Friday, January 5, 2018

ಸಾವಿತ್ರಿಯ ರೆಡ್‍ಚಿಲ್ಲಿ ಮತ್ತು ನನ್ನ ಹಳದಿಮೀನು


ಅಕ್ವೇರಿಯಂನ ಹಳದಿ ಮೀನೊಂದು ಭಾಳಾ ಹೊತ್ತಿನಿಂದ ತಳಹಿಡಿದು ಕುಳಿತಿತ್ತು. ಇನ್ನೊಂದು ಮೇಲ್ಮುಖವಾಗಿ ನಿಂತಲ್ಲೇ ರೆಕ್ಕೆಯಾಡಿಸುತ್ತಿತ್ತು. ದೀವಾರ್ ಹೋಟೆಲಿನ ಗೋಡೆಯ ಚೌಕಟ್ಟಿನೊಳಗಿನ ಸುಂದರಿ ಅದೆಷ್ಟು ವರ್ಷಗಳಿಂದ ತಂಬೂರಿ ಶ್ರುತಿ ಮಾಡುತ್ತಲೇ ಕುಳಿತಿದ್ದಳೋ ಗೊತ್ತಿಲ್ಲ. ಮೇಜಗುಲಾಬಿಯೋ ಅಂದಿಗಂದಿಗೆ ಹುಟ್ಟಿ ಅಂದಿಗಂದಿಗೆ ಸಾಯುವ ನನಗೆ ಯಾರ ಹಂಗು ಎಂಬಂತೆ ಪಕಳೆಬಿರಿದು ಸುತ್ತೂಕಡೆ ನಗೆಯಂಟಿಸಿ ಹೂಜಿಯೊಳಗೆ ಕಾಲಿಳಿಬಿಟ್ಟಿದ್ದಳು. ಮಡಿಕೆ ಬಿಚ್ಚಿದರೆ ಮರಣವೇನೋ ಎಂಬಂತೆ ಕೈಯಳತೆಗೂ ಸಿಗದೆ ಸ್ಟ್ಯಾಂಡಿನೊಳಗೆ ಕುಳಿತಿದ್ದ ಮಿಸ್ಟರ್ ಟಿಶ್ಯೂ! ಗ್ಲಾಸಿನ ಒಳಮೈಗಂಟಿದ ಒಂದೊಂದೇ ನೊರೆಗುಳ್ಳೆಗಳು ತನಗೂ ಈ ಪ್ರಪಂಚಕ್ಕೂ ಸಂಬಂಧವೇ ಇಲ್ಲ ಎಂದು ಆಕಾರ ಕಳೆದುಕೊಳ್ಳುತ್ತ ಆಳದಲ್ಲೆಲ್ಲೋ ಮೋಕ್ಷ ಪಡೆದುಕೊಳ್ಳುತ್ತಿದ್ದವು.

ಎದುರಿಗೆ ಕುಳಿತಿದ್ದ ಮಗಳು ಒಮ್ಮೆಲೆ ಇಳಿದು ಬಂದು, ‘ಅಮ್ಮಾ ನೀನು ಲಿಪ್‍ಸ್ಟಿಕ್‍?’ ಎಂದು ಕೆನ್ನೆ ಹಿಡಿದಳು. ಹೂಂ ಕೂಶು ಅಂದೆ. ನಂಗೂ… ಎಂದು ಕೆನ್ನೆಯುಬ್ಬಿಸಿದಳು. ಪರ್ಸ್ ತಡಕಾಡಿದಳು. ಇದ್ದರಲ್ಲವೆ? ಹುಬ್ಬು ಗಂಟುಹಾಕಿಕೊಂಡು ಸುಮ್ಮನಾಗುತ್ತಾಳೆ ಅಥವಾ ಬೇಕು ಎಂದು ರಂಪ ಮಾಡುತ್ತಾಳೆಂದು ಎಣಿಸಿದೆ. ಆದರವಳು, ಸರಕ್ಕನೆ ನನ್ನ ತುಟಿಯ ‘ರೆಡ್ ಚಿಲ್ಲಿ’ ಟೋನ್‍ನ ಲಿಪ್‍ಸ್ಟಿಕ್‍ ಮೇಲೆ ಬೆರಳಾಡಿಸಿ ತನ್ನ ತನ್ನ ತುಟಿಗೆ ಸವರಿಕೊಂಡುಬಿಟ್ಟಳು. ಅರ್ರೆ! ಏನಿದು ಎಂದು ನೋಡುವ ಹೊತ್ತಿಗೆ ಸೊಂಟದ ಮೇಲೆ ಕೈಇಟ್ಟುಕೊಂಡು ತುಟಿ ಮುಂದೆ ಮಾಡಿ, ಕತ್ತು ತುಸು ವಾರೆಮಾಡಿ ದಿಟ್ಟಗಣ್ಣಿನಿಂದ ನಿಂತಿದ್ದಳು. ತಂಗಿಯ ಕಡೆ ನೋಡಿದೆ. ಆಕೆ ಮುಸಿಮುಸಿ..

ಮನಸ್ಸು ಬೆಂಗಳೂರಿನ ಚಂದ್ರಾಲೇಔಟ್‍ನಿಂದ ಬೆಳಗಾವಿಯ ಖಡೇಬಾಝಾರಿನ ಅಂಗಡಿಗಳ ಸಾಲಿಗೆ ಹಿಮ್ಮುಖವಾಗಿ ಓಡಿತು. ಅಂಗಡಿಯಂವ ಹತ್ತೂಬಣ್ಣದ ಲಿಪ್‍ಸ್ಟಿಕ್‍ಗಳನ್ನು ಹರಿವಿಟ್ಟಿದ್ದರೂ ಒಂದನ್ನೂ ಆಯ್ಕೆ ಮಾಡಿಕೊಳ್ಳಲಾಗದೆ ಸುಮ್ಮನೇ ನೋಡುತ್ತ ನಿಂತಿದ್ದೆ. ‘ಶ್ರೀದೀ ಇದ ಇರ್ಲಿ ತಗೋ, ಎದ್ದ ಕಾಣಬೇಕೋ ಬ್ಯಾಡೋ?’ ಎಂದು ರೆಡ್ ಚಿಲ್ಲಿ ಟೋನ್ ಆಯ್ಕೆ ಮಾಡಿಕೊಟ್ಟಿದ್ದಳು ಸಾವಿತ್ರಿ ದೊಡ್ಡಮ್ಮ. ಹಾಗೇ ನಾ ಹಾಕಿಕೊಂಡಿದ್ದ ಹಳದಿ ಮತ್ತು ಕೆಂಪು ಬಣ್ಣದ ಮಿಡಿಗೆ ಮ್ಯಾಚಿಂಗ್ ಬಳೆ ಕೊಡಿಸಿ, ಅಲ್ಲೇ ತೊಡಿಸಿ, ಎರಡೂ ಬ್ಯಾಗುಗಳೊಂದಿಗೆ ನನ್ನನ್ನು ಬೆಳಗಾವಿಯ ಬಸ್‍ಸ್ಟ್ಯಾಂಡಿಗೆ ಕೈಹಿಡಿದು ಭರಭರನೆ ಆ ಜಂಗುಳಿಯೊಳಗೆ ಕರೆದುಕೊಂಡು ಹೋಗಿದ್ದಳು. ನಿಪ್ಪಾಣಿ ಬಸ್ಸು ಹತ್ತಿದಾಗ ನಿದ್ದೆ ಆವರಿಸಿತ್ತು. ಕಣ್ಣು ನಿಚ್ಚಳವಾದಾಗ ನಿಪ್ಪಾಣಿಯ ಮನೆಮನೆಗಳ ಮುಂದೆ ಮೂರುನಾಲ್ಕು ಅಡಿ ಎತ್ತರದಲ್ಲಿ ಕಟ್ಟಿದ ಮಣ್ಣಿನ ಕೋಟೆಗಳು, ಆ ಆವರಣದಲ್ಲಿ ಯುದ್ಧಕ್ಕೆ ಸಜ್ಜಾದ ಸೈನಿಕರು, ಬಾವಿಯಿಂದ ನೀರು ಸೇದುವ ಮಹಿಳೆಯರು, ಪುಟ್ಟ ತೋಟ, ಅಂಗಳದಲ್ಲಿ ಬೊಂಬೆಮಕ್ಕಳು, ಸಾಲಾಗಿ ಜೋಡಿಸಿಟ್ಟ ಕಾರ್ತೀಕದ ದೀಪಗಳು. ಅದರ ಸುತ್ತ ಮೈಕೈಯೆಲ್ಲ ಮೆತ್ತಿಕೊಂಡು ಆ ಕೋಟೆಯನ್ನು ಮತ್ತಷ್ಟೂ ಸಿಂಗರಿಸುತ್ತಲೇ ಇರುವ ನಾಲ್ಕೈದು ಮಕ್ಕಳು. ಆ ಹಸಿಮಣ್ಣ ಪರಿಮಳ, ಬಿಳೀ ಸುಣ್ಣ, ಕೆಮ್ಮಣ್ಣ  ಚಿತ್ತಾರ, ಆ ಸಂತೆಪೇಟೆಯ ಗೌಜು, ನೆಲ್ಲೀಕಾಯಿ, ಹುಣಸೆ, ಕಬ್ಬು, ಗೋಧೂಳಿ ಸಮಯ, ಚಾಳಿನ ಬಾವಿಯ ಗಡಗಡೆ… ಆಹ್ ಅದೊಂದು ಪ್ರಫುಲ್ಲಲೋಕ.

ನಮ್ಮ ಸಾವಿತ್ರಿ ದೊಡ್ಡಮ್ಮ (ತಂದೆಯ ಅಣ್ಣನ ಹೆಂಡತಿ), ದೊಡ್ಡಪ್ಪನ ಮನೆಯಲ್ಲಿ ದೀಪಾವಳಿ ಮುಗಿಸಿ, ತುಲಸಿ ಲಗ್ನದ ನೆಪಮಾಡಿ ವರ್ಷಕ್ಕೊಮ್ಮೆ ಹೀಗೆ ತವರಿಗೆ ಬರುತ್ತಿದ್ದಳು. ಅಷ್ಟೂ ವರ್ಷಗಳೂ ಅಂದರೆ ಸುಮಾರು ಹತ್ತು ವರ್ಷಗಳ ತನಕ ನನ್ನನ್ನು ಕಾಯ್ದಿದ್ದು ಅವಳ ಆ ಸಣ್ಣಮೈಕಟ್ಟಿನ ನಡು. ಕಾಲು ನೆಲಕ್ಕೆ ಹತ್ತುವತನಕವೂ ನನ್ನ ಎಲ್ಲೆಡೆ ಎತ್ತುಕೊಂಡೇ ಓಡಾಡಿದವಳಾಕೆ. ಈ ಲಿಪ್‍ಸ್ಟಿಕ್‍, ರಬ್ಬರ್, ಬಳೆ ಎಲ್ಲ ಮಿಣುಕು ಜಗತ್ತನ್ನೂ ಪರಿಚಯಿಸಿದ್ದು ಆಕೆಯೇ. ಎಂಟುದಿನಗಳ ಆಕೆಯ ‘ಸ್ಪೇಸ್‍’ನ ಅವಧಿ ಮುಗಿಯುತ್ತಿದ್ದಂತೆ ಆಕೆಗೂ ನನಗೂ ಅಯ್ಯೋ ಎನ್ನಿಸುತ್ತಿತ್ತು. ನಂತರ ನಿಪ್ಪಾಣಿಯಿಂದ ದೊಡ್ಡಪ್ಪನ ಊರು ಹಿರೇಬಾಗೇವಾಡಿಗೆ ಬಂದು, ಎರಡು ದಿನಗಳ ನಂತರ ಅಲ್ಲಿಂದ ಅವರು ಹತ್ತಿಸಿದ ಬಸ್ಸಿನಲ್ಲಿ ಬೈಲಹೊಂಗಲಕ್ಕೆ ಒಬ್ಬಳೇ ಬಂದು, ಅಲ್ಲಿಂದ ಧಾರವಾಡದ ಬಸ್ಸು ಏರಿ, ದೊಡ್ಡವಾಡಕ್ಕೆ ಬಂದಿಳಿಯುತ್ತಿದ್ದೆ.

ಆಕೆ ನಿಪ್ಪಾಣಿಯಲ್ಲಿ ಕೊಡಿಸಿದ ಆ ಹಸಿರುಕವಚದ ಲಿಪ್‍ಸ್ಟಿಕ್‍ ಅನ್ನು ಸಣ್ಣಸಣ್ಣ ಹೂಗಳಿರುವ ಬಿಳಿಕರ್ಚೀಫಿನಲ್ಲಿ ಸುತ್ತಿಕೊಂಡು ಬಸ್ಸಿನೊಳಗೆ ಕೂತಿರುವಾಗ, ತೆಗೆದು ಒಮ್ಮೆ ತುಟಿಗೆ ಸವರಲೇ? ಎಂದೆನ್ನಿಸುತ್ತಿದ್ದರೂ ಸುಮ್ಮನಾಗಿದ್ದೆ. ಲಿಂಗದ್ಹಳ್ಳಿ, ಕೆಂಗಾನೂರ, ಬೆಳವಡಿ, ಮಡ್ಡಿದೇವರು, ದಿಡ್ಡೀಅಗಸಿಗೆ ಬಸ್‍ ನಿಂತಾಗೆಲ್ಲ ಮುಟ್ಟಿಗೆ ಬಿಗಿಗೊಳಿಸಿ ಅದರ ಇರುವನ್ನು ಖಾತ್ರಿಗೊಳಿಸಿಕೊಂಡಿದ್ದೆ. ಅವತ್ತು ಬಸ್ಸಿಳಿದು ದುಡದುಡನೆ ಮನೆಗೆ ಓಡಿ, ಅಪ್ಪಾಜಿಗೆ ಕಾಣದಂತೆ ಒಂದು ಶೆಲ್ಫಿನಲ್ಲಿ ಡಬ್ಬಿಯ ಹಿಂದೆ ಅಡಗಿಸಿಯೂ ಇಟ್ಟಿದ್ದೆ. ಆ ಶೆಲ್ಫ್ ಅನ್ನು ಅಪ್ಪಾಜಿ ಶುಚಿಗೊಳಿಸುವ ಎಷ್ಟೋ ಕಾಲ ಕಣ್ಣೆಲ್ಲ ಅಲ್ಲೇ ನೆಟ್ಟಿರುತ್ತಿದ್ದವು.

ಹೀಗೇ ಒಂದು ದಿನ ಮಧ್ಯಾಹ್ನ ಶಾಲೆಯಿಂದ ಬಂದಾಗ ಮೂಲೆಯಲ್ಲಿ ಬಿದ್ದ ಬೇಡವಾದ ಸಾಮಾನುಗಳ ಮಧ್ಯೆ ಹಸಿರುಕವಚದ ಲಿಪ್‍ಸ್ಟಿಕ್‍ ಕೂಡ ಕಂಡಿತು. ಪಾಟಿಚೀಲ ಮಂಚದ ಮೇಲೆ ಎಸೆದವಳೇ ಓಡಿಹೋಗಿ ಅದನ್ನು ಎತ್ತಿಕೊಂಡು, ಯೂನಿಫಾರ್ಮಿನ ತುದಿಯಿಂದ ಒರೆಸಿ ಕಣ್ಣಲ್ಲಿ ನೀರುತುಂಬಿಕೊಂಡೆ. ಅಪ್ಜಿ ಯಾಕೆ ಎಸೆದಿದ್ದು ನೀವು ಎಂದು ಕೇಳಿದ್ದಕ್ಕೆ, ‘ಇಂಥದ್ದೆಲ್ಲ ಹಚ್ಕೊಂಡು ತುಟಿ ಹಾಳು ಮಾಡ್ಕೋತೀಯೇನು? ಏನೇನು ಕೆಮಿಕಲ್ಸ್ ಹಾಕಿರ್ತಾರೋ ಏನೋ’ ಎಂದು ಕೈಯಿಂದ ಕಸಿದುಕೊಂಡು ಜೋರಾಗಿ ಎಸೆದುಬಿಟ್ಟರು. ನಂಗ್ ಬೇಕದು ದೊಡ್ಡಮ್ಮ ಕೊಡಿಸಿದ್ದು, ಇನ್ನೂ ಒಂದು ಸಲಾನೂ ಹಚ್ಕೊಂಡಿಲ್ಲ ಅಪ್ಜೀ ಎಂದು ಕಣ್ಣುತುಂಬಿಕೊಂಡೆ. ತಕ್ಷಣವೇ ಅದನ್ನು ಗಟ್ಟಿಯಾಗಿ ಹಿಡಿದುಕೊಂಡವಳೇ ಅಂಗಳಕ್ಕೆ ಓಡಿಬಂದು ಮುಟ್ಟಿಗೆ ಬಿಚ್ಚಿದರೆ, ಹಸಿರು ಕವಚ ಸೀಳಿ, ರೆಡ್‍ ಚಿಲ್ಲಿ ಟೋನ್‍ನ ಗೋಣು ಮುರಿದು ಹೋಗಿತ್ತು. ಅಂಟಿಸಹೋದರೆ ಕೈಯೆಲ್ಲ ಕೆಂಪು! ಶ್ರೀ ಎಂದು ಕೂಗಿದ ಅಪ್ಪಾಜಿ ದನಿಗೆ ಕೈಬಿಟ್ಟವಳೇ ದುಡುದುಡು ಬಚ್ಚಲು ಮನೆಗೆ ಓಡಿಹೋಗಿಬಿಟ್ಟಿದ್ದೆ. ಅರ್ಧಗಂಟೆಯ ನಂತರವೂ ಬಿಕ್ಕುತ್ತ ಕುಳಿತವಳಿಗೆ ಕರೆದು, ‘ಮೊದಲು ಅಭ್ಯಾಸದ ಕಡೆ ಗಮನ ಕೊಡು, ಸಂಗೀತದ ಕಡೆ ಗಮನ ಕೊಡು. ಈ ಬಟ್ಟೆ, ಬರೆ, ಶೃಂಗಾರ ಎಲ್ಲ ನಂತರದ್ದು’ ಎಂದು ಹೇಳಿದಾಗ ಹೂಂ ಎಂದಷ್ಟೇ ಹೇಳಿ, ಗಲ್ಲದ ಮೇಲಿನ ಕಣ್ಣೀರು ಒರೆಸಿಕೊಂಡು, ಅವರ ಮುಖವನ್ನೂ ಎತ್ತಿನೋಡದೆ, ಎರಡು ಗೆರೆಯ ಹಾಳೆಗಳ ಮಧ್ಯೆ ಶುದ್ಧಬರಹ ಬರೆಯುತ್ತ ಕುಳಿತುಬಿಟ್ಟಿದ್ದೆ.

ವೇಯ್ಟರ್ ಬಿಸಿನೀರೊಳಗೆ ಮುಳುಗಿದ ಬಟ್ಟಲು ತಂದು ಮುಂದಿಟ್ಟ, ಹಳದಿನಿಂಬೆಯ ಹೋಳು ಮೇಲ್ಮುಖವಾಗಿ ತೇಲುತ್ತಿತ್ತು. ಅಮ್ಮಾ ಬಾಯಿ ಒರೆಸು ಎಂದಳು ಮಗಳು. ಬಾಯೊರೆಸಲು ಹೋದರೆ, ಊಂಹೂ! ಲಿಪ್ ಸ್ಟಿಕ್ ಹೋಗುತ್ತೆ ಬೇಡ ಎಂದು ಕೊಸರಿಕೊಂಡು ಓಡಿಹೋಗಿಬಿಟ್ಟಳು. ಏಯ್‍ ಎಂದು ಕೂಗುವ ಹೊತ್ತಿಗೆ, ಅಕ್ವೇರಿಯಂನಲ್ಲಿ ಏನೋ ಪುಳಕ್ಕೆಂದಿತು. ಎರಡೂ ಹಳದಿಮೀನುಗಳು ಮುಟ್ಟಾಟವಾಡುತ್ತಿದ್ದವು. ಸಣ್ಣಪುಟ್ಟ ಬಣ್ಣಬಣ್ಣದ ಮೀನುಗಳು ಅವುಗಳನ್ನು ಬೆನ್ನು ಹತ್ತಿದ್ದವು.

2 comments:

sunaath said...

ಶ್ರೀದೇವಿ,
ಪುಟ್ಟ ಹುಡುಗಿಯ ಭಾವಕೋಶವನ್ನು ನಿರಾವರಣಗೊಳಿಸಿದ್ದೀರಿ. ಈ ಬಾಲ್ಯದ ಸಂಗತಿಗಳು ಮನಸ್ಸನ್ನು ಅಲುಗಾಡಿಸುತ್ತವೆ. ನನ್ನ ಮನಸ್ಸಿಗೆ ಹತ್ತಿರವಾದ ಮತ್ತೊಂದು ವಿಷಯವೆಂದರೆ, ನೀವು ಉಲ್ಲೇಖಿಸಿದ ಬೆಳಗಾವಿ, ಖಡೇಬಜಾರ,ಬಾಗೇವಾಡಿ, ಬೈಲಹೊಂಗಲ ಇತ್ಯಾದಿ ಊರುಗಳು. ಬೆಳಗಾವಿಯ ಜೊತೆಗೆ ಮಾತ್ರ ಘನಿಷ್ಠ ಸಂಬಂಧವಿದ್ದರೂ ಇನ್ನಿತರ ಊರುಗಳನ್ನು ನಾನು ನೋಡಿದ್ದೇನೆ. ಹೀಗಾಗಿ, ಮನಸ್ಸು ಹಿಂದೋಡಿ, ಖುಶಿಗೊಂಡಿತು. ಧನ್ಯವಾದಗಳು. ಈ ಲೇಖನಕ್ಕೆ ಪ್ರಚೋದನೆ ನೀಡಿದ ನಿಮ್ಮ ಪುಟ್ಟ ಮಗಳಿಗೂ ಸಹ ನನ್ನ ಧನ್ಯವಾದಗಳು!

ಆಲಾಪಿನಿ said...

Thank u uncle