Saturday, March 24, 2018

ಚಿಕನ್ ಪಕೋಡಾ


(ಕಥೆ)

--------------
ಏಯ್ ಯಾಂವಲೇ ಅವ? ಬಂದರ ಬಾರ್ಲೇ, ಹೊಸಾ ಮಚ್ ಅದಲೇ ನಾಕೂ ದಿಕ್ಕಿಗೂ ಕತ್ತರಸಿ ಒಗ್ಗರಣಿ ಹಾಕಿ ಒಗದ ಬಿಡ್ತೇನಿ. ಎಷ್ಟಲೇ ಧೈರ್ಯ ನಿನಗ, ನಮ್ ಮಾಳಗಿ ಮ್ಯಾಲೆ ಓಡಾಡ್ತಿ, ತಾಕತ್ತಿದ್ರ ಎದರ್ಗಡೆ ನಿಂದರಲೇ ಹಲಕಟ್. ಕುಂಬಿ ಹಾರ್ಯಾರಿ ಹೊಕ್ಕಿ? ನಿನಗಿಂತ ನಾಕ್ ಪಟ್ ಎತ್ತರಕ್ ಜಿಗಿತೇನಿ ಮಗನ. ಏಯ್‍ ಕಳ್ಳನನಮಗನ ಬಾಗಿಲಿಗೆ ಕೈಹಾಕಿದ್ಯೋ ಲಟಲಟ ಮುರದ ಒಲಿಬಾಯಿಗೆ ತುರಕಿಬಿಡ್ತೇನ್ಲೇ ನಿನ್ನ. ಬಾರ್ಲೇ ಬಂದ್ ಕಣ್ಣಾಗ ಕಣ್ಣಿಟ್ ಮಾತಾಡ್ಲೇ ಮದ್ಲ!  

ಕೋಣೆಯ ಒಳಬದಿಯ ಕಿಟಿಕಿಯ ಸರಳುಗಳನ್ನು ಮಾತಿನ ಕಸುವಿಗೆ ತಕ್ಕಂತೆ ಪುರುಷೋತ್ತಮ ಎರಡೂ ಮುಷ್ಟಿಗಳಿಂದ ಗುದ್ದುತ್ತಿದ್ದಂತೆ ಪಕ್ಕದ ಮನೆಯ ಕೋಣೆಯ ಕಿಟಕಿ ಸರಳುಗಳೂ ಗ್ರ್ ಗ್ರ್… ಗ್ರಲ್ ರ್. ಮಧ್ಯರಾತ್ರಿ ಒಂದೂಮುಕ್ಕಾಲಿಗೆ ಇದ್ದಕ್ಕಿದ್ದಂತೆ ಗಂಡ ಹೀಗೆ ರೊಚ್ಚಿಗೆದ್ದಿದ್ದನ್ನು ಕಂಡ ಅವನ ಹೆಂಡತಿ ಚಂದ್ರಲಾ ಹಲ್ಲಿಯಂತೆ ಗೋಡೆಗಂಟಿ ಹೌಹಾರಿದ್ದಳು.

***  
ಮುಸ್ಸಂಜೆಯಲ್ಲಿ ಮುಂಬಾಗಿಲೆಳೆದು ಪುರು ರಸ್ತೆಗಿಳಿದರೆ ಮುಗಿಯಿತು. ಬಸ್ಸಿಗಾಗಿ ಕಟ್ಟೆಯ ಮೇಲೆ ಕುಳಿತಾಗಲೂ, ಹತ್ತುವಾಗಲೂ, ಟಿಕೆಟ್ ಇಸಿದುಕೊಳ್ಳುವಾಗಲೂ, ಕೆಲಸದ ಜಾಗ ತಲುಪುವತನಕವೂ ಬಗ್ಗಿಸಿದ ಕತ್ತು ಮಾತ್ರ ಹಾಗೇ. ಎಲೆಯಡಿಕೆರಸ ಪೀಕಲು ಮಾತ್ರ ಅವ ತಲೆ ಎತ್ತುತ್ತಿದ್ದ. ವಾರಕ್ಕೊಮ್ಮೆಯೋ ಎರಡು ಸಲವೋ ಮಟಮಟ ಮಧ್ಯಾಹ್ನ ಶೋಲ್ಡರ್ ಬ್ಯಾಗ್ ನೇತಾಡಿಸಿಕೊಂಡು, ದಿನಪತ್ರಿಕೆಯ ತುಂಡಿನಲ್ಲಿ ಎರಡೇ ಎರಡು ಮೈಸೂರು ಪಾಕು ಮತ್ತು ಮೊಳ ಮಲ್ಲಿಗೆ ಹಿಡಿದು ಮನೆಗೆ ಬಂದು ಬಾಗಿಲು ಬಡಿಯುವಾಗಲೂ ಮತ್ತದೇ ತಲೆಕೆಳಗು. ದೇವರು ಒಳಗೆ ಹೋದಾಗಲೂ ಹೋಗದಿದ್ದಾಗಲೂ ಅವ ಹಾಗೇ. ಎಷ್ಟೋ ಸಲ ರಸ್ತೆಯಲ್ಲಿ ಸೈಕಲ್ಲಿಗರು, ಗಾಡಿ ಸವಾರರು, ಗೂಳಿಗಳು ಹಾಯ್ದು ಹೋದರೂ, ತಾನೇ ತುಸು ವಾಲಿದೆನೇನೋ ಎಂದುಕೊಳ್ಳುತ್ತ ತಾಕಿದ ಜಾಗವನ್ನು ನಿರ್ಲಿಪ್ತವಾಗಿ ಸವರಿಕೊಂಡು ಹೊರಟುಬಿಡುತ್ತಿದ್ದ. ಅರ್ಧತಲೆ ಬಕ್ಕಾಗಿದ್ದರೂ ಕಿವಿಯಂಚಿನಗುಂಟ ಕರಿಬಿಳಿಕೂದಲು ಗೂಡು ಕಟ್ಟಿತ್ತು. ಬಿಳಿ ಶರಟಿನ ಮೇಲೆ ಸದಾ ಎದೆಯಡಿಕೆಯ ಮೊಹರು.  ಕಾಲೊಳಗಿನ ಹವಾಯಿ ಚಪ್ಪಲಿಗಳ ಪಟಪಟತನಕ್ಕೆ ಬಿಳಿ ದೊಗಳೆ ಪಾಯಿಜಾಮದ ಕೆಳತುದಿ ಮಾತ್ರ ಯಾವಾಗಲೂ ಖೊಡ್ಡಮಡ್ಡ.

ಮಿಚಿಗಿನ್ ಚಾಳಿನಲ್ಲಿ ಮಕ್ಕಳು, ಮೊಮ್ಮಕ್ಕಳು ಬಂದರೂ ಹೊದಿಸಿದ ಹಂಚು, ಕೂರಿಸಿದ ಟೈಲ್ಸು, ನೆಟ್ಟ ಗೇಟು ಹಾಗೇ ಇದ್ದವು. ಕಿಟಕಿ, ಗೋಡೆಗಳು ಮಾತ್ರ ಆಗಾಗ ಬಣ್ಣ ಬದಲಾಯಿಸಿಕೊಳ್ಳುವ ವಾಡಿಕೆ ಇಟ್ಟುಕೊಂಡಿದ್ದವು. ಮಂಗಗಳ ಹಿಂಡು ದಾಂಧಲೆ ಮಾಡಿದಾಗಲೋ, ಮರದಿಂದ ತೆಂಗಿನಕಾಯಿ ಬಿದ್ದಾಗಲೋ, ಹುಡುಗರು ಚೆಂಡು ಬೀಸಿದಾಗಲೋ… ಧೋಮಳೆಗೋ, ರಣಬಿಸಿಲಿಗೋ ಪಾಚಿಗಟ್ಟಿ ಕಪ್ಪುಗಟ್ಟಿಬಿಟ್ಟಿದ್ದ ಮಂಗಳೂರು ಹಂಚುಗಳು ಹೊಟ್ಟೆಸೀಳಿಕೊಂಡಾಗಲೇ ತಮ್ಮ ಬಣ್ಣ ಬಯಲು ಮಾಡುತ್ತಿದ್ದವು. ಚಾಳಿನ ಹಿತ್ತಿಲಿನ ಒಗೆಕಲ್ಲುಗಳ ಹರಿವಣಿಗೆಯಿಂದ ಅರ್ಧಮಾರು ಅನತಿಯಲ್ಲೇ ಸಣ್ಣ ಬಾಳೆತೋಟ ಹುಟ್ಟಿಕೊಂಡಿತ್ತು. ಸುಮಾರು ಐದು ವರ್ಷಗಳ ಹಿಂದೆ ಕೆಲಸದ ಮೇಲೆ ಕೇರಳಕ್ಕೆ ಹೋದಾಗ ಅಲ್ಲಿಯ ಬಾಳೆಹಣ್ಣಿಗೆ ಮಾರುಹೋದ ಪುರು, ಒಂದಿಷ್ಟು ಅಗಿಗಳನ್ನು ತಂದು ನೆಟ್ಟಿದ್ದ. ಯಾವಾಗಬೇಕಾದರೂ ಚಾಳಿನ ಯಾರೂ ಆ ಎಲೆಗಳನ್ನು ಯಾವುದಕ್ಕೂ ಕಿತ್ತುಕೊಂಡು ಹೋಗಬಹುದಿತ್ತು. ಅದರಲ್ಲೂ ನೀರಿನ ತಾಪತ್ರಯವಾದಾಗಲಂತೂ ಉಪ್ಪಿಟ್ಟು, ಅವಲಕ್ಕಿ, ಸೂಸಲ, ಊಟಕ್ಕೂ ಎಲೆಗಳೇ ಗತಿ. ಆದರೆ ಪೊಗದಸ್ತಾದ ಆ ಬಾಳೆಗೊನೆಗಳು ಮಾತ್ರ ಸದಾ ಹಣಮಂತನ ಹಿಂಡಿಗೇ ನೈವೇದ್ಯ. ಇದುವರೆಗೂ ಚಾಳಿನ ಯಾರೂ ಅವುಗಳ ರುಚಿಯನ್ನೇ ನೋಡಿರಲಿಲ್ಲ. ಮಂಗಗಳ ಈ ಹಾವಳಿಯಿಂದ ಬೇಸತ್ತರೂ, ‘ಅಯ್ಯ ತಿನ್ಲಿ ಬಿಡ್ರಿ, ತಿನ್ನೂದು ಅವನ ಹಕ್ಕು, ಹಣಮಂತ ತಾನೂ ತಿಂದ್ ನಮ್ನೂ ಕಾಯ್ತಾನು’ ಎಂದು ಅಲ್ಲಿದ್ದವರು ಕೈಮುಗಿಯುತ್ತಿದ್ದರು.

ಹೀಗಿರುವಾಗ ಬಾಳೆಗೊನೆಯ ತುದಿಗೆ ಅರಳಿದ ಹೂಗಳೊಂದಿಷ್ಟು ಉದುರಿ, ಒಂದೆರಡು ಬಾಳೆ ಎಲೆಗಳು ಹೊಟ್ಟೆಹರಿದುಕೊಂಡು, ಶರಟಿನ ಒಂದರ್ಧ ಗುಂಡಿ ನೀರಹರಿಯ ದಾರಿಯಲ್ಲಿ  ಬಿದ್ದಿದೆಯೆಂದರೆ, ನೀಲಿಸೋಪಿನ ತುಣುಕುಗಳು ಹರಡಿವೆಯೆಂದರೆ, ಈಗಷ್ಟೇ ಪುರುನ ಹೆಂಡತಿ ಚಂದ್ರಲಾ, ಚಂದೂಳೇ ಕಲ್ಲಿಗೆ ಪುರುವಿನದೇ ಬಟ್ಟೆಗಳನ್ನು ಕುಕ್ಕಿಕುಕ್ಕಿ ಹೋಗಿದ್ದಾಳೆಂದರ್ಥ; ಗಾಣದೆತ್ತಿನ ಹಾಗೆ ಗಣಗಣ ತಿರುಗುತ್ತ ಮೈಮುರಿದು ದುಡಿಯುವ ತನ್ನ ಗಂಡ ಬಾಯಿ ಸತ್ತ ಮನುಷ್ಯ.  ಇದುವರೆಗೂ ಒಬ್ಬ ಗೆಳೆಯನನ್ನೂ ಮನೆಗೆ ಕರೆತಂದದ್ದಿಲ್ಲ. ಸಂಬಂಧಿಕರ ಮನೆಗೂ ಕರೆದೊಯ್ದಿದ್ದಿಲ್ಲ.  ಯಾರು ಬಂದರೂ ಎರಡೇ ಮಾತಾಡಿ ಸುಮ್ಮನಾಗುವುದು. ಅವಳ ಹೋಗಲಿ ತನ್ನ ಕಳ್ಳುಬಳ್ಳಿ ಸಂಬಂಧಗಳನ್ನೂ ಹೊಸಿಲಿನೊಳಗೆ ಹಬ್ಬಗೊಟ್ಟಿದ್ದಿಲ್ಲ. ಖಾಲಿಯಾದ ಅಕ್ಕಿ, ಬೇಳೆ, ಎಣ್ಣೆ ಡಬ್ಬಿಗಳ ಖಬರಂತೂ ಮೊದಲಿನಿಂದಲೂ ಇಲ್ಲ. ಹೀಗೆ ಆದರೆ ಏನು ಗತಿ? ಎಂದು ಯೋಚಿಸಿದ ಚಂದೂ, ಇದ್ದೊಬ್ಬ ಮಗಳಾದರೂ ಈ ಎಲ್ಲ ನೆರಳಿನಿಂದ ಆಚೆ ಬೆಳೆಯಲಿ ಎಂದು ಗಟ್ಟಿ ಮನಸ್ಸು ಮಾಡಿ ಕಳೆದ ವರ್ಷ ಹಾಸ್ಟೆಲ್ಲಿಗೆ ಸೇರಿಸಿಬಂದಿದ್ದಳು. ಹೊಲಿಗೆಯೊಂದೇ ತನ್ನನ್ನು ತನ್ನ ಮನೆಯನ್ನು ಕಾಯುವ ಸಂಗಾತಿಯೆಂಬುದು ಅವಳಿಗೆ ಅರಿವಾಗಿತ್ತಾದರೂ ಮೂಲದಲ್ಲಿ ಗಂಡನ ಬಗ್ಗೆ ಅಸಹನೆ ಉಳಿದೇ ಇತ್ತು. ಇದೆಲ್ಲದರ ಪರಿಣಾಮವೇ ಶರಟಿನ ಗುಂಡಿಗಳ ಮಾರಣಹೋಮ.

ಮಜಾ ಎಂದರೆ, ಇಡೀ ಚಾಳಿನ ಮಂದಿಯ ಬಟ್ಟೆ ಹೊಲೆದು ಚೆಂದ ಮಾಡಿಕೊಡುವ ಚಂದೂಳ ಗಂಡ ಮಾತ್ರ ಸದಾ ಹೆಂಡತಿಯ ಕೈಬಳೆಗಳ ಮಧ್ಯೆ ನೇತಾಡುತ್ತಿದ್ದ ಪಿನ್ನುಗಳನ್ನೇ ಗುಂಡಿ ಉದುರಿದ ಜಾಗದಲ್ಲಿ ಸಿಕ್ಕಿಸಿಕೊಂಡು ಓಡಾಡುತ್ತಿದ್ದ. ‘ಟೇಲರ್ಬಾಯಿ, ತನ್ನ ಗಂಡನ ಅಂಗಿಗೆ ಬಿಡ್ಡಿ ಹಚ್ಚಿದ ದಿನಾನ ಅಕಿ ಸೂಜಿ ಅದ ದಾರದಾಗ ಉರಲ್ ಹಾಕ್ಕೊಂಡ್ ಸತ್ತ ಹೋಗ್ತದೇನೋ’ ಎಂದು ಚಾಳಿನ ಹೆಣ್ಣುಮಕ್ಕಳು ಕಟ್ಟೆಗೆ ಕುಳಿತು ಗೇಲಿ ಮಾಡುತ್ತಿದ್ದರು. ಆಗೆಲ್ಲ ಅವಮಾನವಾದಂತಾಗಿ ತಾನೇ ಗುಂಡಿ ಹಚ್ಚಿಕೊಟ್ಟು, ಮತ್ತೆ ತಾನೇ ಒಗೆಯುವ ಕಲ್ಲಿಗೆ ಕುಕ್ಕಿಕುಕ್ಕಿ ಅದನ್ನು ಹಾರಿಸಿಬಿಡುತ್ತಿದ್ದಳು. ಆದರೆ ಪುರು ಮಾತ್ರ ಅವಳ ಪಿನ್ನುಗಳನ್ನೇ ನಂಬಿಕೊಂಡಿದ್ದರಿಂದ ಇದ್ಯಾವುದನ್ನೂ ಗಮನಿಸುತ್ತಿರಲಿಲ್ಲ.  

***
ಬೆಳಗ್ಗೆ ಕೊಡಬೇಕಾದ ಮಂದಿಯ ಬಟ್ಟೆಗಳಿಗೆ ಕಾಜು-ಗುಂಡಿ ಮತ್ತು ಕೈಹೊಲಿಗೆ ಎಲ್ಲ ಮುಗಿಸಿ,  ಹೆಸರು ಕಾಳು ನೆನೆಹಾಕಿದ ಬೋಗುಣಿಗೆ ಬಾಯಿ ಮುಚ್ಚಿ, ಕಸದ ಬುಟ್ಟಿ ಹೊರಗಿಟ್ಟು, ಮುಂಬಾಗಿಲ ಚಿಲಕ ಸರಿಸಿ, ಇನ್ನೇನು ಚಂದೂ ಲೈಟು ಆರಿಸಿ ಮಲಗಬೇಕೆನ್ನುವಾಗಲೇ ಪುರು ಹೀಗೆ ಮಧ್ಯರಾತ್ರಿಯಲ್ಲಿ ಗಂಟಲು ಹರಿದುಕೊಂಡು ಪೌರುಷ ತೋರಲು ನೋಡಿದ್ದ. ಕಿಟಕಿಯಿಂದಾಚೆ ಜಮಾಯಿಸಿದ್ದ ನಾಲ್ಕೈದು ನಾಯಿಗಳನ್ನೂ, ಅವುಗಳ ಹೊಳೆಯುವ ಕಣ್ಣುಗಳನ್ನು ಮತ್ತು ಬೊಗಳುವಿಕೆಯನ್ನು ಕಂಡ ಆಕೆ ಮೊದಲ ಬಾರಿಗೆ ನಿಂತಲ್ಲೇ ಬೆವರಿದ್ದಳು. ಸ್ವಲ್ಪ ಹೊತ್ತಿನ ಬಳಿಕ ಬಾಗಿಕೊಂಡ ಆಕೃತಿಯೊಂದರ ನೆರಳು ಗೇಟಿನಿಂದ ದಾಟಿದಂತಾಗಿ, ಬೀದಿನಾಯಿಗಳೆಲ್ಲ ಕೂಗುತ್ತ ಅದನ್ನು ಅಟ್ಟಿಸಿಕೊಂಡು ಹೋದಂತೆನಿಸಿ ಪಟಕ್ಕನೆ ಕಿಟಕಿ ಮುಚ್ಚಿದಳು.

ಅಷ್ಟು ಒದರಿಬಂದ ಪುರು ಚಾಪೆ ಮತ್ತು ನುಗ್ಗಾದ ತಲೆದಿಂಬಿನ ಮೇಲೆ ಟವೆಲ್ ಹಾಸಿ ಹತ್ತು ನಿಮಿಷ ಥಣ್ಣಗೆ ಕುಳಿತ. ನಿಧಾನ ಅವನ ಪಕ್ಕ ಕೂತಳು. ಇಂದು ತಾನಾಗೇ ಹತ್ತಿರಬಂದ ಹೆಂಡತಿಯನ್ನು ನೋಡಿ, ‘ಓಹ್ ಬಾಯಾರ ಬ ಬರ್ರಿ’ ಎಂದು ಕತ್ತಲಲ್ಲೇ ಮೈಸೂರುಪಾಕಿನ ಪೊಟ್ಟಣಕ್ಕೆ ತಡಕಾಡುತ್ತ ಇನ್ನೊಂದು ಕೈಯಿಂದ ಅವಳ ಕೈಹಿಡಿದೆಳೆದ. ಅವನ ವರಸೆಯಿಂದ ಮಾಮೂಲಿ ಧಾಟಿಗೆ ಬರುತ್ತಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡ ಆಕೆ ನಿಟ್ಟುಸಿರುಬಿಟ್ಟಳು. ‘ಯಾರ್ ಬಂದಿದ್ರು? ಯಾಕ ಒದರ್ಲಿಕ್ಹತ್ತಿದ್ದಿ?’ ಎಂದು ಅಂಜಿಕೆಯನ್ನು ಒಳಕ್ಕೆಳೆದುಕೊಂಡು ಬಿರುಸಾಗೇ ಕೇಳಿದಾಗ, ‘ಕಳ್ಳ ಬಂದಿದ್ನರಿ ಬಾಯಾರ. ಮಾಳಗಿ ಹಂಚ್ ತಗೀಲಿಕ್ ನೋಡಿದಾ, ಹಿತ್ತಲಕಡೆ ಹೊಕ್ಕೊಳ್ಳಿಕ್ಕೆ ನೋಡಿದ, ಕುಂಬಿ ಮ್ಯಾಲೆ ಎಷ್ಟೋತ್ತನ ಓಡಾಡ್ತಿದ್ದ, ನಾ ಮಾತ್ರ ಹಿಂಗ ನಿಂತಲ್ಲೇ ನಿಂತು ಅವ್ನನ್ ಓಡಿಸೇಬಿಟ್ನಿ ನೋಡ್ರಿ. ಹಿತ್ತಲ್ಕಡೆನೂ ಹೋಗಿದ್ನೇನೋ ಅವ. ಏಯ್ ಹೊರಗಿಂದೇನರ ಹೊಡಕೊಂಡ್ ಹೋಗವಾಲ್ನ್ಯಾಕ ಒಳಗಿಂದಕ್ ಕೈಹಾಕ್ಲಿಕ್ ಮಾತ್ರ ನಾ ಬಿಡ್ಲಿಲ್ ನೋಡ್ರಿ, ಭೇಷ್ ಮಾಡಿದ್ನಿಲ್ರಿ ಮತ್? ನಮ್ಮನೀ ಬಾಗಲಾ ಕಿಡಕಿ ಗ್ವಾಡಿಗೆ ಮುಕ್ ಮಾಡಲಾರದ್ಹಂಗ ಅವನನ್ನ ಅತ್ತಿಂದತ್ತ ಓಡ್ಸೇಬಿಟ್ಟೆ.’ ಎಂದು ಗೋಡೆಗೆ ಆತುಕೊಂಡು ಕಾಲಮೇಲೆ ಕಾಲು ಹಾಕಿ ಪಾದ ಅಲುಗಾಡಿಸತೊಡಗಿದ.

ಬಾಗಿಲು ತೆಗೆದು ಮನೆಸುತ್ತ ಒಮ್ಮೆ ನೋಡಿಬಿಡಬೇಕು ಎಂದು ಎದ್ದುನಿಂತವಳನ್ನು ಪುರು ಕೈಹಿಡಿದು, ‘ಏಯ್ ಕೂಡ್ರಿ ಬಾಯಾರ ಕಳ್ಳ ಓಡಿಹೋದ’ ಎಂದು ಅಪ್ಪಿಕೊಳ್ಳಲು ನೋಡಿದ. ಕೊಸರಿಕೊಂಡು ದೂರ ಕುಳಿತಳು. ಕಳ್ಳ ಬಂದಿದ್ದು ಖರೆ? ಛೆ ಇರ್ಲಿಕ್ಕಿಲ್ಲ. ನಿದ್ದಿಗಣ್ಣಾಗ ಏನರ ಒದರಿರಬೇಕು ಈ ಡಬಲ್ಯಾ ನನ ಗಂಡ ಒಯ್ದೊಂದ್. ಅಷ್ಟಕ್ಕೂ ಸೋಸಿ ಜೀವನಾ ಮಾಡೂ ನಮ್ಮಂಥವರ ಮನಿಯೊಳಗ ಕದಿಯುವಂಥದ್ದರ ಏನಿರಬೇಕ್ ಅಂತೀನಿ. ಸೂಜಿ ಬಿಟ್ರ ದಾರಾ, ದಾರಾ ಬಿಟ್ರ ಬಟನ್ನಾ, ಬಟನ್ ಬಿಟ್ರ ಕತ್ರಿ, ಕತ್ರಿ ಬಿಟ್ರ ಮಶೀನಾ, ಮಶೀನ್ ಬಿಟ್ರ ಅವ್ರಿವ್ರು ಕೊಟ್ ಹೊಲಿಯೂ ಅರಬಿ ಅಂಚಡಿ. ಹದಿನೈದ ವರ್ಷದ ಹಿಂದ ನಮ್ಮಪ್ಪ ನಮ್ಮವ್ವ ಕೊಟ್ಟಿದ್ ನಾಕ ಭಾಂಡೆ ಸಾಮಾನು, ಎರಡು ಕುರ್ಚಿ ಒಂದ್ ಗಾದಿ ಎರಡ ದಿಂಬಾ ಚಾದರ್. ಅಲ್ಲಾ ನಮ್ ಮನ್ಯಾಗ್ ಏನ್ ತುಂಬಿ ಸುರೀಲಿಕ್ಹತ್ತದ ಅಂತ ಕಳ್ಳ ಬಂದಿದ್ದ…? ತನ್ನೊಳಗ ತಾ ಮಾತಾಡಿಕೊಳ್ಳುತ್ತ ಹಣೆಗೆ ಕೈಹಚ್ಚಿ ಕುಳಿತಿದ್ದವಳನ್ನು ಒಮ್ಮೆಲೆ ತನ್ನ ಮೇಲೆ ಎಳೆದುಕೊಂಡೇಬಿಟ್ಟ. ‘ಏಯ್ ಸುಟ್ ಬರ್ಲಿ ನಿನ್ ಒಯ್ದೊಂದ್, ಬಿಡ್ತೀಯಿಲ್ ನನ್’ ಎಂದು ಬಿಡಿಸಿಕೊಳ್ಳಲು ನೋಡಿದಳು. ಅದಕ್ಕೆ ಅವ, ‘ಏಯ್ ರಾಣಿಸಾಹೇಬ್ರ ನಿಮ್ ಪಾದಾ ಕೊಡ್ರಿ, ಬ್ಯಾರೇ ಏನೂ ಬ್ಯಾಡ್ರಿ ನಂಗ. ನಿಮ್ ಪಾದಾ ಪಾದಾ’ ಮತ್ತಷ್ಟೂ ಆಕ್ರಮಿಸತೊಡಗಿದ. ‘ಏ ನಿನ ಮಾರಿ ಮಣ್ಣಾಗಡಗಲಿ, ತಿಂದ್ ತಿಂದ್ ಕ್ವಾಣ ಕ್ವಾಣ ಆಗಿ. ಉಸರ್ ಸಿಕ್ಕೊಳ್ಳಿಕ್ಹತ್ತದ್, ಬಿಡ್ತೀಯಿಲ್ ನನ್? ಏಳ ಮ್ಯಾಲ, ಮಾರಿ ಹತ್ರ ಬರಬೇಡ, ಹೊಲಸ್ ನಾರ್ಲಿಕ್ಹತ್ತದ್ ನಿನ್ ಬಾಯಿ’ ಎಂದು ಹೇಳುತ್ತಲೇ ಕೈಗೆ ಸಿಕ್ಕ ಏನನ್ನೋ ತೆಗೆದುಕೊಂಡು ಹೊಡೆದೇಬಿಟ್ಟಳು. ಹೊಡೀಬ್ಯಾಡ್ರೀ ಚಂದೂಬಾಯಾರ ನಿಮ್ ಎದಿ ಬೇಕ್ರಿ ನನಗ, ಬೆಚ್ಚನ್ ಎದಿ ಮ್ಯಾಲ ಸುಮ್ನ ಕೂಸಿನಗತೆ ಮಕ್ಕೋತೇನ್ರಿ’ ಎಂದು ಕೈಮುಗಿಯತೊಡಗಿದ. ‘ಏಯ್ ನಿನ್ ಚಾಲಿ ಗೊತ್ತಿಲ್ಲೇನ್ ನನಗ? ಸುಮ್ ಮಕ್ಕೋತೆನಂತ ಹುರದ ಮುಕ್ಕೇಬಿಡ್ತೀ ನನ್ನ. ಮಗಳು ಮೈನೆರೀಲಿಕ್ ಬಂದದ ನಾಚಿಕಿಯಾಗಬೇಕು ನಿಂಗ. ಪಾಪ ಅದೊಂದ ಅಲ್ಲಿ ಹಾಸ್ಟೆಲ್‍ನ್ಯಾಗ ಹೆಂಗದನೋ ಏನೋ. ಈ ಸಲ ಭೆಟ್ಟಿಗೆ ಹೋದಾಗ ಅದಕ್ಕೊಂದು ಕೀಲಿ ಇರೋ ಸೂಟ್ಕೇಸ್ ತುಗೊಂಡ್ ಹೋಗಬೇಕು. ಎರಡ ಸಲ ಅದರ ಟ್ರಂಕಿನ ಬಾಯಿ ಬಿಟ್ಕೊಂಡಿತ್ತಂತ ಸಾಮಾನು ಚಲ್ಲಾಪಿಲ್ಲಿಯಾಗಿದ್ದೂವಂತ. ಹೆಂಗರ ಮಾಡಿ ಒಂದ್ ಬಂದೋಬಸ್ತ್ ಇರೋ ಸೂಟ್ಕೇಸ್ ಒಯ್ದ್ರಾತು ಅಂತ ನಾ ಒದ್ದಾಡ್ಲಿಕ್ಹತ್ರ ನಿಂದ್ ನಿನಗ!’ ಚಂದೂ ಚಾಪೆಬಿಟ್ಟು ನೆಲಕ್ಕೆ ಮುದುಡಿ ಮಲಗಿ ಹಾಗೇ ನಿದ್ದೆಹೋದಳು ಸಣ್ಣ ಮೈಕಟ್ಟಿನ ಚಂದ್ರಲಾ. ಪ್ರತೀವಾರವೂ ಒಂದಿಲ್ಲಾ ಒಂದು ಕಾರಣದಿಂದ ಮೊಳಮಲ್ಲಿಗೆ ಬಾಡಿಹೋಗುವುದು, ಮೈಸೂರುಪಾಕು ಚೆಲ್ಲಾಪಿಲ್ಲಿಯಾಗಿ ಇರುವೆಗಳ ಪಾಲಾಗುವುದು ಮಾಮೂಲಿಯಾಗಿತ್ತು. ಆದರೂ ಹೆಂಡತಿಯ ಪಾದ ಮತ್ತು ಎದೆಯ ಧ್ಯಾನದಿಂದ ಆತ ಕದಲುತ್ತಿರಲಿಲ್ಲ.

ಇತ್ತ ಎದ್ದವನೇ ಮುಂಬಾಗಿಲ ಚಿಲಕ ಸರಿಸಿದ. ಬೀದಿನಾಯಿ ಮಂದಾಕಿನಿ ಗೇಟಿನೆದುರು ಬಂದು ಮೂಸತೊಡಗಿದ್ದಳು. ಇಡೀ ಓಣಿಗೆ ಓಣಿಯೇ ಮುಸುಕು ಹೊದ್ದು ಮಲಗಿತ್ತು. ಚಪ್ಪಲಿ ಹಾಕಿಕೊಂಡವನೆ ಹಿತ್ತಲ ಬಳಿ ನಡೆದ. ಕಟ್ಟಿಗೆಯ ಗುಡ್ಡೆಯ ಹಿಂದೆ ಕೈಹಾಕಿ ಕತ್ತಲಲ್ಲೇ ಏನೋ ಹುಡುಕತೊಡಗಿದ. ಮಂದಾಕಿನಿ ಅಲಿಯಾಸ್ ಮಂದಿ ಮಾತ್ರ ಇವನ ಬೆನ್ನಿಗೆ ನಿಂತು ಕುಂಯ್‍ಗುಡತೊಡಗಿದಳು.  ಮಂಡಿಯೂರಿ ಕುಳಿತು ಗೋಡೆಗೆ ಆನಿಸಿಟ್ಟಿದ್ದ ಕಟ್ಟಿಗೆಯ ಸಂದಿಯಲ್ಲಿ ಮತ್ತೂ ಕೈಹಾಕಿ ಹುಡುಕಾಟ ಮುಂದುವರಿಸಿದ. ಇಲಿಬುಡ್ಡಕವೊಂದು ಪಾದಗಳ ಮೇಲೆ ಹರಿದು ಹೋಗಿದ್ದರಿಂದ ಬೆಚ್ಚಿಬಿದ್ದು ಎದ್ದುನಿಲ್ಲಲು ಹೋದವನು ಹಾಗೇ ಆಯತಪ್ಪಿ ಬಿದ್ದುಬಿಟ್ಟ. ಚೂಪುಗಲ್ಲೊಂದು ತಲೆಗೆ ತಾಕಿತು. ಅಯ್ಯೋ ಅಮ್ಮಾ ಎಂದವನೆ ಹಾಗೇ ಕುಸಿದ. ಕತ್ತಲೆ ತನ್ನ ಕಣ್ಣುಗಳಿಗೆ ಕೈಹಾಕಿ ಕಿತ್ತುಕೊಳ್ಳುತ್ತಿರುವಂತೆ ಭಾಸವಾಯಿತು, ಬಳಬಳನೆ ರಕ್ತ ಸುರಿಯತೊಡಗಿತು.

 ***
ಕ್ಚಚಕ್ ಚಿಬುಕ್ ಕ್ವಚಕ್ ಚಿಬುಕ್… ಸಣ್ಣ ಸಣ್ಣ ಕಟ್ಟಿಗೆ ಬೊಡ್ಡೆಗಳ ಮೇಲೆ ಮಾಂಸ, ಅಂಗಡಿಯವನಿಂದ ಕತ್ತರಿಸಿಕೊಳ್ಳುತ್ತಿತ್ತು. ಸುರುಳಿಸುತ್ತಿದ್ದ ಕೈಚೀಲವನ್ನು ಕಂಕುಳಲ್ಲಿ ಹಿಡಿದು ನಿಂತಿದ್ದ ಪುರು, ಎಡಗೈಯಿಂದ ಮೂಗು ಮುಚ್ಚಿಕೊಂಡು ಕಣ್ಣು ಕುಗ್ಗಿಸಿ ನೋಡುತ್ತಿದ್ದ. ಗೂಡಿನೊಳಗಿದ್ದ ಕೋಳಿಗಳು  ಕಣ್ಣಲ್ಲೇ ಇವನನ್ನು ಮಾತನಾಡಿಸುತ್ತಿದ್ದವು. ತರಕಾರಿ ಕತ್ತರಿಸುವಷ್ಟೇ ಸಲೀಸಾಗಿ ಇವ ಮಾಂಸವನ್ನು ಕತ್ತರಿಸುತ್ತಿದ್ದಾರಲ್ಲ ಎಂದು ಬೆರಗಿನಿಂದ ನೋಡುತ್ತಿರುವಾಗಲೇ ಮೂಗು ಮುಚ್ಚಿಕೊಂಡಿದ್ದ ಕೈ ಅವನಿಗರಿವಿಲ್ಲದೆ ಕೆಳಗೆ ಇಳಿದಿತ್ತು. ನಿಧಾನ ಮೂಗು ಮೆದುಳು ಆ ಅಂಗಡಿಯ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಂತೆ, ಕಿಸೆಯಲ್ಲಿದ್ದ ಚೀಟಿಯನ್ನು ಹಿಡಿದು ಅಂಗಡಿಯವನ ಬಳಿ ನಿಂತ.  ಚಷ್ಮಾದೊಳಗಿನಿಂದ ಪುರುವನ್ನು ಮತ್ತು ಚೀಟಿಯನ್ನೂ ನೋಡಿದ ಅಂಗಡಿಯವ, ಐದು ಕೆಜಿ ಮಾಂಸವನ್ನು ಪುರು ಹಿಡಿದಿದ್ದ ಚೀಲದೊಳಗೆ ಇಳಿಸಿದ. ಒಮ್ಮೆಲೆ ಭಾರವಾದಂತೆನಿಸಿ ಚೀಲದ ಹ್ಯಾಂಡಲ್ ಕೈಜಾರಿತು. ಊಟ ಮಾಡಿಲ್ವಾ? ಎಂದು ಕೈಸನ್ನೆಯಲ್ಲೇ ಕೇಳಿದ ಅಂಗಡಿಯಂವ. ಆದರೆ ಪುರು ತನ್ನ ಗುಂಗಲ್ಲೇ ಇದ್ದ, ‘ಇಲ್ಲ ಇಲ್ಲ ನಾನಿದೇ ಮೊದಲ ಬಾರಿ ಮುಟ್ಟುತ್ತಿರುವುದು. ಈಗ ಅಡುಗೆಯನ್ನೂ ಮಾಡಬೇಕು’ ಎಂದು ತನ್ನೊಳಗಿನ ಸಂಕಟವನ್ನು ತೋಡಿಕೊಂಡು, ಕಿಸೆಯಲ್ಲಿದ್ದ ಹಣ ಕೊಟ್ಟು ಹೊರಡಬೇಕೆನ್ನುವಾಗ ಅಂಗಡಿಯಂವ ಕೈಸನ್ನೆ ಮಾಡಿ ಅವನನ್ನು ತಡೆದು, ಸಣ್ಣ ಮಚ್ಚೊಂದನ್ನು ಪೇಪರಿನಲ್ಲಿ ಸುತ್ತಿ ಅವನಿಗೆ ಕೊಟ್ಟ.

ಉಸಿರು ಬಿಗಿಹಿಡಿದುಕೊಂಡೇ ಆ ಸಾಲುಮಾಂಸದಂಗಡಿಗಳನ್ನು ದಾಟಿಕೊಂಡು, ತಾನು ಕೆಲಸ ಒಪ್ಪಿಕೊಂಡ ಮನೆಗೆ ಬಂದ ಪುರು. ಕಾಂಟ್ರ್ಯಾಕ್ಟರ್, ಶಾಮಿಯಾನದ ಬಳಿ ಇವನನ್ನೇ ಕಾಯುತ್ತ ನಿಂತಿದ್ದ. ‘ಎಷ್ಟೊತ್ಲೇ ಮಗನ, ಅಡಗಿ ಯಾರ್ ನಿಮ್ಮಜ್ಜ ಮಾಡ್ತಾನು? ಎರಡ್ನೂರ ಮಂದಿಗೆ ಅಡಗಿ ಆಗಬೇಕು. ನಡ್ನಡಿ ಲಗೂ. ಈ ಆರ್ಡರ್ ಮುಗಿಸಿದ್ರಷ್ಟ ನಿನಗೆ ಐದು ಆರ್ಡರಿನ ಬಾಕಿ ಚುಕ್ತಾ ಮಾಡ್ತೀನಿ. ಇಲ್ಲ ನನಗೂ ನಿನಗೂ ಸಂಬಂಧ ಇಲ್ಲ’ ಎಂದು ಸಿಗರೇಟೆಳೆಯುತ್ತ ರಸ್ತೆಬದಿ ನಿಂತ. ಇತ್ತ ಪುರು ಕೀ ಕೊಟ್ಟ ಗೊಂಬೆಯಂತೆ ಒಲೆಹೂಡಿದ್ದ ಜಾಗಕ್ಕೆ ಬಂದು ನಿಂತ. ಒಂದು ಒಲೆಯ ಮೇಲೆ ಕುದಿಯಲು ನೀರನ್ನಿಟ್ಟು, ಮಾಂಸವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿಸಿ ಪಾತ್ರೆಗೆ ಸುರಿದು ಕಣ್ಣುಮುಚ್ಚಿನಿಂತ. ಚಿಕ್ಕಂದಿನಲ್ಲಿ ಶಾಲೆಯಿಂದ ಮನೆಗೆ ಬಂದಾಗ ತನ್ನಮ್ಮ ಬಿಂದಿಗೆ ಇಟ್ಟುಕೊಂಡು ಬಾಗಿಲ ಬಳಿ ಕಾಯುತ್ತಿದ್ದುದು ಕಣ್ಮುಂದೆ ಬಂತು; ಪುರು ಇನ್ನೊಂದು ಬದಿಯ ಕಟ್ಟೆಯ ಮೇಲೆ ಪಾಟಿಚೀಲವನ್ನು ಮತ್ತು ಅದರೊಳಗಿಂದ ಬುತ್ತಿಡಬ್ಬಿಯನ್ನು ತೆಗೆದಿಡುತ್ತಿದ್ದಂತೆ ಅವನಮ್ಮ ಈ ಬದಿಯ ಕಟ್ಟೆಮೇಲೆ ಬಿಂದಿಗೆಯೊಂದಿಗೆ ಹತ್ತಿ ನಿಲ್ಲುತ್ತಿದ್ದಳು. ಎರಡೂ ಕಣ್ಣುಮುಚ್ಚಿ ಅಂಗೈಗಳನ್ನು ತನ್ನ ಕೆನ್ನೆಗಂಟಿಸಿ ಕಟ್ಟೆಯ ಬಳಿ ನಿಲ್ಲುತ್ತಿದ್ದಂತೆ ತಲೆಮೇಲೆ ದಬೆದಬೆಯಂತೆ ನೀರು ಬೀಳುತ್ತಿತ್ತು. ನಡುಗುತ್ತಲೇ ಹಿತ್ತಲಕಡೆ ಅವ ಓಡಿಬಿಡುತ್ತಿದ್ದ. ಆಕೆ ಖಾಲಿ ಬುತ್ತಿಡಬ್ಬಿಗೂ, ಪಾಟಿಚೀಲಕ್ಕೂ ನೀರು ಚಿಮುಕಿಸಿ ಮಡಿ ಮಾಡಿ ಒಳನಡೆಯುತ್ತಿದ್ದಳು. ‘ಶಾಲೆ ಇರುವ ಯಾವ ಕಾಲದಲ್ಲೂ ಇದನ್ನು ಪಾಲಿಸುತ್ತಲೇ ಬಂದಿದ್ದೆನಲ್ಲ, ಆದರೆ ಈಗ? ಅಮ್ಮ ಇಲ್ಲ. ಈಗವಳಿದ್ದಿದ್ದರೆ ಯಾವ್ಯಾವ ನದಿಯ ನೀರನ್ನೆಲ್ಲ ನನ್ನ ತಲೆಮೇಲೆ ಸುರಿಯುತ್ತಿದ್ದಳೋ?’ ಎಂದುಕೊಳ್ಳುತ್ತ ಸಣ್ಣ ಸ್ಟೂಲೊಂದರ ಮೇಲೆ ಕುಳಿತು ಚೀಟಿಯಲ್ಲಿ ಕಾಂಟ್ರ್ಯಾಕ್ಟರ್ ಬರೆದುಕೊಟ್ಟದ್ದನ್ನೊಮ್ಮೆ ಕಣ್ಣಾಡಿಸಿ ಹೇಗೋ ಒಟ್ಟಿನಲ್ಲಿ ಖಾದ್ಯ ಮಾಡಿಮುಗಿಸಿದ ಪುರು.

 ನಂತರ, ಅಲ್ಲೇ ಇದ್ದ ಬಾವಿಕಟ್ಟೆಯ ಮೇಲಿನ ಬಿಂದಿಗೆಯಿಂದ ತಲೆಮೇಲೆ ನೀರು ಸುರಿದುಕೊಂಡು ಕತ್ತಲಲ್ಲೇ ಮೇಲೆ ನೋಡಿದ, ಎದುರು ಬದುರಿನ ಮರಗಳ ಚಾಚಿದ ಟೊಂಗೆಗಳೆರಡು, ಥೇಟ್ ಹುಬ್ಬು ಗಂಟು ಹಾಕಿಕೊಂಡ ತನ್ನಮ್ಮನಂತೇ ಕಂಡವು. ಕಾಂಟ್ರ್ಯಾಕ್ಟರ್ ಹತ್ತಿರ ಬಂದು, ಬೆನ್ನು ತಟ್ಟಿ, ಭೇಷ್ ಪುರುಷೋತ್ತಮ ಇನ್ನು ನೀ ಬದಕ್ತೀಯಲೇ. ಬಂದಾವ್ರೆಲ್ಲಾ ಅಗದೀ ವರ್ಣನಾ ಮಾಡಿದ್ರಲೇ ಅಡಗಿ. ತುಗೋ ಈ ರೊಕ್ಕಾ, ಮ್ಯಾಲೊಂದ್ಸಾವ್ರಾ ಭಕ್ಷೀಸ್’ ಎಂದು ಕಣ್ಣು ಸಣ್ಣ ಮಾಡಿಕೊಂಡು ಕೆನ್ನೆ ಕೆರೆದುಕೊಂಡ. ಕೀಲಿಕೊಟ್ಟ ಗೊಂಬೆಯಂತೆ ಬರೀ ಕೈಯಷ್ಟೇ ಮುಗಿದು ಸ್ಟೇಷನ್ನಿನ ಕಡೆ ಕಾಲುಹಾಕಿದ ಪುರು ಮುಂಬೈನಿಂದ ಧಾರವಾಡದ ರೈಲು ಹತ್ತಿದ. ಎದೆಮೇಲೆ ಕೈಇಟ್ಟುಕೊಂಡು ಶರಟಿನ ಪಿನ್ನಿನ ಬಾಯಿ ತೆಗೆಯುವುದು ಹಾಕುವುದು ಮಾಡುತ್ತ ಅದ್ಯಾವಾಗಲೋ ನಿದ್ದೆ ಹೋದ. ನಸುಕಿನ ಜಾವ ಧಾರವಾಡದ ಸ್ಟೇಷನ್ನಿಗೆ ಬಂದಿಳಿದಾಗ ಪುರುವಿಗೆ ಜೀವದಲ್ಲಿ ಜೀವ ಇರಲಿಲ್ಲ. ಮನೆಗೆ ಬಂದವನೇ ಮೊದಲು ಹಿತ್ತಲಿನ ಕಡೆ ಓಡಿ, ಚೀಲದಿಂದ ಕಾಗದ ಸುತ್ತಿದ ಮಚ್ಚನ್ನು, ಒಟ್ಟಿದ ಕಟ್ಟಿಗೆಯೊಳಗೆ ಮುಚ್ಚಿಟ್ಟುಬಂದು ನಂತರ ಮುಂಬಾಗಿಲು ಬಡಿದ.

 ***
ರಕ್ತ ಸುರಿಯತೊಡಗಿತ್ತು… ಪುರುವಿನ ತಲೆಗಾಯಕ್ಕೆ ಅರಿಷಿಣ ಒತ್ತಿ ಬಟ್ಟೆ ಕಟ್ಟಲಾಗಿತ್ತು. ಅವನೆದೆಯ ಮೇಲೆ ಕೈಯ್ಯಾಡಿಸುತ್ತ, ಶರಟಿನಿಂದ ಪಿನ್ ಬಿಚ್ಚಿ ತನ್ನ ಬಳೆಯೊಳಗೆ ಸಿಕ್ಕಿಸಿಕೊಂಡು ಒಂದೇ ಸಮ ಅಳುತ್ತಿದ್ದ ಚಂದೂಗೆ, ತನ್ನ ಸುತ್ತನಿಂತ ಮಂದಿಯ ಖಬರೇ ಇರಲಿಲ್ಲ. ತಾನು ಈ ಹಿಂದೆ ಅವನೊಂದಿಗೆ ಒರಟಾಗಿ ನಡೆದಕೊಂಡ ಘಟನೆಗಳೆಲ್ಲ ನೆನಪಾಗಿ ದುಃಖ ಉಕ್ಕುತ್ತಲೇ ಇತ್ತು. ಇದೇ ವೇಳೆಗೆ ಇದ್ದಕ್ಕಿದ್ದಂತೆ ಮಧ್ಯರಾತ್ರಿ ಒಂದೂಮುಕ್ಕಾಲಿಗೆ ನಡೆದ ಘಟನೆ ನೆನಪಾಯಿತು; ಅಂದ್ರ ಕಳ್ಳ ಬಂದಿದ್ ಖರೇ. ನಾ ಇವನ ಜೋಡಿ ಜಗಳಾ ಮಾಡಿ ಮಲ್ಕೊಂಡಾಗ, ಇಂವ ಅವನನ್ ಹುಡ್ಕೊಂಡ್ ಹೋಗ್ಯಾನ, ಅಲ್ಲಿ ಹೊಡೆದಾಟ ಆಗೇದ… ಎಂದು ತನ್ನಷ್ಟಕ್ಕೇ ತಾ ಅಂದಾಜಿಸಿದಳು.
ಅದೇ ಹೊತ್ತಿಗೆ ಪುರುವಿನ ಕೈ ಅಲುಗಾಡಿದಂತಾಯಿತು. ಮುಖದ ಮೇಲೆ ನೀರು ಚಿಮುಕಿಸಿದಳು. ಕಣ್ಣುಗುಡ್ಡೆ ಚಲಿಸುತ್ತಿದ್ದಂತೆ ತುಟಿ ಅದರತೊಡಗಿತು. ‘ಆ ಮಚ್ ನನಗ ಬ್ಯಾಡಾ, ಇನ್ನ್ಯಾವತ್ತೂ ಅದರ ಸುದ್ದೀಗೆ ಹೋಗೂದಿಲ್ಲ. ನಮ್ಮವ್ವ ನನಗ ಕ್ಷಮಿಸೂದಿಲ್ಲ… ಆ ಹಿತ್ಲಾಗಿನ ಕಟಗಿ ಸಂದ್ಯಾಗಿಂದ ಮಚ್ ತಗದ್ ಒಗೀರೀ ಬಾಯಾರ ಅತ್ಲಾಗ’ ಚಂದೂಗೆ ದಿಗಿಲಾಗಿ, ಮತ್ತಷ್ಟು ನೀರನ್ನು ಅವನ ಮುಖದ ಮೇಲೆ ಚಿಮುಕಿಸಿದಳು. ಪಕ್ಕದಲ್ಲಿದ್ದವರಿಗೆ ಏನೊಂದೂ ಅರ್ಥವಾಗದೆ ಮಕಮಕ ನೋಡಿಕೊಂಡು, ಹಾಂ ಸದ್ಯ ಕಣ್ಬಿಟ್ಟನಲ್ಲ ಎಂದು ನಿಟ್ಟುಸಿರು ಬಿಟ್ಟು ತಮ್ಮತಮ್ಮ ಮನೆಗೆ ಹೋದರು.

‘ಯಾವ ಮಚ್ಚು ಏನ್ ಮಾತಾಡ್ಲಿಕ್ಹತ್ತಿ, ಹುಚ್ಗಿಚ್ ಹಿಡೀತೇನ್?’ ಎಂದ ಗಾಬರಿಗೆ ಬಿದ್ದಳು. ಅವ ಅವಳನ್ನೇ ನೋಡುತ್ತಿದ್ದ ಹೊರತು ಏನೊಂದೂ ಮಾತನಾಡಲಿಲ್ಲ. ಹಾಗೇ ಸ್ವಲ್ಪ ಸುಧಾರಿಸಿಕೊಂಡು ಚಹಾ ಮಾಡಿ ಅವನಿಗೂ ಕೊಟ್ಟು ತಾನೂ ಕುಡಿದಳು. ಏನೋ ನೆನಪಾಗಿ ಹಿತ್ತಿಲಿನ ಕಡೆ ಬಂದಳು. ಅಲ್ಲೇ ಕಟ್ಟಿಗೆಯ ಸಂದಿಯಲ್ಲಿ ಸುತ್ತಿದ ಕಾಗದವೊಂದು ಕಣ್ಣಿಗೆ ಬಿದ್ದಿತು. ಕಾಗದವೆಂದುಕೊಂಡು ಕೈಗೆತ್ತಿಕೊಳ್ಳಲು ಹೋದರೆ ಅದು ಕಿಲೋಭಾರವಿತ್ತು. ಬಿಡಿಸಿ ನೋಡಿದರೆ ಮಚ್ಚು! ಗಂಡ ಬಡಬಡಿಸಿದ ಮಚ್ಚು ಇದೇ ಎಂದು ಗೊತ್ತಾಯಿತಾದರೂ ಇದರ ಹಿನ್ನೆಲೆ ಅರ್ಥವಾಗದೆ ನೆನೆಗುದಿಗೆ ಬಿದ್ದಳು. ಅದೇ ಗುಂಗಲ್ಲಿ ಗಂಡನನ್ನು ಆಸ್ಪತ್ರೆಗೆ ಕರೆದೊಯ್ದಳು. ‘ರಕ್ತ ನಿಂತದ ಹೊಲಿಗಿ ಏನೂ ಬೇಡ. ನೋವಿಗೆ ಇಂಜೆಕ್ಷನ್ ಕೊಡ್ತೀನಿ’ ಎಂದು ಡಾಕ್ಟರ್ ಹೇಳುತ್ತಿದ್ದಂತೆ, ‘ಅಯ್ಯೋ ಆ ಮಚ್ಚು ಬ್ಯಾಡ್ರಿ’ ಎಂದು ಕಿರುಚತೊಡಗಿದ ಪುರು. ಏಯ್ ಮಾರಾಯಾ ನಾ ಡಾಕ್ಟರ್ ಇದ್ದೀನೋಪಾ, ನಾ ಯಾಕ್ ಮಚ್ ಹಿಡ್ಕೋಳ್ಳೋ? ಎಂದು ತೋಳಿಗೆ ಇಂಜೆಕ್ಷನ್ ಚುಚ್ಚಿಬಿಟ್ಟರು. ‘ನಿನ ಗಂಡ ಏನ್ ಕೆಲಸ ಮಾಡ್ತಾನವಾ, ಇದೆಲ್ಲಾ ಹೆಂಗಾತು, ಏನ್ ಕತಿ? ಮಚ್ಚಗಿಚ್ಚ ಅಂತ ಯಾಕಂತಾನಂವ’ ಡಾಕ್ಟರ್ ಹೀಗೆ ಕೇಳಿದಾಗ, ಮೊದಲೇ ಗೊಂದಲದಲ್ಲಿದ್ದ ಚಂದೂ, ಸಾವರಿಸಿಕೊಂಡು ಅದರೀ ಅಡಗಿ ಕೆಲಸ ಮಾಡ್ತಾರ್ರಿ ಎಂದು ಹೇಳಿ, ಅವರಿಗೂ ಗುಂಗು ಹಚ್ಚಿ ಗಂಡನ ಕೈಹಿಡಿದುಕೊಂಡು ಮನೆಗೆ ಬಂದಳು. ಬಂದವಳೇ ನಾಳೆ ಬೆಳಗ್ಗೆದ್ದು ಹಾಸ್ಟೆಲ್‍ನಲ್ಲಿರುವ ಮಗಳೆಡೆ ಹೋಗಬೇಕು ಎಂದು ನೆನಪಿಸಿದಳು. ತಾನು ಮಾರ್ಕೆಟ್‍ ಗೆ ಹೋಗಿ ಬೀಗ ಇರುವ ಸೂಟ್‍ಕೇಸ್ ತರುವುದಾಗಿ ಹೇಳಿ, ಅವನಿಗೂ ಊಟಕ್ಕೆ ಕೊಟ್ಟು ತಾನೂ ಉಂಡು ಮಾರ್ಕೆಟ್ಟಿಗೆ ಹೊರಟಳು.  

ತಾಸಿನ ನಂತರ ಎಚ್ಚರಗೊಂಡ ಅವ, ನಿಧಾನಕ್ಕೆ ಹಿತ್ತಲಿನ ಬಾಗಿಲು ತೆಗೆದ. ಮಚ್ಚು ಕಾಗದ ಸುತ್ತಿಕೊಂಡು ಮಲಗಿತ್ತು. ಅದನ್ನೆತ್ತಿಕೊಂಡು ತನ್ನ ಬಗಲುಚೀಲದೊಳಗೆ ಹಾಕಿಟ್ಟು ಮಲಗಿದ. ಅರ್ಧತಾಸಿನ ಬಳಿಕ ದೊಡ್ಡ ಸೂಟ್ಕೇಸ್‍ ಹಿಡಿದು ಕಳೆಕಳೆಯಿಂದ ಬಂದಳು ಚಂದೂ. ಗಂಡನಿಗೆ ಅದನ್ನೂ ಮತ್ತು ಅದಕ್ಕಿರುವ ಬೀಗವನ್ನೂ ತೋರಿಸಿದಳು. ಮಾರನೇ ದಿನ ಎಂಟರ ಬಸ್ಸಿಗೆ ಇಬ್ಬರೂ ಹೊರಟರು. ಪುರು ತನ್ನ ಬಗಲುಚೀಲದೊಳಗಿನ ಮಚ್ಚನ್ನು ಆಗಾಗ ಭಯದಿಂದ ಮುಟ್ಟುತ್ತಿದ್ದರೆ, ಹೊಸ ಸೂಟ್‍ಕೇಸ್ ಅನ್ನು ಮತ್ತೆ ಮತ್ತೆ ಮುಟ್ಟಿ ಖುಷಿಪಡುತ್ತಿದ್ದಳು ಚಂದೂ. ಮಲಪ್ರಭಾ ನದಿಯ ಸೇತುವೆ ಬರುತ್ತಿದ್ದಂತೆ ಪುರು ಇದ್ದಕ್ಕಿದ್ದಂತೆ ಎದ್ದುನಿಂತ. ಏನೆಲ್ಲ ಅವಿತಿಟ್ಟುಕೊಂಡರೂ ತನ್ನೊಳಗೇನೂ ಇಲ್ಲವೆಂಬಂತೆ ಶಾಂತಳಾಗಿ ಹರಿಯುತ್ತಿದ್ದಳು ಮಲಪ್ರಭೆ. ‘ನಿಲ್ಲಸ್ರೀ ಗಾಡಿ’ ಪುರು ಚೀರಿದ. ಡ್ರೈವರ್ ಗಾಬರಿಯಿಂದ ಬ್ರೇಕ್ ಹಾಕಿದ, ‘ಹಗರ್ಕನೋ ಮಾರಾಯಾ. ಒಂದಕ್ ಒತ್ರ್ ಆಗ್ಯಾವೇನ?’ ಕಂಡಕ್ಟರ್ ಕೇಳಿದ. ಏನೊಂದೂ ಮಾತನಾಡದೆ, ಬಗಲಿನ ಚೀಲದೊಂದಿಗೆ ದಡದಡನೆ ಬಸ್ ಇಳಿದ, ಚಂದೂ ಅವನನ್ನು ಹಿಂಬಾಲಿಸಿದಳು. ಕಿಟಿಕಿಯೊಳಗಿನ ಕಣ್ಣುಗಳು ಅವರಿಬ್ಬರನ್ನೂ ಹಿಂಬಾಲಿಸಿದವು. ಚೀಲದಿಂದ ಮಚ್ಚು ತೆಗೆದವನೇ ಜೋರಾಗಿ ಮಲಪ್ರಭೆಯತ್ತ ಬೀಸಿಒಗೆದುಬಿಟ್ಟ. ಅವಳ ಪದರಗಳನ್ನು ಸೀಳಿಕೊಂಡು ಸುತ್ತಲೂ ಅಲೆಯೆಬ್ಬಿಸಿ ಆಳದಲ್ಲೆಲ್ಲೋ ಬಿದ್ದು ಪಳಿಯುಳಿಕೆಯಂತೆ ತಳಹಿಡಿದು ಕುಳಿತುಬಿಟ್ಟಿತದು. ಪುರುಷೋತ್ತಮ ವಾಪಾಸುಬಂದು ಸೀಟಿಗೊರಗಿ ತಲೆಯೆತ್ತಿದವನೇ ಎದೆಸೆಟೆಸಿ ಕುಳಿತ. ಡಾಂಬರು ಮೆತ್ತಿಕೊಂಡ ದೊಡ್ಡ ಇಂಚುಪಟ್ಟಿಯೊಂದನ್ನು ಬಸ್ಸು ನುಂಗುತ್ತ ಹೊರಟಿತ್ತು. ಹಿಗ್ಗಿದ ಅವನ ಕಣ್ಣಪಾಪೆಗಳನ್ನು ಕಂಗಾಲಾಗಿ ನೋಡುತ್ತಿದ್ದಳು ಚಂದೂ. ಪ್ರಯಾಣಿಕರು, ಯಾರೋ ಏನೋ ಎಂತೋ ಎಂದುಕೊಂಡು ತಮ್ಮ ಲೋಕದಲ್ಲಿ ಮುಳುಗಿದರು. ಮುಗಿಲಿನೊಳಗೆ ಬೂದುಮೋಡಗಳು ನಿಧಾನ ದಟ್ಟೈಸತೊಡಗಿದವು.

ಬಸ್ಸು ಹಾಸ್ಟೆಲ್ಲಿನ ಮುಂದೆ ಬಂದು ನಿಂತಿತು. ಆಗಲೇ ತನ್ನ ಆಪ್ತಗೆಳತಿಯೊಂದಿಗೆ ಕಾಯುತ್ತಿದ್ದಳು ಮಗಳು. ಓಡಿಬಂದು ತಬ್ಬಿದ ಆಕೆ ಹೊಸ ಸೂಟ್ಕೇಸ್ ನೋಡಿ ಕಣ್ಣಲ್ಲೇ ಹಿಗ್ಗಿದಳು. ಎಲ್ಲರೂ ಸೇರಿ ಶಾಲೆಯ ಕಾರಿಡಾರಿನಲ್ಲಿ ಒಂದು ಬೆಡ್‍ಶೀಟ್ ಹಾಸಿಕೊಂಡು ತಿಂಡಿ ತಿನ್ನಲೆಂದು ಕುಳಿತರು. ಬಾಳೆಲೆಯಲ್ಲಿ ಸುತ್ತಿಕೊಂಡು ಬಂದ ಅವಲಕ್ಕಿಯನ್ನು ಇನ್ನೊಮ್ಮೆ ಹಾಕಲು ಬಂದ ಅಮ್ಮನ ಕೈತಡೆದು, ‘ಬ್ಯಾಡಾಮ್ಮಾ. ಈಗರ ನಾ ಇವರ ಅಮ್ಮಾ ಕೊಟ್ಟ ಪಕೋಡಾ ತಿಂದೆ’ ಎಂದು ತನ್ನ ಗೆಳತಿಯತ್ತ ನೋಡಿದಳು. ಆಗ ಆಕೆ, ‘ಹಾಂ ಆಂಟಿ, ಚಿಕನ್ ಪಕೋಡ ನಮ್ಮಮ್ಮ ಮಸ್ತ್ ಮಾಡ್ಯಾರು’ ಎಂದಾಗ ಪುರುವಿಗೆ ಅವಲಕ್ಕಿ ನೆತ್ತಿಗೇರಿದಂತಾಗಿ ಕಾರಿಡಾರು ಬಿಟ್ಟು ಅಂಗಳಕ್ಕೆ ಬಂದುಬಿಟ್ಟ. ಗಾಬರಿಯಿಂದ ನೀರಿನ ಬಾಟಲಿ ಕೈಗಿಡಲು ನೋಡಿದಳು ಚಂದೂ. ತಳ್ಳಿದವನೇ ಮುಖ ಮುಗಿಲಿಗೆ ಮಾಡಿ ಮುಷ್ಟಿಗಟ್ಟಿದ. ಬೇರಿನ ಟಿಸಿಲುಗಳಂತೆ ಗಂಟಲು ನರಗಳು ಉಬ್ಬಿಕೊಂಡವು ಮೈಬೆವರತೊಡಗಿತು. ಮೈಮೇಲೆ ದೆವ್ವ ಹೊಕ್ಕವರಂತೆ ಹಲ್ಲು ಕಚ್ಚಿ ಹಿಸ್ ಹಿಸ್ ಎಂದು ಶಬ್ದ ಹೊರಡಿಸತೊಡಗಿದ. ಮುಗಿಲು ಒಮ್ಮೆ ಗುಡುಗು ಹಾಕಿ ಮಳೆ ಸುರಿಸತೊಡಗಿತು.

ಮುಷ್ಟಿಬಿಚ್ಚಿ ಎರಡೂ ತೋಳು ಚಾಚಿ, ಆ… ಎಂದು ಚೀರಲು ನೋಡಿದ, ದನಿಯೇ ಹೊರಬರುತ್ತಿಲ್ಲ. ಇತ್ತ ಮಳೆಬಂದ ಖುಷಿಯಲ್ಲಿ ಅಪ್ಪ ತಮಾಷೆ ಮಾಡುತ್ತಿದ್ದಾನೆಂದುಕೊಂಡ ಮಗಳು ಅವನನ್ನು ತಬ್ಬಿಹಿಡಿದಳು. ಅವಳ ಗೆಳತಿ ಗಲ್ಲಕ್ಕೆ ಎರಡೂ ಕೈಹಚ್ಚಿಕೊಂಡು ಹನಿಗಳ ಪುಳಕ ಅನುಭವಿಸತೊಡಗಿದಳು. ಮತ್ತಿವನಿಗೇನಾಯಿತೋ ಎಂದುಕೊಂಡ ಚಂದೂಗೆ ನಿಂತಲ್ಲೇ ಚಡಪಡಿಗೆ ಶುರುವಾಯಿತು. ಒಂದೊಂದು ಮಳೆಹನಿಯಲ್ಲೂ ಅವನಿಗೆ ತನ್ನಮ್ಮನ ಮುಖವೇ ಕಾಣಿಸುತ್ತಿತ್ತು. ಹಾಗೇ ಜೋಲಿತಪ್ಪಿ ಬೀಳುತ್ತಿದ್ದವನನ್ನು ಚಂದೂ ಮಗಳೊಂದಿಗೆ ಹಿಡಿದುಕೊಳ್ಳಲು ಮುಂದೆ ಬಂದಳು. ಆದರೆ, ಕೋಳಿಗಳೆರಡು ಕೊಕ್ಕು ಚೂಪು ಮಾಡಿಕೊಂಡು ತನ್ನೆಡೆಗೇ ಬರುತ್ತಿವೆ ಎಂದೆನಿಸಿ ಹಿಂದೆಹಿಂದೆ ಸರಿಯುತ್ತಲೇ, ಸಸಿ ನೆಡಲು ತೋಡಿದ ಗುಂಡಿಯೊಳಗೆ ಹಿಂಬರಿಕಿಯಲ್ಲಿ ದಢಾರ್ ಎಂದು ಬಿದ್ದುಬಿಟ್ಟ ಪುರುಷೋತ್ತಮ.

-ಶ್ರೀದೇವಿ ಕಳಸದ

(ತುಷಾರ, ಏಪ್ರಿಲ್  2018)

4 comments:

sunaath said...

ಮನಸ್ಸನ್ನು ಆಳವಾಗಿ ಕಲುಕಿದ ಕಥೆ. ರಶಿಯನ್ ಲೇಖಕರಾದ, ನಿಕೊಲೈ ಗೊಗೊಲ್, ಚೆಕಾಫ್ ಮೊದಲಾದವರ ಕಥೆಗಳು ನೆನಪಿಗೆ ಬಂದವು.ನಿಮಗೆ ಸಾಹಿತ್ಯಪಯಣದಲ್ಲಿ ಶುಭಕೋರಿಕೆ.

ಆಲಾಪಿನಿ said...

Thank u sir.

ರೂಪಶ್ರೀ ಕಲ್ಲಿಗನೂರ್ said...

ಎಷ್ಟು ಚಂದದ ಕತೆ... ಓದುಗರನ್ನು ತನ್ನ ಯಾನದಲ್ಲಿ ಕೈ ಹಿಡಿದು ಕರೆದುಕೊಂಡು ನಡೆಯುತ್ತೆ...

ಆಲಾಪಿನಿ said...

Thank u roopashree :)