Monday, January 1, 2018

ಹಾರಿದ್ದೆಲ್ಲವೂ ಮೀರಿದ್ದೇ ಅಂತಲ್ಲ ಅದು ಮೇರು


ಊದಿ ತೂರಿ ಹಾರಿಸು
ಹಾರಿದಷ್ಟು ಹಾರಲಿ
ಹಾರಲೆಂದು ಹುಟ್ಟಿದಾ
ಹಕ್ಕಿ ಮೈಯ ಗರಿಗಳು

ಹಾರು; ಹಕ್ಕಿಗರಿಗಳಿಗೆ ಗೊತ್ತಿರುವ ಭಾಷೆ ಇದೊಂದೇ, ಅದೇ ಮತ್ತದರ ಆತ್ಮ. ಹಾಗಾಗಿ ನೆಲಕ್ಕಂಟಿಕೊಂಡಿರುವುದು ಅವುಗಳ ಜಾಯಮಾನವೇ ಅಲ್ಲ. ಸಾಧ್ಯವಿದ್ದಷ್ಟು ಅವು ರೆಕ್ಕೆಬಿಚ್ಚಿ ಸುಯ್‍ಗುಡುವ ಗಾಳಿಯೊಳಗೆ ಮೇಲಕ್ಕೆ, ಮೇಲಕ್ಕೆ ಹಾರುತ್ತಿರಬೇಕು, ತೇಲುತ್ತಿರಬೇಕು. ಈ ಆಶಯ ನಮ್ಮ ಬದುಕಿಗೂ ಸಂಬಂಧಿಸಿದ್ದು. ಮುಂದುವರಿಯುತ್ತಲೇ ಸಾಗಬೇಕಾದ ನಮ್ಮ ಪರಂಪರೆಗೆ ಸಂಬಂಧಿಸಿದ್ದು ಮತ್ತು ಸದಾ ಕಾಲ ಹಳತು ಎನ್ನುವುದು ಹೊಸತಿನೊಂದಿಗೆ ಹೆಣಿಗೆ ಹಾಕಿಕೊಳ್ಳುತ್ತಲೇ ಬದುಕಿನ ಹಾರಾಟವು ಮುಂದುವರಿಯುತ್ತಲೇ ಇರಬೇಕು ಎನ್ನುವ ಪ್ರತಿಮೆಯನ್ನು ಬೇಂದ್ರೆಯವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. 

ಎಲ್ಲೆ ಕಟ್ಟು ಇಲ್ಲದಾ
ಬಾನಬಟ್ಟೆಯಲಿದೊ
ಎಂದೆಂದು ಹಾರುವೀ
ಹಕ್ಕಿಗಾಳಿ ಸಾಗಿದೆ 

ನಿಜ ಇದುನಮ್ಮ ಬದುಕನ್ನೇ ಧ್ವನಿಸುವಂತಿದೆ. ಈ ಹಕ್ಕಿಗರಿಗಳನ್ನು ನೆನೆಯುವಾಗಲೆಲ್ಲ ನನಗೆ ಇನ್ನೇನೋ ನೆನಪಾಗುತ್ತದೆ.

ಒಂದಕ್ಕೊಂದು ಅಂಟಿಕೊಂಡಿದ್ದ ಒಂದೇ ಬಗೆಯ ಆ ನಾಲ್ಕೈದು ಮಣ್ಣಿನ ಮನೆಗಳು. ಆ ಮನೆಗಳ ಜಗುಲಿ ಮೇಲೆ ಜಗದ ಎಲ್ಲಾ ಬಣ್ಣಗಳನ್ನೂ ಹೆಕ್ಕಿ, ನಿತ್ಯವೂ ತಮ್ಮೊಡಲಿಗೆ ಸುರುವಿಕೊಂಡೇ ಕುಳಿತುಕೊಳ್ಳುವ ದೊಡ್ಡ ಫ್ರಾಕು ತೊಟ್ಟ ಬಾರ್ಬಿಗಳಂತೆ ಕಾಣುವ ಆ ಹೆಣ್ಣುಮಕ್ಕಳು. ಮನೆಯ ಮುಂದಿನ ಅಂಗಳದ ಒಂಟಿಕಂಬಕ್ಕೂ ಮತ್ತು ಒಂಟಿಮರಕ್ಕೂ ನಡುವೆ ಬಿಗಿದ ಹಗ್ಗ. ಆ ಹಗ್ಗದ ಮೇಲೆ ಒಣಹಾಕಿಸಿಕೊಂಡ ಬಣ್ಣಬಣ್ಣದ ಬಟ್ಟೆತುಂಡುಗಳು. ಅಂಗಳದಲ್ಲಿ ಹರವಿದ ಕಾಳುಕಡಿಗಳು, ಅದರ ಸುತ್ತಲೂ ಓಡಾಡುವ ಕೋಳಿಮರಿಗಳು, ಅಂಗಿಯಿದ್ದರೆ ಚಡ್ಡಿ ಇಲ್ಲ, ಚಡ್ಡಿಯಿದ್ದರೆ ಅಂಗಿ ಇಲ್ಲ ಎಂದು ಮಣ್ಣಿನೊಳಗೆ ಮುಳುಗೇಳುತ್ತ ಆಟವಾಡಿಕೊಳ್ಳುವ ಪುಟ್ಟಮಕ್ಕಳು… ದಿನಾ ಶಾಲೆಗೆಂದು ನನ್ನ ಬಾಲ್ಯದೂರು ದೊಡ್ಡವಾಡದಿಂದ ಧಾರವಾಡಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಈ ನಿತ್ಯದೃಶ್ಯವನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದೆ.

ಬೆಳ್ಳಂಬೆಳಗ್ಗೆದ್ದು ಗಡಿಬಿಡಿಯಲ್ಲಿ ತಯಾರಾಗಿ, ಒಂದು ಜುಟ್ಟು ಮೇಲಾಯಿತು ಇನ್ನೊಂದು ಕೆಳಗಾಯಿತು ಎಂದು ಅಮ್ಮನೊಂದಿಗೆ ತಕರಾರು ತೆಗೆದು, ತಿಂಡಿ ತಿನ್ನದೇ ಓಡಿ ಬಸ್ಸು ಹತ್ತುವ ತನಕವೂ ಮನಸ್ಸಿನೊಳಗೆಂಥದೋ ಕಿರಿಕಿರಿ. ಬಸ್ಸು ಹತ್ತಿದ ಮೇಲೆ ನೂಕುನುಗ್ಗಲಿನಲ್ಲಿ ಬೆನ್ನಮೇಲೆ ಪಾಟಿಚೀಲವೆಂಬ ಬ್ರಹ್ಮಾಂಡ ವಜನು ಹೊತ್ತು ಕೆಳಗೆ ಕಾಲು ತುಳಿಸಿಕೊಳ್ಳುತ್ತ ಮೇಲೆ ಮೈಕೈ ಮೂತಿ ತಿವಿಸಿಕೊಳ್ಳುತ್ತ ಎಲ್ಲೋ ಒಂದು ಕಡೆ ಜಾಗ ಮಾಡಿಕೊಂಡು ನಿಲ್ಲುವುದೊಂದು ಕಿರಿಕಿರಿಯೇ… ಆದರೂ ಊರು ಮುಗಿದು ಹೊಲಸಾಲುಗಳು ಶುರುವಾಗುತ್ತವೆ ಎನ್ನುವ ಮೊದಲೇ ಜನಗಳ ಮಧ್ಯೆ ಸಿಕ್ಕಿಹಾಕಿಕೊಂಡ ನನ್ನದೇ ಮುಖವನ್ನು ಬಿಡಿಸಿಕೊಂಡು ಬಲಗಡೆಯ ಕಿಟಕಿಯಾಚೆಗೆ ಕಣ್ಣತೂರಿಬಿಟ್ಟರೆ ಷೋರೀಲಿನಂತೆ ಸಾಗಿಬಿಡುವ ಕೆಲ ಸೆಕೆಂಡುಗಳ ಆ ಬಣ್ಣಗಳ ಲೋಕ ಆ ದಿನದ ಆ ಬೆಳಗಿನ ಹೊಸ ಗುಟುಕು.

ಸಂಜೆಕರಗುವ ಹೊತ್ತಿಗೆ ಈ ಕೌದಿಗಿತ್ತಿಯರೆಂಬ ಬಾರ್ಬಿಯರು ಚಿಮಣಿ ಬೆಳಕಿನೆದುರು ಮತ್ತವೇ ಕಾಲುಗಳ ಮೇಲೆ ಬಣ್ಣಬಣ್ಣದ ಕೌದಿ ಹರವಿಕೊಂಡು, ಕುಳಿತವರು ಎದ್ದೇ ಇಲ್ಲವೇನೋ ಎಂಬಂತೆ ದಾಟುಹೊಲಿಗೆ ಹಾಕುತ್ತಲೇ ಕುಳಿತಿರುತ್ತಿದ್ದರು. ಆ ಗವ್ವೆನ್ನುವ ಕತ್ತಲೆಯೆಂಬ ದೊಡ್ಡ ರಾಕ್ಷಸ, ಪಗಡೆಯಾಡುತ್ತ ಕುಳಿತವರನ್ನು ಪಲ್ಲಂಗದ ಸಮೇತ ನುಂಗಿದ್ದಾನೆ. ಅವರನ್ನು ಹುಡುಕಲೆಂದು ಕತ್ತಲೆಯ ಬಾಯಿಗೆ ಬ್ಯಾಟರಿ ಬಿಟ್ಟರೆ, ಅವನ ದೊಡ್ಡ ಹೊಟ್ಟೆಯಾಳದ ಮೂಲೆಯಲ್ಲಿ ಫೋಟೋ ಆಲ್ಬಮ್ ನಿಂದ ಬಣ್ಣದ ಫೋಟೋವೊಂದು ಕಳಚಿಕೊಂಡು ಬಿದ್ದಿದೆಯೇನೋ ಎಂಬಂತೆ ಆ ಜಗುಲಿ ದೃಶ್ಯಗಳು. ಮಳೆಯೋ ಚಳಿಯೋ ಬಿಸಿಲೋ, ಯಾವ ಕಾಲದಲ್ಲೂ ಹಳೆಯ ಬಟ್ಟೆಗಳನ್ನು ಊರವರ ಮನೆಮನೆಗಳಿಂದ ಸಂಗ್ರಹಿಸಿ, ಶುಚಿಗೊಳಿಸಿ ಒತ್ತಾಗಿ ದಾಟುಹೊಲಿಗೆ ಹಾಕಿ ಹೊಚ್ಚ ಹೊಸ ಕೌದಿ ತಯಾರಿಸುವುದರಲ್ಲೇ ಜೀವಸವೆಸುವ ಗೊಂದಲಿಗರ ಹೆಣ್ಣುಮಕ್ಕಳಿಗೆ ಅದೇ ಬದುಕೂ ಮತ್ತು ಭರವಸೆಯೂ. ಹೊಸ ಕೌದಿಯೊಳಗೆ ತಮ್ಮ ಹಳೆ ಬಟ್ಟೆಗಳು ಕಂಡುಕೊಂಡ ಹೊಸತನದ ಅಚ್ಚರಿಗೆ ಅಚ್ಚೇರು ಜೋಳವನ್ನೋ ಗೋಧಿಯನ್ನೋ ಕೌದಿಗಿತ್ತಿಯ ಬುಟ್ಟಿಗೆ ಹೆಚ್ಚೇ ಸುರಿದುಬಿಟ್ಟರೆ ವರ್ಷಗಟ್ಟಲೆ ರಾತ್ರಿಗಳನ್ನು ಬೆಚ್ಚಗೆ ನೆಮ್ಮದಿಯಿಂದ ಕಳೆದಂತೆ. 
  
ಇದೆಲ್ಲ ನೆನಪಿಸಿದ್ದು ಫೇಸ್‍ಬುಕ್ ಸ್ನೇಹಿತೆ ಅನು ಪಾವಂಜೆ. ಮಂಗಳೂರು ಮೂಲದ ಅನು ಚಿತ್ರಕಲಾವಿದೆ ಮತ್ತು ಕಡುವ್ಯಾಮೋಹಿ. ಅವರು ಈಗಿರುವುದು ಮುಂಬೈನಲ್ಲಿ. ಅವರ ಸಂಗಾತಿ ಚಿತ್ರಮಿತ್ರ, ಕೌದಿ ವಿನ್ಯಾಸದಲ್ಲಿರುವ ಬಣ್ಣಬಣ್ಣದ ಪ್ಯಾಚ್‍ ಪ್ಯಾಂಟ್ ಒಂದನ್ನು ಧರಿಸಿದ ಭಾವಚಿತ್ರಗಳನ್ನು ಕಳೆದವಾರ ಅನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಸ್ವತಃ ತಾನೇ ಆ ಕೌದಿಪ್ಯಾಂಟ್ ಹೊಲೆದಿದ್ದು ಇದರಲ್ಲಿ ತನ್ನ ಸಂಗಾತಿಯ ಅಮ್ಮನ ಸೀರೆ ತುಂಡುಗಳು, ಮತ್ತು ತನ್ನ ಬಟ್ಟೆಗಳ ತುಂಡುಗಳೆಲ್ಲ ಅಡಕವಾಗಿವೆ ಎಂಬ ಟಿಪ್ಪಣಿಯೂ ಅಲ್ಲಿತ್ತು. ಜೊತೆಗೆ ವಾರಗಟ್ಟಲೆ ಕುಳಿತು ಕೌದಿ ವಿನ್ಯಾಸ ಮಾಡಿದ್ದು ತನ್ನನ್ನು ನಿರ್ವಿಷೀಕರಣಗೊಳಿಸಿದೆ ಎಂದು ಹೇಳಿದ್ದು ಗಮನ ಸೆಳೆಯಿತು.   

ಈ ರೀತಿ ಬಟ್ಟೆಯ ಚೂರುಗಳನ್ನೇ ಸೇರಿಸಿ ಹೊಲೆಯುವ ಹೊಸ ಕೌದಿ ಹಳತೂ ಹೌದು ಹೊಸತೂ ಹೌದು! ಇದರಲ್ಲಿ ನಿಡುಗಾಲದ ನೆನಪುಗಳ ಹಳತು ಸೇರಿಕೊಂಡೇ ಒಂದು ಹೊಸತು ಸಜ್ಜುಗೊಂಡಿದೆಯಲ್ಲವೆ? ಹಕ್ಕಿಪುಕ್ಕಗಳ ಹಕ್ಕಿಗೂಡು ಕೂಡ ನಿರ್ಮಾಣಗೊಳ್ಳುವುದು ಹೀಗೆಯೇ ತಾನೆ? ಸದಾಕಾಲ ಹಾರುತ್ತಲೇ ಇರಬೇಕು, ಕಳಚಿ ನೆಲಕ್ಕುದುರಿದ ಒಂದು ಗರಿ ಕೂಡ ನೆಲಕ್ಕಂಟಿಕೊಳ್ಳಲು ಇಚ್ಛಿಸುವುದಿಲ್ಲ. ಅವು ಹಾರಲೆಂದು ಹುಟ್ಟಿದಾ ಹಕ್ಕಿ ಮೈಯ ಗರಿಗಳು ಎಂದು ಎಚ್ಚರಿಸುವ ಬೇಂದ್ರೆಯವರಲ್ಲಿಯೂ ಇರುವುದು ಇದೇ ಬಗೆಯ ಜೀವಸೆಲೆ ಅಲ್ಲವೆ? ಬಟ್ಟೆ ಚೂರುಗಳನ್ನು ಉಳಿಸಿಕೊಳ್ಳುವಲ್ಲಿ, ಅವುಗಳಿಂದಲೇ ಹೊಸದೇನನ್ನೋ ರಚಿಸಿ ಇರಿಸಿಕೊಳ್ಳುವುದರಲ್ಲಿ ಇರುವ ಅದೇ ಪ್ರೀತಿ ಮತ್ತು ಬೆಚ್ಚನೆಯ ಭಾವ ಇಲ್ಲಿಯೂ ಕಾಣುತ್ತದೆ.

ಹೊರಗಿನ ಕಲಕಿಗೋ, ಒಳಗಿನ ಏರಳಿತಕ್ಕೋ ನಮ್ಮೊಳಗು ಕಲಕಿ ಮನಸ್ಸು ಆಗಾಗ ಮುಸುಕು ಹಾಕಿಕೊಳ್ಳುತ್ತಿರುತ್ತದೆ. ಮತ್ತೆ ನಮಗೆ ನಾವು ತಿಳಿಯಾಗಬೇಕೆಂದರೆ, ನಮ್ಮೆದೆಯ ಪದರಗಳನ್ನು ನಿರ್ವಿಷೀಕರಣ ಪ್ರಕ್ರಿಯೆಗೆ ತೊಡಗಿಸಿಕೊಳ್ಳಲೇಬೇಕಾಗುತ್ತದೆ. ಈ ಹಂತದಲ್ಲೇ ನಾವು ನಮ್ಮೊಳಗಿನ ಶಕ್ತಿಯನ್ನು ಸಾಧ್ಯತೆಯನ್ನು ಮತ್ತು ಸಾಮರ್ಥ್ಯವನ್ನು ಕಂಡುಕೊಳ್ಳುವುದು. ಆ ಕಂಡುಕೊಳ್ಳುವಿಕೆಗೆ ಬೇಕಿರುವುದೇ ಒಂದು ನಾಲೆ. ನಾಲೆ ಎಂದರಿಲ್ಲಿ ನಮ್ಮೊಳಗಿನ ಅಭಿವ್ಯಕ್ತಿ. ಅದು ಕಲೆಯೋ ಕೌಶಲವೋ ಓದೋ, ಬರಹವೋ ತಿರುಗಾಟವೋ ಒಟ್ಟಿನಲ್ಲಿ ಜಾತ್ರೆಯೊಳಗಿದ್ದೂ ಏಕಾಂತದೊಳಗಿರುವ ಒಂದು ಆವರಿಕೆ. ಹಳೆಯ ಬೇರುಗಳ ನೆರಳು, ಹೊಸ ಚಿಗುರುಗಳ ಸೃಷ್ಟಿಗೆ ಪುಷ್ಠಿ ನೀಡುತ್ತಾ ಹೋಗುವ ಹಾದಿಯಲ್ಲಿ ಮನಸ್ಸು ತನ್ನೊಳಗೇ ತಾ ನಿಂತು ಸ್ಥಿಮಿತಕ್ಕೆ ಬರತೊಡಗುವುದು. 

ಕೌದಿಯಂತೆಯೇ ನಮ್ಮ ಬದುಕು ಕೂಡ. ಹಳೆಯದನ್ನು ಹಳೆಯದೆಂದು ಹಳಿಯದೆ, ದೂರು ಹೇಳಿ ದೂರಿಡುವ ಮುನ್ನ ಅದಕ್ಕೊಂದು ಪರ್ಯಾಯವನ್ನು ಕಟ್ಟಿಕೊಡುವ ರಚನಾತ್ಮಕ, ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಶಕ್ತಿ ನಮ್ಮಲ್ಲಿದ್ದರೆ ಮಾತ್ರ ನಮಗೆ ಇಷ್ಟವಾಗದ್ದನ್ನು ವಿರೋಧಿಸುವ ಹಕ್ಕು ನಮಗಿದೆ ಎಂದರ್ಥ. ಯಾಕೆಂದರೆ ಇಲ್ಲಿ ಯಾವುದೂ ಇದ್ದಕ್ಕಿದ್ದಂತೆ ಅಳಿಯುವುದಿಲ್ಲ ಇದ್ದಕ್ಕಿದ್ದಂತೆ ಉದ್ಭವಿಸುವುದೂ ಇಲ್ಲ. ಎಲ್ಲದಕ್ಕೂ ಪುರಾವೆಗಳಿವೆ. ನಿರಂತರ ಹರಿವಿದೆ. ಆ ಹರಿವಿನೊಳಗೆ ಅನ್ವೇಷಣೆಯ ಒಳಗಣ್ಣುಗಳಿವೆ. ಒಳಗಣ್ಣುಗಳೊಳಗೆ ಶಾಪಗ್ರಸ್ಥ ಕಲ್ಲುಗಳು ಮಕ್ಕಳಾಟದ ಗೋಲಿಗಳಂತಾಗಿ ಕಣ್ಣೊಳಗೇ ಅಂಟಿಕುಳಿತಿವೆ. ಅವು ಮರುಚೈತನ್ಯ ಪಡೆಯಬೇಕೆಂದರೆ ಹೊಸ ಹೊಳಹು ಬೇಕು ಹೊಸ ಹರಿವು ಬೇಕು ಹೊಸ ಸ್ಪರ್ಷ ಬೇಕು ಅಂದಾಗ ಮಾತ್ರ ಹೊಸ ಪ್ರೇರಕ ಶಕ್ತಿಯೊಂದು ತಾನೇತಾನಾಗಿ ದಕ್ಕುತ್ತದೆ.

ಕಟ್ಟಿದ ಕೊರಳ ಕುಣಿಕೆ ಬಿಡಿಸಿಕೊಂಡು ಓಡುವ ಕರುವಿನ ಅಡ್ಡಾದಿಡ್ಡಿ ಓಟದೊಳಗೊಂದು ಛಂದ ಲಯ, ಸಹಜ ತೊಡಕು, ತಳ್ಳಿದರೂ ತಾನೇ ಮುಗುಚಿದೆ ಎಂದುಕೊಳ್ಳುವ ಮುಗ್ಧತೆ, ಮತ್ತೆದ್ದು ಓಡುವ ಉತ್ಸಾಹದ ಒರತೆಯನ್ನು ಅದರೊಳಗೊಂದು ವೈಶಿಷ್ಟ್ಯವನ್ನು ಗುರುತಿಸುವ ಸ್ಪಂದಿಸುವ ಗುಣ ನಮ್ಮದಾಗಿದ್ದಲ್ಲಿ ಮಾತ್ರ ಪ್ರತೀ ಬೆಳಗೂ ಹೊಸ ಸ್ಪರ್ಷವೇ. 
  
ಈ ಹೊಸ ವರ್ಷದ ಮೊದಲ ಬೆಳಗಿನ ಮೋಡಗಳ ಕೆಳಗೆ ಹುರ್ರೆಂದ ತಲೆಯೊಂದಿಗೆ ಬಾಲ್ಕನಿಗೆ ಬರುವುದೇ ತಡ, ‘ಅಕ್ಕೋ ಯಾಪ್ಪಿ ನೂ ಯೇರ್’ ಎಂಬ ಕೀರಲು ದನಿಯೊಂದು ತೂರಿಬಂತು. ಕೆಳಗೆ ಎಂದಿನಂತೆ ಕಸದ ಗಾಡಿಯಿತ್ತು. ಕಮಲಮ್ಮ ಮಾತ್ರ ಕಾಣಲಿಲ್ಲ. ಆದರೆ ಗಾಡಿಯ ಪಕ್ಕದಲ್ಲೇ ಎದುರುಮನೆಯವರೊಂದಿಗೆ ಮಾತಲ್ಲಿ ಮುಳುಗಿದ ಚೆಂದಾಗಿ ಅಲಂಕರಿಸಿಕೊಂಡ ಹೆಣ್ಣುಮಗಳೊಬ್ಬಳು ಕಂಡಳು. ಗಾಡಿಯಲ್ಲಿ ಕಸದ ಬುಟ್ಟಿಗಳು ಹೊಸ ವರ್ಷದ ಸಂಭ್ರಮಾಚರಣೆಯ ಕುರುಹುಗಳನ್ನು ತನ್ನೊಡಲಲ್ಲಿಟ್ಟುಕೊಂಡು ತುಂಬಿ ತುಳುಕಿಸಿಕೊಂಡಿದ್ದವು. ಗಾಡಿಬಿಟ್ಟು ಎಲ್ಲಿ ಹೋದಳು ಈ ಕಮಲಮ್ಮ? ನನಗ್ಯಾರು ಹೊಸ ವರ್ಷದ ಶುಭಾಶಯ ಕೋರಿದರು? ಎಲ್ಲೋ ಕೇಳಿದಂತಿತ್ತಲ್ಲ ಈ ಧ್ವನಿ ಎಂದುಕೊಳ್ಳುತ್ತ ಕೆಳಗೆ ಬಿದ್ದ ಪೇಪರ್ ಎತ್ತಿಕೊಳ್ಳುವಾಗ ಅಕ್ಕೋವ್… ಎಂದು ಮತ್ತದೇ ಧ್ವನಿ ತೂರಿಬಂತು. 

ನೋಡಿದರೆ ಕಮಲಮ್ಮ! ಜಗದ ಕೊಳೆಯನ್ನೆಲ್ಲ ಶುಚಿಗೊಳಿಸಲು ಪಣ ತೊಟ್ಟಂತೆ ದಿನವೂ ತನ್ನ ಕೂದಲನ್ನೆಲ್ಲ ಮೇಲಕ್ಕೆತ್ತಿ ಕಟ್ಟುತ್ತಿದ್ದ ದಪ್ಪ ತುರುಬಿನ ಜಾಗದಿಂದ ಇಂದು ಉದ್ದನೆಯ ಜಡೆ ಜೋತುಬಿದ್ದಿತ್ತು. ಅದಕ್ಕೊಂದು ಮೊಳ ದುಂಡುಮಲ್ಲಿಗೆಯೂ ಸುತ್ತುಕೊಂಡಿತ್ತು. ಕೈತುಂಬ ಹೊಸ ಚಿಕ್ಕಿಬಳೆ, ಹಣೆಯಲ್ಲೆಂತದೋ ಮಿಣುಕುಬೊಟ್ಟು, ತುಸು ಜಾಸ್ತಿಯೇ ಮೆತ್ತಿದ ಪೌಡರ್, ಕೊರಳಲ್ಲಿ ಬಂಗಾರ ಗಿಲೀಟಿನ ಸರ. ದಿನದ ಸಮವಸ್ತ್ರ ಮಾಯವಾಗಿ ಜರಿಯಂಚಿನ ಹೊಸ ಸೀರೆ ರವಿಕೆಯಲ್ಲಿ ಆಕೆ ಹಬ್ಬದ ಸಡಗರದಲ್ಲಿ ಕಂಗೊಳಿಸುತ್ತಿದ್ದಳು. ನಿರಿಗೆಗಳು ಸೊಂಟ ಸಿಕ್ಕಿಸಿಕೊಂಡೇ ಇದ್ದವು ಎಂದರೆ ಕಾಯಕವ ಆಕೆ ಬದಿಗಿರಿಸಿಲ್ಲ.

ನಾಳೆ ಯುಗಾದಿಗೂ ಆಕೆ ಹೀಗೇ ಸಿಂಗರಿಸಿಕೊಂಡು ಖುಷಿಪಡುತ್ತಾಳೆ. ಮನೆಮನೆಗೂ ತೆರಳಿ ಕುಶಾಲಿ ವಸೂಲಿ ಮಾಡುತ್ತಾಳೆ. ತನ್ನ ಬೆನ್ನಿಗಂಟಿಕೊಂಡವರ ಆಸೆಗಳ ಜೊತೆಗೆ ತನ್ನ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳುವುದನ್ನೂ ಆಕೆ ಮರೆಯುವುದಿಲ್ಲ.

ವಿಧಾನಸೌಧದಲ್ಲಿ, ಪತ್ರಿಕೆಗಳಲ್ಲಿ, ಟಿವಿಗಳಲ್ಲಿ, ಮಠ ಮಾನ್ಯಗಳಲ್ಲಿ ಹಳಿಬಿಟ್ಟು ಓಡುವ ಯಾವ ಹೇಳಿಕೆಗಳೂ ಆಕೆಯನ್ನು ಪ್ರಚೋದಿಸುವುದೇ ಇಲ್ಲ. ಅವಳಿಗೆ ಗೊತ್ತಿರುವುದು ಒಂದೇ. ಎಡಬದಿಯ ಕಸವನ್ನು ಎಡಕ್ಕೇ ಗುಡಿಸಿ ಗುಂಪೆ ಹಾಕುತ್ತ, ಬಲಬದಿಯ ಕಸವನ್ನು ಬಲಕ್ಕೇ ಗುಂಪು ಹಾಕುತ್ತ ಮಧ್ಯದ ದಾರಿಯನ್ನು ಚೊಕ್ಕಗೊಳಿಸಿಕೊಳ್ಳುತ್ತ ತನ್ನ ನಿತ್ಯದ ದಾರಿಯನ್ನೂ ಸುಗಮಗೊಳಿಸಿಕೊಳ್ಳುವ ಈಕೆ ಕೂಡ ಒಂದು ಅರ್ಥದಲ್ಲಿ ಹೊಸತನವನ್ನು ಸಂಭ್ರಮಿಸುವಾಕೆ. ಬಾಕಿ ಉಳಿಸಿಕೊಳ್ಳದ ಅಂದಿನಂದಿಗೇ ಚುಕ್ತಾ ಮಾಡಿ ಚುಕ್ಕೆ ಕಾಣುವ ಮೊದಲೇ ಮಲಗಿ, ಸೂರ್ಯ ಇಣುಕುವ ಮೊದಲೇ ಎದ್ದು ಮೈಮುರಿದು ದುಡಿದು, ಮನೋವ್ಯಾಪಾರಗಳ ಮೂಲಾಕ್ಷರಗಳು ಗೊತ್ತಿಲ್ಲದೇ ಖಂಡತುಂಡವಾಗಿ ಬದುಕುವಾಕೆ.

ಇವಳ ಉತ್ಸಾಹ, ಹೊಸತರ ಆಗಮನಕ್ಕೆ ಸಂಭ್ರಮಗೊಳ್ಳುವ ಮುಗ್ಧ ಮನಸ್ಸು ಕಂಡಾಗ ನನ್ನ ಸಂಕೀರ್ಣ ಮನಸ್ಸು ಏನೇನೆಲ್ಲ ಧೇನಿಸುತ್ತದೆ. ದೆಹಲಿಯ ನಿರ್ಭಯಾಳಿಂದ ಹಿಡಿದು ವಿಜಯಪುರದ ದಾನಮ್ಮನ ಸೋಲಿನ ತನಕ, ಕೊನೆತನಕ ಈ ಜಗತ್ತಿಗೆ ಹಿಂದಿರುಗದೇ ಮಲಗಿದಲ್ಲೇ ಬದುಕು ಸವೆಸಿದ ಅರುಣಾಳಿಂದ ಹಿಡಿದು ಹತ್ಯೆಯಾದ ಗೌರಿಯವರೆಗೆ, ಉಕ್ಕಿನ ಮಹಿಳೆ ಎನಿಸಿಕೊಂಡ ಇಂದಿರಾ ಪ್ರಿಯದರ್ಶಿನಿಯಿಂದ ಹಿಡಿದು ಇನ್ನೊಬ್ಬ ಉಕ್ಕಿನ ಮಹಿಳೆ ಮಣಿಪುರದ ಇರೋಮ್ ಶರ್ಮಿಳಾಳ ಸೋಲು-ಗೆಲುವಿನವರೆಗೆ ಮನಸ್ಸು ಉಯ್ಯಾಲೆಯಾಡುತ್ತದೆ.

ವಿಭಾ ಬರೆದ ಕವನವನ್ನು ಗುನುಗುತ್ತ ಕಿಟಕಿಗೆ ಆತು ನಿಲ್ಲುತ್ತೇನೆ.

ನಾನೂ ಬದುಕುತ್ತಿದ್ದೇನೆ
ಶತಮಾನಗಳಿಂದ,
ಇದೇ ಅಡುಗೆ ಮನೆಯಲ್ಲಿ
ಇದೇ ಒಲೆಯ ಸಂದಿಯಲ್ಲಿ.

ಹೊರಗೆ ನಿತ್ಯ ಸೂರ್ಯ ಹುಟ್ಟುತ್ತಾನಂತೆ!
ನಾನು ನೋಡಿಯೇ ಇಲ್ಲ.
ನನಗೆಲ್ಲಿ ಅವನ ದೃಷ್ಟಿ ತಾಕೀತೆಂದು,
ನನ್ನಜ್ಜಿ ಹೊರಬಿಟ್ಟೇ ಇಲ್ಲ.

ಹೊರಗೆ ತುಂಬ ಬೆಳಕಿದೆಯಂತೆ!
ನಾನು ಕಂಡದ್ದೇ ಇಲ್ಲ.
ನನ್ನ ಬಣ್ಣವೆಲ್ಲಿ ಕಂದೀತೆಂದು
ನನ್ನವ್ವ ಹೊರಬಿಟ್ಟೇ ಇಲ್ಲ.

ಹೊರಗೆ ಸುಂದರ ಹಸುರಿದೆಯಂತೆ!
ನಾನು ಅನುಭವಿಸಿಯೇ ಇಲ್ಲ.
ನಾನೆಲ್ಲಿ ಅದರೊಳಗೆ
ಕಳೆದು ಹೋದೇನೆಂದು
ನನ್ನಪ್ಪ ಹೊರಬಿಟ್ಟೇ ಇಲ್ಲ.

ಆದರೀಗೀಗ,
ಸೂರ್ಯ ಕಿಂಡಿಯಿಂದೊಳಬಂದು
ದಿಟ್ಟಿಸುತ್ತಿದ್ದಾನೆ ನನ್ನ,
ಬೆಳಕು ಎಲ್ಲಿಂದಲೋ ತೂರಿ
ಬಂದು ಬದಲಾಯಿಸುತಿದೆ
ನನ್ನ ಬಣ್ಣ.

ಹಸಿದು ಕೈಚಾಚಿ ಕರೆಯುತಿದೆ
ಕಿಟಕಿಯಾಚೆಯಿಂದ ನನ್ನ.

ನಿಜ. ಈಗೀಗ ಬದಲಾವಣೆ ಎಲ್ಲೆಲ್ಲಿಯೂ. ಆದರೆ ಕಮಲಮ್ಮನ ಹಾಗೆ ಬದಲಾವಣೆಗಳಿಗೆ ಒಡ್ಡಿಕೊಂಡೂ ಆ ಮುಗ್ಧತೆ, ಸಂಭ್ರಮ, ಉತ್ಸಾಹಗಳನ್ನು ಉಳಿಸಿಕೊಳ್ಳುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?

ನಮಗ್ಯಾಕೆ ಹೀಗಿರಲು ಸಾಧ್ಯವಾಗುತ್ತಿಲ್ಲ ಎಂದು ಯೋಚಿಸುತ್ತಲೇ ಮತ್ತೊಂದು ವರುಷವು ಗದ್ದಕ್ಕೆ ಎರಡೂ ಕೈಯಾಣಿಸಿಕೊಂಡು ಬಿಡುಗಣ್ಣು ಬಿಟ್ಟು ಕುಳಿತಿದೆ. ನಿನ್ನೆಯ ಫೈರ್ ಕ್ಯಾಂಪಿನೊಳಗೆ ನೆನಪುಗಳನ್ನು ಕನವರಿಕೆಗಳನ್ನು ಅಸಹಾಯಕತೆಯನ್ನೂ ಸುಟ್ಟು ಮೈಮನಸ್ಸು ಕಾಯಿಸಿಕೊಂಡು ಹತ್ತಿಯಂತೆ ಹಗೂರಹಗೂರವಾಗಿ ತೇಲಿ ಕಣ್ಬಿಟ್ಟರೆ ಮತ್ತದೇ ಆಕಾಶ ಮತ್ತದೇ ಸೂರ್ಯ. ಮತ್ತೆ ಕಾಡುತ್ತಾರೆ ಕವನದೊಳಗೆ ನನ್ನೂರಿನ ಕೌದಿಗಿತ್ತಿಯರು.
---

ಬೀಳಲೋ ಬೇಡವೋ ಎನ್ನುವ ಕತ್ತಲಿನಲ್ಲೇ 
ಆಕೆ ಕಂಡಿದ್ದು. 
ಅದೆಷ್ಟು ಋತುಮಾನಗಳು ಸರಿದವೊ
ಹಾಗೇ ಮಲಗಿದ್ದಾಳೆ ಪಸೆಹಿಡಿದ ಗೋಡೆಗೆ ಕೆನ್ನೆತಾಕಿಸಿ, 
ಹಿತವೆನ್ನಿಸಿರಬೇಕದು
-ಇಷ್ಟುದಿನದ ಕುಣಿತಕ್ಕೆ ಮಣಿತಕ್ಕೆ ದಣಿತಕ್ಕೆ.

ಹೊರಳುಗಣ್ಣಿಗೆ ಮಂಜಪರದೆಯಂತೆ  
ಆ ತೆಳುಬಿಳಿಯ ಸಣ್ಣಪೈಪು
ಆಕೆಯ ಉಸಿರಗುಟ್ಟಿನ ಕಾಪಿರೈಟು
ಆ ಮೂಲೆಯ ಜೇಡಪ್ಪ ಇಣುಕಿದಾಗೆಲ್ಲ 
ಗಹಗಹಿಸಿ ನಗುತ್ತಾಳೆ
-ಅದು ಅವನಿಗಷ್ಟೇ ಕೇಳುತ್ತದೆ.

ಆಗಾಗ ಬರುವ ಜೋಡುಟಾರ್ಚಿನ 
ಗೂರ್ಖಾನಂಥ ಜಿರಳೆಗೆ
ಆಕೆಯ ಕುದುರೆಜವೆಯಂಥ ಕೂದಲು ದಿಕ್ಕುತಪ್ಪಿಸಿಬಿಡುತ್ತವೆ
-ಬಂದ ದಾರಿಗೆ ಸುಂಕವೇ ಇಲ್ಲಿ.

ಕಾಲ ಕೆಳಗೆ ಕಪ್ಪು ಸಮುದ್ರ 
ಕಣ್ಣ ಮೇಲೆ ಕಾಳಆಗಸ
ಕಾಡುವ ತೆರೆಗಳ, ತೊಡಕುವ ಮೋಡಗಳ
ಹಿಡಿದು ಅಂಚು-ಹಾಕಿ ಹೊಲಿಗೆ 
ಬೆಳಕದುಪ್ಪಟಿಗೆಂದು ತಂದ ಸೂಜಿ 
ಸದ್ದಿಲ್ಲದೇ ಉರುಳಿದ್ದು ಇಲ್ಲೇ
-ಕಾಣದೇ ಚುಚ್ಚುತ್ತದೆ.

ಹುಚ್ಚು ಹೆಚ್ಚೇರಿಸಿಕೊಂಡ ಗಾಳಿಪಟ
ದೂಳಿಪಟವಾಗಿ ಅವಳ ಪದತಲದಲ್ಲಿ,
ತುಂಡರಿಸಿದ ಬಾಲಂಗೋಚಿಯ ಚುಂಗು
ಅವಳ ಪಾದಸೀಳಿನ ಸಂದಿಗಾತು ಅಂಗಲಾಚುತ್ತಿದೆ
-ಹಾರಿದ್ದೆಲ್ಲವೂ ಮೀರಿದ್ದೇ ಅಂತಲ್ಲ 
ಅದು ಮೇರು ಎಂದು.

;ಬೆಳೆದ ಕೈಗಳಿಗೆಂದಾದರೂ ಎಟುಕಿಯಾಳೆ ಬಾರ್ಬಿ?

-ಶ್ರೀದೇವಿ ಕಳಸದ.

(1-1-2018 ರ ರಾತ್ರಿ 7.45 ಕ್ಕೆ ಬೆಂಗಳೂರು ಆಕಾಶವಾಣಿಯಿಂದ ಪ್ರಸಾರಗೊಂಡಿದ್ದು.)2 comments:

sunaath said...

ತುಂಬ ಸೊಗಸಾದ ಬರಹ ಹಾಗು ಕವನ, ಶ್ರೀದೇವಿ ಮೇಡಮ್. ಬದುಕು ಚಿಂದಿಯಾಗಬೇಕೊ ಅಥವಾ ಕೌದಿಯಾಗಬೇಕೊ ಎನ್ನುವ ಕಳವಳಕ್ಕೆ ತಕ್ಕ ಉತ್ತರ ನಿಮ್ಮ ಕವನದ ಮನೋಭಾವದಲ್ಲಿದೆ. ಇದು ನಮಗೆಲ್ಲರಿಗೂ ಒಂದು ಕೈದೀವಿಗೆ!

ಆಲಾಪಿನಿ said...

Thank u uncle