ್ಟ. ಇಬ್ಬರ ಒದ್ದೆಗೈಯನ್ನು ಆ ಸೋಪುಪುಡಿ ಕ್ಷಣ ಬೆಚ್ಚ ಮಾಡಿತು. ಆ ಹುಡುಗಿ ಮರಳಿ ತಾನು ಒಗೆಯುತ್ತಿದ್ದ ಕಲ್ಲಿನ ಬಳಿ ವಾಪಾಸು ಬಂದಾಗ ಅರ್ಧ ಸೋಪುಪುಡಿ ಕರಗಿಯೇ ಹೋಗಿತ್ತು. ಉಳಿದ ಮೂರೂ ಜನ ಅವಳ ಕೈಮೇಲೆ ಕೈಯಿಟ್ಟು ಒಂದಿಷ್ಟು ಸೋಪುಕಣಗಳನ್ನು ಕೈಗಂಟಿಸಿಕೊಂಡು ತಮ್ಮತಮ್ಮ ಕಲ್ಲುಗಳ ಮೇಲಿದ್ದ ಬಟ್ಟೆಗಳ ಮೇಲೆ ಸವರಿ, ಬಿಡುಬೀಸಿನಿಂದ ಬಟ್ಟೆ ಎತ್ತಿ ಒಗೆಯತೊಡಗಿದರು. ಕೆಂಪೇರಿದ್ದ ಸೂರ್ಯ ಈಗ ಇವರ ಮುಖವೇರಿದ್ದ.

ಆ ಹುಡುಗರು ಕ್ಯಾನುಗಳನ್ನೆಲ್ಲ ಎತ್ತಿಕೊಂಡು ಸೈಕಲ್ಲು ಬಿಡುವಾಗ, ಅವರಲ್ಲೊಬ್ಬ… ನೊರೆ ಬಂತಾ? ಎಂದ. ಇಲ್ಲ ಎಂದು ಗೋಣು ಅಲ್ಲಾಡಿಸಿದರು ಆ ಹುಡುಗಿಯರು. ನಾಳೆ ಜಾಸ್ತಿ ಸೋಪು ಪುಡಿ ತರುತ್ತೇವೆ ಬರುತ್ತೀರಿ ತಾನೇ? ಎಂದ. ನಾಲ್ಕೂ ಹುಡುಗಿಯರು ಮುಖಮುಖ ನೋಡಿಕೊಂಡು ಹೂಂ ಎಂದು ಕೈ ಎತ್ತಿದರು. ಹುಡುಗರ ಸೈಕಲ್ಲು ತುಳಿತಕ್ಕೆ ಗಾಲಿಗಳೊಳಗಿನ ತಂತಿಗಳು ತಮ್ಮನ್ನೇ ತಾವು ಮಬ್ಬುಗೊಳಿಸಿಕೊಂಡವು. ಇತ್ತ ಹುಡುಗಿಯರು ಬಟ್ಟೆ ಹಿಂಡಿಕೊಳ್ಳುವಾಗ ಹೊಳೆಯ ಮೀನುಗಳೆಲ್ಲ  ಪಾದಗಳಿಗೆ ಕಚಗುಳಿಯಿಟ್ಟವು. ಅವರ ಥಾ ಥೈ ನೋಡುತ್ತ ಅಷ್ಟೂ ಹೊತ್ತು ಜಗತ್ತನ್ನೇ ಮರೆತ ಮಾಲಿಕಾಳ ಕ್ಯಾಮೆರಾಗೆ ಭರಪೂರ ಭೋಜವಾಗಿತ್ತು.

“ಆ ಮೂಲೇಲಿ ಕಟ್ಟಿದ ಜೇಡ ಹರ್ಕೊಂಡ್ ಬಿದ್ದು ವಾರ ಆಯ್ತು. ಫ್ರೂಟ್ ಬಾಸ್ಕೆಟ್ ನಲ್ಲಿ ಒಂದ್ ಬಾಳೆಹಣ್ ಕಪ್ಪಗಾಗಿ ಎಷ್ಟ್ ದಿನ ಆಯ್ತೋ? ಶೂ ಸ್ಟ್ಯಾಂಡ್ನಲ್ಲಿ ಬೇಡಾದ್ ಚಪ್ಪಲಿ ತೆಗೆದಿಡು ಅಂತ ತಿಂಗಳಿಂದ ಹೇಳಿಹೇಳಿ ನನಗೇ ಅಸಹ್ಯ ಬಂತು. ನಿನ್ನೆ ಬೆಳಗ್ಗೆಯಿಂದ ಟೀಪಾಯ್ ಕೆಳಗೆ ಬಿದ್ದ ಪೇಪರ್ ಹಾಗೆ ಇದೆ. ಇದೆಯಲ್ಲ ಆ ಮೊಬೈಲ್ ಲ್ಯಾಪ್‍ಟಾಪ್ ಅದೇ ನಿನಗೆ ಸರ್ವಸ್ವ. ಅದ್ರೊಂದಿಗೇ ಜೀವನ ಮಾಡು. ಇದ್ದ ಮಗಳೊಬ್ಬಳನ್ನ ರೆಸಿಡೆನ್ಶಿಯಲ್ ಶಾಲೆಗೆ ಸೇರಿಸಿದ ನಿನಗೆ ಮನೆ ಯಾಕೆ ಬೇಕು? ಗಂಡ ಯಾಕೆ ಬೇಕು?” ಸಾರಂಗ್‍ ಇದ್ದಕ್ಕಿದ್ದಂತೆ ಮುಖ ಕೆಂಪು ಮಾಡಿಕೊಂಡು ಢಣಢಣಢಣ…

ಜಾಗಿಂಗ್ ಮುಗಿಸಿ ಬಂದವನಿಗೆ ಟೀ ಕಪ್ ಕೈಗೆ ಕೊಡದೆ ಟೀಪಾಯ್ ಮೇಲಿಟ್ಟು, ಕೋಣೆಗೆ ಓಡಿ ಲ್ಯಾಪ್‍ಟಾಪ್ ಎತ್ತಿಕೊಂಡಿದ್ದರ ಮಹಾಪ್ರಸಾದವಿದು! ಎಂದು ಅರ್ಥೈಸಿಕೊಳ್ಳುವಷ್ಟು ಪ್ರೌಢಳಾಗಿದ್ದಳು ಮಾಲಿಕಾ. ಇನ್ನೇನು ಸ್ವಲ್ಪ ಫೈನ್ ಟ್ಯೂನ್ ಮಾಡಿ ಮೇಲ್ ಮಾಡಿಬಿಟ್ಟರೆ ಮುಗಿಯಿತು. ಎಂಟುಗಂಟೆಗೆಲ್ಲಾ ಆಫೀಸಿಗೆ ಹೋಗುವ ಗೆಳತಿ ಸರಸ್ವತಿ, ಬಟ್ಟೆ ಮತ್ತು ಅದಕ್ಕೆ ಸಂಬಂಧಿಸಿದ ಸಾಮಾನುಗಳನ್ನೆಲ್ಲಾ ಆ ಬೂಟಿಕ್‍ನ ಹೇಮಂತ್‍ ಗೆ ತಲುಪಿಸಿಬಿಡುತ್ತಾಳೆ. ತಾನು ಅಡುಗೆ ಕೆಲಸ ಮುಗಿಸಿ ಹತ್ತಕ್ಕೆಲ್ಲ ಅವನ ಬೂಟಿಕ್ ತಲುಪುವ ಹೊತ್ತಿಗೆ ಆ ಡಿಸೈನ್‍ ಅನ್ನು ಅವ ಒಮ್ಮೆ ನೋಡಿ ಅಂದಾಜಿಸಿರುತ್ತಾನೆ. ನಂತರ ಎದುರಾಬದುರು ಕೂತು ವಿವರಿಸಿದರೆ ಅವನ ಪಾಡಿಗೆ ಅವನು ಕೆಲಸ ಶುರು ಮಾಡಿಕೊಳ್ಳುತ್ತಾನೆ ಎಂದೆಲ್ಲ ಲೆಕ್ಕಾಚಾರ ಹಾಕುತ್ತ ಕುಳಿತವಳಿಗೆ ಸಾರಂಗ್ ನ ಢಣಢಣ ನರಮ್ಮಾಗಿಸಿತ್ತು.

ಪ್ಲೇಟಿಗೆ ತಿಂಡಿ ಹಾಕಿ, ಎರಡೂ ಕೈಗಳಿಂದ ಅವನ ಕೈಯಲ್ಲಿ ಕೊಟ್ಟು, ಪಕ್ಕದಲ್ಲಿ ನೀರಿಟ್ಟು ಉಪಚರಿಸಲು ಸಮಯ ಇರಲಿಲ್ಲ ಎನ್ನುವುದಕ್ಕಿಂತ, ಹಾಗೆ ಮಾಡಿದರೇನಾದರೂ ಬದಲಾವಣೆ ಉಂಟೆ?  ಎಂದುಕೊಂಡು, ಟೇಬಲ್ ಮೇಲೆ ತಿಂಡಿ, ಹಣ್ಣು, ನೀರು ಜೋಡಿಸಿಟ್ಟು ಅಡುಗೆಮನೆಗೆ ವಾಪಾಸಾದಳು. ಮಧ್ಯಾಹ್ನಕ್ಕೆ ಪುಲಾವ್ ಮಾಡಿದರಾಯಿತೆಂದು ಬಟಾಣಿ ಸುಲಿಯುತ್ತ, ಹಾಗೇ ಬಂದ ಮೇಲುಗಳ ಮೇಲೆ ಕಣ್ಣಾಡಿಸುವಾಗ ತನ್ನ ತಾಯಿಯ ಮೇಸೇಜ್ ಪಾಪ್ ಅಪ್ ಆಯಿತು. ಈ ಅಮ್ಮನೋ ಈಗೀಗ ಹುಡುಗಿಯಾಗುತ್ತಿದ್ದಾಳೆ, ಯಾವುದೋ ಫಾರ್ವರ್ಡ್ ಇಮೇಜ್ ಕಳಿಸಿರುತ್ತಾಳೆ ನಂತರ ನೋಡಿದರಾಯಿತೆಂದುಕೊಳ್ಳುವ ಹೊತ್ತಿಗೆ ಥಟ್ಟನೆ ಆ ಇಮೇಜ್ ಡೌನ್‍ಲೋಡ್ ಆಗಿಯೇಬಿಟ್ಟಿತು. ಅರ್ರೆ ಇದು ತನ್ನ ಅಜ್ಜ-ಅಜ್ಜಿ! ಫೋಟೋಶಾಪ್ ನಲ್ಲಿ ಟಚಪ್ ಕೊಟ್ಟು, ಫೈನ್‍ ಟ್ಯೂನ್ ಹಂತದಲ್ಲಿದ್ದ  ಎರಡು ಫೋಟೋಗಳು ಅವಾಗಿದ್ದವು. ಇದರಲ್ಲಿ ಒಂದನ್ನು ಸೆಲೆಕ್ಟ್ ಮಾಡು, ಫ್ರೇಮ್ ಹಾಕಿಸಬೇಕು ಅಂತ ನಿನ್ನ ತಂದೆ ನಿರ್ಧರಿಸಿದ್ದಾರೆ ಎಂಬ ಮೆಸೇಜ್ ಕೂಡ ಇತ್ತು. ಓಕೆ ಎಂದು ರಿಪ್ಲೈ ಮಾಡಿ ಸುಮ್ಮನೇ ಬಟಾಣಿ ಸುಲಿಯುತ್ತಿದ್ದವಳಿಗೆ ತವರುಮನೆ, ರಜಾದಿನಗಳಲ್ಲಿ ಬರುತ್ತಿದ್ದ ತನ್ನ ತಾಯಿಯ ತಾಯಿ ನೆನಪಾದಳು.

ಅಜ್ಜಿ ತನಗೆ ಊಟಕ್ಕೆ ಬಡಿಸಿಟ್ಟು, ಪಕ್ಕದಲ್ಲಿ ಕುಳಿತು ಎಳೆ ಈರುಳ್ಳಿ, ಮೆಂತ್ಯೆ, ಮೂಲಂಗಿ, ಹಕ್ಕರಕಿ ಸೊಪ್ಪನ್ನು ಸೋಸುತ್ತ, ಅದರೊಳಗೆ ಉಳಿದ ಹನಿನೀರನ್ನು ತೊಡೆಯ ಮೇಲಿಟ್ಟುಕೊಂಡ ಮೆತ್ತಗಿನ  ಕಾಟನ್ ಬಟ್ಟೆಗೆ ಒರೆಸುತ್ತ ಎಳೆಎಳೆ ಸೊಪ್ಪನ್ನು ತಟ್ಟೆಯೊಳಗಿಡುತ್ತಿದ್ದಳು. ಹಾಗೇ ಹಸಿ ಕಡಲೆಕಾಳೋ, ಶೇಂಗಾನೋ, ಬಟಾಣಿಯನ್ನೋ ಸುಲಿದು ಅದರ ಪಕ್ಕದಲ್ಲೇ ನಿಧಾನಕ್ಕೆ ಇಡುತ್ತಿದ್ದಳು. ಈರುಳ್ಳಿ ಖಾರವೆಂದರೂ ಕೇಳದೆ, ಅದರ ಹೊಟ್ಟೆಮಧ್ಯದ ಎಸಳನ್ನಷ್ಟೇ ಬಿಡಿಸಿ, ಇದಷ್ಟೇ ತಿಂದು ನೋಡು ಎಂಥ ಸಿಹಿ ಗೊತ್ತಾ ಎಂದು ಹೇಳುತ್ತ, ತಿನ್ನುವಾಗ ತನ್ನ ಮುಖ ನೋಡುತ್ತಿದ್ದದ್ದು, ಮತ್ತು ತಟ್ಟೆಯಲ್ಲಿದ್ದ ಮೊಸರು, ಪಲ್ಯ, ಚಟ್ನಿಗಳನ್ನು ಚಪಾತಿ ರೊಟ್ಟಿಗೆ ಹೇಗ್ಹೇಗೆ ಕಾಂಬಿನೇಷನ್ ಮಾಡಿಕೊಂಡು ತಿಂದರೆ ಅದರ ರುಚಿ ಹೆಚ್ಚುತ್ತದೆ ಎಂಬುದನ್ನೂ ಹಗೂರಕ್ಕೆ ಹೇಳುತ್ತಿದ್ದಳು, ಹಾಗೆಯೇ ಎದುರಿಗೊಂದು ಪ್ಲೇಟಿನೊಳಗೆ ಎರಡು ಚಪಾತಿ ತುಣುಕುಗಳನ್ನಿಟ್ಟುಕೊಂಡು ಅದರ ಮೇಲೊಂದು ಪ್ಲೇಟು ಮುಚ್ಚಿಟ್ಟು  ಗಾಳಿಗೆ ಚಪಾತಿ ತೇವ ಕಳೆದುಕೊಳ್ಳಬಾರದೆಂಬ ಕಾಳಜಿಯ ಲೆಕ್ಕಾಚಾರದಲ್ಲಿ ಆಕೆ ತನಗಂಟಿಕೊಂಡೇ ಕೂತಿರುತ್ತಿದ್ದದ್ದು ಮಾಲಿಕಾಗೆ ನೆನಪಾಗಿ ಮನಸ್ಸು ಮೆತ್ತಗಾಯಿತು. ಅಷ್ಟರಲ್ಲಿ ಹೊರಗಿನಿಂದ ಧಡಾರ್ ಎಂದು ಬಾಗಿಲು ಮುಚ್ಚಿಕೊಂಡ ಶಬ್ದದ ಅರಿವಾಗಿ, ತಾನಿನ್ನೊಬ್ಬಳೇ ಮನೆಯಲ್ಲಿ ಎಂದು ಜೋರಾಗಿ ಉಸಿರೆಳೆದುಕೊಂಡು ಕ್ಯಾರೆಟ್‍ನ ಹೊರಮೈಯನ್ನು ಮೂರುನಾಲ್ಕು ಸೆಕೆಂಡಿನೊಳಗೆ ತರಿದು, ಮುಂದಿನ ಐದಾರು ಸೆಕೆಂಡಿನೊಳಗೆ ಚಿಕ್ಕಚಿಕ್ಕ ಹೋಳುಗಳನ್ನಾಗಿಸಿಬಿಟ್ಟಳು ಮಾಲಿಕಾ.

ಅಂದುಕೊಂಡಂತೆ ಬೂಟಿಕ್ ನ ಹೇಮಂತ್ ಕಾಲ್ ಮಾಡೇಬಿಟ್ಟ. ಅವನೊಬ್ಬ ಹುಚ್ಚ! ಎಲ್ಲದಕ್ಕೂ ಹಿಹಿ ಎಂದುಕೊಂಡು ಕಾಲ್ ಮಾಡುತ್ತಾನೆ. ಇನ್ನೇನು ಬಟ್ಟೆ ತಲುಪಿದೆ ಎಂದು ಹೇಳಲು ತಾನೆ? ಎಷ್ಟು ವರ್ಷಗಳಿಂದ ಅವನಿಗೆ ಆರ್ಡರ್ ಕೊಡುತ್ತಿಲ್ಲ ತಾನು? ಅವ ಮಾತ್ರ ಸಣ್ಣಸಣ್ಣದಕ್ಕೂ ಕಾಲ್ ಮಾಡಿ ವರದಿ ಒಪ್ಪಿಸುವುದನ್ನು, ಡೌಟು ಕೇಳುವುದನ್ನು ಬಿಡಲೇ ಇಲ್ಲ. ದೊಡ್ಡ ಶನಿಮಹಾಶಯ, ಆದರೂ ಒಳ್ಲೇ ಕೆಲಸಗಾರ ಅವನೊಬ್ಬ! ಎಂದುಕೊಳ್ಳುತ್ತ ಕಾಲ್ ರಿಸೀವ್ ಮಾಡಿದಳು. “ಮ್ಯಾಡಮ್‍ಜಿ, ಸರಸ್ವತಿ ಮ್ಯಾಡಮ್‍ ಬಟ್ಟೆ ಕೊಟ್ಟು ಹೋದರು. ನಾನು ನಿಮ್ ಮೇಲ್ ನೋಡುತ್ತಿದ್ದೇನೆ. ಕೆಲ ಡಿಸೈನುಗಳು ಅರ್ಥವಾಗುತ್ತಿಲ್ಲ ನೀವೊಮ್ಮೆ ಬಂದರೆ ಸರಿ ಹೋಗುತ್ತದೆ’ ಎಂದು ಅವ ಹೇಳುವ ಮಾಮೂಲಿವರಸೆಯನ್ನು ಅಂದಾಜಿಸಿದ್ದ ಮಾಲಿಕಾ, ಕಿವಿಯಿಂದ ಆರೇಳು ಇಂಚು ದೂರವೇ ಫೋನ್ ಹಿಡಿದು ಹೂಂ ಹೂಂ ಬರುವೆ ಎಂದು ಧ್ವನಿಯಲ್ಲಿ ಶಾಂತಿ ಮತ್ತು ಸಮಾಧಾನ ನಟಿಸಿ ಮಾತು ಮುಗಿಸಿದಳು.

ಪಟಪಟನೆ ಮಿಕ್ಕ ತರಕಾರಿ ಕತ್ತರಿಸಿ, ವಗ್ಗರಣೆ ಹಾಕಿ, ಉಪ್ಪು-ಖಾರ-ಮಸಾಲೆ ಪದಾರ್ಥ ಕಡಿಮೆಯೇ ಹಾಕಿ, ಒಂದು ಅಳತೆ ಅಕ್ಕಿಗೆ ಎರಡು ನೀರು ಮತ್ತು ಒಂದು ಅಳತೆ ಹಾಲು ಸೇರಿಸಿ ಕುಕ್ಕರಿನ ಬಾಯಿ ಮುಚ್ಚುವ ಹೊತ್ತಿಗೆ ಕೋಣೆಯೊಳಗಿನ ಕನ್ನಡಿ ಕಾಯುತ್ತಿತ್ತು. ರಾಯತಕ್ಕೆ ಸವತೆಕಾಯಿಯನ್ನು ಫ್ರಿಡ್ಜಿನಿಂದ ಹೊರಗಿಟ್ಟವಳೇ ಕೋಣೆಯ ಕನ್ನಡಿ ಮುಂದೆ ನಿಂತಳು. ನಿಂತಲ್ಲೇ ನಿಂತು ಐದು ನಿಮಿಷ ಜಾಗ್ ಮಾಡಿದವಳೇ, ಹತ್ತು ಸೆಕೆಂಡ್ ಸುಮ್ಮನಿದ್ದು ತನ್ನನ್ನೇ ತಾ ನೋಡಿಕೊಂಡಳು ಮಾಲಿಕಾ,  ಯಾಕ್ ಬೇಕಿತ್ತು ಇದೆಲ್ಲ ನಿನಗೆ? ಸುಮ್ಮನೆ ಶಾಪಿಂಗ್, ಸಿನೆಮಾ, ಕಿಟ್ಟಿಪಾರ್ಟಿ ಮಾಡಿಕೊಂಡು, ಗಂಡ ಕೊಡಿಸಿದ ವಸ್ತ ಒಡವೆ ತೊಟ್ಟು, ಸಂಬಂಧಿಕರೆಲ್ಲರ ಹೊಟ್ಟೆ ಉರಿಸುತ್ತ, ಗಂಡನ ಅಂತಸ್ತು ಮೆರೆಸಿದ್ದರೆ  ಎಂಥಾ ಚೆಂದವಿರುತ್ತಿತ್ತು ನಿನ್ನ ಸಂಸಾರ? ಎಂದುಕೊಂಡು ಮುಂದಿನ ಎಕ್ಸ್‍ರ್ಸೈಝ್ ಗೆ ತೊಡಗಿದಳು.
ಅಷ್ಟರಲ್ಲಿ, ನಚಿಕೇತ್ ಮುಖರ್ಜಿಯ ಕಾಲ್ ಬಂದಿತು. ಇನ್ನೇನು? ಕಾಸ್ಟ್ಯೂಮ್, ಗ್ರೂಮಿಂಗ್ ಎಲ್ಲ ರೆಡಿ ತಾನೆ? ಎಂದು ಕೇಳುತ್ತಾನೆ ಎಂದುಕೊಂಡು, ಏದುಸಿರುಬಿಡುತ್ತಲೇ ಹೆಲೋ ಎಂದಳು. “ಹಾಯ್ ಮಾಲಿಕಾ, ನಮ್ಮ ಬಾಸ್ ತುಂಬಾ ಇಂಪ್ರೆಸ್ ಆಗಿದ್ದಾರೆ ನೀನು ತೆಗೆದ ಫೋಟೋಗಳನ್ನು ನೋಡಿ. ಆ ಹುಡುಗಿಯರನ್ನೊಮ್ಮೆ ಅವರು ನೋಡಬೇಕಂತೆ. ಮಧ್ಯಾಹ್ನ ಕರೆತರಬಹುದಾ ಆಫೀಸಿಗೆ?’ ಎಂದ. ಛೆ! ಆ ಎಂ.ಜಿ ರೋಡಿನ ಕನ್ನಡಿಯಂತೆ ಹೊಳೆಯುವ ಫಳಫಳ ಆಫೀಸಿನೊಳಗೆ ಕೊಳಗೇರಿಯ ಹರಕುಮುರುಕಿನೊಳಗಿರುವ ಈ ಹೆಣ್ಣುಮಕ್ಕಳನ್ನು ಹಾಗಾಗೇ ಕರೆತಂದರೆ ಅಷ್ಟೇ! ಸನ್ನಿವೇಶ ಬೇರೆ ರೀತಿಯಲ್ಲೇ ನಿರ್ಮಾಣವಾಗುತ್ತದೆ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ, ಹೇಯ್ ಇಲ್ಲ ನಚಿಕೇತ್, ಗ್ರೂಮಿಂಗ್ ಆಗದ ಹೊರತು ಅವರನ್ನು ಹಾಗೆಲ್ಲ ಆಫೀಸಿಗೆ ಕರೆತರಲಾಗುವುದಿಲ್ಲ. ಎರಡು ದಿನ ಸಮಯ ಕೊಡು ಎಂದು ಹೇಳಿ ಫೋನಿಟ್ಟಳು.

ಕಳೆದವಾರ ಸಂಜೆ ಐದರ ಹೊಂಬೆಳಕಲ್ಲಿ ತಾನು ಕ್ಲಿಕ್ಕಿಸಿದ  ಆ ಹುಡುಗಿಯರ ಫೋಟೋಗಳೆಲ್ಲವನ್ನೂ ಮಾಲಿಕಾ ಫೇಸ್ಬುಕ್ಕಿಗೆ ಅಪ್ಲೋಡ್ ಮಾಡಿದ್ದರ ಪರಿಣಾಮ ಹೀಗೆ ಒಂದು ಆಕಾರ ಪಡೆದುಕೊಂಡಿತ್ತು. ಮೈಮೇಲೆ ನೆಟ್ಟಗಿನ ಬಟ್ಟೆ ಇಲ್ಲದಿದ್ದರೂ ಮುಖಕ್ಕೆ ಯಾವ ಮೇಕಪ್ಪಿಲ್ಲದಿದ್ದರೂ ಅವರ ಕಣ್ಣೊಳಗಿನ ಹೊಳಪು, ಮುಖದೊಳಗಿನ ತಾಜಾತನ, ಸಹಜ ಮುಖಭಾವಕ್ಕೆ ಬೆಳಗಾಗುವುದರೊಳಗೆ ಸಾವಿರಾರು ಲೈಕ್ಸು ಕಮೆಂಟುಗಳು ಬಂದು ನೂರಾರು ಶೇರ್‍ ಹೊಂದಿದ್ದವು. ಇದೆಲ್ಲವನ್ನೂ ಗಮನಿಸಿದ ‘ಜಸ್ಟ್‍ ಬ್ರೀದ್‍’ ಲೀಡಿಂಗ್‍ ಇಂಗ್ಲಿಷ್ ಮ್ಯಾಗಝೀನ್‍ ಒಂದರ ಸೀನಿಯರ್ ಫೋಟೋ ಜರ್ನಲಿಸ್ಟ್‍ ತಾನು ಪತ್ರಿಕೆಯ ಮುಖಪುಟಕ್ಕಾಗಿ ಫೋಟೋ ಶೂಟ್ ಮಾಡುವುದಾಗಿ ಫೇಸ್‍ಬುಕ್ಕಿನಲ್ಲೇ ಘೋಷಿಸಿಬಿಟ್ಟಿದ್ದ. ಇದೆಲ್ಲದರಿಂದ ಪುಳಕಿತಗೊಂಡ ಮಾಲಿಕಾ, ತನ್ನ ಆರ್ಡರ್‍ಗಳನ್ನು ಬದಿಗಿಟ್ಟು, ಈ ಹೆಣ್ಣುಮಕ್ಕಳ ಫೋಟೋಶೂಟ್‍ ಗಾಗಿ ತಯಾರಿ ನಡೆಸತೊಡಗಿದ್ದಳು.

ಸ್ಪಾಗೆ ಕಾಲ್ ಮಾಡಿ ಸಂಜೆ ಅಪಾಯಿಂಟ್‍ಮೆಂಟ್ ತೆಗೆದುಕೊಂಡಳು. ಗ್ರೂಮ್ ಆದ ಹುಡುಗಿಯರು ಮತ್ತು ತಾನು ವಿನ್ಯಾಸ ಮಾಡಿದ ಕಾಸ್ಟ್ಯೂಮ್‍ ನಲ್ಲಿ ಅವರು ಹೇಗೆ ಕಾಣುತ್ತಾರೋ? ಎಂಬುದನ್ನು ಕಲ್ಪನೆಯಲ್ಲೇ ಖುಷಿಪಡುತ್ತಿದ್ದವಳಿಗೆ ಬಾಗಿಲು ಬಡಿದ ಸದ್ದು. ಪಕ್ಕದ ಟೇಬಲ್ ಮೇಲೆ ಕಣ್ಣು ಹೋಯಿತು. ಸಾರಂಗನ ಮೊಬೈಲ್ ಕೈಗೆತ್ತಿಕೊಂಡೇ ಬಾಗಿಲು ತೆಗೆದಳು. ತನ್ನ ಮತ್ತು ಅವನ ಮುಖದ ಮಧ್ಯೆ ತೆರೆದ ಬಾಗಿಲು ಇತ್ತು. ಅವಳ ಕೈಯಿಂದ ಅವ ಮೊಬೈಲ್ ಇಸಿದುಕೊಂಡು ಗೇಟ್‍ ಧಡ್‍ ಎನ್ನಿಸಿ, ಧಡಧಡನೆ ಮೆಟ್ಟಿಳಿದು ಹೊರಟುಹೋದ.

ಬಾಗಿಲು ಮುಚ್ಚಿದವಳೇ ಕಣ್ಣುಮುಚ್ಚಿ ಅಲ್ಲೇ ಇದ್ದ ದಿವಾನಾ  ಮೇಲೆ ಕುಳಿತಳು. ಬರೊಬ್ಬರಿ ಹದಿನಾಲ್ಕು ವರ್ಷ ಮದುವೆಯಾಗಿ. ಕಳೆದ ವರ್ಷದ ತನಕವೂ ಮಾಲಿಕಾ, ತನ್ನ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಅವನ ಊಟದ ಹೊತ್ತಿಗೆ ಮಾತ್ರ ಮನೆಯಲ್ಲೇ ಇದ್ದು ಉಪಚರಿಸುವುದನ್ನು ಒಂದು ವ್ರತದಂತೆ ಪ್ರೀತಿಯಿಂದ ಪಾಲಿಸಿಕೊಂಡು ಬಂದಿದ್ದಳು. ಊಟ ಮಾಡುವಾಗ ಎದುರಿಗೆ ಟಿವಿ ಆನ್ ಆಗಿರದೇ ಇದ್ದಲ್ಲಿ ಅವನಿಗೆ ತುತ್ತೇ ಇಳಿಯುತ್ತಿರಲಿಲ್ಲ. ಯಾವುದೋ ಫೈಟಿಂಗ್ ಸೀನ್, ಕಾರ್ ರೇಸ್ ಅಥವಾ ಕಾಡುಪ್ರಾಣಿಯೊಂದು ಬೇಟೆಯಾಡುವುದನ್ನೋ, ಬೇಟೆಯಾಡಿದ್ದನ್ನು ಹರಿದ್ಹರಿದು ತಿನ್ನುವುದನ್ನೋ ನೋಡುತ್ತ ಮೈಮರೆತುಬಿಡುತ್ತಿದ್ದ. ಅದೆಷ್ಟೋ ಸಲ ತಾನು ಆತನ ಮೈಗಂಟಿ ಕುಳಿತುಕೊಂಡರೂ ಮತ್ತೂ ಟಿವಿ ವಾಲ್ಯೂಮ್ ಜೋರು ಮಾಡಿ ತೊಡೆ ಕುಣಿಸುತ್ತ ಕುಳಿತುಕೊಳ್ಳುತ್ತಿದ್ದ.  ತಟ್ಟೆಯಲ್ಲಿ ಹಸಿ ತರಕಾರಿಯೂ ಸೊಪ್ಪೂ ಇದೆ. ಅಥವಾ ಪಕ್ಕದಲ್ಲಿ ಸ್ವೀಟ್‍ ಹಾಗೇ ಇದೆ. ತಟ್ಟೆಯ ಚಪಾತಿ ಒಣಗುತ್ತಿವೆ ಎಂದೆಲ್ಲ ಹೇಳಿಹೇಳಿ ಕೊನೆಗೆ ಸುಮ್ಮನಾಗುತ್ತಿದ್ದಳು ಆಕೆ.. ಇನ್ನೇನು ಎರಡು ಪೀಸ್‍ ಚಪಾತಿಗೆ ಈ ಪಲ್ಯ ಮುಗಿಯುತ್ತದೆ. ಇನ್ನೊಂದಿಷ್ಟು ಬೇಕಾಗುತ್ತದೆ ಅವನಿಗೆ. ಈಗ ಹಾಕಿದ ಸಾರು ಅನ್ನಕ್ಕೆ ಸಾಕಾಗುವುದಿಲ್ಲ ಅಥವಾ ಮೊಸರು ಬೇಕಾಗುತ್ತದೆ ಅವನಿಗೆ ಎಂದೆಲ್ಲ ಅಂದಾಜಿಸಿದ ಆಕೆ, ಮೂರು ನಾಲ್ಕು ಸಲ, ಬೇಕಾದ ಪದಾರ್ಥವನ್ನೆಲ್ಲ ಕೇಳಿದರೂ ಆಂ? ಊಂಹೂ ಬೇಡ ಎಂದಷ್ಟೇ ಹೇಳಿ ಮತ್ತೂ ಟಿವಿ ವಾಲ್ಯೂಮ್ ಜೋರು ಮಾಡಿ ಮಗ್ನನಾಗಿಬಿಡುತ್ತಿದ್ದ ಸಾರಂಗ. ಮಗಳು ಬಿಲಾವಲಿ ಇಷ್ಟು ವರ್ಷ ಮನೆಯಲ್ಲಿದ್ದಾಗಲೂ ಇದೇ ಹಾಡು. ಈಗಲೂ ಇದೇ ಪಾಡು. ಅಂತಃಕರಣ, ಪ್ರೀತಿಯನ್ನೆಲ್ಲ ಸುರಿದರೂ ಒಂದು ಕಿರುನೋಟ, ಒಂದು ಭರವಸೆಯ ಮಾತು, ಒಂದು ಬೆಚ್ಚಗಿನ ಸ್ಪರ್ಷಕ್ಕೆ ಕಾದೂ ಕಾದೂ ಮಾಲಿಕಾ ಕಲ್ಲಾಗಿ ಹೋಗಿದ್ದಳು.

ಢಣಢಣ ಹೆಚ್ಚಾಗುತ್ತಿದ್ದಂತೆ ಬೆಳೆಯುವ ಮಗುವಿಗೆ ಇದು ನುಗ್ಗಾಗಿಸುವುದು ಬೇಡವೆಂದುಕೊಂಡು ಎಷ್ಟು ತಡೆದುಕೊಂಡರೂ ನಿರುಪಾಯಳಾಗುತ್ತಿದ್ದಳು. ಮೇಲಾಗಿ, ಅತ್ತೆ ಹೆಣ್ಣು ಹಡೆದೆ ಎಂದು ದೂರದಿಂದಲೇ  ದೂರುತ್ತ  ತನ್ನ ಮೊಮ್ಮಗು ಎಂಬುದನ್ನೂ ಮರೆತು ಒರಟಾಗಿ ನಡೆದುಕೊಳ್ಳುತ್ತಿದ್ದರು. ಆಗ  ಅನಿವಾರ್ಯವಾಗಿ  ರೆಸಿಡೆನ್ಶಿಯಲ್‍ ಶಾಲೆಯ ಮೊರೆ ಹೋಗಿದ್ದಳು ಮಾಲಿಕಾ. ಸಾರಂಗನನ್ನು ಪ್ರೀತಿಸಿದ ಕಾರಣಕ್ಕೆ ಮದುವೆ ಮೊದಲು ಫ್ಯಾಷನ್‍ ಇಂಡಸ್ಟ್ರೀಯಲ್ಲಿ ತನಗಿದ್ದ ದೊಡ್ಡ ಹುದ್ದೆ, ಹೆಸರು ಎಲ್ಲವನ್ನೂ ತ್ಯಜಿಸಿ ಸಾಮಾನ್ಯ ಗೃಹಿಣಿಮನೋಭಾವವನ್ನು ಒತ್ತಾಯದಿಂದ ತಂದುಕೊಳ್ಳಲು ಪ್ರಯತ್ನಿಸಿದ್ದಳು. ಬಿಲಾವಲಿ ಹುಟ್ಟಿದ ಬಳಿಕವಂತೂ ಪೂರ್ತಿ ಅಲ್ಲಾಡಿಹೋದಳು. ಸಣ್ಣಪುಟ್ಟ ಫ್ರೀಲಾನ್ಸ್ ಪ್ರಾಜೆಕ್ಟ್‍ಗಳನ್ನು ಮಾಡುವುದೂ ಅವಳಿಗೆ ದುಸ್ತರವಾಗತೊಡಗಿತು. ಆದರೂ ರಾತ್ರಿಹಗಲು ಕುಳಿತು, ಆರೋಗ್ಯದ ಹದಗೆಡಿಸಿಕೊಂಡರೂ ಪ್ರಾಜೆಕ್ಟ್‍ಗಳನ್ನು ಆಕೆ ಬಿಟ್ಟುಕೊಡುತ್ತಿರಲಿಲ್ಲ.

ಗಡಿಯಾರದ ಎರಡೂ ಮುಳ್ಳುಗಳು ಹನ್ನೆರಡಕ್ಕೆ ಬಂದು ನಿಂತವು. ಅದಾಗಲೇ ಕುಕ್ಕರ್, ಪ್ರೆಷರ್ ಒಮ್ಮೆ ಏನು ಎರಡು ಬಾರಿ ಕೂಗಿ ಸುಮ್ಮನಾಗಿತ್ತು. ಗ್ಯಾಸ್‍ ಉರಿ ತಗ್ಗಿಸಿ, ಆ ಒಂದು ನಿಮಿಷದ ತನಕ ವಾಟ್ಸಪ್‍ನ ಮೆಸೇಜ್ ಚೆಕ್ ಮಾಡತೊಡಗಿದಳು ಮಾಲಿಕಾ. ‘ನಮಸ್ಕಾರ ಮೇಡಮ್, ಕೊಳಗೇರಿಯ ನಾಲ್ಕು ಹುಡುಗಿಯರಿಗೆ ನೀವು ವಸ್ತ್ರವಿನ್ಯಾಸ ಮಾಡುತ್ತಿರುವುದು ಗೊತ್ತಾಯಿತು. ಹಾಗೇ ನೀವೇ ಅವರನ್ನು ಗುರುತಿಸಿದ್ದಾಗಿಯೂ ತಿಳಿದು ಸಂತೋಷವಾಯಿತು. ನಮ್ಮ ಎಡಿಟರ್ ಹೇಳಿದ್ದಾರೆ, ನಿಮ್ಮದೊಂದು ಇಂಟರ್ವ್ಯೂ ಮಾಡಬೇಕು ಅಂತ. ಯಾವಾಗ ಮನೆಗೆ ಬರಲಿ’ ಎಂಬ ಸಂದೇಶವಿತ್ತು. ಮಾಲಿಕಾ, “ಸಂತೋಷ. ಈವತ್ತು ಸಾಧ್ಯವಾಗದು. ಎರಡು ದಿನ ಬಿಟ್ಟು ನಾನೇ ಕಾಲ್ ಮಾಡುತ್ತೇನೆ. ಹಾಗೆ ಆ ಹುಡುಗಿಯರಿದ್ದ ಗುಡಿಸಲುಗಳಿಗೂ ನಿಮ್ಮನ್ನು ಕರೆದೊಯ್ಯುತ್ತೇನೆ’’ ಎಂದು ಖುಷಿಯಿಂದ ಉತ್ತರಿಸಿದಳು. ಕುಕ್ಕರಿನಿಂದ ಅಷ್ಟೊತ್ತಿಗೆ ಪರಿಮಳ ಬಂದಂತಾಗಿ, ಗ್ಯಾಸ್ ಆಫ್ ಮಾಡಿಬಿಟ್ಟಳು.

ಕಡುಗೇಸರಿಯ ಮೇಲೆ ಕಪ್ಪು ಕಲಂಕಾರಿ ಪ್ರಿಂಟ್‍ ಇರುವ ಬ್ಲೌಸ್‍ ಗೆ ಕಪ್ಪು ಟೆಸ್ಸಾರ್ ಸಿಲ್ಕ್ ಸೀರೆ ಉಟ್ಟರೆ ಹೇಗೆ? ಅದಕ್ಕೆ ಟೆರ್ರಾಕೋಟಾದ ಆಭರಣ ಧರಿಸಿ, ಹಣೆಯ ಮೇಲೊಂದು ದೊಡ್ಡ ಕುಂಕುಮ ಹಚ್ಚಿಕೊಂಡರೆ ಚೆಂದ ಮತ್ತು ಗಂಭೀರವಾಗಿ ಕಂಡೇನಲ್ಲವೆ? ಅಷ್ಟಕ್ಕೂ ಕ್ಯಾಮೆರಾಕ್ಕೆ ಕಡುಬಣ್ಣದ ದಿರಿಸುಗಳೇ ಒಪ್ಪುತ್ತವೆ ಎಂದೆಲ್ಲ ಯೋಚಿಸಿ  ಖುಷಿಪಟ್ಟುಕೊಂಡಳು ಮಾಲಿಕಾ. ಎದ್ದವಳೇ ತನ್ನ ವಾರ್ಡ್‍ರೋಬಿನಿಂದ ಕಪ್ಪು ಬಣ್ಣದ ಟೆಸ್ಸಾರ್ ಸೀರೆಯನ್ನು ಇಸ್ತ್ರಿಗೆ ಕೊಡಲೆಂದು ಹೊರತೆಗೆದಿಟ್ಟಳು. ಮಾಡೆಲ್ ಆಗಬೇಕೆಂದರೆ, ಚಂದ-ಚಾಲಿ-ಹಣ-ಬಲ ಬೇಕು ಎಂದಿದ್ದಳಲ್ಲವೆ? ಕೊಳಗೇರಿಯ ಆ ಹೆಣ್ಣುಮಕ್ಕಳೇನು ಪಾಪ ಮಾಡಿದ್ದಾರೆ? ಈ ಚಂದಗಿಂದದ ವ್ಯಾಖ್ಯಾನವನ್ನೇ ಮತ್ತು ಮಾಡೆಲ್ ಆಗುವ ದಿಕ್ಕುದೆಸೆಯನ್ನೇ ಬದಲಾಯಿಸಿಬಿಡ್ತೀನಿ! ಎಂದು ತನ್ನನ್ನೇ ತಾನೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡು ಜೋರು ಉಸಿರೆಳೆದುಕೊಂಡಳು. ಅಷ್ಟರಲ್ಲಿ ಬಾಯಲ್ಲಿ ಹಾರುಹುಳುವನ್ನು ಹಿಡಿದುಕೊಂಡ ಹಲ್ಲಿಯೊಂದು ಆಯತಪ್ಪಿ ಗೋಡೆಯಿಂದ ನೇರ ಸೀರೆಯ ಮೇಲೇ ಬಿದ್ದಿತು. ಚುಚು ಎಂದು ಓಡಿಸಲು ನೋಡಿದರೂ ಆ ಹಲ್ಲಿ ಜಾಗ ಬಿಟ್ಟು ಕದಲಲೇ ಇಲ್ಲ.

ಪೊರಕೆ ತರಲೆಂದು ಹೊರಗೆ ಹೋದವಳ ಮುಂದೆ ಹತ್ತಾರು ಲೋಗೋಗಳು ಒಟ್ಟಿಗೆ ಅವಳನ್ನು ಮುಗಿಬಿದ್ದಂತಾದವು. ಉಣ್ಣಲು ಉಡಲು ಗತಿಯಿಲ್ಲದ ಹುಡುಗಿಯರನ್ನು ಮಾಡೆಲಿಂಗ್‍ ಕ್ಷೇತ್ರಕ್ಕೆ ಪರಿಚಯಿಸುತ್ತಿರುವ ನಿಮಗೆ ಅಭಿನಂದನೆ ಎಂದು ಕೆಲ ದನಿಗಳು ಹಾರೈಸಿದವು. ಒಂದು ತಾಸಿನೊಳಗೆ ಓಬಿ ವ್ಯಾನೊಂದು ಬಂದು ಆ ಹುಡುಗಿಯರಿದ್ದ ಗುಡಿಸಲಿನ ಮುಂದೆ ಬಂದು ನಿಂತಿತು. ಟಿವಿಗೆಂದೇ ಹುಟ್ಟಿಕೊಂಡ ಸಮಾಜಶಾಸ್ತ್ರಜ್ಞರು, ಮಹಿಳಾ ಚಿಂತಕರು, ಲಾಯರುಗಳು, ಮನಶಾಸ್ತ್ರಜ್ಞರು, ಫ್ಯಾಷನ್ ಲೋಕದ ದಿಗ್ಗಜರು, ಜ್ಯೋತಿಷಿಗಳು ಸ್ಟುಡಿಯೋನಲ್ಲೇ ಕುಳಿತು ಆ ಹುಡುಗಿಯರ ಭವಿಷ್ಯವನ್ನು ಎಳೆಎಳೆಯಾಗಿ ಊಹಿಸಿ ರಾಡಿಮಾಡಿಡತೊಡಗಿದರು. ಯಾವುದೋ ಕಂಪೆನಿಯ ರಾಯಭಾರಿಯಾಗಿ ಆ ಹುಡುಗಿಯರು ಬಿಳೀ ಹಾಳೆಯ ಮೇಲೆ ಹೆಬ್ಬಟ್ಟು ಒತ್ತಿದರು. ಇದೆಲ್ಲವನ್ನೂ ಎಲ್ಲಾ ಲೋಗೋ, ಕ್ಯಾಮೆರಾಗಳೆಲ್ಲ ಹೀರಿಕೊಂಡು, ಮಾಲಿಕಾಳನ್ನು ರಾತ್ರೋರಾತ್ರಿ ಸಮಾಜಸೇವಕಿ ಪಟ್ಟಕ್ಕೇರಿಸಿ,  ತಮ್ಮ ತಮ್ಮ ಗಾಡಿ ಏರಿ ಹೊರಟುಬಿಟ್ಟವು. ಆಹೊತ್ತಿಗೆ ಮಾಲಿಕಾಳ ಕೈಲಿದ್ದ ಪೊರಕೆ ಅವಳ ಎದೆಮಟ್ಟ ಬೆಳೆದು ಲೋಗೋನಂತೆ ನಿಂತಿತ್ತು. ಮಂಚದ ಮೇಲಿರುವ ತನ್ನ ಕಪ್ಪು ಸೀರೆಯ ಮೇಲೆ ಹುಳುಹಿಡಿದು ಕೂತ ಹಲ್ಲಿಯ ನೆನಪಾಗಿ, ಆ ‘ಲೋಗೋ’ ಹಿಡಿದುಕೊಂಡವಳೇ ಕೋಣೆಗೆ ಬಂದರೆ ಹಲ್ಲಿ ಮಾಯ!

ಮಧ್ಯಾಹ್ನದ ಊಟಕ್ಕೆ ಬಂದ ಸಾರಂಗ್ ಪುಲಾವ್ ಬಡಿಸಿಕೊಂಡ. ಭರಭರನೇ ಸವತೆಕಾಯಿ ತುರಿದು ಮೊಸರಿಗೆ ಉಪ್ಪು ಹಾಕಿ ಕಲಿಸಿ, ಗಿರ್ಧ ಮೆಣಸಿನಕಾಯಿ ಸಣ್ಣಗೆ ಹೆಚ್ಚಿ ಚೂರು ಕೊತ್ತಂಬರಿ ಸೊಪ್ಪು ಉದುರಿಸಿ ಗರಗರನೆ ತಿರುಗಿಸಿ ಸಣ್ಣ ಬಟ್ಟಲಿಗೆ ಸುರಿದು ಚಮಚವಿಟ್ಟುಕೊಟ್ಟಳು. ಅವ ಮೊದಲ ತುತ್ತು ಬಾಯಿಗಿಡುತ್ತಿದ್ದಂತೆ ಇತ್ತ ಜಾಕೆಟ್ ಹಾಕಿಕೊಂಡು, ತಲೆಗೊಂದು ಕ್ಲಿಪ್ಪು ಸಿಕ್ಕಿಸಿಕೊಂಡು ಕಾರಿನ ಕೀ ತೆಗೆದುಕೊಂಡು, ಮೊಬೈಲ್ ಜೇಬಿಗಿಳಿಸಿಕೊಂಡಳು, ಅಲ್ಲಿ ಟಿವಿ ಪರದೆ ಮೇಲೆ ಹುಲಿಯೊಂದು ಹರಿಣದ ಕಾಲಿಗೆ ಬಾಯಿಹಾಕಿ ಎಳೆದೇಬಿಟ್ಟಿತು. ವೋವ್ ಎಂದು ತೊಡೆತಟ್ಟಿಕೊಂಡ ಸಾರಂಗ್‍ ಟಿವಿ ವಾಲ್ಯೂಮ್ ಮತ್ತಷ್ಟು ಜೋರು ಮಾಡಿದ.

ಕಾರು ಕೊಳಗೇರಿಯನ್ನು ವೇಗದಲ್ಲೇ ತಲುಪಿತು. ಗುಡಿಸಲಿನ ಮುಂದೆ ಆ ನಾಲ್ಕೂ ಹುಡುಗಿಯರು, ಊದಿನಕಡ್ಡಿ ತಿಕ್ಕುತ್ತ ಕುಳಿತಿದ್ದರು. ಅಕ್ಕಪಕ್ಕದ ಸಣ್ಣ ಹುಡುಗರು ಆ ಕಡ್ಡಿಗಳನ್ನು ಬಿಸಿಲಿಗೆ ಹರವುವುದರಲ್ಲಿ ಸಹಾಯ ಮಾಡುತ್ತಿದ್ದರು. ಆ ಹುಡುಗಿಯರ ಅಮ್ಮ ದುರಗಮ್ಮ, ಒಣಗಿದ್ದ ಊದಿನಕಡ್ಡಿಗಳನ್ನು ಅಷ್ಟಷ್ಟೇ ಗಂಟುಕಟ್ಟಿಡುತ್ತಿದ್ದಳು. ಸಾಲಾಗಿ ಜೋಡಿಸಿಟ್ಟ ಊದಿನಕಡ್ಡಿಯ ಕೊಳವೆಗಳೊಳಗೆ ಸಣ್ಣಸಣ್ಣ ಕೋಳಿಮರಿಗಳು ತೂರಲು ನೋಡುತ್ತಿದ್ದವು. ದೊಡ್ಡ ಕೋಳಿಗಳೆರಡು, ಸಂದಿಸಂದಿಯಲ್ಲಿ ಒಂದೊಂದೇ ಹೆಜ್ಜೆ ಇಡುತ್ತ, ಕತ್ತು ಕೊಂಕಿಸುತ್ತ, ಕಾಳುಗಳಿಲ್ಲದಿದ್ದರೂ ಏನೋ ಹೆಕ್ಕಿ ತಿಂದಂತೆ ಬಾಯಿಯಾಡಿಸುತ್ತಿದ್ದವು. ಮಾಲಿಕಾಳನ್ನು ಗಮನಿಸಿದ ಆ ಹೆಣ್ಣುಮಕ್ಕಳು  ಕೈಜಾಡಿಸಿಕೊಂಡು, ಹರಿದ ಲಂಗಕ್ಕೆ ಅದೇ ಕೈ ಒರೆಸಿಕೊಂಡು, ಸಂಕೋಚದಿಂದ ಹತ್ತಿರ ಬಂದರು. ಕಳೆದವಾರ ತಮ್ಮನ್ನು ಹುಡುಕಿಕೊಂಡು ಬಂದ ಇವರೇ ಅವರು ಎಂಬುದನ್ನು ಖಾತ್ರಿಪಡಿಸಿಕೊಂಡು ಖುಷಿಗೊಂಡರು. ಆದರೆ ಮಾಲಿಕಾಗೆ ಅವರ ಮುಖ ನೋಡಿ ಒಳಗೊಳಗೇ ಹಿಂಡಿದಂತಾಯಿತು. ಜೇಬಿನಿಂದ ಮೊಬೈಲ್ ತೆಗೆದವಳೇ ಸ್ಪಾ ಗೆ ಕಾಲ್ ಮಾಡಿ ಸಂಜೆಯ ಅಪಾಯಿಂಟ್‍ಮೆಂಟ್ ಕ್ಯಾನ್ಸಲ್ ಮಾಡಿಸಿದಳು. ಕೊಳಗೇರಿಯ ಈ ಹುಡುಗಿಯರಿಗೆ ಮತ್ತು ಅವರಮ್ಮನಿಗೆ ಇದೆಲ್ಲ ಅರ್ಥವಾಗದೆ ಬಿಟ್ಟಬಾಯಲ್ಲೇ ನಿಂತರು. ಚೆನ್ನಾಗಿದ್ದೀರಾ ಎಲ್ಲಾ? ಹಾಗೇ ಈಕಡೆ ಬಂದಿದ್ದೆ, ನೋಡಿಕೊಂಡು ಹೋಗಲೆಂದು ಬಂದೆ ಎಂದು ಹೇಳಿ ಕಾರನ್ನು ಮನೆದಾರಿಗೆ ತಿರುಗಿಸಿದಳು. ಅಮ್ಮ-ಮಕ್ಕಳು, ಓಣಿಮಕ್ಕಳು, ಕೋಳಿ-ಮಕ್ಕಳು ಸ್ವಲ್ಪ ಹೊತ್ತು ಗೊಂದಲಕ್ಕೆ ಬಿದ್ದು ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ಮುಳುಗಿದವು.

ಮನೆಗೆ ಬಂದ ಮಾಲಿಕಾ, ಸರಸ್ವತಿಗೆ ಕಾಲ್ ಮಾಡಿ, “ಸರೂ, ಈ ಪ್ರಾಜೆಕ್ಟ್ ನಿಲ್ಲಿಸುತ್ತಿದ್ದೇನೆ. ಯಾಕೆ ಏನು ಎಂದೆಲ್ಲ ಕೇಳಬೇಡ. ನಂತರ ಮಾತನಾಡುವೆ’’ ಎಂದು ಹೇಳಿ ಕಾಲ್ ಕಟ್‍ ಮಾಡುತ್ತಿದ್ದಂತೆ ಮೂಲೆಯಲ್ಲಿ ಕಟ್ಟಿದ ಜೇಡರ ಬಲೆ ತಾನೇ ತಾನಾಗಿ ಕಳಚಿಬಿದ್ದಿತು. ಹೀಗೇ ಬಿಟ್ಟರೆ ಇದು ತನ್ನ ಕಾಲಿಗೇ ತೊಡಕು ಹಾಕಿಕೊಳ್ಳುವುದು ಎಂದುಕೊಂಡ ಮಾಲಿಕಾ  ಪೊರಕೆ ತೆಗೆದುಕೊಂಡು ಶುಚಿಗೊಳಿಸತೊಡಗಿದಳು. ಹಾಗ್ಹಾಗೇ ಇಡೀ ಮನೆಯ ಮೂಲೆಗಳೆಲ್ಲ ಅವಳಿಗರಿವಿಲ್ಲದೇ ಸ್ವಚ್ಛಗೊಂಡವು. ಚಪ್ಪಲಿ ಸ್ಟ್ಯಾಂಡ್‍ನೊಳಗಿನ ನಾಲ್ಕು ಜೊತೆ ಬೇಡವಾದ ಚಪ್ಪಲಿಗಳು ಹೊರಬಂದು ಪ್ಲಾಸ್ಟೀಕು ಥೈಲಿ ಸೇರಿದವು. ಈ ಚಳಿಗಾಲದಲ್ಲೂ ಮಾಲಿಕಾ ಮತ್ತೊಮ್ಮೆ ಸ್ನಾನ ಮಾಡಿದಳು. ಗೇಟ್‍ ಶಬ್ದದಿಂದ ಅದು ಸಾರಂಗನೇ ಎಂದು ಗೊತ್ತಾದಾಗ ರಾತ್ರಿ ಹತ್ತೂವರೆಯಾಗಿತ್ತು. ಮಧ್ಯಾಹ್ನದ ಪುಲಾವನ್ನೇ ಬಿಸಿ ಮಾಡಿ ತಟ್ಟೆಗೆ ಬಡಿಸಿಟ್ಟಳು. ಹಾಗೇ ಅವನ ಬಳಿ ಕುಳಿತು, ಸ್ವಲ್ಪ ಮಾತನಾಡುವುದಿತ್ತು ಎಂದಳು. ಅವ ಚಾನೆಲ್ ಬದಲಾಯಿಸುವಾಗ ಇದ್ದಕ್ಕಿದ್ದಂತೆ ಫೈಟಿಂಗ್‍ ಸೀನ್‍ ಬಂದು, ಬ್ಯಾಗ್ರೌಂಡ್ ಮ್ಯೂಸಿಕ್‍ ಕಿವಿಗಪ್ಪಳಿಸಿತು. ಅವಳು ಏನೋ ಹೇಳಹೊರಟವಳು ಸುಮ್ಮನೇ ಎದ್ದು ಕೋಣೆಗೆ ಬಂದು ಮಂಚದ ಮೇಲೆ ಒರಗಿದಳು. ಮೇಜು ಕುಟ್ಟಿಕುಟ್ಟಿ ಮಾತನಾಡುತ್ತಿದ್ದ ಆ ದಢೂತಿ ಹೆಣ್ಣುಮಗಳ ಮಾತುಗಳು ಚೂರಿಯಂತೆ ಇರಿಯತೊಡಗಿದವು. ಕಿವಿಯಲ್ಲೆಲ್ಲಕುಟ್ಟಿದ ಶಬ್ದ.

‘ಜಸ್ಟ್‍ ಬ್ರೀದ್‍’ನ ನಚಿಕೇತ್ ಮುಖರ್ಜಿಗೆ ಮೆಸೇಜ್ ಟೈಪಿಸತೊಡಗಿದಳು, “ದಯವಿಟ್ಟು ಕ್ಷಮಿಸಿ, ಆ ಹೆಣ್ಣುಮಕ್ಕಳ ಫೋಟೋ ಶೂಟ್ ಕ್ಯಾನ್ಸಲ್ ಮಾಡಿಬಿಡಿ. ನೀವು ಕೊಟ್ಟ ಅಡ್ವಾನ್ಸ್‍ ಹಣವನ್ನು ನಾಳೆ ನಿಮ್ಮ ಅಕೌಂಟ್‍ ಗೆ ಮರಳಿಸುತ್ತೇನೆ.’’ ಮೆಸೇಜ್ ನೋಡಿದ ನಚಿಕೇತ್‍ ತಕ್ಷಣವೇ ಕಾಲ್ ಮಾಡಿದ. ನಾಲ್ಕು ಬಾರಿಯೂ ಕಾಲ್ ರಿಸೀವ್ ಮಾಡದ ಮಾಲಿಕಾ ಕೊನೆಗೆ ಸ್ವಿಚ್ ಆಫ್ ಮಾಡಿಬಿಟ್ಟಳು. ಪಕ್ಕದಲ್ಲಿ ಅದ್ಯಾವಾಗಲೋ ಸಾರಂಗ್ ಬಂದು ಮಲಗಿ ಗೊರಕೆ ಹೊಡೆಯುತ್ತಿದ್ದ. ಮೊಬೈಲ್ ಸ್ವಿಚ್ ಆನ್ ಮಾಡಿದವಳೇ, ಮೆಸೇಜ್ ಟೈಪಿಸತೊಡಗಿದಳು; “ಸಾರಂಗ್, ಇನ್ನು ಮುಂದೆ ನಾನು ನನ್ನ ಈ ಡಿಸೈನಿಂಗ್‍ ವೃತ್ತಿ/ಪ್ರವೃತ್ತಿಯಿಂದ ನಿವೃತ್ತಳಾಗುತ್ತಿದ್ದೇನೆ. ಇಷ್ಟುದಿನ ನನ್ನಿಂದ ನಿಮಗೆ ಮತ್ತು ಬಿಲಾವಲಿಗೆ ತೊಂದರೆಯಾಗಿರಬಹುದು. ಕ್ಷಮಿಸಿ…’ ತಕ್ಷಣವೇ  ನಿದ್ದೆ ಹೋದಳು. ಸಾರಂಗ್ ಬೆಳಗ್ಗೆದ್ದಾಗ ಮಗ್ಗುಲಲ್ಲಿ ಮಾಲಿಕಾ ಇಲ್ಲದ್ದನ್ನು ನೋಡಿದ. ಬೇಗ ಎದ್ದುಬಿಟ್ಟಿದ್ದಾಳೆ ಈವತ್ತು ಎಂದುಕೊಂಡು ಮೊಬೈಲ್ನಲ್ಲಿ ಮೆಸೇಜ್ ನೋಡಿದ. ಸಂಭ್ರಮದಿಂದ ಕುಣಿಯುವುದೊಂದು ಬಾಕಿ ಇತ್ತು ಹಾಗೆಯೇ ಮಾಲಿಕಾಳನ್ನು ಒಮ್ಮೆ ಗಟ್ಟಿಯಾಗಿ ಅಪ್ಪಿಕೊಳ್ಳಬೇಕೆಂದು ಹುಡುಕಾಡತೊಡಗಿದ. ಯಾವ ಕೋಣೆಯಲ್ಲೂ ಅವಳಿರಲಿಲ್ಲ. ಎಲ್ಲಿ ಹೋದಳೆಂದು ಹುಡುಕುತ್ತ ಹಾಲಿಗೆ ಬಂದವನಿಗೆ, ರಿಮೋಟ್‍ನ ಕೆಳಗೆ ಒಂದು ಪತ್ರ ಕಂಡಿತು. “ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ಆದರೆ, ಪ್ರತೀ ತಿಂಗಳ ಮೊದಲ ಭಾನುವಾರ  ತಪ್ಪದೇ ಬಿಲಾವಲಿಯ ಶಾಲೆಯಲ್ಲಿ ಹಾಜರಿರುತ್ತೇನೆ.’’

ಕೇಬಲ್‍ ನೆಟ್‍ವರ್ಕ್‍ ಕಳೆದುಕೊಂಡ ಟಿವಿ ಪರದೆಯೊಳಗೆ ಕಪ್ಪುಬಿಳಿ ಸಾಸಿವೆಗಳೆಲ್ಲ ಕೊತಕೊತನೆ ಕುಣಿಯುತ್ತ ಕಿವಿಗಡಚಿಕ್ಕುತ್ತಿದ್ದವು.

***
ಹತ್ತು ವರ್ಷಗಳ ನಂತರ..

‘ಮೇಡಮ್, ’ಜಸ್ಟ್ ಫಾರ್ ನ್ಯೂಸ್'  ಎಂಬ ಚಾನೆಲ್ ನ ನಾವು, ನಿಮ್ಮನ್ನು ಸಂದರ್ಶಿಸಲು ಬರುತ್ತಿದ್ದೇವೆ. ಎಂಬ ಮೆಸೇಜ್ ಮಾಲಿಕಾಳ ಮೊಬೈಲನ್ನು ತಲುಪಿತ್ತು. ಓಕೆ ಎಂದು ರಿಪ್ಲೈ ಮಾಡಿದ ಒಂದುಗಂಟೆಯೊಳಗೆಲ್ಲ ಒಂದು ಹುಡುಗಿ ಲೋಗೊದೊಂದಿಗೆ ಒಳಬಂದಳು. ಕ್ಯಾಮೆರಾಮೆನ್‍ ಅವಳನ್ನು ಹಿಂಬಾಲಿಸಿದ. ಅಲ್ಲಿದ್ದ ಅವರ ಕಂಪೆನಿಯ ಪರ್ಫ್ಯೂಮ್, ಊದಿನಕಡ್ಡಿ, ರೂಮ್‍ ಫ್ರೆಶ್‍ನರ್ ಎಲ್ಲವನ್ನೂ ವಿವಿಧ ಕೋನಗಳಿಂದ ಶೂಟ್ ಮಾಡಿಕೊಂಡ. ಮಾಲಿಕಾಳ ಪಕ್ಕದಲ್ಲಿ ಇಪ್ಪತ್ತೆರಡರಿಂದ ಮೂವತ್ತರ ಒಳಗಿನ ನಾಲ್ಕು ತರುಣಿಯರು ನಿಂತಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಕಂಪೆನಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ನಿಮಗೆ ಅಭಿನಂದನೆ ಎಂದು ಲೋಗೋಹುಡುಗಿ  ಅವರಿಗೆ ಹೂಗುಚ್ಛ  ಕೊಟ್ಟಳು. ಹಳೆಯ ಫೋಟೋಗಳನ್ನೆಲ್ಲ ಫೈಲಿನಿಂದ ಹುಡುಕಿಸಿ ಪಡೆದುಕೊಂಡಳು. ಆರಂಭದ ದಿನಗಳಲ್ಲಿ ಕಂಪೆನಿ ಹೇಗಿತ್ತು ಎಂಬ ಎಲ್ಲ ಫೋಟೋಗಳೂ ಅಲ್ಲಿದ್ದವು. ಜೊತೆಗೆ ಗುಡಿಸಿಲಿನ ಮುಂದೆ ನಿಂತ ನಾಲ್ಕು ಹೆಣ್ಣುಮಕ್ಕಳ ಫೋಟೋ ಆಕೆಯ ಗಮನ ಸೆಳೆಯಿತು. ಇವರು ಎಂದು… ಆ ನಾಲ್ಕೂ ಹೆಣ್ಣುಮಕ್ಕಳ ಮುಖವನ್ನೊಮ್ಮೆ ನೋಡಿ, ಅವರೇ ಇವರು ಎಂದು ಗುರುತಿಸಿ ಖುಷಿಪಟ್ಟಳು. ತನ್ನ ಸ್ಟೋರಿಗೆ ಸಿಕ್ಕ ಟ್ವಿಸ್ಟ್‍ನಿಂದ ಕುಣಿದಾಡುವಂತಾದರೂ ಆ ಲೋಗೋಹುಡುಗಿ ಗಂಭೀರವಾಗಿ ಅವರ ಪೂರ್ವಾಪರವನ್ನೆಲ್ಲ ಸಂದರ್ಶಿಸಿದಳು. ಆದರೆ ಮಾಲಿಕಾ ತನ್ನ ಬಗ್ಗೆ ಯಾವ ಗುಟ್ಟನ್ನೂ ಬಿಟ್ಟುಕೊಡದೆ ಮುಗುಳ್ನಗೆಯಲ್ಲೇ ಅವರನ್ನು ಬೀಳ್ಕೊಟ್ಟಳು.

ಸಂಜೆಯ ವಿಶೇಷ ಕಾರ್ಯಕ್ರಮವಾಗಿ ಅದು ಪ್ರಸಾರಗೊಂಡಾಗ ಬುಧವಾರದ ದಿನ ಟಿಆರ್‍ಪಿಯ ಟಾಪ್‍ ಲಿಸ್ಟ್‍ನಲ್ಲಿ ‘ಜಸ್ಟ್ ಫಾರ್ ನ್ಯೂಸ್’ ಚಾನೆಲ್ ಮೇಲುಗೈ ಸಾಧಿಸಿತ್ತು. ಹತ್ತಾರು ಪ್ರತಿಷ್ಠಿತ ಕಂಪೆನಿಗಳು ತಮ್ಮ ಕಂಪೆನಿಗೆ ರಾಯಭಾರಿಗಳಾಗುವಂತೆ ಕೋರಿ, ಕೇಳಿದಷ್ಟು ಹಣ ಕೊಡುವುವೆಂದು ಮುಂದೆ ಬಂದಾಗ, ಆ ನಾಲ್ವರು ಹುಡುಗಿಯರು, ತಮ್ಮ ಕೈಬರಹದಲ್ಲಿ ಪತ್ರಗಳನ್ನು ಬರೆದು ಫೇಸ್‍ಬುಕ್‍ ನಲ್ಲಿ ಪ್ರಕಟಿಸಿದರು; ‘ನಿಮ್ಮ ಊರಿನ ಯಾವುದೇ ಕೊಳಗೇರಿಗಳ ಮಕ್ಕಳನ್ನು ನಾವು ಸಾಕುತ್ತೇವೆ. ಅವರವರ ಸಾಮರ್ಥ್ಯ ಮತ್ತು ಕೌಶಲಗಳಿಗೆ ಅನುಗುಣವಾಗಿ ಅವರ ಜೀವನ ರೂಪಿಸಿಕೊಡುವ ಜವಾಬ್ದಾರಿ ನಮ್ಮದಾಗಿರುತ್ತದೆ. ನಮ್ಮ ಸಂಪರ್ಕ ವಿಳಾಸ…'

ಲಂಡನ್ನಿನ ಹವಾನಿಯಂತ್ರಿಕ ಕೋಣೆಯೊಳಗೆ ಕುಳಿತ ಬಿಲಾವಲಿ, ಈ ಪೋಸ್ಟ್‍ಶೇರ್ ಮಾಡಿ ತನ್ನ ಅಮ್ಮನ ಪ್ರೊಫೈಲಿಗೆ ಟ್ಯಾಗ್ ಮಾಡಿದ್ದಳು. ಪ್ರೌಡ್ ಆಫ್ ಯೂ ಅಮ್ಮಾಎಂಬ ವಾಕ್ಯದ ಮುಂದೆ ಮುದ್ದಾದ ಹೃದಯದ ಎಮೋಟಿಕಾನ್ ನಗುತ್ತಿತ್ತು.
    

Wednesday, January 10, 2018

ಅರ್ಧಬಳ್ಳಿಅದೊಂದು ಭಾನುವಾರ ಬೆಳಗ್ಗೆ ಎದ್ದಾಗ ನಸುಕಂದು‌ಬಣ್ಣದ ಸಾಲಾಗಿ ಜೋಡಿಸಿಟ್ಟ ಮೂರು ರಟ್ಟಿನ ಡಬ್ಬಿಗಳು ಕಂಡವು. ಅರೆನಿದ್ದೆಯಲ್ಲೇ  ನಡೆಯುತ್ತ ಅವುಗಳೆದುರು ಮಂಡಿಯೂರಿ ಕುಳಿತೆ. ಒಂದೇ ಅಳತೆಯ ಆ ಡಬ್ಬಿಗಳನ್ನು ಇಣುಕಿದೆ, ಏನೂ ಇಲ್ಲ. ಸುತ್ತೂಕಡೆ ಟಿಕ್ಸೋ ಅಂಟಿಸಲಾಗಿತ್ತು. ಅಲ್ಲೊಂದು ಕಡೆ handle with care ಎಂದು ಪ್ರಿಂಟಾದ ಅಕ್ಷರಗಳಿದ್ದವು. ಏಳೆಂಟು ವರ್ಷದ ನಾನು ಅಕ್ಷರ ಜೋಡಿಸಿ ಓದಿದೆ, ಆದರೆ ಅರ್ಥವಾಗಲಿಲ್ಲ. ಹಾಗೆಂದರೇನು ಎಂದು ಅಪ್ಪ-ಅಮ್ಮನಿಗೆ ಕೇಳದೆ ಸುಮ್ಮನೇ ಕುಳಿತೆ. ತಮ್ಮ ತಂಗಿಯನ್ನು ಎಬ್ಬಿಸಿದ ಅಮ್ಮ, ಮೂರೂ ಜನಕ್ಕೆ ಬೇಗ ಬೇಗ ಹಲ್ಲುಜ್ಜಲು ಹೇಳಿ ಗ್ಲಾಸಿನೊಳಗೆ ಹಾಲು ಸಕ್ಕರೆ ತಿರುಗಿಸತೊಡಗಿದಳು. ಬೇಗ ಹಾಲು ಕುಡಿದು ಮೂರೂ ಜನ ಅಪ್ಪಾಜಿ ಬಳಿ ಹೋಗಬೇಕೆಂದು  ಹಾಲು ಕುಡಿಯುವಾಗ ಆಕೆ ಹೇಳಿದಳು. ಮಂಚದ ಮೇಲೆ ಯಾವುದೋ ಪುಸ್ತಕದೊಳಗೆ ಮುಳುಗಿದ್ದ ಅಪ್ಪಾಜಿಯ ಕಾಲನ್ನೇರಿ ಡೊಗಾಲುಮಂಡೆ ಮಾಡಿ ಮಲಗಿಕೊಂಡೆ. ತಂಗಿ ಅವರ ಹೊಟ್ಟೆಯೇರಿ ಕುಳಿತಳು. ತಮ್ಮ ಅವರ ಹೆಗಲ ಹಿಡಿದು ನಿಂತ. ಹಾಸಿಗೆ ಬಿಟ್ಟೆದ್ದಮೇಲೂ ದಿನಾ ಹತ್ತು ನಿಮಿಷ ಅಪ್ಪಾಜಿ ಕಾಲ ಮೇಲೋ ತೋಳಮೇಲೋ ಹೊಟ್ಟೆ ಮೇಲೋ ಮಲಗೇಳದಿದ್ದರೆ ದಿನವೇ ಸಾಗುತ್ತಿರಲಿಲ್ಲ ನನಗಾಗ.

ರಟ್ಟಿನ ಡಬ್ಬಿಯ ಕುತೂಹಲ ಅವತ್ತು ಹಾಯಾಗಿ ನಿದ್ದೆ ಮಾಡಲು ಬಿಡಲಿಲ್ಲ. ಆ ಡಬ್ಬಿ ಯಾಕೆ ತಂದಿದ್ದು ಎಂದು ಕೇಳಿಯೇಬಿಟ್ಟೆ. ಹೂಂ ಹೂಂ ಎನ್ನುತ್ತ ಒಂದೆರಡು ಪೇಜು ಮುಗಿಯುವ ತನಕ ಗೋಣು ಹಾಕುತ್ತಲೇ ಇದ್ದರು ಅಪ್ಪಾಜಿ. ಆಮೇಲೆ ಎದ್ದವರೇ ಆ ಮೂರು ಡಬ್ಬಿಗಳೆದುರು ಕುಳಿತರು. ಈಗೇನು ಮಾಡುವುದು? ಅಂದೆ. ತಮ್ಮ ತಂಗಿ ಕುತೂಹಲದಿಂದ ನೋಡುತ್ತಿದ್ದರು. ನಾ ಒಂದೇ ಸಮ ಪ್ರಶ್ನಿಸುತ್ತಿದ್ದೆ. ಅಮ್ಮನಿಗೆ ನ್ಯೂಸ್ ಪೇಪರ್ ತರಲು ಹೇಳಿದರು. ಇದ್ಯಾಕೆ ಅಂದೆ. ಅದಕ್ಕೂ ಸುಮ್ಮನೇ ಗೋಣು ಅಲ್ಲಾಡಿಸಿದರು, ನೋಡ್ತಾ ಇರು ಎಂಬಂತೆ.

ಅಲ್ಲೇ ಇದ್ದ ಬಿಳಿ ಹಾಳೆಯನ್ನು ಮೂರು ತುಂಡು ಮಾಡಿ ಒಂದೊಂದನ್ನು ಒಂದೊಂದು ಡಬ್ಬಿಯ ಮೇಲೆ ಅಂಟಿಸಿದರು. ಸ್ಕೆಚ್ ಪೆನ್ ನಿಂದ ಒಂದು ಡಬ್ಬಿಯ ಮೇಲೆ ಶ್ರೀ (ಶ್ರೀದೇವಿ) ಪ್ರ(ಪ್ರಮೋದ), ಮತ್ತೊಂದರ ಮೇಲೆ ಲೀ (ಲಿಲ್ಲಿ-ಅಶ್ವಿನಿ) ಎಂದು ಬರೆದರು. ಈಗೇನು ಮಾಡ್ತೀರಿ ಅಂದೆ. ಅದಕ್ಕೂ ಗೋಣು ಹಾಕಿದರು. ಯಾವಾಗಲೂ ಇವರು ಹೀಗೇ ಮಾತೇ ಆಡುವುದಿಲ್ಲ ಎಂದು ಬೇಸರ ಬಂತಾದರೂ ಕಣ್ಮುಂದಿನ ಕುತೂಹಲ ಅದನ್ನು‌ ಮರೆಸಿತು. ತಂಗಿ ಅಪ್ಪಾಜಿಯ ಭುಜಕ್ಕೆ ಜೋತು ಬಿದ್ದಿದ್ದಳು. ತಮ್ಮ ತೊಡೆಗೆ ಮೊಣಕೈ ಕೊಟ್ಟು ಎಲ್ಲ ನೋಡುತ್ತಿದ್ದ. ಮೊದಲೇ ಮಾತನಾಡಿಕೊಂಡಿದ್ದರೆನ್ನಿಸುತ್ತದೆ ಅಪ್ಪ ಅಮ್ಮ. ಅಮ್ಮ, ನಮ್ಮೂವರ ಬಟ್ಟೆಗಳನ್ನು ರಾಶಿ ಹಾಕಿ ಅಡುಗೆ ಮನೆಗೆ ಹೋದಳು. ಅವೆಲ್ಲ ನಾವು ನಿತ್ಯ‌ ಹಾಕಿಕೊಳ್ಳುವ ಬಟ್ಟೆಗಳಾಗಿದ್ದವು. ಇವನ್ನೆಲ್ಲ ಏನು ಮಾಡ್ತೀರಿ ಅಪ್ಜಿ ಅಂದೆ. ಸುಮ್ಮನೆ ನೋಡು... ಎಂದರು. ಇನ್ನೇನು ಮಾಡುವುದು? ನೋಡುತ್ತ ಕುಳಿತೆ. ಒಂದೊಂದನ್ನೇ ಮಡಚತೊಡಗಿದರು.‌ ಮಡಚುವಾಗ ಚಡ್ಡಿ, ಪೇಟಿಕೋಟು, ಫ್ರಾಕು, ಶರ್ಟು, ಸ್ಕರ್ಟು ಹೇಗೆಲ್ಲ ಮಡಿಚಬೇಕು, ಯಾವುದನ್ನು ಮೊದಲು ಮಡಿಕೆ ಮಾಡಬೇಕು ಎಂಬುದನ್ನೂ ಹೇಳುತ್ತಾ ಹೋದರು. ಆಮೇಲೆ ಎಂದು ಕೇಳಲು ಹೋಗಲಿಲ್ಲ. ಏನು ಕೇಳಿದರೂ ಬರೀ ಹೂಂ ಅಥವಾ ಗೋಣು ಅಲ್ಲಾಡಿಸುತ್ತಾರೆ ಯಾವಾಗಲೂ ಎಂದು ಸುಮ್ಮನೆ ಚಕ್ಕಳಬಕ್ಕಳ ಹಾಕಿಕೊಂಡು ಕುಳಿತೆ.

ಆ ಡಬ್ಬಿಗಳ ಎತ್ತರಕ್ಕೆ ಅನುಗುಣವಾಗಿ ಹಾರ್ಡ್ ಬೋರ್ಡ್ ಕತ್ತರಿಸಿ ಡಬ್ಬಿಗಳ ಮಧ್ಯಕ್ಕೆ ನಿಲ್ಲಿಸಿ ಖಾನೆಗಳನ್ನು ರೂಪಿಸಿದರು. ನಿನ್ನ‌ ಚಡ್ಡಿ ಪೇಟಿಕೋಟುಗಳನ್ನು ಮಾತ್ರ ಕೊಡು ಶ್ರೀ ಎಂದರು. ಕೊಟ್ಟೆ. ಶ್ರೀ ಎಂದು ಬರೆದ ಡಬ್ಬಿಯ ಒಂದು ಖಾನೆಯಲ್ಲಿ ಅವು ಕುಳಿತವು. ಈಗ ಸ್ಕರ್ಟ್, ಟಾಪ್, ಫ್ರಾಕ್ ಎಂದರು. ಅವು ಇನ್ನೊಂದು ಖಾನೆಯಲ್ಲಿ ಕುಳಿತವು. ಅದೇ ರೀತಿ ತಮ್ಮನಿಗೂ ಹೇಳಿದರು. ತಂಗಿ‌ ಚಿಕ್ಕವಳಾದ್ದರಿಂದ ನಾನೂ ತಮ್ಮ ಅವಳ ಬಟ್ಟೆಗಳನ್ನು ಕೊಟ್ಟೆವು. ಅವರವರ ಹೆಸರಿನ ಡಬ್ಬಿಯಲ್ಲಿ ಅವರವರ ಬಟ್ಟೆಗಳು ಒಪ್ಪಾಗಿ ಕುಳಿತವು. ಅದನ್ನು ಶೆಲ್ಫಿನ ಮೇಲಿಡುವ ಹೊತ್ತಿಗೆ, ಬಹಳೇ ಖುಷಿಯೂ ಆಯಿತು, ಆದರೆ ಇದೆಲ್ಲ ಯಾಕೆ ಹೀಗೆ? ಎಂದು ಕೇಳಬೇಕೆನ್ನುವ ಹೊತ್ತಿಗೆ, 'ಇನ್ನುಮುಂದೆ ಇವು ನಿಮ್ಮ ಡಬ್ಬಿಗಳು. ತಂತಿಯ ಮೇಲೆ ಒಣಹಾಕಿದ ಬಟ್ಟೆಗಳನ್ನು ತಂದು ಒಂದೆಡೆ ಇಡುವುದಷ್ಟೇ ಅಮ್ಮನ ಕೆಲಸ. ಮುಂದಿನದು ನಿಮ್ಮ‌ ಕೆಲಸ' ಎಂದರು ಅಪ್ಪಾಜಿ.

ತಂಗಿ ತಮ್ಮ ಆ ಮಾತು ತಮಗಲ್ಲವೆಂಬಂತೆ ಆಟವಾಡಿಕೊಳ್ಳುತ್ತಿದ್ದರು, ಹೊಸ ಡಬ್ಬಿಯ ಮುಚ್ಚಳವನ್ನು ಹಾಕಿ ತೆಗೆದು ಮಾಡುತ್ತಿದ್ದ ನಾನು, ಅಂದರೆ?  ದಿನವೂ‌ ನಮ್ಮ ಬಟ್ಟೆ ನಾವೇ ಮಡಚಿಟ್ಟುಕೊಳ್ಳಬೇಕಾ ಅಂದೆ. ಹೌದು, ತಂಗಿ ಚಿಕ್ಕವಳಾದ್ದರಿಂದ ಅವಳದನ್ನೂ ಮಾಡಬೇಕು ಎಂದರು. ಹೂಂ ಹೂಂ ಸರಿ ಎಂದು ಎಂಟು ದಿನ ಉಮೇದಿಯಲ್ಲಿ ಎಲ್ಲವನ್ನೂ ಮಾಡಿದೆನಾದರೂ ಕ್ರಮೇಣ ಮೈಗಳ್ಳತನ ಬೆನ್ನುಹತ್ತಿತು. ಆಗೆಲ್ಲ ಹೇಳಿಹೇಳಿ ಕೊನೆಗೆ ಅಮ್ಮನೇ ಜೋಡಿಸಿಡುತ್ತಿದ್ದಳು. ಇದು ಅಪ್ಪಾಜಿಗೆ ಗೊತ್ತಾಗತೊಡಗಿತು. ಅವರು ಬಟ್ಟೆರಾಶಿಯನ್ನೊಮ್ಮೆ‌ ನನ್ನನ್ನೊಮ್ಮೆ ನೋಡಿದರೆ ಸಾಕು ತಕ್ಷಣವೇ ಓಡಿಹೋಗಿ ಬಟ್ಟೆ ಆರಿಸಿಕೊಂಡು‌ ಮಡಿಚಿಡಲುತೊಡಗುತ್ತಿದ್ದೆ.

ಅದ್ಯಾಕೆ ಅಪ್ಪಾಜಿ ಹೀಗೆ ಮಾಡುತ್ತಾರೊ? ಇಷ್ಟೆಲ್ಲ ಕಪಾಟು, ಶೆಲ್ಫು ಇದ್ದರೂ ಈ ಡಬ್ಬಿಗಳನ್ನು ಗಂಟುಹಾಕಿದ್ದಾರೋ ಎಂದು ಮನಸಲ್ಲೇ ಬೈದುಕೊಂಡು ಬಟ್ಟೆ ಜೋಡಿಸಿಡುವಾಗ, ಡಬ್ಬಿಮೇಲಿನ ಮತ್ತದೇ 'handle with care' ತಲೆಯಲ್ಲಿ ಹುಳ ಬಿಡುತ್ತಿತ್ತು. ಹೀಗಂದರೆ ಏನು ಎಂದು ಆಗಾಗ ಯೋಚಿಸುತ್ತಿದ್ದೆ ಹೊರತು ಅಪ್ಪ-ಅಮ್ಮನ ಬಳಿ ಕೇಳಲು ಹೋಗಿರಲಿಲ್ಲ. ಮುಂದೆ ದಿನಾ ಧಾರವಾಡಕ್ಕೆ ಓಡಾಡುವಾಗ ಅಪರೂಪಕ್ಕೆ ಇಂಥ ರಟ್ಟಿನ ಡಬ್ಬಿಗಳು ಮತ್ತವುಗಳ ಮೇಲೆ ಬರೆದ ಈ ವಾಕ್ಯ ಆಗಾಗ ಕಾಣುತ್ತಲೇ ಇರುತ್ತಿತ್ತು. ನನ್ನಷ್ಟಕ್ಕೆ ನಾ ಓದಿಕೊಂಡು ಸುಮ್ಮನಾಗುತ್ತಿದ್ದೆ.

ಮುಂದೆ ಕಾಲೇಜಿನ ಆರಂಭದ ದಿನಗಳು.  ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವದ ಹಿಂದಿನ ದಿನ ಧಾರವಾಡದ ಸೂಪರ್ ಮಾರ್ಕೆಟ್ ಗೆ ಹೋದೆ. ಎಡಬಲ ಬದಿಯ ಹೂವಿನಂಗಡಿ ದಾಟಿಕೊಂಡು ಹೋಗುವಾಗ ಬಲಬದಿಗೆ ಗಾಜಿನ ಸಾಮಾನುಗಳ ಅಂಗಡಿ ಇತ್ತು. ಅದರ ಮುಂದೆ ನಿಂತು, ಅಪ್ಪ-ಅಮ್ಮನಿಗೆ ಏನು ಗಿಫ್ಟ್ ಕೊಡುವುದು ಎಂದು ಯೋಚಿಸತೊಡಗಿದೆ. ಗಿಫ್ಟ್ ಕೊಡಬೇಕು ಎಂಬ ಖುಷಿಯಲ್ಲೇ ಅಪ್ಪ ಅಮ್ಮ ಬೈದರೆ ಎಂಬ ಸಣ್ಣ ಭಯವೂ ಇತ್ತು.

ಆಗ ಕಾಲೇಜಿನಿಂದ ಬಂದವಳೇ ಸಂಗೀತ ಕ್ಲಾಸ್ ಹೇಳಿಕೊಡುವ ಪರಿಪಾಠವಿಟ್ಟುಕೊಂಡಿದ್ದೆನಾದ್ದರಿಂದ ನನ್ನ ಬಳಿ ಯಾವಾಗಲೂ ಹಣವಿರುತ್ತಿತ್ತು. ಹಾಗೆ ಬಂದ ಹಣವನ್ನು ಅನಿವಾರ್ಯ ಎಂದು ಬಂದ ಸ್ನೇಹಿತೆಯರಿಗೆ ಕೊಟ್ಟುಬಿಡುತ್ತಿದ್ದೆ‌. ಗೆಳತಿಯರೆಲ್ಲರ ಪರವಾಗಿ ಕ್ಯಾಂಟೀನಿಗೇ ಹೆಚ್ಚುಪಾಲು ಹೋಗುತ್ತಿತ್ತು. ವಯಸ್ಸಾದ ಭಿಕ್ಷುಕರಿಗೆ ಮಾತ್ರ ಸ್ವಲ್ಪ ಪಾಲು ಸಲ್ಲುತ್ತಿತ್ತು. ಹಾಗೇ ಮನೆಯವರ, ಸ್ನೇಹಿತೆಯರ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡುವ ಸಂಭ್ರಮಕ್ಕೂ ಅದಾಗುತ್ತಿತ್ತು.. ಗಾಜಿನಂಗಡಿ ಮುಂದೆ ನಿಂತು, ಏನು ಕೊಳ್ಳುವುದು ಎಂದುಕೊಳ್ಳುವಾಗ ಒಂದು‌ಕ್ಷಣ ಹೇಯ್! ಅಂದಿದ್ದು, ಗ್ಲಾಸುಗಳ ಮೈಮೇಲೆ ಎಂಬೋಸ್ಡ್ ಆದ ಅರ್ಧಬಳ್ಳಿಯೊಂದು!

ನಮ್ಮ ಮನೆಯಲ್ಲಿದ್ದ ಗ್ಲಾಸುಗಳು ನನಗ್ಯಾಕೋ ಅಷ್ಟು ಇಷ್ಟವಾಗಿರಲಿಲ್ಲ ಮತ್ತವು ಹಳೆಯವಾಗಿದ್ದವು. ಆ ಗ್ಲಾಸಿನೊಳಗೆ ಜ್ಯೂಸ್ ಹಾಕಿದಾಗ, ಒಳಗೆಂಥ ಜ್ಯೂಸ್ ಇದೆ ಅದೆಷ್ಟು ತಿಳಿಯಾಗಿದೆ, ದಟ್ಟವಾಗಿದೆ, ಯಾವ ಬಣ್ಣದ್ದಿದೆ, ಜಾರೆಯಿಂದ ತಪ್ಪಿಸಿಕೊಂಡು‌ಬಂದ ಹಣ್ಣಿನ ಎಸಳುಗಳು ಹೇಗೆ ಅಲ್ಲಲ್ಲಿ ತೇಲಿ ಗುಂಪು ಕಟ್ಟಿಕೊಳ್ಳುತ್ತವೆ, ಕೆಲವು ಒಂಟಿಯಾಗಿ ನಿಲ್ಲುತ್ತವೆ, ಇನ್ನೂ‌ಹಲವು ಜೋಡಿಯಾಗಿ ಹೆಣೆದುಕೊಳ್ಳುತ್ತವೆ, ಗುಳ್ಳೆಗಳು ಹೇಗೆ ಏಳುತ್ತೇಳುತ್ತಲೇ ಮಾಯವಾಗುತ್ತವೆ, ಬೀಜಗಳೇನಾದರೂ ಇದ್ದರೆ ಅವು ತಳ ಹಿಡಿದು ಹೇಗೆ ಕುಳಿತುಕೊಳ್ಳುತ್ತವೆ ಎಂಬುದನ್ನೆಲ್ಲ ನೋಡಲು ಆ ಗ್ಲಾಸಿನಲ್ಲಿ ಸಿಗುತ್ತಿರಲಿಲ್ಲ. ಯಾಕೆಂದರೆ ಆ ಗ್ಲಾಸುಗಳ ಮೈಸುತ್ತ ಕೆಂಪುಬಣ್ಣದ ಸೂರ್ಯಂದಿರು ಮತ್ತವರ ಕೆಳಗೆ ಹಸಿರು ಬಣ್ಣದ ಬಳ್ಳಿ ಎಲೆಯಾಕಾರದ ಚಿತ್ತಾರವಿತ್ತು. ಗ್ಲಾಸಿನೊಳಗಿನ ವಿದ್ಯಮಾನವನ್ನು ನೋಡಲು ಆ ಸೂರ್ಯ, ಎಲೆ, ಬಳ್ಳಿ ಬಿಡುತ್ತಲೇ ಇರಲಿಲ್ಲ, ಹೀಗಾಗಿ ಎಷ್ಟೋ ದಿನ ಜ್ಯೂಸು ಕುಡಿಯುವ ಉತ್ಸಾಹವೇ ಹೊರಟುಹೋಗಿತ್ತು.

ಈಗ ಅಪ್ಪ ಅಮ್ಮನ ಮದುವೆ ವಾರ್ಷಿಕೋತ್ಸವ ನೆಪದಲ್ಲಿ ಈ ಗ್ಲಾಸುಗಳು ಬೇಕೇಬೇಕು ಎನ್ನಿಸಿದವು. ಅದರಲ್ಲೂ ಬಣ್ಣವಿಲ್ಲದ, ಅರ್ಧಬಳ್ಳಿಯ ಆ ಎಂಬೋಸ್ಡ್ ಚಿತ್ತಾರ ಮತ್ತು ಇಡೀ ಗ್ಲಾಸಿನ ಪಾರದರ್ಶಕಗುಣ ಬಹಳೇ ಆಕರ್ಷಿಸಿತು. ಇರುವ ಐದು ಜನಕ್ಕೆ ಆರು ಗ್ಲಾಸು ಸಾಕೆನ್ನಿಸಿ ಪ್ಯಾಕ್ ಮಾಡಿಸಿಕೊಂಡೆ. ಬಸ್ಸಿನಲ್ಲಿ ಕುಳಿತಾಗ ತೊಡೆಯ ಮೇಲೇ ಇಟ್ಟುಕೊಂಡೆ. ಹಾಗೇ ಆ ರಟ್ಟಿನಡಬ್ಬ ತಿರುಗಿಸಿ ನೋಡುವಾಗ ಮತ್ತದೇ 'handle with care!' ಬಾಲ್ಯದ ರಟ್ಟಿನ ಡಬ್ಬಿ ಮತ್ತು ಇದೇ ವಕ್ಕಣೆಯ ಅರ್ಥಕ್ಕಾಗಿ ಆಗಾಗ ಹುಡುಕಾಟ ನಡೆಸುತ್ತಿದ್ದದ್ದು ನೆನಪಾಗಿ ಆ ಗ್ಲಾಸುಗಳನ್ನು ಎದೆಗವಚಿಕೊಂಡು ಕುಳಿತೆ. ಬಸ್ಸಿನ ರಶ್ಶು, ಬ್ರೇಕಿಗೆ ಕೋಪಬಂದರೂ ಸಹಿಸಿಕೊಂಡೆ. ಸ್ಟಾಪು‌ ಬಂದು ಇನ್ನೇನು ಎದ್ದುನಿಲ್ಲಬೇಕು, ದೊಡ್ಡ ಬುಟ್ಟಿ ಹೊತ್ತ ಮುದುಕಿಯೊಬ್ಬಳು ಬ್ರೇಕಿಗೆ ಜೋಲಿತಪ್ಪಿ ನನಗೇ ಒರಗಿಕೊಂಡಳು. ಅಲ್ಲಿಗೆ ಕಥೆ!

ಮನೆಗೆ‌ ಬಂದು ನಿಧಾನಕ್ಕೆ ನನ್ನ ನೆಲಕೋಣೆಗೆ ಹೋಗಿ ರಟ್ಟಿನ ಡಬ್ಬಿ ತೆಗೆದು ನೋಡಿದರೆ, ಒಂದು ಗ್ಲಾಸ್ ಸೀಳಿತ್ತು. ದುಃಖ ಉಕ್ಕಿಬಂದರೂ ಏನೂ ಆಗಿಲ್ಲವೆಂಬಂತೆ, ಆ ಡಬ್ಬಿಯನ್ನು ಮಂಚದ ಕೆಳಗೆ ಅಡಗಿಸಿಟ್ಟೆ. ಮಾರನೇ ದಿನ ಮೊದಲ ಕ್ಲಾಸ್ ಬಂಕ್ ಮಾಡಿ ಸೂಪರ್ ಮಾರ್ಕೆಟ್ಟಿಗೆ ಹೋಗಿ ಇನ್ನೊಂದು ಗ್ಲಾಸ್ ತಂದು, ಕಾಲೇಜು ಮುಗಿಸಿಕೊಂಡು ಮನೆಗೆ‌ ಬಂದೆ‌. ಸಂಜೆ ಅಪ್ಪ ಅಮ್ಮನಿಗೆ ಗಿಫ್ಟ್ ಕೊಟ್ಟು, ಮೆಲ್ಲಗೆ ಬೈಸಿಕೊಂಡೆ, ಯಾಕೆ ಸುಮ್ಮನೇ ಖರ್ಚು ಅಂತೆಲ್ಲ...

ರಾತ್ರಿಯೆಲ್ಲ ಆ ಬಸ್ಸು, ರಶ್ಶು, ಮುದುಕಿ ಮತ್ತು ಸೀಳಿದ ಗ್ಲಾಸು ಪದೇಪದೆ ಕಣ್ಮುಂದೆ ಬಂದು ಕಾಡತೊಡಗಿತು. ನಾನದೆಷ್ಟೇ ಜೋಪಾನವಾಗಿಟ್ಟುಕೊಂಡಿದ್ದರೂ ಹೀಗಾಯಿತಲ್ಲ? ಇನ್ನೂ ಹೇಗಿರಬೇಕಿತ್ತು? ಪಾಪ ಆ ಮುದುಕಿಯದೂ ತಪ್ಪಿಲ್ಲ. ಛೆ ನಾನೇ‌ ಎಚ್ಚರ ವಹಿಸಬೇಕಿತ್ತು ಎಂದು ಮಧ್ಯರಾತ್ರಿಯ ತನಕ ಚಡಪಡಿಸಿದೆ. ಸೀಳಿಕೊಂಡ ಗ್ಲಾಸು ಸುಮ್ಮನೇ ಬೇರೊಂದು ಡಬ್ಬಿಯಲ್ಲಿ ಕುಳಿತಿತ್ತು. ಎಸೆಯಲೂ ಆಗದ, ಉಪಯೋಗಿಸಲೂ ಆಗದ ಆ ಗ್ಲಾಸ್ ಅನ್ನು ಆಗಾಗ ನೋಡಿ ಹಾಗೇ ಇಡುತ್ತಿದ್ದೆ‌. ಪಾಪ ಅದರದೇನು ತಪ್ಪು? ಎಂದುಕೊಳ್ಳುತ್ತಾ... ಅದರ ಮೈಮೇಲಿನ ಎಂಬೋಸ್ಡ್ ಬಳ್ಳಿಯನ್ನು ಸ್ಪರ್ಷಿಸುತ್ತಾ.

ಇದೆಲ್ಲವೂ ಆಗಾಗ ನೆನಪಾಗುವುದು ಮಗಳ ಬಟ್ಟೆ ರಂಪಾಟದಿಂದ. ಮೂರ್ಹೊತ್ತೂ ತನ್ನದೇ ಆಯ್ಕೆ ಮತ್ತು ದಿನವೂ ಹೊಸ ಬಟ್ಟೆ ಎಂದು ರಚ್ಚೆ ಹಿಡಿಯುವ ಇವಳಿಗೆ ಏನಪ್ಪಾ ಮಾಡೋದು? ಹೇಗಪ್ಪಾ ತಿಳಿಸಿ ಹೇಳೋದು? ಎಂದು ಕಂಗಾಲಾಗಿ, ಕೂಗಾಡಿ, ಕೊನೆಗೆ ರಮಿಸಿದರೂ ಕೇಳದಿದ್ದಾಗ ಕೈಯೂ ಮೇಲೇರತೊಡಗುವ ಹೊತ್ತಿಗೆ ಅದೇ ಕೈಯನ್ನು ಥಣ್ಣಗೆ ಕೈಹಿಡಿಯುತ್ತದೆ... ಅದೇ ಆ ರಟ್ಟಿನ ಡಬ್ಬಿಯ ಮೇಲಿದ್ದ ಒಕ್ಕಣೆ.

Friday, January 5, 2018

ಸಾವಿತ್ರಿಯ ರೆಡ್‍ಚಿಲ್ಲಿ ಮತ್ತು ನನ್ನ ಹಳದಿಮೀನು


ಅಕ್ವೇರಿಯಂನ ಹಳದಿ ಮೀನೊಂದು ಭಾಳಾ ಹೊತ್ತಿನಿಂದ ತಳಹಿಡಿದು ಕುಳಿತಿತ್ತು. ಇನ್ನೊಂದು ಮೇಲ್ಮುಖವಾಗಿ ನಿಂತಲ್ಲೇ ರೆಕ್ಕೆಯಾಡಿಸುತ್ತಿತ್ತು. ದೀವಾರ್ ಹೋಟೆಲಿನ ಗೋಡೆಯ ಚೌಕಟ್ಟಿನೊಳಗಿನ ಸುಂದರಿ ಅದೆಷ್ಟು ವರ್ಷಗಳಿಂದ ತಂಬೂರಿ ಶ್ರುತಿ ಮಾಡುತ್ತಲೇ ಕುಳಿತಿದ್ದಳೋ ಗೊತ್ತಿಲ್ಲ. ಮೇಜಗುಲಾಬಿಯೋ ಅಂದಿಗಂದಿಗೆ ಹುಟ್ಟಿ ಅಂದಿಗಂದಿಗೆ ಸಾಯುವ ನನಗೆ ಯಾರ ಹಂಗು ಎಂಬಂತೆ ಪಕಳೆಬಿರಿದು ಸುತ್ತೂಕಡೆ ನಗೆಯಂಟಿಸಿ ಹೂಜಿಯೊಳಗೆ ಕಾಲಿಳಿಬಿಟ್ಟಿದ್ದಳು. ಮಡಿಕೆ ಬಿಚ್ಚಿದರೆ ಮರಣವೇನೋ ಎಂಬಂತೆ ಕೈಯಳತೆಗೂ ಸಿಗದೆ ಸ್ಟ್ಯಾಂಡಿನೊಳಗೆ ಕುಳಿತಿದ್ದ ಮಿಸ್ಟರ್ ಟಿಶ್ಯೂ! ಗ್ಲಾಸಿನ ಒಳಮೈಗಂಟಿದ ಒಂದೊಂದೇ ನೊರೆಗುಳ್ಳೆಗಳು ತನಗೂ ಈ ಪ್ರಪಂಚಕ್ಕೂ ಸಂಬಂಧವೇ ಇಲ್ಲ ಎಂದು ಆಕಾರ ಕಳೆದುಕೊಳ್ಳುತ್ತ ಆಳದಲ್ಲೆಲ್ಲೋ ಮೋಕ್ಷ ಪಡೆದುಕೊಳ್ಳುತ್ತಿದ್ದವು.

ಎದುರಿಗೆ ಕುಳಿತಿದ್ದ ಮಗಳು ಒಮ್ಮೆಲೆ ಇಳಿದು ಬಂದು, ‘ಅಮ್ಮಾ ನೀನು ಲಿಪ್‍ಸ್ಟಿಕ್‍?’ ಎಂದು ಕೆನ್ನೆ ಹಿಡಿದಳು. ಹೂಂ ಕೂಶು ಅಂದೆ. ನಂಗೂ… ಎಂದು ಕೆನ್ನೆಯುಬ್ಬಿಸಿದಳು. ಪರ್ಸ್ ತಡಕಾಡಿದಳು. ಇದ್ದರಲ್ಲವೆ? ಹುಬ್ಬು ಗಂಟುಹಾಕಿಕೊಂಡು ಸುಮ್ಮನಾಗುತ್ತಾಳೆ ಅಥವಾ ಬೇಕು ಎಂದು ರಂಪ ಮಾಡುತ್ತಾಳೆಂದು ಎಣಿಸಿದೆ. ಆದರವಳು, ಸರಕ್ಕನೆ ನನ್ನ ತುಟಿಯ ‘ರೆಡ್ ಚಿಲ್ಲಿ’ ಟೋನ್‍ನ ಲಿಪ್‍ಸ್ಟಿಕ್‍ ಮೇಲೆ ಬೆರಳಾಡಿಸಿ ತನ್ನ ತನ್ನ ತುಟಿಗೆ ಸವರಿಕೊಂಡುಬಿಟ್ಟಳು. ಅರ್ರೆ! ಏನಿದು ಎಂದು ನೋಡುವ ಹೊತ್ತಿಗೆ ಸೊಂಟದ ಮೇಲೆ ಕೈಇಟ್ಟುಕೊಂಡು ತುಟಿ ಮುಂದೆ ಮಾಡಿ, ಕತ್ತು ತುಸು ವಾರೆಮಾಡಿ ದಿಟ್ಟಗಣ್ಣಿನಿಂದ ನಿಂತಿದ್ದಳು. ತಂಗಿಯ ಕಡೆ ನೋಡಿದೆ. ಆಕೆ ಮುಸಿಮುಸಿ..

ಮನಸ್ಸು ಬೆಂಗಳೂರಿನ ಚಂದ್ರಾಲೇಔಟ್‍ನಿಂದ ಬೆಳಗಾವಿಯ ಖಡೇಬಾಝಾರಿನ ಅಂಗಡಿಗಳ ಸಾಲಿಗೆ ಹಿಮ್ಮುಖವಾಗಿ ಓಡಿತು. ಅಂಗಡಿಯಂವ ಹತ್ತೂಬಣ್ಣದ ಲಿಪ್‍ಸ್ಟಿಕ್‍ಗಳನ್ನು ಹರಿವಿಟ್ಟಿದ್ದರೂ ಒಂದನ್ನೂ ಆಯ್ಕೆ ಮಾಡಿಕೊಳ್ಳಲಾಗದೆ ಸುಮ್ಮನೇ ನೋಡುತ್ತ ನಿಂತಿದ್ದೆ. ‘ಶ್ರೀದೀ ಇದ ಇರ್ಲಿ ತಗೋ, ಎದ್ದ ಕಾಣಬೇಕೋ ಬ್ಯಾಡೋ?’ ಎಂದು ರೆಡ್ ಚಿಲ್ಲಿ ಟೋನ್ ಆಯ್ಕೆ ಮಾಡಿಕೊಟ್ಟಿದ್ದಳು ಸಾವಿತ್ರಿ ದೊಡ್ಡಮ್ಮ. ಹಾಗೇ ನಾ ಹಾಕಿಕೊಂಡಿದ್ದ ಹಳದಿ ಮತ್ತು ಕೆಂಪು ಬಣ್ಣದ ಮಿಡಿಗೆ ಮ್ಯಾಚಿಂಗ್ ಬಳೆ ಕೊಡಿಸಿ, ಅಲ್ಲೇ ತೊಡಿಸಿ, ಎರಡೂ ಬ್ಯಾಗುಗಳೊಂದಿಗೆ ನನ್ನನ್ನು ಬೆಳಗಾವಿಯ ಬಸ್‍ಸ್ಟ್ಯಾಂಡಿಗೆ ಕೈಹಿಡಿದು ಭರಭರನೆ ಆ ಜಂಗುಳಿಯೊಳಗೆ ಕರೆದುಕೊಂಡು ಹೋಗಿದ್ದಳು. ನಿಪ್ಪಾಣಿ ಬಸ್ಸು ಹತ್ತಿದಾಗ ನಿದ್ದೆ ಆವರಿಸಿತ್ತು. ಕಣ್ಣು ನಿಚ್ಚಳವಾದಾಗ ನಿಪ್ಪಾಣಿಯ ಮನೆಮನೆಗಳ ಮುಂದೆ ಮೂರುನಾಲ್ಕು ಅಡಿ ಎತ್ತರದಲ್ಲಿ ಕಟ್ಟಿದ ಮಣ್ಣಿನ ಕೋಟೆಗಳು, ಆ ಆವರಣದಲ್ಲಿ ಯುದ್ಧಕ್ಕೆ ಸಜ್ಜಾದ ಸೈನಿಕರು, ಬಾವಿಯಿಂದ ನೀರು ಸೇದುವ ಮಹಿಳೆಯರು, ಪುಟ್ಟ ತೋಟ, ಅಂಗಳದಲ್ಲಿ ಬೊಂಬೆಮಕ್ಕಳು, ಸಾಲಾಗಿ ಜೋಡಿಸಿಟ್ಟ ಕಾರ್ತೀಕದ ದೀಪಗಳು. ಅದರ ಸುತ್ತ ಮೈಕೈಯೆಲ್ಲ ಮೆತ್ತಿಕೊಂಡು ಆ ಕೋಟೆಯನ್ನು ಮತ್ತಷ್ಟೂ ಸಿಂಗರಿಸುತ್ತಲೇ ಇರುವ ನಾಲ್ಕೈದು ಮಕ್ಕಳು. ಆ ಹಸಿಮಣ್ಣ ಪರಿಮಳ, ಬಿಳೀ ಸುಣ್ಣ, ಕೆಮ್ಮಣ್ಣ  ಚಿತ್ತಾರ, ಆ ಸಂತೆಪೇಟೆಯ ಗೌಜು, ನೆಲ್ಲೀಕಾಯಿ, ಹುಣಸೆ, ಕಬ್ಬು, ಗೋಧೂಳಿ ಸಮಯ, ಚಾಳಿನ ಬಾವಿಯ ಗಡಗಡೆ… ಆಹ್ ಅದೊಂದು ಪ್ರಫುಲ್ಲಲೋಕ.

ನಮ್ಮ ಸಾವಿತ್ರಿ ದೊಡ್ಡಮ್ಮ (ತಂದೆಯ ಅಣ್ಣನ ಹೆಂಡತಿ), ದೊಡ್ಡಪ್ಪನ ಮನೆಯಲ್ಲಿ ದೀಪಾವಳಿ ಮುಗಿಸಿ, ತುಲಸಿ ಲಗ್ನದ ನೆಪಮಾಡಿ ವರ್ಷಕ್ಕೊಮ್ಮೆ ಹೀಗೆ ತವರಿಗೆ ಬರುತ್ತಿದ್ದಳು. ಅಷ್ಟೂ ವರ್ಷಗಳೂ ಅಂದರೆ ಸುಮಾರು ಹತ್ತು ವರ್ಷಗಳ ತನಕ ನನ್ನನ್ನು ಕಾಯ್ದಿದ್ದು ಅವಳ ಆ ಸಣ್ಣಮೈಕಟ್ಟಿನ ನಡು. ಕಾಲು ನೆಲಕ್ಕೆ ಹತ್ತುವತನಕವೂ ನನ್ನ ಎಲ್ಲೆಡೆ ಎತ್ತುಕೊಂಡೇ ಓಡಾಡಿದವಳಾಕೆ. ಈ ಲಿಪ್‍ಸ್ಟಿಕ್‍, ರಬ್ಬರ್, ಬಳೆ ಎಲ್ಲ ಮಿಣುಕು ಜಗತ್ತನ್ನೂ ಪರಿಚಯಿಸಿದ್ದು ಆಕೆಯೇ. ಎಂಟುದಿನಗಳ ಆಕೆಯ ‘ಸ್ಪೇಸ್‍’ನ ಅವಧಿ ಮುಗಿಯುತ್ತಿದ್ದಂತೆ ಆಕೆಗೂ ನನಗೂ ಅಯ್ಯೋ ಎನ್ನಿಸುತ್ತಿತ್ತು. ನಂತರ ನಿಪ್ಪಾಣಿಯಿಂದ ದೊಡ್ಡಪ್ಪನ ಊರು ಹಿರೇಬಾಗೇವಾಡಿಗೆ ಬಂದು, ಎರಡು ದಿನಗಳ ನಂತರ ಅಲ್ಲಿಂದ ಅವರು ಹತ್ತಿಸಿದ ಬಸ್ಸಿನಲ್ಲಿ ಬೈಲಹೊಂಗಲಕ್ಕೆ ಒಬ್ಬಳೇ ಬಂದು, ಅಲ್ಲಿಂದ ಧಾರವಾಡದ ಬಸ್ಸು ಏರಿ, ದೊಡ್ಡವಾಡಕ್ಕೆ ಬಂದಿಳಿಯುತ್ತಿದ್ದೆ.

ಆಕೆ ನಿಪ್ಪಾಣಿಯಲ್ಲಿ ಕೊಡಿಸಿದ ಆ ಹಸಿರುಕವಚದ ಲಿಪ್‍ಸ್ಟಿಕ್‍ ಅನ್ನು ಸಣ್ಣಸಣ್ಣ ಹೂಗಳಿರುವ ಬಿಳಿಕರ್ಚೀಫಿನಲ್ಲಿ ಸುತ್ತಿಕೊಂಡು ಬಸ್ಸಿನೊಳಗೆ ಕೂತಿರುವಾಗ, ತೆಗೆದು ಒಮ್ಮೆ ತುಟಿಗೆ ಸವರಲೇ? ಎಂದೆನ್ನಿಸುತ್ತಿದ್ದರೂ ಸುಮ್ಮನಾಗಿದ್ದೆ. ಲಿಂಗದ್ಹಳ್ಳಿ, ಕೆಂಗಾನೂರ, ಬೆಳವಡಿ, ಮಡ್ಡಿದೇವರು, ದಿಡ್ಡೀಅಗಸಿಗೆ ಬಸ್‍ ನಿಂತಾಗೆಲ್ಲ ಮುಟ್ಟಿಗೆ ಬಿಗಿಗೊಳಿಸಿ ಅದರ ಇರುವನ್ನು ಖಾತ್ರಿಗೊಳಿಸಿಕೊಂಡಿದ್ದೆ. ಅವತ್ತು ಬಸ್ಸಿಳಿದು ದುಡದುಡನೆ ಮನೆಗೆ ಓಡಿ, ಅಪ್ಪಾಜಿಗೆ ಕಾಣದಂತೆ ಒಂದು ಶೆಲ್ಫಿನಲ್ಲಿ ಡಬ್ಬಿಯ ಹಿಂದೆ ಅಡಗಿಸಿಯೂ ಇಟ್ಟಿದ್ದೆ. ಆ ಶೆಲ್ಫ್ ಅನ್ನು ಅಪ್ಪಾಜಿ ಶುಚಿಗೊಳಿಸುವ ಎಷ್ಟೋ ಕಾಲ ಕಣ್ಣೆಲ್ಲ ಅಲ್ಲೇ ನೆಟ್ಟಿರುತ್ತಿದ್ದವು.

ಹೀಗೇ ಒಂದು ದಿನ ಮಧ್ಯಾಹ್ನ ಶಾಲೆಯಿಂದ ಬಂದಾಗ ಮೂಲೆಯಲ್ಲಿ ಬಿದ್ದ ಬೇಡವಾದ ಸಾಮಾನುಗಳ ಮಧ್ಯೆ ಹಸಿರುಕವಚದ ಲಿಪ್‍ಸ್ಟಿಕ್‍ ಕೂಡ ಕಂಡಿತು. ಪಾಟಿಚೀಲ ಮಂಚದ ಮೇಲೆ ಎಸೆದವಳೇ ಓಡಿಹೋಗಿ ಅದನ್ನು ಎತ್ತಿಕೊಂಡು, ಯೂನಿಫಾರ್ಮಿನ ತುದಿಯಿಂದ ಒರೆಸಿ ಕಣ್ಣಲ್ಲಿ ನೀರುತುಂಬಿಕೊಂಡೆ. ಅಪ್ಜಿ ಯಾಕೆ ಎಸೆದಿದ್ದು ನೀವು ಎಂದು ಕೇಳಿದ್ದಕ್ಕೆ, ‘ಇಂಥದ್ದೆಲ್ಲ ಹಚ್ಕೊಂಡು ತುಟಿ ಹಾಳು ಮಾಡ್ಕೋತೀಯೇನು? ಏನೇನು ಕೆಮಿಕಲ್ಸ್ ಹಾಕಿರ್ತಾರೋ ಏನೋ’ ಎಂದು ಕೈಯಿಂದ ಕಸಿದುಕೊಂಡು ಜೋರಾಗಿ ಎಸೆದುಬಿಟ್ಟರು. ನಂಗ್ ಬೇಕದು ದೊಡ್ಡಮ್ಮ ಕೊಡಿಸಿದ್ದು, ಇನ್ನೂ ಒಂದು ಸಲಾನೂ ಹಚ್ಕೊಂಡಿಲ್ಲ ಅಪ್ಜೀ ಎಂದು ಕಣ್ಣುತುಂಬಿಕೊಂಡೆ. ತಕ್ಷಣವೇ ಅದನ್ನು ಗಟ್ಟಿಯಾಗಿ ಹಿಡಿದುಕೊಂಡವಳೇ ಅಂಗಳಕ್ಕೆ ಓಡಿಬಂದು ಮುಟ್ಟಿಗೆ ಬಿಚ್ಚಿದರೆ, ಹಸಿರು ಕವಚ ಸೀಳಿ, ರೆಡ್‍ ಚಿಲ್ಲಿ ಟೋನ್‍ನ ಗೋಣು ಮುರಿದು ಹೋಗಿತ್ತು. ಅಂಟಿಸಹೋದರೆ ಕೈಯೆಲ್ಲ ಕೆಂಪು! ಶ್ರೀ ಎಂದು ಕೂಗಿದ ಅಪ್ಪಾಜಿ ದನಿಗೆ ಕೈಬಿಟ್ಟವಳೇ ದುಡುದುಡು ಬಚ್ಚಲು ಮನೆಗೆ ಓಡಿಹೋಗಿಬಿಟ್ಟಿದ್ದೆ. ಅರ್ಧಗಂಟೆಯ ನಂತರವೂ ಬಿಕ್ಕುತ್ತ ಕುಳಿತವಳಿಗೆ ಕರೆದು, ‘ಮೊದಲು ಅಭ್ಯಾಸದ ಕಡೆ ಗಮನ ಕೊಡು, ಸಂಗೀತದ ಕಡೆ ಗಮನ ಕೊಡು. ಈ ಬಟ್ಟೆ, ಬರೆ, ಶೃಂಗಾರ ಎಲ್ಲ ನಂತರದ್ದು’ ಎಂದು ಹೇಳಿದಾಗ ಹೂಂ ಎಂದಷ್ಟೇ ಹೇಳಿ, ಗಲ್ಲದ ಮೇಲಿನ ಕಣ್ಣೀರು ಒರೆಸಿಕೊಂಡು, ಅವರ ಮುಖವನ್ನೂ ಎತ್ತಿನೋಡದೆ, ಎರಡು ಗೆರೆಯ ಹಾಳೆಗಳ ಮಧ್ಯೆ ಶುದ್ಧಬರಹ ಬರೆಯುತ್ತ ಕುಳಿತುಬಿಟ್ಟಿದ್ದೆ.

ವೇಯ್ಟರ್ ಬಿಸಿನೀರೊಳಗೆ ಮುಳುಗಿದ ಬಟ್ಟಲು ತಂದು ಮುಂದಿಟ್ಟ, ಹಳದಿನಿಂಬೆಯ ಹೋಳು ಮೇಲ್ಮುಖವಾಗಿ ತೇಲುತ್ತಿತ್ತು. ಅಮ್ಮಾ ಬಾಯಿ ಒರೆಸು ಎಂದಳು ಮಗಳು. ಬಾಯೊರೆಸಲು ಹೋದರೆ, ಊಂಹೂ! ಲಿಪ್ ಸ್ಟಿಕ್ ಹೋಗುತ್ತೆ ಬೇಡ ಎಂದು ಕೊಸರಿಕೊಂಡು ಓಡಿಹೋಗಿಬಿಟ್ಟಳು. ಏಯ್‍ ಎಂದು ಕೂಗುವ ಹೊತ್ತಿಗೆ, ಅಕ್ವೇರಿಯಂನಲ್ಲಿ ಏನೋ ಪುಳಕ್ಕೆಂದಿತು. ಎರಡೂ ಹಳದಿಮೀನುಗಳು ಮುಟ್ಟಾಟವಾಡುತ್ತಿದ್ದವು. ಸಣ್ಣಪುಟ್ಟ ಬಣ್ಣಬಣ್ಣದ ಮೀನುಗಳು ಅವುಗಳನ್ನು ಬೆನ್ನು ಹತ್ತಿದ್ದವು.

Monday, January 1, 2018

ಹಾರಿದ್ದೆಲ್ಲವೂ ಮೀರಿದ್ದೇ ಅಂತಲ್ಲ ಅದು ಮೇರು


ಊದಿ ತೂರಿ ಹಾರಿಸು
ಹಾರಿದಷ್ಟು ಹಾರಲಿ
ಹಾರಲೆಂದು ಹುಟ್ಟಿದಾ
ಹಕ್ಕಿ ಮೈಯ ಗರಿಗಳು

ಹಾರು; ಹಕ್ಕಿಗರಿಗಳಿಗೆ ಗೊತ್ತಿರುವ ಭಾಷೆ ಇದೊಂದೇ, ಅದೇ ಮತ್ತದರ ಆತ್ಮ. ಹಾಗಾಗಿ ನೆಲಕ್ಕಂಟಿಕೊಂಡಿರುವುದು ಅವುಗಳ ಜಾಯಮಾನವೇ ಅಲ್ಲ. ಸಾಧ್ಯವಿದ್ದಷ್ಟು ಅವು ರೆಕ್ಕೆಬಿಚ್ಚಿ ಸುಯ್‍ಗುಡುವ ಗಾಳಿಯೊಳಗೆ ಮೇಲಕ್ಕೆ, ಮೇಲಕ್ಕೆ ಹಾರುತ್ತಿರಬೇಕು, ತೇಲುತ್ತಿರಬೇಕು. ಈ ಆಶಯ ನಮ್ಮ ಬದುಕಿಗೂ ಸಂಬಂಧಿಸಿದ್ದು. ಮುಂದುವರಿಯುತ್ತಲೇ ಸಾಗಬೇಕಾದ ನಮ್ಮ ಪರಂಪರೆಗೆ ಸಂಬಂಧಿಸಿದ್ದು ಮತ್ತು ಸದಾ ಕಾಲ ಹಳತು ಎನ್ನುವುದು ಹೊಸತಿನೊಂದಿಗೆ ಹೆಣಿಗೆ ಹಾಕಿಕೊಳ್ಳುತ್ತಲೇ ಬದುಕಿನ ಹಾರಾಟವು ಮುಂದುವರಿಯುತ್ತಲೇ ಇರಬೇಕು ಎನ್ನುವ ಪ್ರತಿಮೆಯನ್ನು ಬೇಂದ್ರೆಯವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. 

ಎಲ್ಲೆ ಕಟ್ಟು ಇಲ್ಲದಾ
ಬಾನಬಟ್ಟೆಯಲಿದೊ
ಎಂದೆಂದು ಹಾರುವೀ
ಹಕ್ಕಿಗಾಳಿ ಸಾಗಿದೆ 

ನಿಜ ಇದುನಮ್ಮ ಬದುಕನ್ನೇ ಧ್ವನಿಸುವಂತಿದೆ. ಈ ಹಕ್ಕಿಗರಿಗಳನ್ನು ನೆನೆಯುವಾಗಲೆಲ್ಲ ನನಗೆ ಇನ್ನೇನೋ ನೆನಪಾಗುತ್ತದೆ.

ಒಂದಕ್ಕೊಂದು ಅಂಟಿಕೊಂಡಿದ್ದ ಒಂದೇ ಬಗೆಯ ಆ ನಾಲ್ಕೈದು ಮಣ್ಣಿನ ಮನೆಗಳು. ಆ ಮನೆಗಳ ಜಗುಲಿ ಮೇಲೆ ಜಗದ ಎಲ್ಲಾ ಬಣ್ಣಗಳನ್ನೂ ಹೆಕ್ಕಿ, ನಿತ್ಯವೂ ತಮ್ಮೊಡಲಿಗೆ ಸುರುವಿಕೊಂಡೇ ಕುಳಿತುಕೊಳ್ಳುವ ದೊಡ್ಡ ಫ್ರಾಕು ತೊಟ್ಟ ಬಾರ್ಬಿಗಳಂತೆ ಕಾಣುವ ಆ ಹೆಣ್ಣುಮಕ್ಕಳು. ಮನೆಯ ಮುಂದಿನ ಅಂಗಳದ ಒಂಟಿಕಂಬಕ್ಕೂ ಮತ್ತು ಒಂಟಿಮರಕ್ಕೂ ನಡುವೆ ಬಿಗಿದ ಹಗ್ಗ. ಆ ಹಗ್ಗದ ಮೇಲೆ ಒಣಹಾಕಿಸಿಕೊಂಡ ಬಣ್ಣಬಣ್ಣದ ಬಟ್ಟೆತುಂಡುಗಳು. ಅಂಗಳದಲ್ಲಿ ಹರವಿದ ಕಾಳುಕಡಿಗಳು, ಅದರ ಸುತ್ತಲೂ ಓಡಾಡುವ ಕೋಳಿಮರಿಗಳು, ಅಂಗಿಯಿದ್ದರೆ ಚಡ್ಡಿ ಇಲ್ಲ, ಚಡ್ಡಿಯಿದ್ದರೆ ಅಂಗಿ ಇಲ್ಲ ಎಂದು ಮಣ್ಣಿನೊಳಗೆ ಮುಳುಗೇಳುತ್ತ ಆಟವಾಡಿಕೊಳ್ಳುವ ಪುಟ್ಟಮಕ್ಕಳು… ದಿನಾ ಶಾಲೆಗೆಂದು ನನ್ನ ಬಾಲ್ಯದೂರು ದೊಡ್ಡವಾಡದಿಂದ ಧಾರವಾಡಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಈ ನಿತ್ಯದೃಶ್ಯವನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದೆ.

ಬೆಳ್ಳಂಬೆಳಗ್ಗೆದ್ದು ಗಡಿಬಿಡಿಯಲ್ಲಿ ತಯಾರಾಗಿ, ಒಂದು ಜುಟ್ಟು ಮೇಲಾಯಿತು ಇನ್ನೊಂದು ಕೆಳಗಾಯಿತು ಎಂದು ಅಮ್ಮನೊಂದಿಗೆ ತಕರಾರು ತೆಗೆದು, ತಿಂಡಿ ತಿನ್ನದೇ ಓಡಿ ಬಸ್ಸು ಹತ್ತುವ ತನಕವೂ ಮನಸ್ಸಿನೊಳಗೆಂಥದೋ ಕಿರಿಕಿರಿ. ಬಸ್ಸು ಹತ್ತಿದ ಮೇಲೆ ನೂಕುನುಗ್ಗಲಿನಲ್ಲಿ ಬೆನ್ನಮೇಲೆ ಪಾಟಿಚೀಲವೆಂಬ ಬ್ರಹ್ಮಾಂಡ ವಜನು ಹೊತ್ತು ಕೆಳಗೆ ಕಾಲು ತುಳಿಸಿಕೊಳ್ಳುತ್ತ ಮೇಲೆ ಮೈಕೈ ಮೂತಿ ತಿವಿಸಿಕೊಳ್ಳುತ್ತ ಎಲ್ಲೋ ಒಂದು ಕಡೆ ಜಾಗ ಮಾಡಿಕೊಂಡು ನಿಲ್ಲುವುದೊಂದು ಕಿರಿಕಿರಿಯೇ… ಆದರೂ ಊರು ಮುಗಿದು ಹೊಲಸಾಲುಗಳು ಶುರುವಾಗುತ್ತವೆ ಎನ್ನುವ ಮೊದಲೇ ಜನಗಳ ಮಧ್ಯೆ ಸಿಕ್ಕಿಹಾಕಿಕೊಂಡ ನನ್ನದೇ ಮುಖವನ್ನು ಬಿಡಿಸಿಕೊಂಡು ಬಲಗಡೆಯ ಕಿಟಕಿಯಾಚೆಗೆ ಕಣ್ಣತೂರಿಬಿಟ್ಟರೆ ಷೋರೀಲಿನಂತೆ ಸಾಗಿಬಿಡುವ ಕೆಲ ಸೆಕೆಂಡುಗಳ ಆ ಬಣ್ಣಗಳ ಲೋಕ ಆ ದಿನದ ಆ ಬೆಳಗಿನ ಹೊಸ ಗುಟುಕು.

ಸಂಜೆಕರಗುವ ಹೊತ್ತಿಗೆ ಈ ಕೌದಿಗಿತ್ತಿಯರೆಂಬ ಬಾರ್ಬಿಯರು ಚಿಮಣಿ ಬೆಳಕಿನೆದುರು ಮತ್ತವೇ ಕಾಲುಗಳ ಮೇಲೆ ಬಣ್ಣಬಣ್ಣದ ಕೌದಿ ಹರವಿಕೊಂಡು, ಕುಳಿತವರು ಎದ್ದೇ ಇಲ್ಲವೇನೋ ಎಂಬಂತೆ ದಾಟುಹೊಲಿಗೆ ಹಾಕುತ್ತಲೇ ಕುಳಿತಿರುತ್ತಿದ್ದರು. ಆ ಗವ್ವೆನ್ನುವ ಕತ್ತಲೆಯೆಂಬ ದೊಡ್ಡ ರಾಕ್ಷಸ, ಪಗಡೆಯಾಡುತ್ತ ಕುಳಿತವರನ್ನು ಪಲ್ಲಂಗದ ಸಮೇತ ನುಂಗಿದ್ದಾನೆ. ಅವರನ್ನು ಹುಡುಕಲೆಂದು ಕತ್ತಲೆಯ ಬಾಯಿಗೆ ಬ್ಯಾಟರಿ ಬಿಟ್ಟರೆ, ಅವನ ದೊಡ್ಡ ಹೊಟ್ಟೆಯಾಳದ ಮೂಲೆಯಲ್ಲಿ ಫೋಟೋ ಆಲ್ಬಮ್ ನಿಂದ ಬಣ್ಣದ ಫೋಟೋವೊಂದು ಕಳಚಿಕೊಂಡು ಬಿದ್ದಿದೆಯೇನೋ ಎಂಬಂತೆ ಆ ಜಗುಲಿ ದೃಶ್ಯಗಳು. ಮಳೆಯೋ ಚಳಿಯೋ ಬಿಸಿಲೋ, ಯಾವ ಕಾಲದಲ್ಲೂ ಹಳೆಯ ಬಟ್ಟೆಗಳನ್ನು ಊರವರ ಮನೆಮನೆಗಳಿಂದ ಸಂಗ್ರಹಿಸಿ, ಶುಚಿಗೊಳಿಸಿ ಒತ್ತಾಗಿ ದಾಟುಹೊಲಿಗೆ ಹಾಕಿ ಹೊಚ್ಚ ಹೊಸ ಕೌದಿ ತಯಾರಿಸುವುದರಲ್ಲೇ ಜೀವಸವೆಸುವ ಗೊಂದಲಿಗರ ಹೆಣ್ಣುಮಕ್ಕಳಿಗೆ ಅದೇ ಬದುಕೂ ಮತ್ತು ಭರವಸೆಯೂ. ಹೊಸ ಕೌದಿಯೊಳಗೆ ತಮ್ಮ ಹಳೆ ಬಟ್ಟೆಗಳು ಕಂಡುಕೊಂಡ ಹೊಸತನದ ಅಚ್ಚರಿಗೆ ಅಚ್ಚೇರು ಜೋಳವನ್ನೋ ಗೋಧಿಯನ್ನೋ ಕೌದಿಗಿತ್ತಿಯ ಬುಟ್ಟಿಗೆ ಹೆಚ್ಚೇ ಸುರಿದುಬಿಟ್ಟರೆ ವರ್ಷಗಟ್ಟಲೆ ರಾತ್ರಿಗಳನ್ನು ಬೆಚ್ಚಗೆ ನೆಮ್ಮದಿಯಿಂದ ಕಳೆದಂತೆ. 
  
ಇದೆಲ್ಲ ನೆನಪಿಸಿದ್ದು ಫೇಸ್‍ಬುಕ್ ಸ್ನೇಹಿತೆ ಅನು ಪಾವಂಜೆ. ಮಂಗಳೂರು ಮೂಲದ ಅನು ಚಿತ್ರಕಲಾವಿದೆ ಮತ್ತು ಕಡುವ್ಯಾಮೋಹಿ. ಅವರು ಈಗಿರುವುದು ಮುಂಬೈನಲ್ಲಿ. ಅವರ ಸಂಗಾತಿ ಚಿತ್ರಮಿತ್ರ, ಕೌದಿ ವಿನ್ಯಾಸದಲ್ಲಿರುವ ಬಣ್ಣಬಣ್ಣದ ಪ್ಯಾಚ್‍ ಪ್ಯಾಂಟ್ ಒಂದನ್ನು ಧರಿಸಿದ ಭಾವಚಿತ್ರಗಳನ್ನು ಕಳೆದವಾರ ಅನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಸ್ವತಃ ತಾನೇ ಆ ಕೌದಿಪ್ಯಾಂಟ್ ಹೊಲೆದಿದ್ದು ಇದರಲ್ಲಿ ತನ್ನ ಸಂಗಾತಿಯ ಅಮ್ಮನ ಸೀರೆ ತುಂಡುಗಳು, ಮತ್ತು ತನ್ನ ಬಟ್ಟೆಗಳ ತುಂಡುಗಳೆಲ್ಲ ಅಡಕವಾಗಿವೆ ಎಂಬ ಟಿಪ್ಪಣಿಯೂ ಅಲ್ಲಿತ್ತು. ಜೊತೆಗೆ ವಾರಗಟ್ಟಲೆ ಕುಳಿತು ಕೌದಿ ವಿನ್ಯಾಸ ಮಾಡಿದ್ದು ತನ್ನನ್ನು ನಿರ್ವಿಷೀಕರಣಗೊಳಿಸಿದೆ ಎಂದು ಹೇಳಿದ್ದು ಗಮನ ಸೆಳೆಯಿತು.   

ಈ ರೀತಿ ಬಟ್ಟೆಯ ಚೂರುಗಳನ್ನೇ ಸೇರಿಸಿ ಹೊಲೆಯುವ ಹೊಸ ಕೌದಿ ಹಳತೂ ಹೌದು ಹೊಸತೂ ಹೌದು! ಇದರಲ್ಲಿ ನಿಡುಗಾಲದ ನೆನಪುಗಳ ಹಳತು ಸೇರಿಕೊಂಡೇ ಒಂದು ಹೊಸತು ಸಜ್ಜುಗೊಂಡಿದೆಯಲ್ಲವೆ? ಹಕ್ಕಿಪುಕ್ಕಗಳ ಹಕ್ಕಿಗೂಡು ಕೂಡ ನಿರ್ಮಾಣಗೊಳ್ಳುವುದು ಹೀಗೆಯೇ ತಾನೆ? ಸದಾಕಾಲ ಹಾರುತ್ತಲೇ ಇರಬೇಕು, ಕಳಚಿ ನೆಲಕ್ಕುದುರಿದ ಒಂದು ಗರಿ ಕೂಡ ನೆಲಕ್ಕಂಟಿಕೊಳ್ಳಲು ಇಚ್ಛಿಸುವುದಿಲ್ಲ. ಅವು ಹಾರಲೆಂದು ಹುಟ್ಟಿದಾ ಹಕ್ಕಿ ಮೈಯ ಗರಿಗಳು ಎಂದು ಎಚ್ಚರಿಸುವ ಬೇಂದ್ರೆಯವರಲ್ಲಿಯೂ ಇರುವುದು ಇದೇ ಬಗೆಯ ಜೀವಸೆಲೆ ಅಲ್ಲವೆ? ಬಟ್ಟೆ ಚೂರುಗಳನ್ನು ಉಳಿಸಿಕೊಳ್ಳುವಲ್ಲಿ, ಅವುಗಳಿಂದಲೇ ಹೊಸದೇನನ್ನೋ ರಚಿಸಿ ಇರಿಸಿಕೊಳ್ಳುವುದರಲ್ಲಿ ಇರುವ ಅದೇ ಪ್ರೀತಿ ಮತ್ತು ಬೆಚ್ಚನೆಯ ಭಾವ ಇಲ್ಲಿಯೂ ಕಾಣುತ್ತದೆ.

ಹೊರಗಿನ ಕಲಕಿಗೋ, ಒಳಗಿನ ಏರಳಿತಕ್ಕೋ ನಮ್ಮೊಳಗು ಕಲಕಿ ಮನಸ್ಸು ಆಗಾಗ ಮುಸುಕು ಹಾಕಿಕೊಳ್ಳುತ್ತಿರುತ್ತದೆ. ಮತ್ತೆ ನಮಗೆ ನಾವು ತಿಳಿಯಾಗಬೇಕೆಂದರೆ, ನಮ್ಮೆದೆಯ ಪದರಗಳನ್ನು ನಿರ್ವಿಷೀಕರಣ ಪ್ರಕ್ರಿಯೆಗೆ ತೊಡಗಿಸಿಕೊಳ್ಳಲೇಬೇಕಾಗುತ್ತದೆ. ಈ ಹಂತದಲ್ಲೇ ನಾವು ನಮ್ಮೊಳಗಿನ ಶಕ್ತಿಯನ್ನು ಸಾಧ್ಯತೆಯನ್ನು ಮತ್ತು ಸಾಮರ್ಥ್ಯವನ್ನು ಕಂಡುಕೊಳ್ಳುವುದು. ಆ ಕಂಡುಕೊಳ್ಳುವಿಕೆಗೆ ಬೇಕಿರುವುದೇ ಒಂದು ನಾಲೆ. ನಾಲೆ ಎಂದರಿಲ್ಲಿ ನಮ್ಮೊಳಗಿನ ಅಭಿವ್ಯಕ್ತಿ. ಅದು ಕಲೆಯೋ ಕೌಶಲವೋ ಓದೋ, ಬರಹವೋ ತಿರುಗಾಟವೋ ಒಟ್ಟಿನಲ್ಲಿ ಜಾತ್ರೆಯೊಳಗಿದ್ದೂ ಏಕಾಂತದೊಳಗಿರುವ ಒಂದು ಆವರಿಕೆ. ಹಳೆಯ ಬೇರುಗಳ ನೆರಳು, ಹೊಸ ಚಿಗುರುಗಳ ಸೃಷ್ಟಿಗೆ ಪುಷ್ಠಿ ನೀಡುತ್ತಾ ಹೋಗುವ ಹಾದಿಯಲ್ಲಿ ಮನಸ್ಸು ತನ್ನೊಳಗೇ ತಾ ನಿಂತು ಸ್ಥಿಮಿತಕ್ಕೆ ಬರತೊಡಗುವುದು. 

ಕೌದಿಯಂತೆಯೇ ನಮ್ಮ ಬದುಕು ಕೂಡ. ಹಳೆಯದನ್ನು ಹಳೆಯದೆಂದು ಹಳಿಯದೆ, ದೂರು ಹೇಳಿ ದೂರಿಡುವ ಮುನ್ನ ಅದಕ್ಕೊಂದು ಪರ್ಯಾಯವನ್ನು ಕಟ್ಟಿಕೊಡುವ ರಚನಾತ್ಮಕ, ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಶಕ್ತಿ ನಮ್ಮಲ್ಲಿದ್ದರೆ ಮಾತ್ರ ನಮಗೆ ಇಷ್ಟವಾಗದ್ದನ್ನು ವಿರೋಧಿಸುವ ಹಕ್ಕು ನಮಗಿದೆ ಎಂದರ್ಥ. ಯಾಕೆಂದರೆ ಇಲ್ಲಿ ಯಾವುದೂ ಇದ್ದಕ್ಕಿದ್ದಂತೆ ಅಳಿಯುವುದಿಲ್ಲ ಇದ್ದಕ್ಕಿದ್ದಂತೆ ಉದ್ಭವಿಸುವುದೂ ಇಲ್ಲ. ಎಲ್ಲದಕ್ಕೂ ಪುರಾವೆಗಳಿವೆ. ನಿರಂತರ ಹರಿವಿದೆ. ಆ ಹರಿವಿನೊಳಗೆ ಅನ್ವೇಷಣೆಯ ಒಳಗಣ್ಣುಗಳಿವೆ. ಒಳಗಣ್ಣುಗಳೊಳಗೆ ಶಾಪಗ್ರಸ್ಥ ಕಲ್ಲುಗಳು ಮಕ್ಕಳಾಟದ ಗೋಲಿಗಳಂತಾಗಿ ಕಣ್ಣೊಳಗೇ ಅಂಟಿಕುಳಿತಿವೆ. ಅವು ಮರುಚೈತನ್ಯ ಪಡೆಯಬೇಕೆಂದರೆ ಹೊಸ ಹೊಳಹು ಬೇಕು ಹೊಸ ಹರಿವು ಬೇಕು ಹೊಸ ಸ್ಪರ್ಷ ಬೇಕು ಅಂದಾಗ ಮಾತ್ರ ಹೊಸ ಪ್ರೇರಕ ಶಕ್ತಿಯೊಂದು ತಾನೇತಾನಾಗಿ ದಕ್ಕುತ್ತದೆ.

ಕಟ್ಟಿದ ಕೊರಳ ಕುಣಿಕೆ ಬಿಡಿಸಿಕೊಂಡು ಓಡುವ ಕರುವಿನ ಅಡ್ಡಾದಿಡ್ಡಿ ಓಟದೊಳಗೊಂದು ಛಂದ ಲಯ, ಸಹಜ ತೊಡಕು, ತಳ್ಳಿದರೂ ತಾನೇ ಮುಗುಚಿದೆ ಎಂದುಕೊಳ್ಳುವ ಮುಗ್ಧತೆ, ಮತ್ತೆದ್ದು ಓಡುವ ಉತ್ಸಾಹದ ಒರತೆಯನ್ನು ಅದರೊಳಗೊಂದು ವೈಶಿಷ್ಟ್ಯವನ್ನು ಗುರುತಿಸುವ ಸ್ಪಂದಿಸುವ ಗುಣ ನಮ್ಮದಾಗಿದ್ದಲ್ಲಿ ಮಾತ್ರ ಪ್ರತೀ ಬೆಳಗೂ ಹೊಸ ಸ್ಪರ್ಷವೇ. 
  
ಈ ಹೊಸ ವರ್ಷದ ಮೊದಲ ಬೆಳಗಿನ ಮೋಡಗಳ ಕೆಳಗೆ ಹುರ್ರೆಂದ ತಲೆಯೊಂದಿಗೆ ಬಾಲ್ಕನಿಗೆ ಬರುವುದೇ ತಡ, ‘ಅಕ್ಕೋ ಯಾಪ್ಪಿ ನೂ ಯೇರ್’ ಎಂಬ ಕೀರಲು ದನಿಯೊಂದು ತೂರಿಬಂತು. ಕೆಳಗೆ ಎಂದಿನಂತೆ ಕಸದ ಗಾಡಿಯಿತ್ತು. ಕಮಲಮ್ಮ ಮಾತ್ರ ಕಾಣಲಿಲ್ಲ. ಆದರೆ ಗಾಡಿಯ ಪಕ್ಕದಲ್ಲೇ ಎದುರುಮನೆಯವರೊಂದಿಗೆ ಮಾತಲ್ಲಿ ಮುಳುಗಿದ ಚೆಂದಾಗಿ ಅಲಂಕರಿಸಿಕೊಂಡ ಹೆಣ್ಣುಮಗಳೊಬ್ಬಳು ಕಂಡಳು. ಗಾಡಿಯಲ್ಲಿ ಕಸದ ಬುಟ್ಟಿಗಳು ಹೊಸ ವರ್ಷದ ಸಂಭ್ರಮಾಚರಣೆಯ ಕುರುಹುಗಳನ್ನು ತನ್ನೊಡಲಲ್ಲಿಟ್ಟುಕೊಂಡು ತುಂಬಿ ತುಳುಕಿಸಿಕೊಂಡಿದ್ದವು. ಗಾಡಿಬಿಟ್ಟು ಎಲ್ಲಿ ಹೋದಳು ಈ ಕಮಲಮ್ಮ? ನನಗ್ಯಾರು ಹೊಸ ವರ್ಷದ ಶುಭಾಶಯ ಕೋರಿದರು? ಎಲ್ಲೋ ಕೇಳಿದಂತಿತ್ತಲ್ಲ ಈ ಧ್ವನಿ ಎಂದುಕೊಳ್ಳುತ್ತ ಕೆಳಗೆ ಬಿದ್ದ ಪೇಪರ್ ಎತ್ತಿಕೊಳ್ಳುವಾಗ ಅಕ್ಕೋವ್… ಎಂದು ಮತ್ತದೇ ಧ್ವನಿ ತೂರಿಬಂತು. 

ನೋಡಿದರೆ ಕಮಲಮ್ಮ! ಜಗದ ಕೊಳೆಯನ್ನೆಲ್ಲ ಶುಚಿಗೊಳಿಸಲು ಪಣ ತೊಟ್ಟಂತೆ ದಿನವೂ ತನ್ನ ಕೂದಲನ್ನೆಲ್ಲ ಮೇಲಕ್ಕೆತ್ತಿ ಕಟ್ಟುತ್ತಿದ್ದ ದಪ್ಪ ತುರುಬಿನ ಜಾಗದಿಂದ ಇಂದು ಉದ್ದನೆಯ ಜಡೆ ಜೋತುಬಿದ್ದಿತ್ತು. ಅದಕ್ಕೊಂದು ಮೊಳ ದುಂಡುಮಲ್ಲಿಗೆಯೂ ಸುತ್ತುಕೊಂಡಿತ್ತು. ಕೈತುಂಬ ಹೊಸ ಚಿಕ್ಕಿಬಳೆ, ಹಣೆಯಲ್ಲೆಂತದೋ ಮಿಣುಕುಬೊಟ್ಟು, ತುಸು ಜಾಸ್ತಿಯೇ ಮೆತ್ತಿದ ಪೌಡರ್, ಕೊರಳಲ್ಲಿ ಬಂಗಾರ ಗಿಲೀಟಿನ ಸರ. ದಿನದ ಸಮವಸ್ತ್ರ ಮಾಯವಾಗಿ ಜರಿಯಂಚಿನ ಹೊಸ ಸೀರೆ ರವಿಕೆಯಲ್ಲಿ ಆಕೆ ಹಬ್ಬದ ಸಡಗರದಲ್ಲಿ ಕಂಗೊಳಿಸುತ್ತಿದ್ದಳು. ನಿರಿಗೆಗಳು ಸೊಂಟ ಸಿಕ್ಕಿಸಿಕೊಂಡೇ ಇದ್ದವು ಎಂದರೆ ಕಾಯಕವ ಆಕೆ ಬದಿಗಿರಿಸಿಲ್ಲ.

ನಾಳೆ ಯುಗಾದಿಗೂ ಆಕೆ ಹೀಗೇ ಸಿಂಗರಿಸಿಕೊಂಡು ಖುಷಿಪಡುತ್ತಾಳೆ. ಮನೆಮನೆಗೂ ತೆರಳಿ ಕುಶಾಲಿ ವಸೂಲಿ ಮಾಡುತ್ತಾಳೆ. ತನ್ನ ಬೆನ್ನಿಗಂಟಿಕೊಂಡವರ ಆಸೆಗಳ ಜೊತೆಗೆ ತನ್ನ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳುವುದನ್ನೂ ಆಕೆ ಮರೆಯುವುದಿಲ್ಲ.

ವಿಧಾನಸೌಧದಲ್ಲಿ, ಪತ್ರಿಕೆಗಳಲ್ಲಿ, ಟಿವಿಗಳಲ್ಲಿ, ಮಠ ಮಾನ್ಯಗಳಲ್ಲಿ ಹಳಿಬಿಟ್ಟು ಓಡುವ ಯಾವ ಹೇಳಿಕೆಗಳೂ ಆಕೆಯನ್ನು ಪ್ರಚೋದಿಸುವುದೇ ಇಲ್ಲ. ಅವಳಿಗೆ ಗೊತ್ತಿರುವುದು ಒಂದೇ. ಎಡಬದಿಯ ಕಸವನ್ನು ಎಡಕ್ಕೇ ಗುಡಿಸಿ ಗುಂಪೆ ಹಾಕುತ್ತ, ಬಲಬದಿಯ ಕಸವನ್ನು ಬಲಕ್ಕೇ ಗುಂಪು ಹಾಕುತ್ತ ಮಧ್ಯದ ದಾರಿಯನ್ನು ಚೊಕ್ಕಗೊಳಿಸಿಕೊಳ್ಳುತ್ತ ತನ್ನ ನಿತ್ಯದ ದಾರಿಯನ್ನೂ ಸುಗಮಗೊಳಿಸಿಕೊಳ್ಳುವ ಈಕೆ ಕೂಡ ಒಂದು ಅರ್ಥದಲ್ಲಿ ಹೊಸತನವನ್ನು ಸಂಭ್ರಮಿಸುವಾಕೆ. ಬಾಕಿ ಉಳಿಸಿಕೊಳ್ಳದ ಅಂದಿನಂದಿಗೇ ಚುಕ್ತಾ ಮಾಡಿ ಚುಕ್ಕೆ ಕಾಣುವ ಮೊದಲೇ ಮಲಗಿ, ಸೂರ್ಯ ಇಣುಕುವ ಮೊದಲೇ ಎದ್ದು ಮೈಮುರಿದು ದುಡಿದು, ಮನೋವ್ಯಾಪಾರಗಳ ಮೂಲಾಕ್ಷರಗಳು ಗೊತ್ತಿಲ್ಲದೇ ಖಂಡತುಂಡವಾಗಿ ಬದುಕುವಾಕೆ.

ಇವಳ ಉತ್ಸಾಹ, ಹೊಸತರ ಆಗಮನಕ್ಕೆ ಸಂಭ್ರಮಗೊಳ್ಳುವ ಮುಗ್ಧ ಮನಸ್ಸು ಕಂಡಾಗ ನನ್ನ ಸಂಕೀರ್ಣ ಮನಸ್ಸು ಏನೇನೆಲ್ಲ ಧೇನಿಸುತ್ತದೆ. ದೆಹಲಿಯ ನಿರ್ಭಯಾಳಿಂದ ಹಿಡಿದು ವಿಜಯಪುರದ ದಾನಮ್ಮನ ಸೋಲಿನ ತನಕ, ಕೊನೆತನಕ ಈ ಜಗತ್ತಿಗೆ ಹಿಂದಿರುಗದೇ ಮಲಗಿದಲ್ಲೇ ಬದುಕು ಸವೆಸಿದ ಅರುಣಾಳಿಂದ ಹಿಡಿದು ಹತ್ಯೆಯಾದ ಗೌರಿಯವರೆಗೆ, ಉಕ್ಕಿನ ಮಹಿಳೆ ಎನಿಸಿಕೊಂಡ ಇಂದಿರಾ ಪ್ರಿಯದರ್ಶಿನಿಯಿಂದ ಹಿಡಿದು ಇನ್ನೊಬ್ಬ ಉಕ್ಕಿನ ಮಹಿಳೆ ಮಣಿಪುರದ ಇರೋಮ್ ಶರ್ಮಿಳಾಳ ಸೋಲು-ಗೆಲುವಿನವರೆಗೆ ಮನಸ್ಸು ಉಯ್ಯಾಲೆಯಾಡುತ್ತದೆ.

ವಿಭಾ ಬರೆದ ಕವನವನ್ನು ಗುನುಗುತ್ತ ಕಿಟಕಿಗೆ ಆತು ನಿಲ್ಲುತ್ತೇನೆ.

ನಾನೂ ಬದುಕುತ್ತಿದ್ದೇನೆ
ಶತಮಾನಗಳಿಂದ,
ಇದೇ ಅಡುಗೆ ಮನೆಯಲ್ಲಿ
ಇದೇ ಒಲೆಯ ಸಂದಿಯಲ್ಲಿ.

ಹೊರಗೆ ನಿತ್ಯ ಸೂರ್ಯ ಹುಟ್ಟುತ್ತಾನಂತೆ!
ನಾನು ನೋಡಿಯೇ ಇಲ್ಲ.
ನನಗೆಲ್ಲಿ ಅವನ ದೃಷ್ಟಿ ತಾಕೀತೆಂದು,
ನನ್ನಜ್ಜಿ ಹೊರಬಿಟ್ಟೇ ಇಲ್ಲ.

ಹೊರಗೆ ತುಂಬ ಬೆಳಕಿದೆಯಂತೆ!
ನಾನು ಕಂಡದ್ದೇ ಇಲ್ಲ.
ನನ್ನ ಬಣ್ಣವೆಲ್ಲಿ ಕಂದೀತೆಂದು
ನನ್ನವ್ವ ಹೊರಬಿಟ್ಟೇ ಇಲ್ಲ.

ಹೊರಗೆ ಸುಂದರ ಹಸುರಿದೆಯಂತೆ!
ನಾನು ಅನುಭವಿಸಿಯೇ ಇಲ್ಲ.
ನಾನೆಲ್ಲಿ ಅದರೊಳಗೆ
ಕಳೆದು ಹೋದೇನೆಂದು
ನನ್ನಪ್ಪ ಹೊರಬಿಟ್ಟೇ ಇಲ್ಲ.

ಆದರೀಗೀಗ,
ಸೂರ್ಯ ಕಿಂಡಿಯಿಂದೊಳಬಂದು
ದಿಟ್ಟಿಸುತ್ತಿದ್ದಾನೆ ನನ್ನ,
ಬೆಳಕು ಎಲ್ಲಿಂದಲೋ ತೂರಿ
ಬಂದು ಬದಲಾಯಿಸುತಿದೆ
ನನ್ನ ಬಣ್ಣ.

ಹಸಿದು ಕೈಚಾಚಿ ಕರೆಯುತಿದೆ
ಕಿಟಕಿಯಾಚೆಯಿಂದ ನನ್ನ.

ನಿಜ. ಈಗೀಗ ಬದಲಾವಣೆ ಎಲ್ಲೆಲ್ಲಿಯೂ. ಆದರೆ ಕಮಲಮ್ಮನ ಹಾಗೆ ಬದಲಾವಣೆಗಳಿಗೆ ಒಡ್ಡಿಕೊಂಡೂ ಆ ಮುಗ್ಧತೆ, ಸಂಭ್ರಮ, ಉತ್ಸಾಹಗಳನ್ನು ಉಳಿಸಿಕೊಳ್ಳುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?

ನಮಗ್ಯಾಕೆ ಹೀಗಿರಲು ಸಾಧ್ಯವಾಗುತ್ತಿಲ್ಲ ಎಂದು ಯೋಚಿಸುತ್ತಲೇ ಮತ್ತೊಂದು ವರುಷವು ಗದ್ದಕ್ಕೆ ಎರಡೂ ಕೈಯಾಣಿಸಿಕೊಂಡು ಬಿಡುಗಣ್ಣು ಬಿಟ್ಟು ಕುಳಿತಿದೆ. ನಿನ್ನೆಯ ಫೈರ್ ಕ್ಯಾಂಪಿನೊಳಗೆ ನೆನಪುಗಳನ್ನು ಕನವರಿಕೆಗಳನ್ನು ಅಸಹಾಯಕತೆಯನ್ನೂ ಸುಟ್ಟು ಮೈಮನಸ್ಸು ಕಾಯಿಸಿಕೊಂಡು ಹತ್ತಿಯಂತೆ ಹಗೂರಹಗೂರವಾಗಿ ತೇಲಿ ಕಣ್ಬಿಟ್ಟರೆ ಮತ್ತದೇ ಆಕಾಶ ಮತ್ತದೇ ಸೂರ್ಯ. ಮತ್ತೆ ಕಾಡುತ್ತಾರೆ ಕವನದೊಳಗೆ ನನ್ನೂರಿನ ಕೌದಿಗಿತ್ತಿಯರು.
---

ಬೀಳಲೋ ಬೇಡವೋ ಎನ್ನುವ ಕತ್ತಲಿನಲ್ಲೇ 
ಆಕೆ ಕಂಡಿದ್ದು. 
ಅದೆಷ್ಟು ಋತುಮಾನಗಳು ಸರಿದವೊ
ಹಾಗೇ ಮಲಗಿದ್ದಾಳೆ ಪಸೆಹಿಡಿದ ಗೋಡೆಗೆ ಕೆನ್ನೆತಾಕಿಸಿ, 
ಹಿತವೆನ್ನಿಸಿರಬೇಕದು
-ಇಷ್ಟುದಿನದ ಕುಣಿತಕ್ಕೆ ಮಣಿತಕ್ಕೆ ದಣಿತಕ್ಕೆ.

ಹೊರಳುಗಣ್ಣಿಗೆ ಮಂಜಪರದೆಯಂತೆ  
ಆ ತೆಳುಬಿಳಿಯ ಸಣ್ಣಪೈಪು
ಆಕೆಯ ಉಸಿರಗುಟ್ಟಿನ ಕಾಪಿರೈಟು
ಆ ಮೂಲೆಯ ಜೇಡಪ್ಪ ಇಣುಕಿದಾಗೆಲ್ಲ 
ಗಹಗಹಿಸಿ ನಗುತ್ತಾಳೆ
-ಅದು ಅವನಿಗಷ್ಟೇ ಕೇಳುತ್ತದೆ.

ಆಗಾಗ ಬರುವ ಜೋಡುಟಾರ್ಚಿನ 
ಗೂರ್ಖಾನಂಥ ಜಿರಳೆಗೆ
ಆಕೆಯ ಕುದುರೆಜವೆಯಂಥ ಕೂದಲು ದಿಕ್ಕುತಪ್ಪಿಸಿಬಿಡುತ್ತವೆ
-ಬಂದ ದಾರಿಗೆ ಸುಂಕವೇ ಇಲ್ಲಿ.

ಕಾಲ ಕೆಳಗೆ ಕಪ್ಪು ಸಮುದ್ರ 
ಕಣ್ಣ ಮೇಲೆ ಕಾಳಆಗಸ
ಕಾಡುವ ತೆರೆಗಳ, ತೊಡಕುವ ಮೋಡಗಳ
ಹಿಡಿದು ಅಂಚು-ಹಾಕಿ ಹೊಲಿಗೆ 
ಬೆಳಕದುಪ್ಪಟಿಗೆಂದು ತಂದ ಸೂಜಿ 
ಸದ್ದಿಲ್ಲದೇ ಉರುಳಿದ್ದು ಇಲ್ಲೇ
-ಕಾಣದೇ ಚುಚ್ಚುತ್ತದೆ.

ಹುಚ್ಚು ಹೆಚ್ಚೇರಿಸಿಕೊಂಡ ಗಾಳಿಪಟ
ದೂಳಿಪಟವಾಗಿ ಅವಳ ಪದತಲದಲ್ಲಿ,
ತುಂಡರಿಸಿದ ಬಾಲಂಗೋಚಿಯ ಚುಂಗು
ಅವಳ ಪಾದಸೀಳಿನ ಸಂದಿಗಾತು ಅಂಗಲಾಚುತ್ತಿದೆ
-ಹಾರಿದ್ದೆಲ್ಲವೂ ಮೀರಿದ್ದೇ ಅಂತಲ್ಲ 
ಅದು ಮೇರು ಎಂದು.

;ಬೆಳೆದ ಕೈಗಳಿಗೆಂದಾದರೂ ಎಟುಕಿಯಾಳೆ ಬಾರ್ಬಿ?

-ಶ್ರೀದೇವಿ ಕಳಸದ.

(1-1-2018 ರ ರಾತ್ರಿ 7.45 ಕ್ಕೆ ಬೆಂಗಳೂರು ಆಕಾಶವಾಣಿಯಿಂದ ಪ್ರಸಾರಗೊಂಡಿದ್ದು.)