Saturday, March 24, 2018

ಚಿಕನ್ ಪಕೋಡಾ


(ಕಥೆ)

--------------
ಏಯ್ ಯಾಂವಲೇ ಅವ? ಬಂದರ ಬಾರ್ಲೇ, ಹೊಸಾ ಮಚ್ ಅದಲೇ ನಾಕೂ ದಿಕ್ಕಿಗೂ ಕತ್ತರಸಿ ಒಗ್ಗರಣಿ ಹಾಕಿ ಒಗದ ಬಿಡ್ತೇನಿ. ಎಷ್ಟಲೇ ಧೈರ್ಯ ನಿನಗ, ನಮ್ ಮಾಳಗಿ ಮ್ಯಾಲೆ ಓಡಾಡ್ತಿ, ತಾಕತ್ತಿದ್ರ ಎದರ್ಗಡೆ ನಿಂದರಲೇ ಹಲಕಟ್. ಕುಂಬಿ ಹಾರ್ಯಾರಿ ಹೊಕ್ಕಿ? ನಿನಗಿಂತ ನಾಕ್ ಪಟ್ ಎತ್ತರಕ್ ಜಿಗಿತೇನಿ ಮಗನ. ಏಯ್‍ ಕಳ್ಳನನಮಗನ ಬಾಗಿಲಿಗೆ ಕೈಹಾಕಿದ್ಯೋ ಲಟಲಟ ಮುರದ ಒಲಿಬಾಯಿಗೆ ತುರಕಿಬಿಡ್ತೇನ್ಲೇ ನಿನ್ನ. ಬಾರ್ಲೇ ಬಂದ್ ಕಣ್ಣಾಗ ಕಣ್ಣಿಟ್ ಮಾತಾಡ್ಲೇ ಮದ್ಲ!  

ಕೋಣೆಯ ಒಳಬದಿಯ ಕಿಟಿಕಿಯ ಸರಳುಗಳನ್ನು ಮಾತಿನ ಕಸುವಿಗೆ ತಕ್ಕಂತೆ ಪುರುಷೋತ್ತಮ ಎರಡೂ ಮುಷ್ಟಿಗಳಿಂದ ಗುದ್ದುತ್ತಿದ್ದಂತೆ ಪಕ್ಕದ ಮನೆಯ ಕೋಣೆಯ ಕಿಟಕಿ ಸರಳುಗಳೂ ಗ್ರ್ ಗ್ರ್… ಗ್ರಲ್ ರ್. ಮಧ್ಯರಾತ್ರಿ ಒಂದೂಮುಕ್ಕಾಲಿಗೆ ಇದ್ದಕ್ಕಿದ್ದಂತೆ ಗಂಡ ಹೀಗೆ ರೊಚ್ಚಿಗೆದ್ದಿದ್ದನ್ನು ಕಂಡ ಅವನ ಹೆಂಡತಿ ಚಂದ್ರಲಾ ಹಲ್ಲಿಯಂತೆ ಗೋಡೆಗಂಟಿ ಹೌಹಾರಿದ್ದಳು.

***  
ಮುಸ್ಸಂಜೆಯಲ್ಲಿ ಮುಂಬಾಗಿಲೆಳೆದು ಪುರು ರಸ್ತೆಗಿಳಿದರೆ ಮುಗಿಯಿತು. ಬಸ್ಸಿಗಾಗಿ ಕಟ್ಟೆಯ ಮೇಲೆ ಕುಳಿತಾಗಲೂ, ಹತ್ತುವಾಗಲೂ, ಟಿಕೆಟ್ ಇಸಿದುಕೊಳ್ಳುವಾಗಲೂ, ಕೆಲಸದ ಜಾಗ ತಲುಪುವತನಕವೂ ಬಗ್ಗಿಸಿದ ಕತ್ತು ಮಾತ್ರ ಹಾಗೇ. ಎಲೆಯಡಿಕೆರಸ ಪೀಕಲು ಮಾತ್ರ ಅವ ತಲೆ ಎತ್ತುತ್ತಿದ್ದ. ವಾರಕ್ಕೊಮ್ಮೆಯೋ ಎರಡು ಸಲವೋ ಮಟಮಟ ಮಧ್ಯಾಹ್ನ ಶೋಲ್ಡರ್ ಬ್ಯಾಗ್ ನೇತಾಡಿಸಿಕೊಂಡು, ದಿನಪತ್ರಿಕೆಯ ತುಂಡಿನಲ್ಲಿ ಎರಡೇ ಎರಡು ಮೈಸೂರು ಪಾಕು ಮತ್ತು ಮೊಳ ಮಲ್ಲಿಗೆ ಹಿಡಿದು ಮನೆಗೆ ಬಂದು ಬಾಗಿಲು ಬಡಿಯುವಾಗಲೂ ಮತ್ತದೇ ತಲೆಕೆಳಗು. ದೇವರು ಒಳಗೆ ಹೋದಾಗಲೂ ಹೋಗದಿದ್ದಾಗಲೂ ಅವ ಹಾಗೇ. ಎಷ್ಟೋ ಸಲ ರಸ್ತೆಯಲ್ಲಿ ಸೈಕಲ್ಲಿಗರು, ಗಾಡಿ ಸವಾರರು, ಗೂಳಿಗಳು ಹಾಯ್ದು ಹೋದರೂ, ತಾನೇ ತುಸು ವಾಲಿದೆನೇನೋ ಎಂದುಕೊಳ್ಳುತ್ತ ತಾಕಿದ ಜಾಗವನ್ನು ನಿರ್ಲಿಪ್ತವಾಗಿ ಸವರಿಕೊಂಡು ಹೊರಟುಬಿಡುತ್ತಿದ್ದ. ಅರ್ಧತಲೆ ಬಕ್ಕಾಗಿದ್ದರೂ ಕಿವಿಯಂಚಿನಗುಂಟ ಕರಿಬಿಳಿಕೂದಲು ಗೂಡು ಕಟ್ಟಿತ್ತು. ಬಿಳಿ ಶರಟಿನ ಮೇಲೆ ಸದಾ ಎದೆಯಡಿಕೆಯ ಮೊಹರು.  ಕಾಲೊಳಗಿನ ಹವಾಯಿ ಚಪ್ಪಲಿಗಳ ಪಟಪಟತನಕ್ಕೆ ಬಿಳಿ ದೊಗಳೆ ಪಾಯಿಜಾಮದ ಕೆಳತುದಿ ಮಾತ್ರ ಯಾವಾಗಲೂ ಖೊಡ್ಡಮಡ್ಡ.

ಮಿಚಿಗಿನ್ ಚಾಳಿನಲ್ಲಿ ಮಕ್ಕಳು, ಮೊಮ್ಮಕ್ಕಳು ಬಂದರೂ ಹೊದಿಸಿದ ಹಂಚು, ಕೂರಿಸಿದ ಟೈಲ್ಸು, ನೆಟ್ಟ ಗೇಟು ಹಾಗೇ ಇದ್ದವು. ಕಿಟಕಿ, ಗೋಡೆಗಳು ಮಾತ್ರ ಆಗಾಗ ಬಣ್ಣ ಬದಲಾಯಿಸಿಕೊಳ್ಳುವ ವಾಡಿಕೆ ಇಟ್ಟುಕೊಂಡಿದ್ದವು. ಮಂಗಗಳ ಹಿಂಡು ದಾಂಧಲೆ ಮಾಡಿದಾಗಲೋ, ಮರದಿಂದ ತೆಂಗಿನಕಾಯಿ ಬಿದ್ದಾಗಲೋ, ಹುಡುಗರು ಚೆಂಡು ಬೀಸಿದಾಗಲೋ… ಧೋಮಳೆಗೋ, ರಣಬಿಸಿಲಿಗೋ ಪಾಚಿಗಟ್ಟಿ ಕಪ್ಪುಗಟ್ಟಿಬಿಟ್ಟಿದ್ದ ಮಂಗಳೂರು ಹಂಚುಗಳು ಹೊಟ್ಟೆಸೀಳಿಕೊಂಡಾಗಲೇ ತಮ್ಮ ಬಣ್ಣ ಬಯಲು ಮಾಡುತ್ತಿದ್ದವು. ಚಾಳಿನ ಹಿತ್ತಿಲಿನ ಒಗೆಕಲ್ಲುಗಳ ಹರಿವಣಿಗೆಯಿಂದ ಅರ್ಧಮಾರು ಅನತಿಯಲ್ಲೇ ಸಣ್ಣ ಬಾಳೆತೋಟ ಹುಟ್ಟಿಕೊಂಡಿತ್ತು. ಸುಮಾರು ಐದು ವರ್ಷಗಳ ಹಿಂದೆ ಕೆಲಸದ ಮೇಲೆ ಕೇರಳಕ್ಕೆ ಹೋದಾಗ ಅಲ್ಲಿಯ ಬಾಳೆಹಣ್ಣಿಗೆ ಮಾರುಹೋದ ಪುರು, ಒಂದಿಷ್ಟು ಅಗಿಗಳನ್ನು ತಂದು ನೆಟ್ಟಿದ್ದ. ಯಾವಾಗಬೇಕಾದರೂ ಚಾಳಿನ ಯಾರೂ ಆ ಎಲೆಗಳನ್ನು ಯಾವುದಕ್ಕೂ ಕಿತ್ತುಕೊಂಡು ಹೋಗಬಹುದಿತ್ತು. ಅದರಲ್ಲೂ ನೀರಿನ ತಾಪತ್ರಯವಾದಾಗಲಂತೂ ಉಪ್ಪಿಟ್ಟು, ಅವಲಕ್ಕಿ, ಸೂಸಲ, ಊಟಕ್ಕೂ ಎಲೆಗಳೇ ಗತಿ. ಆದರೆ ಪೊಗದಸ್ತಾದ ಆ ಬಾಳೆಗೊನೆಗಳು ಮಾತ್ರ ಸದಾ ಹಣಮಂತನ ಹಿಂಡಿಗೇ ನೈವೇದ್ಯ. ಇದುವರೆಗೂ ಚಾಳಿನ ಯಾರೂ ಅವುಗಳ ರುಚಿಯನ್ನೇ ನೋಡಿರಲಿಲ್ಲ. ಮಂಗಗಳ ಈ ಹಾವಳಿಯಿಂದ ಬೇಸತ್ತರೂ, ‘ಅಯ್ಯ ತಿನ್ಲಿ ಬಿಡ್ರಿ, ತಿನ್ನೂದು ಅವನ ಹಕ್ಕು, ಹಣಮಂತ ತಾನೂ ತಿಂದ್ ನಮ್ನೂ ಕಾಯ್ತಾನು’ ಎಂದು ಅಲ್ಲಿದ್ದವರು ಕೈಮುಗಿಯುತ್ತಿದ್ದರು.

ಹೀಗಿರುವಾಗ ಬಾಳೆಗೊನೆಯ ತುದಿಗೆ ಅರಳಿದ ಹೂಗಳೊಂದಿಷ್ಟು ಉದುರಿ, ಒಂದೆರಡು ಬಾಳೆ ಎಲೆಗಳು ಹೊಟ್ಟೆಹರಿದುಕೊಂಡು, ಶರಟಿನ ಒಂದರ್ಧ ಗುಂಡಿ ನೀರಹರಿಯ ದಾರಿಯಲ್ಲಿ  ಬಿದ್ದಿದೆಯೆಂದರೆ, ನೀಲಿಸೋಪಿನ ತುಣುಕುಗಳು ಹರಡಿವೆಯೆಂದರೆ, ಈಗಷ್ಟೇ ಪುರುನ ಹೆಂಡತಿ ಚಂದ್ರಲಾ, ಚಂದೂಳೇ ಕಲ್ಲಿಗೆ ಪುರುವಿನದೇ ಬಟ್ಟೆಗಳನ್ನು ಕುಕ್ಕಿಕುಕ್ಕಿ ಹೋಗಿದ್ದಾಳೆಂದರ್ಥ; ಗಾಣದೆತ್ತಿನ ಹಾಗೆ ಗಣಗಣ ತಿರುಗುತ್ತ ಮೈಮುರಿದು ದುಡಿಯುವ ತನ್ನ ಗಂಡ ಬಾಯಿ ಸತ್ತ ಮನುಷ್ಯ.  ಇದುವರೆಗೂ ಒಬ್ಬ ಗೆಳೆಯನನ್ನೂ ಮನೆಗೆ ಕರೆತಂದದ್ದಿಲ್ಲ. ಸಂಬಂಧಿಕರ ಮನೆಗೂ ಕರೆದೊಯ್ದಿದ್ದಿಲ್ಲ.  ಯಾರು ಬಂದರೂ ಎರಡೇ ಮಾತಾಡಿ ಸುಮ್ಮನಾಗುವುದು. ಅವಳ ಹೋಗಲಿ ತನ್ನ ಕಳ್ಳುಬಳ್ಳಿ ಸಂಬಂಧಗಳನ್ನೂ ಹೊಸಿಲಿನೊಳಗೆ ಹಬ್ಬಗೊಟ್ಟಿದ್ದಿಲ್ಲ. ಖಾಲಿಯಾದ ಅಕ್ಕಿ, ಬೇಳೆ, ಎಣ್ಣೆ ಡಬ್ಬಿಗಳ ಖಬರಂತೂ ಮೊದಲಿನಿಂದಲೂ ಇಲ್ಲ. ಹೀಗೆ ಆದರೆ ಏನು ಗತಿ? ಎಂದು ಯೋಚಿಸಿದ ಚಂದೂ, ಇದ್ದೊಬ್ಬ ಮಗಳಾದರೂ ಈ ಎಲ್ಲ ನೆರಳಿನಿಂದ ಆಚೆ ಬೆಳೆಯಲಿ ಎಂದು ಗಟ್ಟಿ ಮನಸ್ಸು ಮಾಡಿ ಕಳೆದ ವರ್ಷ ಹಾಸ್ಟೆಲ್ಲಿಗೆ ಸೇರಿಸಿಬಂದಿದ್ದಳು. ಹೊಲಿಗೆಯೊಂದೇ ತನ್ನನ್ನು ತನ್ನ ಮನೆಯನ್ನು ಕಾಯುವ ಸಂಗಾತಿಯೆಂಬುದು ಅವಳಿಗೆ ಅರಿವಾಗಿತ್ತಾದರೂ ಮೂಲದಲ್ಲಿ ಗಂಡನ ಬಗ್ಗೆ ಅಸಹನೆ ಉಳಿದೇ ಇತ್ತು. ಇದೆಲ್ಲದರ ಪರಿಣಾಮವೇ ಶರಟಿನ ಗುಂಡಿಗಳ ಮಾರಣಹೋಮ.

ಮಜಾ ಎಂದರೆ, ಇಡೀ ಚಾಳಿನ ಮಂದಿಯ ಬಟ್ಟೆ ಹೊಲೆದು ಚೆಂದ ಮಾಡಿಕೊಡುವ ಚಂದೂಳ ಗಂಡ ಮಾತ್ರ ಸದಾ ಹೆಂಡತಿಯ ಕೈಬಳೆಗಳ ಮಧ್ಯೆ ನೇತಾಡುತ್ತಿದ್ದ ಪಿನ್ನುಗಳನ್ನೇ ಗುಂಡಿ ಉದುರಿದ ಜಾಗದಲ್ಲಿ ಸಿಕ್ಕಿಸಿಕೊಂಡು ಓಡಾಡುತ್ತಿದ್ದ. ‘ಟೇಲರ್ಬಾಯಿ, ತನ್ನ ಗಂಡನ ಅಂಗಿಗೆ ಬಿಡ್ಡಿ ಹಚ್ಚಿದ ದಿನಾನ ಅಕಿ ಸೂಜಿ ಅದ ದಾರದಾಗ ಉರಲ್ ಹಾಕ್ಕೊಂಡ್ ಸತ್ತ ಹೋಗ್ತದೇನೋ’ ಎಂದು ಚಾಳಿನ ಹೆಣ್ಣುಮಕ್ಕಳು ಕಟ್ಟೆಗೆ ಕುಳಿತು ಗೇಲಿ ಮಾಡುತ್ತಿದ್ದರು. ಆಗೆಲ್ಲ ಅವಮಾನವಾದಂತಾಗಿ ತಾನೇ ಗುಂಡಿ ಹಚ್ಚಿಕೊಟ್ಟು, ಮತ್ತೆ ತಾನೇ ಒಗೆಯುವ ಕಲ್ಲಿಗೆ ಕುಕ್ಕಿಕುಕ್ಕಿ ಅದನ್ನು ಹಾರಿಸಿಬಿಡುತ್ತಿದ್ದಳು. ಆದರೆ ಪುರು ಮಾತ್ರ ಅವಳ ಪಿನ್ನುಗಳನ್ನೇ ನಂಬಿಕೊಂಡಿದ್ದರಿಂದ ಇದ್ಯಾವುದನ್ನೂ ಗಮನಿಸುತ್ತಿರಲಿಲ್ಲ.  

***
ಬೆಳಗ್ಗೆ ಕೊಡಬೇಕಾದ ಮಂದಿಯ ಬಟ್ಟೆಗಳಿಗೆ ಕಾಜು-ಗುಂಡಿ ಮತ್ತು ಕೈಹೊಲಿಗೆ ಎಲ್ಲ ಮುಗಿಸಿ,  ಹೆಸರು ಕಾಳು ನೆನೆಹಾಕಿದ ಬೋಗುಣಿಗೆ ಬಾಯಿ ಮುಚ್ಚಿ, ಕಸದ ಬುಟ್ಟಿ ಹೊರಗಿಟ್ಟು, ಮುಂಬಾಗಿಲ ಚಿಲಕ ಸರಿಸಿ, ಇನ್ನೇನು ಚಂದೂ ಲೈಟು ಆರಿಸಿ ಮಲಗಬೇಕೆನ್ನುವಾಗಲೇ ಪುರು ಹೀಗೆ ಮಧ್ಯರಾತ್ರಿಯಲ್ಲಿ ಗಂಟಲು ಹರಿದುಕೊಂಡು ಪೌರುಷ ತೋರಲು ನೋಡಿದ್ದ. ಕಿಟಕಿಯಿಂದಾಚೆ ಜಮಾಯಿಸಿದ್ದ ನಾಲ್ಕೈದು ನಾಯಿಗಳನ್ನೂ, ಅವುಗಳ ಹೊಳೆಯುವ ಕಣ್ಣುಗಳನ್ನು ಮತ್ತು ಬೊಗಳುವಿಕೆಯನ್ನು ಕಂಡ ಆಕೆ ಮೊದಲ ಬಾರಿಗೆ ನಿಂತಲ್ಲೇ ಬೆವರಿದ್ದಳು. ಸ್ವಲ್ಪ ಹೊತ್ತಿನ ಬಳಿಕ ಬಾಗಿಕೊಂಡ ಆಕೃತಿಯೊಂದರ ನೆರಳು ಗೇಟಿನಿಂದ ದಾಟಿದಂತಾಗಿ, ಬೀದಿನಾಯಿಗಳೆಲ್ಲ ಕೂಗುತ್ತ ಅದನ್ನು ಅಟ್ಟಿಸಿಕೊಂಡು ಹೋದಂತೆನಿಸಿ ಪಟಕ್ಕನೆ ಕಿಟಕಿ ಮುಚ್ಚಿದಳು.

ಅಷ್ಟು ಒದರಿಬಂದ ಪುರು ಚಾಪೆ ಮತ್ತು ನುಗ್ಗಾದ ತಲೆದಿಂಬಿನ ಮೇಲೆ ಟವೆಲ್ ಹಾಸಿ ಹತ್ತು ನಿಮಿಷ ಥಣ್ಣಗೆ ಕುಳಿತ. ನಿಧಾನ ಅವನ ಪಕ್ಕ ಕೂತಳು. ಇಂದು ತಾನಾಗೇ ಹತ್ತಿರಬಂದ ಹೆಂಡತಿಯನ್ನು ನೋಡಿ, ‘ಓಹ್ ಬಾಯಾರ ಬ ಬರ್ರಿ’ ಎಂದು ಕತ್ತಲಲ್ಲೇ ಮೈಸೂರುಪಾಕಿನ ಪೊಟ್ಟಣಕ್ಕೆ ತಡಕಾಡುತ್ತ ಇನ್ನೊಂದು ಕೈಯಿಂದ ಅವಳ ಕೈಹಿಡಿದೆಳೆದ. ಅವನ ವರಸೆಯಿಂದ ಮಾಮೂಲಿ ಧಾಟಿಗೆ ಬರುತ್ತಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡ ಆಕೆ ನಿಟ್ಟುಸಿರುಬಿಟ್ಟಳು. ‘ಯಾರ್ ಬಂದಿದ್ರು? ಯಾಕ ಒದರ್ಲಿಕ್ಹತ್ತಿದ್ದಿ?’ ಎಂದು ಅಂಜಿಕೆಯನ್ನು ಒಳಕ್ಕೆಳೆದುಕೊಂಡು ಬಿರುಸಾಗೇ ಕೇಳಿದಾಗ, ‘ಕಳ್ಳ ಬಂದಿದ್ನರಿ ಬಾಯಾರ. ಮಾಳಗಿ ಹಂಚ್ ತಗೀಲಿಕ್ ನೋಡಿದಾ, ಹಿತ್ತಲಕಡೆ ಹೊಕ್ಕೊಳ್ಳಿಕ್ಕೆ ನೋಡಿದ, ಕುಂಬಿ ಮ್ಯಾಲೆ ಎಷ್ಟೋತ್ತನ ಓಡಾಡ್ತಿದ್ದ, ನಾ ಮಾತ್ರ ಹಿಂಗ ನಿಂತಲ್ಲೇ ನಿಂತು ಅವ್ನನ್ ಓಡಿಸೇಬಿಟ್ನಿ ನೋಡ್ರಿ. ಹಿತ್ತಲ್ಕಡೆನೂ ಹೋಗಿದ್ನೇನೋ ಅವ. ಏಯ್ ಹೊರಗಿಂದೇನರ ಹೊಡಕೊಂಡ್ ಹೋಗವಾಲ್ನ್ಯಾಕ ಒಳಗಿಂದಕ್ ಕೈಹಾಕ್ಲಿಕ್ ಮಾತ್ರ ನಾ ಬಿಡ್ಲಿಲ್ ನೋಡ್ರಿ, ಭೇಷ್ ಮಾಡಿದ್ನಿಲ್ರಿ ಮತ್? ನಮ್ಮನೀ ಬಾಗಲಾ ಕಿಡಕಿ ಗ್ವಾಡಿಗೆ ಮುಕ್ ಮಾಡಲಾರದ್ಹಂಗ ಅವನನ್ನ ಅತ್ತಿಂದತ್ತ ಓಡ್ಸೇಬಿಟ್ಟೆ.’ ಎಂದು ಗೋಡೆಗೆ ಆತುಕೊಂಡು ಕಾಲಮೇಲೆ ಕಾಲು ಹಾಕಿ ಪಾದ ಅಲುಗಾಡಿಸತೊಡಗಿದ.

ಬಾಗಿಲು ತೆಗೆದು ಮನೆಸುತ್ತ ಒಮ್ಮೆ ನೋಡಿಬಿಡಬೇಕು ಎಂದು ಎದ್ದುನಿಂತವಳನ್ನು ಪುರು ಕೈಹಿಡಿದು, ‘ಏಯ್ ಕೂಡ್ರಿ ಬಾಯಾರ ಕಳ್ಳ ಓಡಿಹೋದ’ ಎಂದು ಅಪ್ಪಿಕೊಳ್ಳಲು ನೋಡಿದ. ಕೊಸರಿಕೊಂಡು ದೂರ ಕುಳಿತಳು. ಕಳ್ಳ ಬಂದಿದ್ದು ಖರೆ? ಛೆ ಇರ್ಲಿಕ್ಕಿಲ್ಲ. ನಿದ್ದಿಗಣ್ಣಾಗ ಏನರ ಒದರಿರಬೇಕು ಈ ಡಬಲ್ಯಾ ನನ ಗಂಡ ಒಯ್ದೊಂದ್. ಅಷ್ಟಕ್ಕೂ ಸೋಸಿ ಜೀವನಾ ಮಾಡೂ ನಮ್ಮಂಥವರ ಮನಿಯೊಳಗ ಕದಿಯುವಂಥದ್ದರ ಏನಿರಬೇಕ್ ಅಂತೀನಿ. ಸೂಜಿ ಬಿಟ್ರ ದಾರಾ, ದಾರಾ ಬಿಟ್ರ ಬಟನ್ನಾ, ಬಟನ್ ಬಿಟ್ರ ಕತ್ರಿ, ಕತ್ರಿ ಬಿಟ್ರ ಮಶೀನಾ, ಮಶೀನ್ ಬಿಟ್ರ ಅವ್ರಿವ್ರು ಕೊಟ್ ಹೊಲಿಯೂ ಅರಬಿ ಅಂಚಡಿ. ಹದಿನೈದ ವರ್ಷದ ಹಿಂದ ನಮ್ಮಪ್ಪ ನಮ್ಮವ್ವ ಕೊಟ್ಟಿದ್ ನಾಕ ಭಾಂಡೆ ಸಾಮಾನು, ಎರಡು ಕುರ್ಚಿ ಒಂದ್ ಗಾದಿ ಎರಡ ದಿಂಬಾ ಚಾದರ್. ಅಲ್ಲಾ ನಮ್ ಮನ್ಯಾಗ್ ಏನ್ ತುಂಬಿ ಸುರೀಲಿಕ್ಹತ್ತದ ಅಂತ ಕಳ್ಳ ಬಂದಿದ್ದ…? ತನ್ನೊಳಗ ತಾ ಮಾತಾಡಿಕೊಳ್ಳುತ್ತ ಹಣೆಗೆ ಕೈಹಚ್ಚಿ ಕುಳಿತಿದ್ದವಳನ್ನು ಒಮ್ಮೆಲೆ ತನ್ನ ಮೇಲೆ ಎಳೆದುಕೊಂಡೇಬಿಟ್ಟ. ‘ಏಯ್ ಸುಟ್ ಬರ್ಲಿ ನಿನ್ ಒಯ್ದೊಂದ್, ಬಿಡ್ತೀಯಿಲ್ ನನ್’ ಎಂದು ಬಿಡಿಸಿಕೊಳ್ಳಲು ನೋಡಿದಳು. ಅದಕ್ಕೆ ಅವ, ‘ಏಯ್ ರಾಣಿಸಾಹೇಬ್ರ ನಿಮ್ ಪಾದಾ ಕೊಡ್ರಿ, ಬ್ಯಾರೇ ಏನೂ ಬ್ಯಾಡ್ರಿ ನಂಗ. ನಿಮ್ ಪಾದಾ ಪಾದಾ’ ಮತ್ತಷ್ಟೂ ಆಕ್ರಮಿಸತೊಡಗಿದ. ‘ಏ ನಿನ ಮಾರಿ ಮಣ್ಣಾಗಡಗಲಿ, ತಿಂದ್ ತಿಂದ್ ಕ್ವಾಣ ಕ್ವಾಣ ಆಗಿ. ಉಸರ್ ಸಿಕ್ಕೊಳ್ಳಿಕ್ಹತ್ತದ್, ಬಿಡ್ತೀಯಿಲ್ ನನ್? ಏಳ ಮ್ಯಾಲ, ಮಾರಿ ಹತ್ರ ಬರಬೇಡ, ಹೊಲಸ್ ನಾರ್ಲಿಕ್ಹತ್ತದ್ ನಿನ್ ಬಾಯಿ’ ಎಂದು ಹೇಳುತ್ತಲೇ ಕೈಗೆ ಸಿಕ್ಕ ಏನನ್ನೋ ತೆಗೆದುಕೊಂಡು ಹೊಡೆದೇಬಿಟ್ಟಳು. ಹೊಡೀಬ್ಯಾಡ್ರೀ ಚಂದೂಬಾಯಾರ ನಿಮ್ ಎದಿ ಬೇಕ್ರಿ ನನಗ, ಬೆಚ್ಚನ್ ಎದಿ ಮ್ಯಾಲ ಸುಮ್ನ ಕೂಸಿನಗತೆ ಮಕ್ಕೋತೇನ್ರಿ’ ಎಂದು ಕೈಮುಗಿಯತೊಡಗಿದ. ‘ಏಯ್ ನಿನ್ ಚಾಲಿ ಗೊತ್ತಿಲ್ಲೇನ್ ನನಗ? ಸುಮ್ ಮಕ್ಕೋತೆನಂತ ಹುರದ ಮುಕ್ಕೇಬಿಡ್ತೀ ನನ್ನ. ಮಗಳು ಮೈನೆರೀಲಿಕ್ ಬಂದದ ನಾಚಿಕಿಯಾಗಬೇಕು ನಿಂಗ. ಪಾಪ ಅದೊಂದ ಅಲ್ಲಿ ಹಾಸ್ಟೆಲ್‍ನ್ಯಾಗ ಹೆಂಗದನೋ ಏನೋ. ಈ ಸಲ ಭೆಟ್ಟಿಗೆ ಹೋದಾಗ ಅದಕ್ಕೊಂದು ಕೀಲಿ ಇರೋ ಸೂಟ್ಕೇಸ್ ತುಗೊಂಡ್ ಹೋಗಬೇಕು. ಎರಡ ಸಲ ಅದರ ಟ್ರಂಕಿನ ಬಾಯಿ ಬಿಟ್ಕೊಂಡಿತ್ತಂತ ಸಾಮಾನು ಚಲ್ಲಾಪಿಲ್ಲಿಯಾಗಿದ್ದೂವಂತ. ಹೆಂಗರ ಮಾಡಿ ಒಂದ್ ಬಂದೋಬಸ್ತ್ ಇರೋ ಸೂಟ್ಕೇಸ್ ಒಯ್ದ್ರಾತು ಅಂತ ನಾ ಒದ್ದಾಡ್ಲಿಕ್ಹತ್ರ ನಿಂದ್ ನಿನಗ!’ ಚಂದೂ ಚಾಪೆಬಿಟ್ಟು ನೆಲಕ್ಕೆ ಮುದುಡಿ ಮಲಗಿ ಹಾಗೇ ನಿದ್ದೆಹೋದಳು ಸಣ್ಣ ಮೈಕಟ್ಟಿನ ಚಂದ್ರಲಾ. ಪ್ರತೀವಾರವೂ ಒಂದಿಲ್ಲಾ ಒಂದು ಕಾರಣದಿಂದ ಮೊಳಮಲ್ಲಿಗೆ ಬಾಡಿಹೋಗುವುದು, ಮೈಸೂರುಪಾಕು ಚೆಲ್ಲಾಪಿಲ್ಲಿಯಾಗಿ ಇರುವೆಗಳ ಪಾಲಾಗುವುದು ಮಾಮೂಲಿಯಾಗಿತ್ತು. ಆದರೂ ಹೆಂಡತಿಯ ಪಾದ ಮತ್ತು ಎದೆಯ ಧ್ಯಾನದಿಂದ ಆತ ಕದಲುತ್ತಿರಲಿಲ್ಲ.

ಇತ್ತ ಎದ್ದವನೇ ಮುಂಬಾಗಿಲ ಚಿಲಕ ಸರಿಸಿದ. ಬೀದಿನಾಯಿ ಮಂದಾಕಿನಿ ಗೇಟಿನೆದುರು ಬಂದು ಮೂಸತೊಡಗಿದ್ದಳು. ಇಡೀ ಓಣಿಗೆ ಓಣಿಯೇ ಮುಸುಕು ಹೊದ್ದು ಮಲಗಿತ್ತು. ಚಪ್ಪಲಿ ಹಾಕಿಕೊಂಡವನೆ ಹಿತ್ತಲ ಬಳಿ ನಡೆದ. ಕಟ್ಟಿಗೆಯ ಗುಡ್ಡೆಯ ಹಿಂದೆ ಕೈಹಾಕಿ ಕತ್ತಲಲ್ಲೇ ಏನೋ ಹುಡುಕತೊಡಗಿದ. ಮಂದಾಕಿನಿ ಅಲಿಯಾಸ್ ಮಂದಿ ಮಾತ್ರ ಇವನ ಬೆನ್ನಿಗೆ ನಿಂತು ಕುಂಯ್‍ಗುಡತೊಡಗಿದಳು.  ಮಂಡಿಯೂರಿ ಕುಳಿತು ಗೋಡೆಗೆ ಆನಿಸಿಟ್ಟಿದ್ದ ಕಟ್ಟಿಗೆಯ ಸಂದಿಯಲ್ಲಿ ಮತ್ತೂ ಕೈಹಾಕಿ ಹುಡುಕಾಟ ಮುಂದುವರಿಸಿದ. ಇಲಿಬುಡ್ಡಕವೊಂದು ಪಾದಗಳ ಮೇಲೆ ಹರಿದು ಹೋಗಿದ್ದರಿಂದ ಬೆಚ್ಚಿಬಿದ್ದು ಎದ್ದುನಿಲ್ಲಲು ಹೋದವನು ಹಾಗೇ ಆಯತಪ್ಪಿ ಬಿದ್ದುಬಿಟ್ಟ. ಚೂಪುಗಲ್ಲೊಂದು ತಲೆಗೆ ತಾಕಿತು. ಅಯ್ಯೋ ಅಮ್ಮಾ ಎಂದವನೆ ಹಾಗೇ ಕುಸಿದ. ಕತ್ತಲೆ ತನ್ನ ಕಣ್ಣುಗಳಿಗೆ ಕೈಹಾಕಿ ಕಿತ್ತುಕೊಳ್ಳುತ್ತಿರುವಂತೆ ಭಾಸವಾಯಿತು, ಬಳಬಳನೆ ರಕ್ತ ಸುರಿಯತೊಡಗಿತು.

 ***
ಕ್ಚಚಕ್ ಚಿಬುಕ್ ಕ್ವಚಕ್ ಚಿಬುಕ್… ಸಣ್ಣ ಸಣ್ಣ ಕಟ್ಟಿಗೆ ಬೊಡ್ಡೆಗಳ ಮೇಲೆ ಮಾಂಸ, ಅಂಗಡಿಯವನಿಂದ ಕತ್ತರಿಸಿಕೊಳ್ಳುತ್ತಿತ್ತು. ಸುರುಳಿಸುತ್ತಿದ್ದ ಕೈಚೀಲವನ್ನು ಕಂಕುಳಲ್ಲಿ ಹಿಡಿದು ನಿಂತಿದ್ದ ಪುರು, ಎಡಗೈಯಿಂದ ಮೂಗು ಮುಚ್ಚಿಕೊಂಡು ಕಣ್ಣು ಕುಗ್ಗಿಸಿ ನೋಡುತ್ತಿದ್ದ. ಗೂಡಿನೊಳಗಿದ್ದ ಕೋಳಿಗಳು  ಕಣ್ಣಲ್ಲೇ ಇವನನ್ನು ಮಾತನಾಡಿಸುತ್ತಿದ್ದವು. ತರಕಾರಿ ಕತ್ತರಿಸುವಷ್ಟೇ ಸಲೀಸಾಗಿ ಇವ ಮಾಂಸವನ್ನು ಕತ್ತರಿಸುತ್ತಿದ್ದಾರಲ್ಲ ಎಂದು ಬೆರಗಿನಿಂದ ನೋಡುತ್ತಿರುವಾಗಲೇ ಮೂಗು ಮುಚ್ಚಿಕೊಂಡಿದ್ದ ಕೈ ಅವನಿಗರಿವಿಲ್ಲದೆ ಕೆಳಗೆ ಇಳಿದಿತ್ತು. ನಿಧಾನ ಮೂಗು ಮೆದುಳು ಆ ಅಂಗಡಿಯ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಂತೆ, ಕಿಸೆಯಲ್ಲಿದ್ದ ಚೀಟಿಯನ್ನು ಹಿಡಿದು ಅಂಗಡಿಯವನ ಬಳಿ ನಿಂತ.  ಚಷ್ಮಾದೊಳಗಿನಿಂದ ಪುರುವನ್ನು ಮತ್ತು ಚೀಟಿಯನ್ನೂ ನೋಡಿದ ಅಂಗಡಿಯವ, ಐದು ಕೆಜಿ ಮಾಂಸವನ್ನು ಪುರು ಹಿಡಿದಿದ್ದ ಚೀಲದೊಳಗೆ ಇಳಿಸಿದ. ಒಮ್ಮೆಲೆ ಭಾರವಾದಂತೆನಿಸಿ ಚೀಲದ ಹ್ಯಾಂಡಲ್ ಕೈಜಾರಿತು. ಊಟ ಮಾಡಿಲ್ವಾ? ಎಂದು ಕೈಸನ್ನೆಯಲ್ಲೇ ಕೇಳಿದ ಅಂಗಡಿಯಂವ. ಆದರೆ ಪುರು ತನ್ನ ಗುಂಗಲ್ಲೇ ಇದ್ದ, ‘ಇಲ್ಲ ಇಲ್ಲ ನಾನಿದೇ ಮೊದಲ ಬಾರಿ ಮುಟ್ಟುತ್ತಿರುವುದು. ಈಗ ಅಡುಗೆಯನ್ನೂ ಮಾಡಬೇಕು’ ಎಂದು ತನ್ನೊಳಗಿನ ಸಂಕಟವನ್ನು ತೋಡಿಕೊಂಡು, ಕಿಸೆಯಲ್ಲಿದ್ದ ಹಣ ಕೊಟ್ಟು ಹೊರಡಬೇಕೆನ್ನುವಾಗ ಅಂಗಡಿಯಂವ ಕೈಸನ್ನೆ ಮಾಡಿ ಅವನನ್ನು ತಡೆದು, ಸಣ್ಣ ಮಚ್ಚೊಂದನ್ನು ಪೇಪರಿನಲ್ಲಿ ಸುತ್ತಿ ಅವನಿಗೆ ಕೊಟ್ಟ.

ಉಸಿರು ಬಿಗಿಹಿಡಿದುಕೊಂಡೇ ಆ ಸಾಲುಮಾಂಸದಂಗಡಿಗಳನ್ನು ದಾಟಿಕೊಂಡು, ತಾನು ಕೆಲಸ ಒಪ್ಪಿಕೊಂಡ ಮನೆಗೆ ಬಂದ ಪುರು. ಕಾಂಟ್ರ್ಯಾಕ್ಟರ್, ಶಾಮಿಯಾನದ ಬಳಿ ಇವನನ್ನೇ ಕಾಯುತ್ತ ನಿಂತಿದ್ದ. ‘ಎಷ್ಟೊತ್ಲೇ ಮಗನ, ಅಡಗಿ ಯಾರ್ ನಿಮ್ಮಜ್ಜ ಮಾಡ್ತಾನು? ಎರಡ್ನೂರ ಮಂದಿಗೆ ಅಡಗಿ ಆಗಬೇಕು. ನಡ್ನಡಿ ಲಗೂ. ಈ ಆರ್ಡರ್ ಮುಗಿಸಿದ್ರಷ್ಟ ನಿನಗೆ ಐದು ಆರ್ಡರಿನ ಬಾಕಿ ಚುಕ್ತಾ ಮಾಡ್ತೀನಿ. ಇಲ್ಲ ನನಗೂ ನಿನಗೂ ಸಂಬಂಧ ಇಲ್ಲ’ ಎಂದು ಸಿಗರೇಟೆಳೆಯುತ್ತ ರಸ್ತೆಬದಿ ನಿಂತ. ಇತ್ತ ಪುರು ಕೀ ಕೊಟ್ಟ ಗೊಂಬೆಯಂತೆ ಒಲೆಹೂಡಿದ್ದ ಜಾಗಕ್ಕೆ ಬಂದು ನಿಂತ. ಒಂದು ಒಲೆಯ ಮೇಲೆ ಕುದಿಯಲು ನೀರನ್ನಿಟ್ಟು, ಮಾಂಸವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿಸಿ ಪಾತ್ರೆಗೆ ಸುರಿದು ಕಣ್ಣುಮುಚ್ಚಿನಿಂತ. ಚಿಕ್ಕಂದಿನಲ್ಲಿ ಶಾಲೆಯಿಂದ ಮನೆಗೆ ಬಂದಾಗ ತನ್ನಮ್ಮ ಬಿಂದಿಗೆ ಇಟ್ಟುಕೊಂಡು ಬಾಗಿಲ ಬಳಿ ಕಾಯುತ್ತಿದ್ದುದು ಕಣ್ಮುಂದೆ ಬಂತು; ಪುರು ಇನ್ನೊಂದು ಬದಿಯ ಕಟ್ಟೆಯ ಮೇಲೆ ಪಾಟಿಚೀಲವನ್ನು ಮತ್ತು ಅದರೊಳಗಿಂದ ಬುತ್ತಿಡಬ್ಬಿಯನ್ನು ತೆಗೆದಿಡುತ್ತಿದ್ದಂತೆ ಅವನಮ್ಮ ಈ ಬದಿಯ ಕಟ್ಟೆಮೇಲೆ ಬಿಂದಿಗೆಯೊಂದಿಗೆ ಹತ್ತಿ ನಿಲ್ಲುತ್ತಿದ್ದಳು. ಎರಡೂ ಕಣ್ಣುಮುಚ್ಚಿ ಅಂಗೈಗಳನ್ನು ತನ್ನ ಕೆನ್ನೆಗಂಟಿಸಿ ಕಟ್ಟೆಯ ಬಳಿ ನಿಲ್ಲುತ್ತಿದ್ದಂತೆ ತಲೆಮೇಲೆ ದಬೆದಬೆಯಂತೆ ನೀರು ಬೀಳುತ್ತಿತ್ತು. ನಡುಗುತ್ತಲೇ ಹಿತ್ತಲಕಡೆ ಅವ ಓಡಿಬಿಡುತ್ತಿದ್ದ. ಆಕೆ ಖಾಲಿ ಬುತ್ತಿಡಬ್ಬಿಗೂ, ಪಾಟಿಚೀಲಕ್ಕೂ ನೀರು ಚಿಮುಕಿಸಿ ಮಡಿ ಮಾಡಿ ಒಳನಡೆಯುತ್ತಿದ್ದಳು. ‘ಶಾಲೆ ಇರುವ ಯಾವ ಕಾಲದಲ್ಲೂ ಇದನ್ನು ಪಾಲಿಸುತ್ತಲೇ ಬಂದಿದ್ದೆನಲ್ಲ, ಆದರೆ ಈಗ? ಅಮ್ಮ ಇಲ್ಲ. ಈಗವಳಿದ್ದಿದ್ದರೆ ಯಾವ್ಯಾವ ನದಿಯ ನೀರನ್ನೆಲ್ಲ ನನ್ನ ತಲೆಮೇಲೆ ಸುರಿಯುತ್ತಿದ್ದಳೋ?’ ಎಂದುಕೊಳ್ಳುತ್ತ ಸಣ್ಣ ಸ್ಟೂಲೊಂದರ ಮೇಲೆ ಕುಳಿತು ಚೀಟಿಯಲ್ಲಿ ಕಾಂಟ್ರ್ಯಾಕ್ಟರ್ ಬರೆದುಕೊಟ್ಟದ್ದನ್ನೊಮ್ಮೆ ಕಣ್ಣಾಡಿಸಿ ಹೇಗೋ ಒಟ್ಟಿನಲ್ಲಿ ಖಾದ್ಯ ಮಾಡಿಮುಗಿಸಿದ ಪುರು.

 ನಂತರ, ಅಲ್ಲೇ ಇದ್ದ ಬಾವಿಕಟ್ಟೆಯ ಮೇಲಿನ ಬಿಂದಿಗೆಯಿಂದ ತಲೆಮೇಲೆ ನೀರು ಸುರಿದುಕೊಂಡು ಕತ್ತಲಲ್ಲೇ ಮೇಲೆ ನೋಡಿದ, ಎದುರು ಬದುರಿನ ಮರಗಳ ಚಾಚಿದ ಟೊಂಗೆಗಳೆರಡು, ಥೇಟ್ ಹುಬ್ಬು ಗಂಟು ಹಾಕಿಕೊಂಡ ತನ್ನಮ್ಮನಂತೇ ಕಂಡವು. ಕಾಂಟ್ರ್ಯಾಕ್ಟರ್ ಹತ್ತಿರ ಬಂದು, ಬೆನ್ನು ತಟ್ಟಿ, ಭೇಷ್ ಪುರುಷೋತ್ತಮ ಇನ್ನು ನೀ ಬದಕ್ತೀಯಲೇ. ಬಂದಾವ್ರೆಲ್ಲಾ ಅಗದೀ ವರ್ಣನಾ ಮಾಡಿದ್ರಲೇ ಅಡಗಿ. ತುಗೋ ಈ ರೊಕ್ಕಾ, ಮ್ಯಾಲೊಂದ್ಸಾವ್ರಾ ಭಕ್ಷೀಸ್’ ಎಂದು ಕಣ್ಣು ಸಣ್ಣ ಮಾಡಿಕೊಂಡು ಕೆನ್ನೆ ಕೆರೆದುಕೊಂಡ. ಕೀಲಿಕೊಟ್ಟ ಗೊಂಬೆಯಂತೆ ಬರೀ ಕೈಯಷ್ಟೇ ಮುಗಿದು ಸ್ಟೇಷನ್ನಿನ ಕಡೆ ಕಾಲುಹಾಕಿದ ಪುರು ಮುಂಬೈನಿಂದ ಧಾರವಾಡದ ರೈಲು ಹತ್ತಿದ. ಎದೆಮೇಲೆ ಕೈಇಟ್ಟುಕೊಂಡು ಶರಟಿನ ಪಿನ್ನಿನ ಬಾಯಿ ತೆಗೆಯುವುದು ಹಾಕುವುದು ಮಾಡುತ್ತ ಅದ್ಯಾವಾಗಲೋ ನಿದ್ದೆ ಹೋದ. ನಸುಕಿನ ಜಾವ ಧಾರವಾಡದ ಸ್ಟೇಷನ್ನಿಗೆ ಬಂದಿಳಿದಾಗ ಪುರುವಿಗೆ ಜೀವದಲ್ಲಿ ಜೀವ ಇರಲಿಲ್ಲ. ಮನೆಗೆ ಬಂದವನೇ ಮೊದಲು ಹಿತ್ತಲಿನ ಕಡೆ ಓಡಿ, ಚೀಲದಿಂದ ಕಾಗದ ಸುತ್ತಿದ ಮಚ್ಚನ್ನು, ಒಟ್ಟಿದ ಕಟ್ಟಿಗೆಯೊಳಗೆ ಮುಚ್ಚಿಟ್ಟುಬಂದು ನಂತರ ಮುಂಬಾಗಿಲು ಬಡಿದ.

 ***
ರಕ್ತ ಸುರಿಯತೊಡಗಿತ್ತು… ಪುರುವಿನ ತಲೆಗಾಯಕ್ಕೆ ಅರಿಷಿಣ ಒತ್ತಿ ಬಟ್ಟೆ ಕಟ್ಟಲಾಗಿತ್ತು. ಅವನೆದೆಯ ಮೇಲೆ ಕೈಯ್ಯಾಡಿಸುತ್ತ, ಶರಟಿನಿಂದ ಪಿನ್ ಬಿಚ್ಚಿ ತನ್ನ ಬಳೆಯೊಳಗೆ ಸಿಕ್ಕಿಸಿಕೊಂಡು ಒಂದೇ ಸಮ ಅಳುತ್ತಿದ್ದ ಚಂದೂಗೆ, ತನ್ನ ಸುತ್ತನಿಂತ ಮಂದಿಯ ಖಬರೇ ಇರಲಿಲ್ಲ. ತಾನು ಈ ಹಿಂದೆ ಅವನೊಂದಿಗೆ ಒರಟಾಗಿ ನಡೆದಕೊಂಡ ಘಟನೆಗಳೆಲ್ಲ ನೆನಪಾಗಿ ದುಃಖ ಉಕ್ಕುತ್ತಲೇ ಇತ್ತು. ಇದೇ ವೇಳೆಗೆ ಇದ್ದಕ್ಕಿದ್ದಂತೆ ಮಧ್ಯರಾತ್ರಿ ಒಂದೂಮುಕ್ಕಾಲಿಗೆ ನಡೆದ ಘಟನೆ ನೆನಪಾಯಿತು; ಅಂದ್ರ ಕಳ್ಳ ಬಂದಿದ್ ಖರೇ. ನಾ ಇವನ ಜೋಡಿ ಜಗಳಾ ಮಾಡಿ ಮಲ್ಕೊಂಡಾಗ, ಇಂವ ಅವನನ್ ಹುಡ್ಕೊಂಡ್ ಹೋಗ್ಯಾನ, ಅಲ್ಲಿ ಹೊಡೆದಾಟ ಆಗೇದ… ಎಂದು ತನ್ನಷ್ಟಕ್ಕೇ ತಾ ಅಂದಾಜಿಸಿದಳು.
ಅದೇ ಹೊತ್ತಿಗೆ ಪುರುವಿನ ಕೈ ಅಲುಗಾಡಿದಂತಾಯಿತು. ಮುಖದ ಮೇಲೆ ನೀರು ಚಿಮುಕಿಸಿದಳು. ಕಣ್ಣುಗುಡ್ಡೆ ಚಲಿಸುತ್ತಿದ್ದಂತೆ ತುಟಿ ಅದರತೊಡಗಿತು. ‘ಆ ಮಚ್ ನನಗ ಬ್ಯಾಡಾ, ಇನ್ನ್ಯಾವತ್ತೂ ಅದರ ಸುದ್ದೀಗೆ ಹೋಗೂದಿಲ್ಲ. ನಮ್ಮವ್ವ ನನಗ ಕ್ಷಮಿಸೂದಿಲ್ಲ… ಆ ಹಿತ್ಲಾಗಿನ ಕಟಗಿ ಸಂದ್ಯಾಗಿಂದ ಮಚ್ ತಗದ್ ಒಗೀರೀ ಬಾಯಾರ ಅತ್ಲಾಗ’ ಚಂದೂಗೆ ದಿಗಿಲಾಗಿ, ಮತ್ತಷ್ಟು ನೀರನ್ನು ಅವನ ಮುಖದ ಮೇಲೆ ಚಿಮುಕಿಸಿದಳು. ಪಕ್ಕದಲ್ಲಿದ್ದವರಿಗೆ ಏನೊಂದೂ ಅರ್ಥವಾಗದೆ ಮಕಮಕ ನೋಡಿಕೊಂಡು, ಹಾಂ ಸದ್ಯ ಕಣ್ಬಿಟ್ಟನಲ್ಲ ಎಂದು ನಿಟ್ಟುಸಿರು ಬಿಟ್ಟು ತಮ್ಮತಮ್ಮ ಮನೆಗೆ ಹೋದರು.

‘ಯಾವ ಮಚ್ಚು ಏನ್ ಮಾತಾಡ್ಲಿಕ್ಹತ್ತಿ, ಹುಚ್ಗಿಚ್ ಹಿಡೀತೇನ್?’ ಎಂದ ಗಾಬರಿಗೆ ಬಿದ್ದಳು. ಅವ ಅವಳನ್ನೇ ನೋಡುತ್ತಿದ್ದ ಹೊರತು ಏನೊಂದೂ ಮಾತನಾಡಲಿಲ್ಲ. ಹಾಗೇ ಸ್ವಲ್ಪ ಸುಧಾರಿಸಿಕೊಂಡು ಚಹಾ ಮಾಡಿ ಅವನಿಗೂ ಕೊಟ್ಟು ತಾನೂ ಕುಡಿದಳು. ಏನೋ ನೆನಪಾಗಿ ಹಿತ್ತಿಲಿನ ಕಡೆ ಬಂದಳು. ಅಲ್ಲೇ ಕಟ್ಟಿಗೆಯ ಸಂದಿಯಲ್ಲಿ ಸುತ್ತಿದ ಕಾಗದವೊಂದು ಕಣ್ಣಿಗೆ ಬಿದ್ದಿತು. ಕಾಗದವೆಂದುಕೊಂಡು ಕೈಗೆತ್ತಿಕೊಳ್ಳಲು ಹೋದರೆ ಅದು ಕಿಲೋಭಾರವಿತ್ತು. ಬಿಡಿಸಿ ನೋಡಿದರೆ ಮಚ್ಚು! ಗಂಡ ಬಡಬಡಿಸಿದ ಮಚ್ಚು ಇದೇ ಎಂದು ಗೊತ್ತಾಯಿತಾದರೂ ಇದರ ಹಿನ್ನೆಲೆ ಅರ್ಥವಾಗದೆ ನೆನೆಗುದಿಗೆ ಬಿದ್ದಳು. ಅದೇ ಗುಂಗಲ್ಲಿ ಗಂಡನನ್ನು ಆಸ್ಪತ್ರೆಗೆ ಕರೆದೊಯ್ದಳು. ‘ರಕ್ತ ನಿಂತದ ಹೊಲಿಗಿ ಏನೂ ಬೇಡ. ನೋವಿಗೆ ಇಂಜೆಕ್ಷನ್ ಕೊಡ್ತೀನಿ’ ಎಂದು ಡಾಕ್ಟರ್ ಹೇಳುತ್ತಿದ್ದಂತೆ, ‘ಅಯ್ಯೋ ಆ ಮಚ್ಚು ಬ್ಯಾಡ್ರಿ’ ಎಂದು ಕಿರುಚತೊಡಗಿದ ಪುರು. ಏಯ್ ಮಾರಾಯಾ ನಾ ಡಾಕ್ಟರ್ ಇದ್ದೀನೋಪಾ, ನಾ ಯಾಕ್ ಮಚ್ ಹಿಡ್ಕೋಳ್ಳೋ? ಎಂದು ತೋಳಿಗೆ ಇಂಜೆಕ್ಷನ್ ಚುಚ್ಚಿಬಿಟ್ಟರು. ‘ನಿನ ಗಂಡ ಏನ್ ಕೆಲಸ ಮಾಡ್ತಾನವಾ, ಇದೆಲ್ಲಾ ಹೆಂಗಾತು, ಏನ್ ಕತಿ? ಮಚ್ಚಗಿಚ್ಚ ಅಂತ ಯಾಕಂತಾನಂವ’ ಡಾಕ್ಟರ್ ಹೀಗೆ ಕೇಳಿದಾಗ, ಮೊದಲೇ ಗೊಂದಲದಲ್ಲಿದ್ದ ಚಂದೂ, ಸಾವರಿಸಿಕೊಂಡು ಅದರೀ ಅಡಗಿ ಕೆಲಸ ಮಾಡ್ತಾರ್ರಿ ಎಂದು ಹೇಳಿ, ಅವರಿಗೂ ಗುಂಗು ಹಚ್ಚಿ ಗಂಡನ ಕೈಹಿಡಿದುಕೊಂಡು ಮನೆಗೆ ಬಂದಳು. ಬಂದವಳೇ ನಾಳೆ ಬೆಳಗ್ಗೆದ್ದು ಹಾಸ್ಟೆಲ್‍ನಲ್ಲಿರುವ ಮಗಳೆಡೆ ಹೋಗಬೇಕು ಎಂದು ನೆನಪಿಸಿದಳು. ತಾನು ಮಾರ್ಕೆಟ್‍ ಗೆ ಹೋಗಿ ಬೀಗ ಇರುವ ಸೂಟ್‍ಕೇಸ್ ತರುವುದಾಗಿ ಹೇಳಿ, ಅವನಿಗೂ ಊಟಕ್ಕೆ ಕೊಟ್ಟು ತಾನೂ ಉಂಡು ಮಾರ್ಕೆಟ್ಟಿಗೆ ಹೊರಟಳು.  

ತಾಸಿನ ನಂತರ ಎಚ್ಚರಗೊಂಡ ಅವ, ನಿಧಾನಕ್ಕೆ ಹಿತ್ತಲಿನ ಬಾಗಿಲು ತೆಗೆದ. ಮಚ್ಚು ಕಾಗದ ಸುತ್ತಿಕೊಂಡು ಮಲಗಿತ್ತು. ಅದನ್ನೆತ್ತಿಕೊಂಡು ತನ್ನ ಬಗಲುಚೀಲದೊಳಗೆ ಹಾಕಿಟ್ಟು ಮಲಗಿದ. ಅರ್ಧತಾಸಿನ ಬಳಿಕ ದೊಡ್ಡ ಸೂಟ್ಕೇಸ್‍ ಹಿಡಿದು ಕಳೆಕಳೆಯಿಂದ ಬಂದಳು ಚಂದೂ. ಗಂಡನಿಗೆ ಅದನ್ನೂ ಮತ್ತು ಅದಕ್ಕಿರುವ ಬೀಗವನ್ನೂ ತೋರಿಸಿದಳು. ಮಾರನೇ ದಿನ ಎಂಟರ ಬಸ್ಸಿಗೆ ಇಬ್ಬರೂ ಹೊರಟರು. ಪುರು ತನ್ನ ಬಗಲುಚೀಲದೊಳಗಿನ ಮಚ್ಚನ್ನು ಆಗಾಗ ಭಯದಿಂದ ಮುಟ್ಟುತ್ತಿದ್ದರೆ, ಹೊಸ ಸೂಟ್‍ಕೇಸ್ ಅನ್ನು ಮತ್ತೆ ಮತ್ತೆ ಮುಟ್ಟಿ ಖುಷಿಪಡುತ್ತಿದ್ದಳು ಚಂದೂ. ಮಲಪ್ರಭಾ ನದಿಯ ಸೇತುವೆ ಬರುತ್ತಿದ್ದಂತೆ ಪುರು ಇದ್ದಕ್ಕಿದ್ದಂತೆ ಎದ್ದುನಿಂತ. ಏನೆಲ್ಲ ಅವಿತಿಟ್ಟುಕೊಂಡರೂ ತನ್ನೊಳಗೇನೂ ಇಲ್ಲವೆಂಬಂತೆ ಶಾಂತಳಾಗಿ ಹರಿಯುತ್ತಿದ್ದಳು ಮಲಪ್ರಭೆ. ‘ನಿಲ್ಲಸ್ರೀ ಗಾಡಿ’ ಪುರು ಚೀರಿದ. ಡ್ರೈವರ್ ಗಾಬರಿಯಿಂದ ಬ್ರೇಕ್ ಹಾಕಿದ, ‘ಹಗರ್ಕನೋ ಮಾರಾಯಾ. ಒಂದಕ್ ಒತ್ರ್ ಆಗ್ಯಾವೇನ?’ ಕಂಡಕ್ಟರ್ ಕೇಳಿದ. ಏನೊಂದೂ ಮಾತನಾಡದೆ, ಬಗಲಿನ ಚೀಲದೊಂದಿಗೆ ದಡದಡನೆ ಬಸ್ ಇಳಿದ, ಚಂದೂ ಅವನನ್ನು ಹಿಂಬಾಲಿಸಿದಳು. ಕಿಟಿಕಿಯೊಳಗಿನ ಕಣ್ಣುಗಳು ಅವರಿಬ್ಬರನ್ನೂ ಹಿಂಬಾಲಿಸಿದವು. ಚೀಲದಿಂದ ಮಚ್ಚು ತೆಗೆದವನೇ ಜೋರಾಗಿ ಮಲಪ್ರಭೆಯತ್ತ ಬೀಸಿಒಗೆದುಬಿಟ್ಟ. ಅವಳ ಪದರಗಳನ್ನು ಸೀಳಿಕೊಂಡು ಸುತ್ತಲೂ ಅಲೆಯೆಬ್ಬಿಸಿ ಆಳದಲ್ಲೆಲ್ಲೋ ಬಿದ್ದು ಪಳಿಯುಳಿಕೆಯಂತೆ ತಳಹಿಡಿದು ಕುಳಿತುಬಿಟ್ಟಿತದು. ಪುರುಷೋತ್ತಮ ವಾಪಾಸುಬಂದು ಸೀಟಿಗೊರಗಿ ತಲೆಯೆತ್ತಿದವನೇ ಎದೆಸೆಟೆಸಿ ಕುಳಿತ. ಡಾಂಬರು ಮೆತ್ತಿಕೊಂಡ ದೊಡ್ಡ ಇಂಚುಪಟ್ಟಿಯೊಂದನ್ನು ಬಸ್ಸು ನುಂಗುತ್ತ ಹೊರಟಿತ್ತು. ಹಿಗ್ಗಿದ ಅವನ ಕಣ್ಣಪಾಪೆಗಳನ್ನು ಕಂಗಾಲಾಗಿ ನೋಡುತ್ತಿದ್ದಳು ಚಂದೂ. ಪ್ರಯಾಣಿಕರು, ಯಾರೋ ಏನೋ ಎಂತೋ ಎಂದುಕೊಂಡು ತಮ್ಮ ಲೋಕದಲ್ಲಿ ಮುಳುಗಿದರು. ಮುಗಿಲಿನೊಳಗೆ ಬೂದುಮೋಡಗಳು ನಿಧಾನ ದಟ್ಟೈಸತೊಡಗಿದವು.

ಬಸ್ಸು ಹಾಸ್ಟೆಲ್ಲಿನ ಮುಂದೆ ಬಂದು ನಿಂತಿತು. ಆಗಲೇ ತನ್ನ ಆಪ್ತಗೆಳತಿಯೊಂದಿಗೆ ಕಾಯುತ್ತಿದ್ದಳು ಮಗಳು. ಓಡಿಬಂದು ತಬ್ಬಿದ ಆಕೆ ಹೊಸ ಸೂಟ್ಕೇಸ್ ನೋಡಿ ಕಣ್ಣಲ್ಲೇ ಹಿಗ್ಗಿದಳು. ಎಲ್ಲರೂ ಸೇರಿ ಶಾಲೆಯ ಕಾರಿಡಾರಿನಲ್ಲಿ ಒಂದು ಬೆಡ್‍ಶೀಟ್ ಹಾಸಿಕೊಂಡು ತಿಂಡಿ ತಿನ್ನಲೆಂದು ಕುಳಿತರು. ಬಾಳೆಲೆಯಲ್ಲಿ ಸುತ್ತಿಕೊಂಡು ಬಂದ ಅವಲಕ್ಕಿಯನ್ನು ಇನ್ನೊಮ್ಮೆ ಹಾಕಲು ಬಂದ ಅಮ್ಮನ ಕೈತಡೆದು, ‘ಬ್ಯಾಡಾಮ್ಮಾ. ಈಗರ ನಾ ಇವರ ಅಮ್ಮಾ ಕೊಟ್ಟ ಪಕೋಡಾ ತಿಂದೆ’ ಎಂದು ತನ್ನ ಗೆಳತಿಯತ್ತ ನೋಡಿದಳು. ಆಗ ಆಕೆ, ‘ಹಾಂ ಆಂಟಿ, ಚಿಕನ್ ಪಕೋಡ ನಮ್ಮಮ್ಮ ಮಸ್ತ್ ಮಾಡ್ಯಾರು’ ಎಂದಾಗ ಪುರುವಿಗೆ ಅವಲಕ್ಕಿ ನೆತ್ತಿಗೇರಿದಂತಾಗಿ ಕಾರಿಡಾರು ಬಿಟ್ಟು ಅಂಗಳಕ್ಕೆ ಬಂದುಬಿಟ್ಟ. ಗಾಬರಿಯಿಂದ ನೀರಿನ ಬಾಟಲಿ ಕೈಗಿಡಲು ನೋಡಿದಳು ಚಂದೂ. ತಳ್ಳಿದವನೇ ಮುಖ ಮುಗಿಲಿಗೆ ಮಾಡಿ ಮುಷ್ಟಿಗಟ್ಟಿದ. ಬೇರಿನ ಟಿಸಿಲುಗಳಂತೆ ಗಂಟಲು ನರಗಳು ಉಬ್ಬಿಕೊಂಡವು ಮೈಬೆವರತೊಡಗಿತು. ಮೈಮೇಲೆ ದೆವ್ವ ಹೊಕ್ಕವರಂತೆ ಹಲ್ಲು ಕಚ್ಚಿ ಹಿಸ್ ಹಿಸ್ ಎಂದು ಶಬ್ದ ಹೊರಡಿಸತೊಡಗಿದ. ಮುಗಿಲು ಒಮ್ಮೆ ಗುಡುಗು ಹಾಕಿ ಮಳೆ ಸುರಿಸತೊಡಗಿತು.

ಮುಷ್ಟಿಬಿಚ್ಚಿ ಎರಡೂ ತೋಳು ಚಾಚಿ, ಆ… ಎಂದು ಚೀರಲು ನೋಡಿದ, ದನಿಯೇ ಹೊರಬರುತ್ತಿಲ್ಲ. ಇತ್ತ ಮಳೆಬಂದ ಖುಷಿಯಲ್ಲಿ ಅಪ್ಪ ತಮಾಷೆ ಮಾಡುತ್ತಿದ್ದಾನೆಂದುಕೊಂಡ ಮಗಳು ಅವನನ್ನು ತಬ್ಬಿಹಿಡಿದಳು. ಅವಳ ಗೆಳತಿ ಗಲ್ಲಕ್ಕೆ ಎರಡೂ ಕೈಹಚ್ಚಿಕೊಂಡು ಹನಿಗಳ ಪುಳಕ ಅನುಭವಿಸತೊಡಗಿದಳು. ಮತ್ತಿವನಿಗೇನಾಯಿತೋ ಎಂದುಕೊಂಡ ಚಂದೂಗೆ ನಿಂತಲ್ಲೇ ಚಡಪಡಿಗೆ ಶುರುವಾಯಿತು. ಒಂದೊಂದು ಮಳೆಹನಿಯಲ್ಲೂ ಅವನಿಗೆ ತನ್ನಮ್ಮನ ಮುಖವೇ ಕಾಣಿಸುತ್ತಿತ್ತು. ಹಾಗೇ ಜೋಲಿತಪ್ಪಿ ಬೀಳುತ್ತಿದ್ದವನನ್ನು ಚಂದೂ ಮಗಳೊಂದಿಗೆ ಹಿಡಿದುಕೊಳ್ಳಲು ಮುಂದೆ ಬಂದಳು. ಆದರೆ, ಕೋಳಿಗಳೆರಡು ಕೊಕ್ಕು ಚೂಪು ಮಾಡಿಕೊಂಡು ತನ್ನೆಡೆಗೇ ಬರುತ್ತಿವೆ ಎಂದೆನಿಸಿ ಹಿಂದೆಹಿಂದೆ ಸರಿಯುತ್ತಲೇ, ಸಸಿ ನೆಡಲು ತೋಡಿದ ಗುಂಡಿಯೊಳಗೆ ಹಿಂಬರಿಕಿಯಲ್ಲಿ ದಢಾರ್ ಎಂದು ಬಿದ್ದುಬಿಟ್ಟ ಪುರುಷೋತ್ತಮ.

-ಶ್ರೀದೇವಿ ಕಳಸದ

(ತುಷಾರ, ಏಪ್ರಿಲ್  2018)

Saturday, March 17, 2018

ಗೋತ್ರಾನೂ ಒಂದ ಧೋತ್ರಾನೂ ಒಂದ...


ಪಂಡಿತ್ ರಾಜೀವ್ ತಾರಾನಾಥ್ : ' ಇವ್ರಿಗೆ ವಿಷ ಕೊಡು'
(ಕೆಲಸದವಳು ನಗುತ್ತ ಚಹಾದೊಂದಿಗೆ ಬಂದಳು)
ರಾ.ತಾ : Yes, now u can shoot me.
ನಾನು : ಇಲ್ಲ ಸರ್ ನಾ ಹಾಗೆಲ್ಲ ತಯಾರಿಯೊಳಗೆ ಬರುವವಳಲ್ಲ. 
ರಾ.ತಾ : Spontaneous? That's good...
ನಾನು : ಹೌದು. ಸುಮ್ಮನೆ ನಿಮ್ಮ ಮಾತು ಕೇಳಿಸಿಕೊಂಡು ಹೋಗಲು ಬಂದಿದ್ದು. 
ರಾ.ತಾ : ಇಲ್ಲ ನಾ ಹಂಗೆಲ್ಲ ಮಾತಾಡೂದಿಲ್ಲ. 
ನಾನು : ಸ್ವಲ್ಪ ಸರೋದ್ ನುಡಿಸಬಹುದಾ? (ಹೆದರಿಕೆ, ಸಂಕೋಚದಿಂದ ಕೇಳಿದೆ)
ರಾ.ತಾ : ಇಲ್ಲ ನಾ ಬಾರಸೂದಿಲ್ಲ. 
ನಾನು : ಖಂಡಿತ ಬೇಡ ಸರ್. 
ರಾ. ತಾ : ನೀವು ಪ್ರಶ್ನಾ ಕೇಳದ ನಾ ಮಾತಾಡೂದ್ರೊಳಗ ಅರ್ಥ ಇಲ್ಲ.

***

ನನಗೂ ಅವರು ಹಾಗೆ  ಕೇಳುವುದೇ ಬೇಕಿತ್ತು. ಏಕೆಂದರೆ ನಮ್ಮ ಒಂದು ಶಬ್ದ, ವಾಕ್ಯ, ಮಾತುಗಳು ಪೂರ್ಣಗೊಳ್ಳುವ ಮೊದಲೇ ಸಟಕ್ಕನೆ ಅದರ ನೆತ್ತಿಯ ಮೇಲೆ ಕುಕ್ಕಿ ಇದು ಹೀಗಲ್ಲ ಹೀಗೇ ಎಂದು ಕರಾರುವಕ್ಕಾಗಿ ಹೇಳಿಬಿಡುವಂಥ ಸೂಕ್ಷ್ಮ ಮತ್ತು ತೀಕ್ಷ್ಣಮತಿ ಅವರು. ಮಾತನಾಡುತ್ತಿರುವಾಗ, ಕೋಪಗೊಂಡು ಎದ್ದೇಳು ಎಂದು ಹೇಳಿಬಿಡುತ್ತಾರೋ ಏನೋ ಎಂಬ ಅಳುಕಿನಿಂದಲೇ ಅವರ ಭೇಟಿಯನ್ನು ನಾನು ಮುಂದುಹಾಕಿದ್ದು ಬರೋಬ್ಬರಿ ಹದಿಮೂರು ವರ್ಷ! ಮೈಸೂರಿನ ಜವರೇಗೌಡ ಉದ್ಯಾನದ ಬಳಿ ಇರುವ ಅವರ ಮನೆಗೆ ಹೋಗಿದ್ದು ಸಂಜೆಯ ನಾಲ್ಕೂವರೆಗೆ. ಆರಂಭದಲ್ಲಿ ಎಷ್ಟೋ ಹೊತ್ತು ಇಂಗ್ಲೀಷಿನೊಳಗೇ ಮಾತನಾಡುತ್ತಿದ್ದ ರಾಜೀವರು, ಮಧ್ಯದಲ್ಲೊಮ್ಮೆ ನಿಂತು, ‘ಓಹ್, ನೀವ್ ಧಾರವಾಡದವ್ರ? ನಾ ರಾಯಚೂರಾವ್ರಿ, ಜವಾರಿ ಮಂದಿರೀಪಾ ನಾವ. ಇಷ್ಟೊತ್ತನಕಾ ಯಾಕ್ ಭಿಡೆ ಮಾಡ್ಕೊಂಡ್ರಿ ಮತ್ತ?’ ಎಂದು ಹೇಳುತ್ತ ಕ್ಷಣ ಮಾತ್ರ ಪುಟ್ಟ ಮಗುವಿನಂತಾದರು. ಆದರೆ, ವಾಪಾಸು ಮತ್ತದೇ ಮಂದ್ರದ ಗಂಭೀರ, ಅದರೊಳಗೇ ತಿಳಿಹಾಸ್ಯ, ಖಡಕು ಅಭಿಪ್ರಾಯ, ಸಾತ್ವಿಕ ಕೋಪ, ಆಳ ವಿಷಾದ ಇನ್ನೂ ಏನೇನೋ… ಬರೋಬ್ಬರಿ ಎರಡೂವರೆತಾಸಿನ ಮಾತು-ಮಂಥನದ ‘ಕಛೇರಿ’ಯ ಸಾರ ಇಲ್ಲಿದೆ.


***

ಸಂಗೀತದೊಳಗ ಮೌನ ಅನ್ನೋದು ಅದ ಏನು, ಎಲ್ಲಿ ಅದ?   

ನನ್ನ ಗುರು ಅಲಿ ಅಕ್ಬರ್ ಖಾನ್ ಸಾಹೇಬ್ರು, ತಮ್ಮ ಗುರು ಅಬ್ದುಲ್ ಕರೀಮ್ ಖಾನ್ ಸಾಹೇಬರ ಬಗ್ಗೆ ಹೇಳಿದ್ದನ್ನ ನಾ ನಿಮಗ ಹೇಳ್ತೀನಿ; ಕರೀಮ್ ಖಾನ್ ಸಾಹೇಬ್ರು, ಒಂದು ತಂಬೂರಿ ಶ್ರು ತಿ ಮಾಡಲಿಕ್ಕೆ ಒಂದು ತಾಸು ತಗೊಳ್ತಿದ್ರು. ತಂತೀನಾ ತಿಕ್ಕಿ, ತೀಡಿ, ಶ್ರುತಿ ಮಾಡಿ, ಕೊನೀಗೆ ಅದರ ಜೀವಾಳ (ಝೀರ್) ಕೂಡಸ್ತಿದ್ರು. ಹಿಂಗ ಈ ಶ್ರುತಿ ಕೂಡೂತನಕ ಅಲ್ಲೊಂದು ‘ಸೀಕ್ರೇಟ್ ಸೈಲನ್ಸ್‍’ ಅನ್ನೋದು ಸೃಷ್ಟಿಯಾಗಿರ್ತಿತ್ತು. ಶ್ರುತಿ ಮಾಡಿದ್ದು ಸರೀ ಆಗೇದೋ ಇಲ್ಲೋ ಅಂತ ಮತ್ ಮತ್ ಕೇಳಿ, ಅದು ತೃಪ್ತಿ ಕೊಡೋತನಕ ಹೊಳ್ಳಿ ನೋಡ್ತಾನ ಇರ್ತಿರಲಿಲ್ಲಂತ. ಆದ್ರ ನಮಗೀವತ್ತು, ಎಲ್ಲ್ಯದ ಸೈಲನ್ಸ್? ಹತ್ತ ನಿಮಿಷದೊಳಗ ಎರಡೂ ತಂಬೂರಿ ಕೂಡಿಸಿಬಿಡ್ತೀವಿ. ಕೂಡ್ಸೂವಾಗ ಯಾರೆರ ಬಂದ್ರ… ಹೇಯ್, ಹೆಲೋ, ಹಾಯ್ ಅಂತ ಲಕ್ಷ್ಯ ಕಳಕೊಂಡಬಿಡ್ತೇವಿ. ನಮಗ್ಯಾಕ ಇಲ್ಲ ಆ ‘ಸೀಕ್ರೇಟ್ ಸೈಲನ್ಸ್’? 
ಇದು ಸಂಗೀತದೊಳಗಷ್ಟ ಅಂತಲ್ಲ. ಈಗ ನೋಡ್ರಿ, ಯಾರಾದ್ರೂ ನಮ್ಮನ್ನ ಭೆಟ್ಟಿ ಆದಕೂಡ್ಲೇ ಏನ್ರಿ ಹೆಂಗಿದ್ದೀರಿ? ಭಾಳ ದಿನಾ ಆತು ಅಂತ ಮಾತು ಚಾಲೂ ಮಾಡ್ತಿದ್ಹಂಗನ, ‘ಆಮೇಲೆ?’ ಅಂತ ಕೇಳಿಬಿಡ್ತೀವಿ. ಅಲ್ಲಿಗೆ ‘ಮುಗೀತು’ ಅನ್ನೋ ಸೂಚನಾ ಕೊಟ್ಹಂಗ. ನಮ್ಮ ಸ್ನೇಹ, ಸಂಬಂಧಗಳ ಗಂಭೀರತೆನೂ ಈವತ್ತ ಇಷ್ಟ. ಈಗ ನಮ್ಮನೀ ಮುಂದ ಒಂದು ಬೋರ್ಡ್ ಇತ್ತು ನೋಡಿದ್ರಿ, ಏನಿತ್ತು? ಸರೋದ್. ಅಲ್ಲಿ ನನ್ನ ಹೆಸರು ಕಂಡೂಕಾಣದಹಂಗ ಅದ. ಇದರರ್ಥ ನನಗಿಂತ ಸಂಗೀತ ದೊಡ್ಡದು, ನಾನು ಅನ್ನೋದು ಗೌಣ ಮತ್ತ ಮೌನ.


ನಿಮ್ಮದಾಗಿದ್ರ ತಿಕ್ಕೇ ತಿಕ್ಕತೀರಿ.
ರಿಯಾಝ್ ಅಂದ್ರ ತಿಕ್ಕದು, ಬರೀ ತಿಕ್ಕದು, ದೇವರ ತಂಬಿಗಿ ತಿಕ್ಕದು, ಅದು ತಾಮ್ರದ್ದೋ, ಹಿತ್ತಾಳೀದೋ ತಿಕ್ಕಿ ಚೊಕ್ಕ ಮಾಡಿ ಒಟ್ಟ ಹೊಳಸಬೇಕು. ನಿಮ್ಮದಾದ್ರ ತಿಕ್ಕಿತಿಕ್ಕಿ ಹೊಳಸ್ತೀರಿ. ಬ್ಯಾರೇವ್ರದ್ದಾದ್ರ ಇದ ಇಷ್ಟರೀ ಆತ್ರಿ ಅಂತ ಎದ್ದ ಹೊಂಟ್ಬಿ ಡ್ತೀರಿ. ಒಂದು ರಿಯಾಝಿನಿಂದ ಇನ್ನೊಂದ್ ರಿಯಾಝಿನೊಳಗೆ ಎಷ್ಟು ಏಕಾಗ್ರತೆ ಮತ್ತು ಸ್ಪಷ್ಟತೆ ಸಿಕ್ಕಿತು ಅನ್ನೋದು ನಿಮ್ಮ ಅನುಭವಕ್ಕ ಬರಬೇಕು. ಎಲ್ಲಿ ಏನು ಮಾಡಬೇಕು ಏನು ಮಾಡಬಾರದು ಅನ್ನೋ ತಿಳವಳಿಕೀನೂ ಇರಬೇಕು. ಈಗ ಎತ್ತು ನೋಡ್ರಿ, ನೀವು ಎಷ್ಟು ಹೊಡೀತೀರೋ ಅಷ್ಟು ಗಾಣ ಸುತ್ತತದ. ಇನ್ನ ಲಗ್ನ. ಹತ್ತು ಲಗ್ನ ಆದಮೇಲೆ ಹನ್ನೊಂದನೇ ಲಗ್ನದಲ್ಲಿ ಯಶಸ್ಸು ಸಾಧಿಸ್ತೀರಿ, ಯಾಕಂದ್ರ ಪ್ರ್ಯಾಕ್ಟೀಸ್ ಆಗಿರ್ತದ. ಇನ್ನ… ನಿಮ್ಮ ಮನಿಯೊಳಗ ಅವ್ವಗ ಬ್ಯಾಳಿಹುಳಿ ಮಾಡೂದ ಗೊತ್ತು. ನೂರಾರು ಸಲ ಮಾಡಿರ್ತಾಳಕಿ. ಯಾಕಂದ್ರ ಅಕಿ ಕೈ ನುರತಿರ್ತದ, ಮನಸ್ ನುರತಿರ್ತದ ಅದಕ್ಕಾಗೇ ಅಕಿಗೆ ಅದರ ನಿಖರತಾ ಗೊತ್ತಿರ್ತದ ಮತ್ತ ಹದಾನೂ. ಎಷ್ಟ ಬ್ಯಾಳಿ ಹಾಕಿದ್ರ ಎಷ್ಟ ಮಂದೀಗೆ ಆಗ್ತದ ಅನ್ನೂ ಲೆಕ್ಕಾಚಾರನೂ ಗೊತ್ತಿರ್ತದ. ಅದ ನೀವ್ ಮಾಡಿದ್ರ? ಹದ ಬರೂದಿಲ್ಲ. ಅಂದ್ರ ಮೊದ್ಲು ನಮ್ಮ intention clear ಆಗಿರಬೇಕು. ಅದು ಒಮ್ಮೆ ಕ್ಲಿಯರ್ ಆತಂದ್ರ ಮುಗೀತು. ಆ ಒಂದು ಮುದ್ದಿಯಿಂದ ಸುರು ಆಗಿ ಹದಾ ರೊಟ್ಟಿ ಆಗ್ತದ. ಇದೊಂದು ಪ್ರಾಸೆಸ್. ಇಂಥದ್ದು ಹಿಂಗ ಬರಬೇಕು ಅನ್ನೋ ಕಲ್ಪನಾ ಬಂತಂದ್ರ ಮುಗೀತು.


What we call the beginning is often the end
And to make and end is to make a beginning.
The end is where we start from. And every phrase
And sentence that is right (where every word is at home,
Taking its place to support the others,
The word neither diffident nor ostentatious,
An easy commerce of the old and the new,
The common word exact without vulgarity,
The formal word precise but not pedantic,
The complete consort dancing together)
                                -T S Eliot, ‘Little Gidding’

ಇದನ್ನ ನೀವು ಅಡುಗೇಗೂ ಲಗ್ನಕ್ಕೂ ಅನ್ವಯಿಸ್ಕೋಬಹುದು.

ಜಾಣರಾಗಿದ್ರ ಪೂರ್ತಿ ರೊಟ್ಟಿಗೆ ಹಳಕ ಬೆಣ್ಣಿ ಸವರ್ತೀರಿ. 
ನಮ್ಮ ಹಿಂದೂಸ್ತಾನಿ ಸಂಗೀತದೊಳಗ ಸಾಧನಾ ಮಾಡೋದೇ ‘ಧ್ವನಿ ಸಂಸ್ಕಾರ’. ಪಾಶ್ಚಾತ್ಯ ಸಂಗೀತದೊಳಗ ಇದಕ್ಕ ಭಾಳಾ ಆದ್ಯತಾ ಕೊಡ್ತಾರ ಖರೇ. ಆದ್ರ ನಮ್ಮಲ್ಲಿ ಬ್ಯಾರೆಬ್ಯಾರೆ ಘರಾಣಾಗಳು ಇರೋದ್ರಿಂದ, ಅವರವರ ಪದ್ಧತಿಗಳಿಗೆ ತಕ್ಕಹಂಗ ನುಡಿಸೂದಕ್ಕ, ಹಾಡೂದಕ್ಕ ಸಾಧನಾ ನಡದ ಇರ್ತದ. ಅದಕ್ಕ ಒಂದು ಘರಾಣಾದಿಂದ ಇನ್ನೊಂದು ಘರಾಣಾ ಬ್ಯಾರೇನ. ನಮ್ಮ ಅಬ್ದುಲ್ ಕರೀಂ ಖಾನ್ ಸಾಹೇಬ್ರು ಒಂದ್ ತುದಿಯಾದ್ರ, ಫಯಾಝ್ ಖಾನ್ ಸಾಹೇಬ್ರು ಇನ್ನೊಂದು ತುದಿ. ಏನ ಆದ್ರೂ ಆಲಾಪನ್ನ ಬೆಳಸೂ ಕ್ರಮ ಒಂದ; ಅದು ಇಷ್ಟಂದ್ರ ಇಷ್ಟ, ತುದಿಮ್ಯಾಲಿನ ಬೆಣ್ಣಿಹಳಕು ಇದ್ದಹಂಗ. ಇಷ್ಟಾ ಬೆಣ್ಣೀನ್ನ ಇಡೀ ರೊಟ್ಟಿಗೆ ಸವರೋದು. ನೀವು ಆ ಸವರೂದ್ರೊಳಗ ಜಾಣರಾಗಿದ್ರ, ಇಡೀ ರೊಟ್ಟಿಗೆ ಸವರ್ತೀರಿ. ಇಲ್ಲಾಂದ್ರ ಅರ್ಧ ರೊಟ್ಟಿ ಒಣ ಒಣ ಉಳದಬಿಡ್ತದ. ಇಷ್ಟೇ ಇದು, ಆಲಾಪ ಅಂದ್ರ ಛಂದಂಗೆ ಹರಡೋದು.
ಹಿಂದೂಸ್ತಾನಿ ಸಂಗೀತದೊಳಗ ಬಹಳಷ್ಟು ಲಕ್ಷ್ಯ ಕೊಟ್ಟು ರಾಗವಿಸ್ತಾರ ಮಾಡಬೇಕಾಗ್ತದ. ಒಂದೊಂದ್ ಸ್ವರ, ಒಂದೊಂದ್ ತಿರುವುಗಳೊಳಗೂ ಹಿಂಡಿಹಿಂಡಿ ರಸಾ ತಗದು, ಅವುಗಳನ್ನ ಮಾಧುರ್ಯಗೊಳಿಸಿ ಪ್ರಸ್ತುತಪಡಿಸಬೇಕಾಗ್ತದ. ಈ ತರೀಖಾ ಒಬ್ಬ ಕಲಾವಿದರಿಂದ ಇನ್ನೊಬ್ಬ ಕಲಾವಿದರಿಗೆ ಬ್ಯಾರೇನ. ಇದು ಅವರವರ ಬುದ್ಧಿವಂತಿಕಿ ಮ್ಯಾಲ ಸಾಗ್ತದ. ಅದಕ್ಕ ಪ್ರಸ್ತುತಿಯಲ್ಲೂ ಭಿನ್ನವಾಗಿರ್ತದ.

ಯಾಕ ಬೇಕು ನಮಗ ಶಾಸ್ತ್ರೀಯ ಸಂಗೀತ? 
ನಿಮಗ್ಯಾಕ ಬೇಕ ಅನ್ನಸ್ತದ ಮೊದಲ್ ಹೇಳ್ರಿ. (ಶಾಂತಿಗಾಗಿ, ಸಮಾಧಾನಕ್ಕಾಗಿ ಎಂದು ಸಣ್ಣ ತಮಾಷೆ ಮಾಡಿದೆ) ಅಲ್ರಿ, ಛಂದನ್ನ ಹುಡುಗ ಅಥವಾ ಹುಡುಗಿ ನೋಡಿದ ಕೂಡ್ಲೇ ಹಾಂ! ಅವರು ನನಗ ಬೇಕು  ಅನ್ನಸ್ತದಿಲ್ಲೋ? ಅಷ್ಟ. ಇಲ್ಲ ಇಲ್ಲ ಅಕಿ ನಮ್ಮ ಅಕ್ಕ, ನಮ್ಮ ಅಣ್ಣ ಇದ್ದಂಗ ಅಂತ ಹೇಳೋದೇನದಲಾ, ಅದು ಜಗತ್ತಿನೊಳಗಿನ ದೊಡ್ಡ ಸುಳ್ಳು! ನಮ್ಮ ಆಸೆಗಳನ್ನ ಹತ್ತಿಕ್ಕೊಂಡು ಇರೋದಕ್ಕೆ ನಮಗ ಹೆಂಗ್ ಆಗೂದಿಲ್ಲೋ ಹಂಗ ನಮ್ಮ ನೋವು, ಪ್ರೀತಿಯನ್ನೂ ಹತ್ತಿಕ್ಕೊಂಡು ಇರೂದಕ್ಕಾಗೂದಿಲ್ಲ. ಶಾಂತಿ,  ಸಮಾಧಾನಕ್ಕ ಬೇಕಂದ್ರ ಬೆಂಗಳೂರಿಗೆ ಹೋಗ್ರಿ, ರವಿಶಂಕರ್ ಆಶ್ರಮಕ್ಕ, ಪಂಡಿತ್ ರವಿಶಂಕರ್ ಅಲ್ಲ ಮತ್ತ! ಆದ್ರ ಗೋತ್ರಾನೂ ಒಂದ, ಧೋತ್ರಾನೂ ಒಂದ.

ಮುಟ್ಟಿದ ಗಳಿಗೆಯೊಳಗ ಯಾವುದೂ ಘರಾಣಾ ಆಗೂದಿಲ್ಲ.  
ನಮ್ಮನಿ ಅಡಗಿ ನಿಮ್ಮನಿ ಅಡಗಿ ಅದೇ ಬದ್ನೀಕಾಯಿ. ಚೂರು ಬೇರೆ. ಕೆಟ್ಟದು ಒಳ್ಳೇದು ಅಂತ ತಮ್ಮತಮ್ಮದ ಹೇಳ್ತಾರ. ಆದ್ರ ಮೂರನೇಯವ್ರು ಆಗಿ ನಾವು ಹೇಳಲಿಕ್ಕೆ ಆಗೂದಿಲ್ಲ. ಆದ್ರ ಅದು ಅದ ಬದ್ನೀಕಾಯಿ. ನಾವು ಯಾವುದೋ ಒಂದರೊಳಗ ಬಂದಿರ್ತೇವಿ. ನಾ ಹೇಳೂದ್ರಾಗ ಅದು ಇದ್ದ ಇರ್ತದ. ನಿಮ್ಮ ಅವ್ವ ಬದ್ನೀಕಾಯಿ ಹಿಂಗ ಮಾಡ್ಕೋತ ಬಂದ್ಲು. ನಾಳೆ ನಿಮ್ಮನ್ನ ಕೇಳಿದ್ರ ಅಕಿ ರೀತಿ ಇದ್ದೇ ಇರ್ತದ. ಸಂಗೀತಕ್ಕೂ ಹಂಗ; ಮೂರು ತಲೆಮಾರುಗಳು ಅದನ್ನ ಮುಂದುವರಿಸಿಕೊಂಡು ಹೋದ್ರ ಅದಕ್ಕೊಂದು ಕ್ಷಮತಾ ಬರ್ತದ. ಆಗ ಅದೊಂದು ಘರಾಣಾ ಆಗ್ತದ ಅಂತೆಲ್ಲಾ ಮಂದಿ ಹೇಳ್ತಾರ ಖರೇ. ಇದು ವಾಕ್ಯದೊಳಗ ಅಡ್ಡೀಯಿಲ್ಲ. ಆದ್ರ ಇದಕ್ಕೆಲ್ಲ ಅರ್ಥ ಇಲ್ಲ. ಮುಟ್ಟಿದ ಗಳಿಗೆಯೊಳಗ ಯಾವುದೂ ಘರಾಣಾ ಆಗೂದಿಲ್ಲ. ಸ್ವಲ್ಪ ನಾವಿರಬೇಕು. ಎರಡು ಮೂರು ತಲೆಮಾರುಗಳೂ ಇರಬೇಕು.
ನಮ್ಮ ಹಿಂದೂಸ್ತಾನಿ ಸಂಗೀತ ಕೃಷಿಯೊಳಗ ಸ್ವಲ್ಪ ವಿಚಾರ ಮಾಡಿದ್ರ, ಇದ್ದಿದ್ದು ಖಾನ್ ಸಾಹೇಬರ ಮಕ್ಕಳು ಮತ್ತವರ ಮೊಮ್ಮಕ್ಕಳು ಅನ್ನೋದನ್ನ ನಾವು ಮರೀಬಾರದು. ಯಾಕಂದ್ರ ಅದು ಸತ್ಯ. ಆದ್ರ, ಈಗಿನ ದೊಡ್ಡಮಂದಿ ಬ್ಯಾರೇನ ಮಾತಾಡ್ತಾರು. ಕಿರಾಣಾ ಘರಾಣಾನ್ನ ನಮ್ಮ ಕನ್ನಡಮ್ಮನ ಬೆಳಸಿದ್ಲು. ಅದು ಇಲ್ಲೇ ಹೆಚ್ಚು ಬೆಳದಿದ್ದು. ಮೂಲಪುರುಷನನ್ನ ನಮ್ಮ ಕನ್ನಡಮ್ಮ ಬೆಳೆಸಿದ್ಲು. ನಾವೀಗ ಆ ಹೆಸರು ಹೇಳೂದಿಲ್ಲ. ಹೇಳಿದ್ರ ಅದು ಬ್ಯಾರೇನ ಕೇಳಸ್ತದ.

ನಮ್ಮ ದೇಶದೊಳಗ ಗಂಭೀರವಾದಂಥದ್ದು ಏನ್ ನಡೀಲೀಕ್ಹತ್ತದ? 
ನಾವು self-destructive. ಯಾವುದರಲ್ಲೂ ಎದಕ್ಕೂ ಇಲ್ಲ ನಾವು. ಎರಡೇ ಎರಡರೊಳಗ ಭಾಳ ಭೇಷ್ ಇದ್ದೇವಿ; ಒಂದು ಸಂಗೀತ ಇನ್ನೊಂದು ಅಡಗಿ. ಇವ ಎರಡು ಬಿಟ್ರ ಉಳಕೀ ಎಲ್ಲಾ ಬಾದ್. ಬೇರೆ ಏನರ ಇದ್ರ ಹೇಳ್ರಿ ನೋಡೂಣು? ನಮ್ ಯೋಗ ಅದ ಅಂತ ಮೂಗ ಹಿಡೀಬ್ಯಾಡ್ರಿ ಮತ್. ಮೂಗ ಹಿಡೀರಿ, ಬಿಡ್ರಿ ಉಸರ ಒಳಗ ಹೊರಗ ತನ್ ತಾನ ಆಗ್ತನ ಇರ್ತದ. ಅದಕ್ಕ ನಮ್ಮ ಸಂಗೀತ ಮತ್ತ ಅಡಗಿ ಎರಡ ಭೇಷ್. ಈ ಎರಡರ ಸಲವಾಗೇ ಇಡೀ ದುನಿಯಾ ನಮ್ಮನ್ನ ನೋಡ್ಲಿಕ್ಹತ್ತದ. ಬೇಂದ್ರೆ, ಅನಂತಮೂರ್ತಿನ್ನ ಅದು ಓದೂದಿಲ್ಲ. ತಾರಾನಾಥನ್ನ ಬೇಡ್ತಾರ, ಅಮ್ಝದನ್ನ ಕೇಳ್ತಾರ. ಈವತ್ತ ಶಾರ್ಟ್ ಕಟ್ ಏನದಲಾ ಅದು ಎಲ್ಲಾ ದುಡ್ಡಿನಿಂದ ಬರ್ತಿರೋದು. ಯಾಕ ಓದಬೇಕು, ರೊಕ್ಕಾ ಕೊಟ್ರ ಪಿಎಚ್ಡಿ ಕೊಡ್ತಾರ ಅಂದಮ್ಯಾಲ? ಎಂಜಿನಿಯರಿಂಗ್ ಸೀಟ್ ಸಿಗಲಿಲ್ಲ? ತುಗೋ ಇಂಗ್ಲಿಷ್ ಲಿಟರೇಚರ್. ಸಾಹಿತ್ಯಕ್ಕೊಂದು ಶಿಸ್ತು ಅದ ಗಂಭೀರತೆ ಅದ ಅದು ಕಲಿಸೋವ್ರಿಗೂ ಗೊತ್ತಿಲ್ಲ ಕಲಿಯೂವವರಿಗೂ ಗೊತ್ತಿಲ್ಲ. ಸಂಬಳಕ್ಕಾಗಿ ಕೆಲಸ ಅಷ್ಟ. ಎಂ ಎ ಗೆ ಎರಡು ಲಕ್ಷ, ಪಿಎಚ್ಡಿಾ ಗೆ ನಾಲ್ಕು ಲಕ್ಷ. ಸುಮ್ನ ತುಗೋ-ಕೊಡು.
ಇನ್ನ ಮಾತಾಡಿದ್ರ ಶೂಟ್! ಆತಲ್ಲಾ ಮೊನ್ನೆ ಗೌರಿ ಶೂಟ್. ಹೇಳ್ರಿ, ನಮ್ಮ ದೇಶದೊಳಗ ಗಂಭೀರವಾದಂಥದ್ದು ಏನ್ ನಡೀಲೀಕ್ಹತ್ತದ? ಬರೀ ಕೊಲೆ ಅತ್ಯಾಚಾರ. ಜೈಶ್ರೀ ರಾಮ್ ಅಂತ ಹೇಳ್ತಾನ ಎಷ್ಟು ವಿಧದೊಳಗ ಹೆಣ್ಣುಮಗಳನ್ನ ಅತ್ಯಾಚಾರ ಮಾಡಬಹುದು ಅಂತಾನೂ ಹೇಳ್ತಾರ. ಸುಟ್ಟು ಹಾಕ್ತಾರ, ಗ್ಯಾಂಗ್ ರೇಪ್ ಮಾಡ್ತಾರ ಮತ್ತ ಭಾರತ್ ಮಾತಾ ಕೀ ಜೈನೂ ಅಂತಾರ… ನಮ್ಮ ದೇಶ ಹೆಣ್ಣುಮಕ್ಕಳ ವಿಚಾರದೊಳಗ ಬದಲಾಗೂದೇ ಇಲ್ಲ. bullshit! You must have a sense of shame. ನಮ್ಮ ಸಂಸ್ಕೃತದಲ್ಲಿ ಒಂದೊಳ್ಳೆ ಪದ ಅದ. ‘ಪಶ್ಚಾತ್ ತಾಪ’. ಈ ಪಶ್ಚಾತ್ ತಾಪ ಅಥವಾ ಕ್ಷಮೆ. ಆದ್ರ ಇದೆಲ್ಲ ನಮಗೆ ಗೊತ್ತೇ ಇಲ್ಲ?! 

ಲಾಬಿ ಮಾಡ್ಕೋತಿದ್ರಷ್ಟ ಸಾಹಿತ್ಯ. ಆದ್ರ ಸಂಗೀತ ಹಂಗಲ್ಲ…
ಇಲ್ಲ ಎರಡೂ ಬೇರೆ ಬೇರೆ! ಪ್ರಾಮಾಣಿಕ ಅನ್ನೋ ಶಬ್ದಾನ ಸಾಹಿತಿಗಳ ಭಾಳ ಬಳಸ್ತಾರು. ಅವರು ಬರೆಯೋದೆಲ್ಲಾ ಪ್ರಾಮಾಣಿಕ ಅನ್ನೋದು ಸುಳ್ಳು. ನಾನು ಸಂಗೀತ ಮತ್ತು ಸಾಹಿತ್ಯ ಎರಡರೊಳಗೂ ಇದ್ದಂವ. ಆದ್ರ, ನನಗದು ಯಾವಾಗ ಕೆಸರು ಅನ್ನಿಸ್ತೋ ಆಗ ಹೊರಗಬಂದಬಿಟ್ಟೆ. ಸಾಹಿತ್ಯದಲ್ಲಿ ಸುಳ್ಳು ಬೇಕು, ಲಾಬಿ ಮಾಡ್ಕೊಂಡ ಇರಬೇಕು. ಆದ್ರ ಸಂಗೀತ ಹಂಗಲ್ಲ, Music is a test of honest. ಹತ್ತು ತಾಸು ರಿಯಾಝ್ ಮಾಡಬೇಕು. ಲಾಜಮೀ... ಇದ ನೋಡ್ರಿ ನಮ್ ಗುಡಿ. ಇಲ್ಲೇ ತಿಕ್ಕೂದು, ದುಡಿಯೂದು ರಿಯಾಝ್ ಅಂದ್ರ. ನಾ ಯಾವತ್ ರಿಯಾಝ್ ಮಾಡೂದಿಲ್ಲೋ ಅವತ್ ಕೈ ಬಿದ್ದ ಹೋದಂಗ. ಸೂಳೆಮಗನ ಕುಂಡರ್ ಇಲ್ಲೇ ಅಂತ ಕುಂಡರಸ್ತದ ಇದು. ಐದೂವರೀಗೆ ಏಳ್ತೇನಿ ತಿಕ್ಕೊಂತ ಕುಂಡರ್ತೇನಿ. (ರಿಯಾಝಿನ ಕೋಣೆ ಕಡೆ ಕೈ ಮಾಡಿದರು.)
ಈವತ್ತ ರೊಕ್ಕ ಕೊಟ್ರ ಡಿಗ್ರಿ, ಪಿಎಚ್ಡಿನ ಬರ್ತಾವು. ಆದ್ರ ಸಂಗೀತ ಹಂಗಲ್ಲ. ಕಲಿಯುವವರು ಮತ್ತು ಕಲಿಸುವವರು ಅಷ್ಟ ಖರೇ. ಇದು ಪರ್ಫಾರ್ಮಿಂಗ್ ಆರ್ಟ್. ಈ ನಮ್ಮ ಅನುಭವ್ ಇದ್ದಾನಲ್ಲ (ಪುಣೆ ಮೂಲದ ಶಿಷ್ಯ) ಜಪಾನಿ ಭಾಷಾ ಒಳಗ ಭಾರೀ ಶಾಣ್ಯಾ. ಮೊದಲ್ಗೆ ನನ್ನ ಕಡೆ ಬಂದಾಗ, Why do you fancy to the sarodh? ಅಂತ ಕೇಳಿದ್ದ. I fancy your wife ಅಂದು, ಸಮಾ ಝಾಡಿಸಿ ಅವರಪ್ಪ ಯಾರು ಅಮ್ಮ ಯಾರು ಅನ್ನೋದನ್ನ ಮರೆಸಿಬಿಟ್ಟಿದ್ದೆ. ಆಮ್ಯಾಲ ಪಾಪ ಅನ್ನಿಸ್ತು, ಯಾಕರ ಬೈದ್ನೇನೋ ಅಂತ. ಆಮ್ಯಾಲ ಈ ಹೆಣ್ಣು, ಲಗ್ನ, ವರದಕ್ಷಿಣಿ, ಕಂಪ್ಯೂಟರು ಯಾವುದೂ ನನಗ ಬ್ಯಾಡಾ ಸರೋದ್ ಬಾರಿಸ್ಕೋತ ಕೂಡ್ತೇನಿ ಅಂದ್ಬಿಟ್ಟ. ಅವ ಏನ್ ಬ್ಯಾಡಾ ಅಂದ್ನಲ್ಲಾ, ಅವೆಲ್ಲಾ  ಒಂಥರಾ ಜಿಲೇಬಿ ಇದ್ಹಂಗ್ರೀ. ಆದ್ರ ತಿಕ್ಕಿದ್ದನ್ನ ಸಾವಿರಾ, ಹತ್ಸಾವಿರ ಸಲಾ ತಿಕ್ಕತೇನಿ ಅನ್ಲಿಕ್ಕೆ ಎದಿ ಗಟ್ಟಿ ಇರಬೇಕು. ಅದ ಈ ಮಗ್ಗ ಅದ. ಎಲ್ಲಾ ಬಿಟ್ ಮಾಡೂದಕ್ಕ ತಪಸ್ಸು ಅಂತ ನಮ್ಮ ಪೂರ್ವಜರೂ ಹೇಳ್ಯಾರಿಲ್ಲೋ? ಆದ್ರ ನಾವು ಈವತ್ ನಮ್ಮ ಮಕ್ಕಳಿಗೆ, ಹೋಗು ಪುಟ್ಟಾ ಹೋಂವರ್ಕ್ ಮಾಡ್ಹೋಗು ಅಂತೇವಿ. ಅವಕ್ಕೂ ಬೇಡ ನಮಗೂ ಬೇಡ ಉಳಿದದ್ದು.
ಯಾವುದೋ ಒಂದ್ ಹುಚ್ ಹಿಡಿಸ್ಕೊಂಡ್ ಕೂತವ್ರಿಗೆ ಈ ಮಂದಿ ಅಂತಾರ, ಅಯ್ ಇವ ಕುಡೀತಾನ್ರಿ, ಸೂಳೆಕೆರಿಗೆ ಹೋಗ್ತಾನ್ರಿ ಅಂತ. ಅವ್ರಿಗೆ ಸೀದಾ ಕೇಳ್ತೇನಿ ನಾ, ರಿಯಾಝ್ ಮಾಡ್ತಾನಿಲ್ಲೋ? ಅಂತ.  ನೀ ತುಳಸೀ ನೀರ್ ಕುಡೀತಿ ಹೆಂಡತಿ ಬಾಜೂ ಹೋಗಿ ಮಲ್ಕೋತಿ. ಅಯ್ಯೋ ನಮ್ ವೈಫ್ ಕಾಯ್ತಿರ್ತಾರ ಏಟೋಕ್ಲಾಕ್ ಆಯ್ತು ಮನೀಗೆ ಹೋಗಬೇಕು ಅಂತ ಓಡ್ತಿ?; Laziest and easiest thing to be good.
ಸಂಗೀತ-ಸಾಹಿತ್ಯ ಎರಡರೊಳಗೂ ನಾ ಕಾಲಿಟ್ಟೆ. ಆದ್ರ ನಮ್ಮ ದೇವರು ನನಗ ಸರೋದ್ನೊಳಗ ಸಿಕ್ರು (ಅಲಿ ಅಕ್ಬರ್ ಖಾನ್ ಸಾಹೇಬರ ಫೋಟೋಗೆ ಕೈತೋರಿ) ನಾ ಅಲ್ಲೇ ಉಳದಬಿಟ್ಟೆ. ನಾವೆಲ್ಲಾ ಹಿಂಗ, ಕಹಿ ಹತ್ತೂತನ ಹಾಗಲಕಾಯಿ ತಿನ್ಕೋತನ ಇರ್ತೇವಿ. ಒಟ್ಟಿನ್ಯಾಗ ನಾನು ನನ್ನ ಸರೋದ್ ಜೋಡಿ ಅರಾಮಿದ್ದೇನ್ರಿಪಾ. ಎಂಥಾ ಅಸೌಖ್ಯ ಇದ್ರೂ ಜೋಳದ ಭಾಕ್ರಿ, ಬದ್ನೀಕಾಯಿ ಪಲ್ಯಾ ತಿನ್ನೂದ ಬಿಡ್ತೇನಿ ನಾಲಗಿ ಕೆಟ್ಟದ ಅಂತ. ಆದ್ರ ನಸೀಕ್ಲೇ ಐದೂವರಿನ್ಯಾಗಿನ ರಿಯಾಝ್ ಬಿಡೂದಿಲ್ಲ. ಆಮೇಲೆ ಈ ರಿಯಾಝ್ ಅನ್ನೋದು All about failure, ಪ್ರದರ್ಶನ ಅನ್ನೋದು All about success. ಮತ್ತ ಯಾವಾಗಲೂ ರಿಯಾಝ್ ಅನ್ನೋದು ನನ್ನ ವೈಯಕ್ತಿಕ!

ಈ ನಾನು, ನನ್ನತನ ಅಂದ್ರ ಏನು?
ನನ್ನತನ, originality itself bullshit. What is the difference between our sacred India and nonsacred west? ಅಂತೇನಾದ್ರೂ ಕೇಳಿದ್ರ, it is the difference between bullshit and cowdung ಅಂತೇನಿ, ಬರ್ಕೋರಿ ಇದನ್ನ. ನಿಮ್ಮದು ಕನ್ನಡನೋ ಇಂಗ್ಲಿಷ್ ಸಾಹಿತ್ಯಾನೋ? ಒಹ್ ಕನ್ನಡಾನಾ… ಭಾಳ ಚುಲೋ ಆತು, that's what you are healthy. Originality ಅನ್ನೋ ಶಬ್ದ ನನಗ ತಿಳಿದ ಮಟ್ಟಿಗೆ ಮುನ್ನೂರೈವತ್ತು ವರ್ಷಕ್ಕಿಂತ ಹೆಚ್ಚಿನದಲ್ಲ. ಇದು ಶೇಕ್ಸ್ಪಿಯರ್ ಗೂ ಗೊತ್ತಿರಲಿಲ್ಲ, ನಮ್ಮ ಕಾಳಿದಾಸಪ್ಪಗೂ ಗೊತ್ತಿರಲಿಲ್ಲ. ಪಂಪ ರನ್ನ ಪಂಪ್ ಹೊಡದ್ಹೊಡದ ಇಟ್ಟರು. 'ನನ್ನತನ' ಅನ್ನೋದನ್ನ ಹಾ! ಅಂತ ಕೇಳ್ತಾರ ಈವತ್ತ ಮಂದಿ, ಸುಳ್ಳದು ಎಲ್ಲಾ ಸುಳ್ಳ.
ಇನ್ನ… ನಾನು ಅನ್ನೋದು ನನಗೇನು ಗೊತ್ತು? ನಾ ನಡಕೋತ ಬಾತ್ರೂಮಿಗೆ ಹೋಗ್ತೇನಿ. ನೀರ್ ಹಾಕಿ ಕುಂಡರ್ತೇನಿ, ತೊಳ್ಕೊಂಬರ್ತೇನಿ. ಇದಷ್ಟ ರಿಯಲ್. ಆದ್ರೂ ಇದು ಒರಿಜಿನಲ್ ಅಲ್ಲ, ಇದೆಲ್ಲ ನಮ್ಮಪ್ಪ ನಮ್ಮವ್ವ ಹೇಳಿಕೊಟ್ಟಿದ್ದು. 

ನಾವು ಮಾಡೂದೆಲ್ಲಾ ಅನುಕರಣೆ? 
ನೋಡ್ರಿ ನಾವು ಹಿಂಗ ಡಿಫೈನ್ ಮಾಡೂದ್ರಾಗ ಹೋಗಿಬಿಡ್ತೇವಿ. ನಾವು ಯಾವುದೋ context ನಲ್ಲಿ ಹುಟ್ಟಿರ್ತೀವಿ. ಬೆಳಸ್ತಾರ ಬೆಳೀತೀವಿ. ನಮ್ ತಾಯಿ ಕೊಟ್ಟಿದ್ದ ಉಣ್ತೇವಿ. ಸಂಸ್ಕಾರ ಅನ್ನೋ ಸಂಸ್ಕೃತ ಶಬ್ದ ಬಹಳ ದೊಡ್ಡ ಶಬ್ದ. ವಿಚಾರ ಮಾಡಿದಷ್ಟೂ ಹರಡ್ತದ ಅದು. ನಮ್ಮ ಸುತ್ತಮುತ್ತ ಇರೋದರ ಬಗ್ಗೆ ನಮಗಾಗೋ ಅನುಭವಗಳ ಮುದ್ದಿ ಅದು. ಅದರ ಪ್ರಭಾವ ನಮ್ಮ ಮ್ಯಾಲೆ ಆಗ್ತದ. ಈಗ ನೋಡ್ರಿ, ಅಲ್ಲಿ ಬೆಂಕಿ ಅದ, ಅದನ್ನ ಕೂಸು ಮುಟ್ಟಲಿಕ್ ಹೋಗ್ತಾನ ಹಾ! ಅಂತ ಕೈ ಹಿಂದ ತಕ್ಕೊಳ್ತದಿಲ್ಲೋ? ಅದು ಎಚ್ಚರಿಕೆ ಅಂತಷ್ಟ ಅಲ್ಲ, ಸುಖಾನೂ ಹೌದು. ಅದ ಕೂಸಿನ ಮುಂದ ಐಸ್ಕ್ರೀಮ್ ಹಿಡದ್ರ, ಹಾ… ಅಂತ ಬಾಯಿ ತಗದ ಆಶಾಕ್ ಬೀಳ್ತದ.

ತಂತೀ ಮೇಲೆ ಬೆರಳ ಇಟ್ರ ದುಃಖ ಉಮ್ಮಳಿಸಿ ಬರಬೇಕು. 
ಈ ಶಾಸ್ತ್ರೀಯ ಸಂಗೀತ ಮತ್ತು ಅದರ ಅಮೂರ್ತತೆ ಇದೆಲ್ಲಾ ನಂಗೊತ್ತಿಲ್ಲವಾ. ಬೇಕಾರ್ ಅದು. ಎಲ್ಲೀತನಕ ಒಂದ್ ಸಾಲಿಡ್ ಎಕ್ಸ್ಪೀರಿಯನ್ಸ್ ಸಿಗ್ತದ… (ಮಾತು ತುಂಡರಿಸಿ) ಸೆಕ್ಸ್! ಈಗ ನೀನ ಹೇಳು, Did u have sex? ಆ ಅನುಭವದ ಬಗ್ಗೆ ಸ್ವಲ್ಪ ಬರೆದುಕೊಡಕ್ಕಾಗತ್ತೇನು? ಇಲ್ಲ, ಸಂಗೀತನೂ ಅಷ್ಟ. ಅಷ್ಟಕ್ಕೂ ಈವತ್ತಿನ ದಿನದೊಳಗ ಎಲ್ಲ್ಯದ ಗಂಭೀರ ಗೆಳೆತನ? ಸಿಕ್ಕಾಗ, ಮತ್ ಹ್ಯಾಂಗ್ರಿ ನಮ್ಮನ್ನ ಮರೆತ್ಬಿಟ್ರಿ ಏನು? ಅಂತ ಬಾಲಿಶ ಮಾತಾಡಿಬಿಡ್ತೀವಿ. ಆದ್ರ ಅದು ಹಂಗಲ್ಲ, ಈಗ ಹಾರ್ಮೋನಿಯಂ ತುಗೋರಿ. ಬೆರಳಿಡೂದಲ್ಲ, ಅದರ ಮ್ಯಾಲೆ ಕುಂತ್ರೂ ಸ್ವರ ನುಡೀತದ. ಆದ್ರ ಸರೋದ್ ಹಂಗಲ್ಲ. ಯಾವ ಸ್ವರದ ಮೇಲೆ ಹೆಂಗ್ ಕೈ ಇಡಬೇಕೋ ಹಂಗ ಇಟ್ಟು ನುಡಿಸಿದ್ರ, ದುಃಖ ಉಮ್ಮಳಿಸಿ ಬರ್ತದ.     

ನಮ್ಮೊಳಗೆ ನಾವಿರೋದಕ್ಕ ಯಾಕ ಹೆದರ್ತೇವಿ?
ಕಲಾವಿದರಿಗೆ ತೃಪ್ತಿ ಇತ್ತೂ ಇರ್ತಾರ, ಅದೆಂದ ಹೋಗಿಬಿಡ್ತದೋ ಅವರು ಅಲ್ಲಿ ಇರೂದಿಲ್ಲ. ದೇವರಿಗಾಗಿ, ಗುರುಗಳಿಗಾಗಿ, ತಂದೆ-ತಾಯಿಗಾಗಿ ಯಾರೂ ಕಲಾವಿದರಾಗೂದಿಲ್ಲ. ನನಗ ಸೌಖ್ಯ ಸಿಗ್ತದ ನಾ ನುಡಸ್ತೀನಿ. ಇನ್ನೊಬ್ರು ಬರೀತಾರ? ಅವರಿಗೆ ಅಲ್ಲಿ ಸೌಖ್ಯ ಸಿಕ್ಕದ. ಗುಂಡ್ ಹಾಕ್ತಾರಾ ಅದ ಅವ್ರಿಗೆ ಸೌಖ್ಯ. ಹಿಂಗ ನಾವು ಸೌಖ್ಯವನ್ನ ಅಡಗಿಯೊಳಗ, ಓದೂದ್ರೊಳಗ, ಮದುವಿಯೊಳಗ, ಲೈಂಗಿಕತೆಯೊಳಗ ಹುಡುಕ್ತಾನ ಇರ್ತೀವಿ. ಒಂದು ನಿಮಿಷದ ಸೌಖ್ಯಕ್ಕ ಮದುವಿಯಾಗಿ, ಇಡೀ ಜೀವನ ಕೊಡೋದು ಅಂದ್ರ!?
ಸುಖ ಬೇಕಂದ್ರ ನಮಗ ಬೇಕಾದ ಕೆಲಸದೊಳಗ ತೊಡಗಿಕೊಳ್ಳಬೇಕು. ಮಾಡೋದಿಕ್ಕೆ ನಮಗೆ ಹಝಾರ್ ಕೆಲಸಗಳವ. ಆದ್ರ ನಾವು ಕಷ್ಟಪಟ್ಟು ಅದರೊಳಗ ತೊಡಗಿಕೊಳ್ಳೂದಿಲ್ಲ. ಬರೀ ನೆಗೆಟಿವ್ ವಿಚಾರಗಳು. ನಮ್ಮ ಪ್ರೊಫೆಸರ್ ಒಬ್ಬರು ಎರಡು ನಾಯಿ ಸಾಕಿದ್ರು. ಒಂದು ಪೊಯೆಟ್ರಿ ಇನ್ನೊಂದು ಕ್ರಿಟಿಸಿಸಂ; ಗಂಭೀರ ವಿಚಾರದ ನಡಕ್ಕ ನಾಯಿ ತಂದು ಬಿಟ್ಟುಬಿಡ್ತೇವಿ Interruption, diversion;   ಗ್ರೇಟ್ ಸಾಧಾರಣೀಕರಣ, ಇದು ನಮ್ಮ ಕೆಟ್ಟತನ. ಅಂದಹಂಗ ನಮ್ಮ ನಾಯಿ ಹೆಸರು ಏನ್ ಗೊತ್ತೇನು? ತಿಮ್ಮ! 
ನಮಗ ಗಂಭೀರ ವಿಚಾರ, ವಿಷಯಗಳ ಒಳಗ ಆಸಕ್ತಿ ಇಲ್ಲ. ಹಿಂಗಿಲ್ಲದಾಗ ನಾವು ನಮ್ಮೊಳಗ ಇರಲಿಕ್ಕೆ ಹೆದರ್ತೇವಿ. ನಮಗ ಬೇಸಿಕ್ ಪಾಸಿಟಿವ್ ವಿಚಾರಗಳ ಬಗ್ಗೆ ಭಯ ಅದ. ಯಾಕಂದ್ರ ಸಂಗೀತದಂಥ ಕಲೆಯೊಳಗ ನಾನ್ nonexistent ಇರಬೇಕು ಇಲ್ಲಾ Honest ಆಗಿರಬೇಕು.
ಮತ್ತ ಈ ಕಾರ್ಯಕ್ರಮದೊಳಗಿನ ಹಾರ ಅನ್ನೋದು ಈವತ್ತು ಹಗ್ಗ ಇದ್ದಹಂಗ. Unusual, Outstanding ಇರೋ ಕಲಾವಿದರು ಕಲಾವಿದರೇ ಅಲ್ಲ. ನಾವು Extraordinary ಕಲಾವಿದರನ್ನ ಸಹಿಸಿಕೊಳ್ಳೂದ ಇಲ್ಲ. ಅವರ ಬಗ್ಗೆ ಭಯ ಅದ ನಮಗ. ಅವರ ಜೋಡಿ ಜಾಸ್ತಿ ಟೈಮ್ ಕಳೀಲಿಕ್ಕಾಗಲಿ, ಮಾತನಾಡ್ಲಿಕ್ಕಾಗ್ಲಿ ಭಯ ಪಡ್ತೀವಿ. ಅದಕ್ಕ ನಾವು ಅಲ್ಲಿಂದ ಲಗೂನ ಎದ್ದ ಹೊಂಟಬಿಡ್ತೀವಿ.

ಕೆಸರು; ಯಾವುದಾದರೂ ಘಟನಾ ನೆನಪಾಗಬಹುದ?  
ಒಬ್ಬಾಂವ ಇದ್ದ. ಕವನ ಬರ್ದು, ಇದು ಆಳವಾದ ಅಧ್ಯಯನದ ಫಲ ಅಂತ ಹೇಳ್ತಿದ್ದ. ಸೂಳೆಮಗ, ಉಪ್ಪಿನಕಾಯಿಯೊಳಗ ಉಪ್ ಹೆಚ್ಚಾತಂದ್ರ, ಹೆಂಡತೀನ್ ಹಿಡ್ಕೊಂಡ್ ಹೊಡೀತಿದ್ದ. ಇನ್ನೊಬ್ಬಾಂವ ಇದ್ದ.  ಒಂದಿನ ಬರ್ರಿ ಬರ್ರಿ ಅಂತ ಮನೀಗೆ ಕರದ. ಹೋದ್ರ ಮೈಮೇಲೆ ನನಗ ದಾರ ಇಲ್ಲ. ಸುಮತೀಂದ್ರ ನಾಡಿಗ್, ಅನಂತಮೂರ್ತಿ, ಶ್ರೀನಿವಾಸ್ ರಾವ್ ಅವರೆಲ್ಲ ಒಳಗ ಹೋದ್ರು. ಅವ ಓದಿದ ಕವನಾನ ನಾನು ಭಾಳಾ ಗಂಭೀರವಾಗಿ ತಗೊಂಡಿದ್ದೆ. ಆದ್ರ ಆಮ್ಯಾಲ ಗೊತ್ತಾತು, ಅವ ಎಲಿಯಟ್ ಕವನ ಕಾಪಿ ಹೊಡೆದಿದ್ದ ಅಂತ.
ಆಮ್ಯಾಲೆ ಈ ಸಂಗೀತ ಮತ್ತ ಸಾಹಿತಿಗಳ ವಿಚಾರಕ್ಕ ಬಂದ್ರ, ಸಂಗೀತ ಕೇಳಿ ನಮ್ಮ ಸಾಹಿತಿಗಳು ಹೇಳ್ತಾರ, ನಿನ್ನ ಸಂಗೀತ ಕೇಳಿದೆ, ಆದ್ರ ಯಾಕೋ ಅದು ನನ್ನ ಅಷ್ಟ್ ಮೂವ್ ಮಾಡಲಿಲ್ಲ. ಕಳ್ಳಸೂಳೇಮಕ್ಕಳಾ ಸಂಗೀತ ಅಂದ್ರ ಏನ್ ಗೊತ್ತದ? ಒಬ್ಬ ಕಲಾವಿದ ಅದರ ಜೋಡಿ ಎಷ್ಟ್ ದುಡದಿರ್ತಾನ ಅಂತ? ಒದ್ದರ ಅವ ಅಳೂದಿಲ್ಲ, ಒದರೂದಿಲ್ಲ. ಆ ನೋವನ್ನ ಹಾಡಿನೊಳಗ ತರಲಿಕ್ಕೆ ನೋಡ್ತಾನ. ಬಾರಸೂದ್ರಾಗ involvement ತಗೋತಾನ. ಒದ್ದರೋ ಅಂತ ಅಯ್ಯೋ ಅಯ್ಯೋ ಅಂತ ಒದರೂದು Rubbish!

-ಶ್ರೀದೇವಿ ಕಳಸದ
(18/3/18)