Thursday, April 26, 2018

I ಒಂದುಕಡೆ Love ಇನ್ನೊಂದುಕಡೆ You ಮತ್ತೊಂದುಕಡೆ..
'ಇದ‌ ಹಚ್ಕೊಂಡ ಹೋಗ್ರಿ' ಇನ್ನೇನು‌ ಕೂತ ಜಾಗ ಬಿಟ್ಟು ವೇದಿಕೆಗೆ ನಾ ಹೋಗಬೇಕಿತ್ತು. ಬಿಡಲೇ ಇಲ್ಲ ಆ ಕಾವಿತೊಟ್ಟ ಹುಡುಗ. ಮತ್ತೆ ಕೂಗಿದ, ದೊಡ್ಡದೊಂದು ವಿಭೂತಿ ಉಂಡೆಯ ಬಳಿ‌ ಕರೆತಂದ. 'ಈಬತ್ತಿ ಹಚ್ಕೊಂಡ ಹೋಗಬೇಕು, ಇದು ಇಲ್ಲೀ ಪದ್ಧತಿ' ಎಂದ. ನನಗಿಂತ ನಾಲ್ಕೈದು ವರ್ಷ ದೊಡ್ಡವನಿರಬೇಕು ಆ ಮರಿ ಎನ್ನಿಸಿಕೊಳ್ಳುತ್ತಿದ್ದ ಸ್ವಾಮಿ. 'ಮಾರಾಯಾ ಯಾಕ ಗಂಟ್ ಬಿದ್ದೀಪಾ, ಅದು ತಾನಾಗೇ ಹಚ್ಚಿಸ್ಕೊಳ್ತಿತ್ತು, ನೀ ಯಾಕ ಒತ್ತಾಯ ಮಾಡಿದಿ' ಎಂದು ಮನಸಲ್ಲೇ ಅಂದುಕೊಳ್ಳುತ್ತ ಪೆಚ್ಚುಮೋರೆ ಹಾಕಿಕೊಂಡು ನಿಂತೆ. 'ನೀವ್ ಹಚ್ಕೋಲಿಲ್ಲಂದ್ರ ನಾನ ಹಚ್ತೇನ್ ನೋಡ್ರಿ' ಎಂದು ಎರಡು ಹೆಜ್ಜೆ ಮುಂದೆ ಬಂದ,‌ ನಾ‌ ನಾಲ್ಕು ಹೆಜ್ಜೆ ಹಿಂದೆ ಸರಿದೆ.  ಅವನೊಂದಿಗೆ ವಾದ ಮಾಡಿ ಮೂಡು ಹಾಳುಮಾಡಿಕೊಳ್ಳುವ ಮನಸ್ಸಿರಲಿಲ್ಲ, ಎಲ್ಲಕ್ಕಿಂತ ಮುಖ್ಯ ಅದೇ ನೆಪದಲ್ಲಿ ಅವ ನನ್ನ ಮುಟ್ಟುವುದೂ ಬೇಕಿರಲಿಲ್ಲ! ನೇಮಕ್ಕೆ ಮೂರೂ ಬೆರಳು ವಿಭೂತಿಯಲ್ಲಾಡಿಸಿ ಹಣೆಗೆ ಹಚ್ಚಿಕೊಂಡೆ. 'ಇಲ್ರಿ, ಇನ್ನೂ ರಬ್ಬಗೆ ಹಚ್ಕರಿ, ಅಜ್ಜಾರ ಆಶೀರ್ವಾದರೀ ಅದ. ನಿಮ್ ಕಾರ್ಯಕ್ರಮ ಚುಲೋ ಆಗ್ತೇತ್ರಿ' ಅಂದ. ಅಲ್ಲಿ ಮಠದವರು, ಹಿರಿಯ ಸ್ವಾಮಿಗಳು ತಮ್ಮಪಾಡಿಗೆ ಗಂಭೀರವಾಗಿ ತಾವಿರುವಾಗ ಇವನದೇನು ಕರಪರ ಎಂದುಕೊಳ್ಳುತ್ತ, 'ನಿನಗ ಸಮಾಧಾನ ಆತಿಲ್ಲೋ' ಇನ್ನರ ನಮ್ಮನ್ ಬಿಡು ಅನ್ಕೊಂಡೆ ಮನಸಲ್ಲಿ. 'ಸರ ಸರ ನೀವೂ ಬರ್ರಿಲ್ಲೇ, ಪದ್ಧತಿ ಮುರೀಬಾರ್ದರಿ ಮಠದ್ದು' ಅಂತ ನನ್ನ ಅಪ್ಪಾಜಿ ಮತ್ತು ತಮ್ಮನಿಗೂ ವಿಭೂತಿ ಹಚ್ಚಿಕೊಳ್ಳಲು ಗಂಟುಬಿದ್ದು ಹಚ್ಚಿಸೇಬಿಟ್ಟ... (ಹಾಡುವುದೇ ಭಕ್ತಿಯಲ್ಲವೆ? ನನ್ನೊಳಗೆ ನಾ ಹೇಳಿಕೊಂಡು ಮೂಡು ಸರಿ ಮಾಡಿಕೊಂಡೆ)

ಎಂಟುದಿನದ ಬಳಿಕ ನಮ್ಮ ಮನೆಗೆ ಒಂದು ಅನಾಮಿಕ ಪತ್ರ ಬಂತು. ಅದೇ ನನ್ನ ಜೀವನದಲ್ಲಿ ಮೊದಲ ಬಾರಿಗೆ ಹುಡುಗನೊಬ್ಬ ಬರೆದ ಪತ್ರವಾಗಿತ್ತು. ನಿಮ್ಮ ಕಂಠಕ್ಕೆ ನಾನು ಮನಸೋತಿದ್ದೇನೆ ಮೊನ್ನೆ ನೀವು‌ ಮಠದಲ್ಲಿ ಹಾಡಿದ್ದು‌ ನನಗೆ ಇಷ್ಟವಾಯಿತು ಎಂದು ಬರೆದು, ಪತ್ರದ ತುಂಬ I love you, I love u ತುಂಬಿತ್ತು ನಾಮಾವಳಿಯ ಹಾಗೆ. ನಾನಾಗ ಏಳನೇ ಕ್ಲಾಸು. ಶಾಲೆಯಲ್ಲಿ ಗೋಡೆಗಳ‌ ಮೇಲೆ, ಬೆಂಚಿನ ಮೇಲೆ ಬರೆಯುತ್ತಿದ್ದುದರ I love u ಈಗ ಪತ್ರದಲ್ಲಿ!  love ಅಂದರೇನು? ಗೋಡೆ ಮೇಲೆ ಯಾಕೆ ಬರೆಯುತ್ತಾರೆ? ಹಾಗೆ ಬರೆದರೆ ಏನಾಗುತ್ತದೆ ಎಂದೆಲ್ಲ ನನಗೆ ನಾನೇ ಯೋಚಿಸುತ್ತ ಗಲಿಬಿಲಿ ಮಾಡಿಕೊಳ್ಳುತ್ತಿದ್ದ ವಯಸ್ಸದು. ಹೀಗಿರುವಾಗಲೇ ದೊಡ್ಡವಾಡದ ನಮ್ಮ ಮನೆಗೆ ಆ ಪತ್ರ ಬಂದು ಅದು ಟೇಬಲ್ಲೇರಿ ಕುಳಿತಿತ್ತು. ಅಚ್ಚರಿ‌, ಗಾಬರಿ, ಭಯ, ಕುತೂಹಲ ಒಟ್ಟೊಟ್ಟಿಗೆ. ಅಪ್ಪಾಜಿ ನನಗೆ ಬಯ್ಯಬಹುದು ಎಂದುಕೊಂಡೆ, ಅವರು ಬಯ್ಯಲಿಲ್ಲ. ಆ ಬಗ್ಗೆ ಏನಾದರೂ ಕೇಳಲಿ ಎಂದುಕೊಂಡೆ ಕೇಳಲಿಲ್ಲ. ಅಪ್ಪ-ಅಮ್ಮ ಆ ಬಗ್ಗೆ ಮಾತನಾಡಿಕೊಳ್ಳುವರೋ ಹೇಗೆ ಎಂದು ರಾತ್ರಿ ಹಗಲು ಗೋಡೆಗಳಿಗೆ ಕಿವಿಯಾದೆ. ಬಚ್ಚಲು, ಹಿತ್ತಲುಗಳನ್ನು ಆತುರಾತುರವಾಗಿ ಮುಗಿಸಿ ಓಡಿಬಂದೆ. ಊಂಹೂ ಅಪ್ಪಾಜಿಯೂ ಅಮ್ಮನೂ  I love u ಬಗ್ಗೆ ಏನೂ ಹೇಳಲೇ ಇಲ್ಲ. ಮಾರನೇ ದಿನವೂ ಅದೇ ಜಾಗದಲ್ಲೇ ಇತ್ತದು. ಸಂಜೆ ಹೊತ್ತಿಗೆ ಮತ್ತೆ ಬಂದು ನೋಡಿದರೆ ಮಾಯ! ಎಲ್ಲಿ ಹೋಗಿರಬಹುದು ಎಂದು ಕಣ್ಣಾಡಿಸಿದರೆ ಅಲ್ಲೇ ಕ.ಬು ನಲ್ಲಿ ಚೂರುಚೂರಾಗಿ ಬಿದ್ದು I ಒಂದು ಕಡೆ love ಒಂದು ಕಡೆ u ಇನ್ನೊಂದು ಕಡೆಯಾಗಿದ್ದವು. ಈ 'ಈಬತ್ತಿ ಪರಸಂಗ'ಕ್ಕೂ I love u ಗೂ ಲಿಂಕಿರಬಹುದೆ? ಅಂತ ಈಗ‌ ಅನ್ನಿಸತೊಡಗಿದೆ...

ಈ ವಿಭೂತಿ ಪ್ರಸಂಗ‌ ನಡೆದದ್ದು ಆ ಶ್ರಾವಣ ಸೋಮವಾರದ ದಿನವೇ. ಇಪ್ಪತ್ನಾಲ್ಕು ತಾಸೂ ಸೂರು ಹಿಡಿದು ಸೋ ಎನ್ನುವ ಮಳೆ. ಅಂಗಾಲಿಗೆಲ್ಲ ಮೆಹಂದಿಯಂತೆ ಹರಡಿದ ಕೆಮ್ಮಣ್ಣ ರಾಡಿ, ಬೆನ್ನತನಕ ಸಿಡಿದ ಹವಾಯಿ ಚಪ್ಪಲಿಯ ಪಿಲ್ಲುಪಿಲ್ಲು ಮೊಹರುಗಳು, ದೊಡ್ಡ ಮಠದ ದೊಡ್ಡ ಜಾತ್ರೆ! ಶಾಲೆ ಮುಗಿಸಿ ಪಾಟಿಚೀಲವೆಂಬ ಐದಾರು ಕೆಜಿ ಗಂಟು ಹೊತ್ತು ತಮ್ಮನ ಕೈಹಿಡಿದು ಬಸ್ಸು ಹತ್ತಿ ಹೇಗೋ ಮುರುಘಾಮಠದ ಆವರಣ ಹೊಕ್ಕಿದ್ದೆ. ಅಪ್ಪಾಜಿ ದೊಡ್ಡವಾಡದಿಂದ ಬರುವವರೆಗೆ ಅಲ್ಲೇ ಕಟ್ಟೆಯ ಮೇಲೆ ಕುಳಿತು, ಅಪರಿಚಿತ ಮುಖಗಳನ್ನು ಗಮನಿಸುತ್ತಿದ್ದೆ. ಅಲ್ಲೆಲ್ಲೋ ಮಠದ ವಿದ್ಯಾರ್ಥಿಗಳ ಪ್ರಾರ್ಥನೆ, ಜಾತ್ರೆಯ ಪೀಪಿ, ಗಂಡಸರ ಗದರು, ಸಣ್ಣಮಕ್ಕಳ ಅಳು, ಹೆಣ್ಣುಮಕ್ಕಳ ಭಕ್ತಿ-ಸಡಗರ, ಪೋಲಿ ಹುಡುಗರ ನೋಟ-ನೂಕಾಟ, ಪೊಲೀಸರ ಲಾಠಿಮಾತು, ಆಗಾಗ ಎಲ್ಲಿಂದಲೋ ತೂರಿಬರುತ್ತಿದ್ದ ಉತ್ತತ್ತಿ, ಪಕ್ಕದಲ್ಲೇ ಬಂದುಬೀಳುತ್ತಿದ್ದ ಬಾಳೆಹಣ್ಣು, ಅಡಿಕೆ... ಹೊಟ್ಟೆಯೊಳಗೊಂದು ಸಣ್ಣ ಇಲಿ, ಮಬ್ಬುಗತ್ತಲು ಮತ್ತು‌ ತಮ್ಮ. ಗಂಟಲುಬ್ಬತೊಡಗಿತು. ಅಪ್ಪಾಜಿ ಬರದೇ ಇದ್ದರೆ ಏನು ಮಾಡುವುದು? ಕಣ್ಣುತುಂಬಿತು.

ಅಂತೂ ಒಂದೂವರೆ ತಾಸಿನ‌ ನಂತರ ಅಪ್ಪಾಜಿ ಬಂದರು. ಓಡಿಹೋಗಿ ತಬ್ಬಿಕೊಂಡೆ. ಯಾಕೆ ಲೇಟು ಅಂತ ಅತ್ತೇಬಿಟ್ಟೆ. 'ಹುಚ್ಚೀ ಇನ್ನೂ ಕಾರ್ಯಕ್ರಮ ಶುರು ಆಗಿಲ್ಲಲ್ಲ, ಅಳ್ತಾರೇನದಕ್ಕ?' ಎಂದು ರಮಿಸಿ ಮಠದೊಳಗೆ ಕರೆದೊಯ್ದರು. ಮಠದವರು ನಮ್ಮನ್ನು ಮಾತನಾಡಿಸಿ ಉಪಚರಿಸಿದರು. ಕೋಣೆಯ ಬಾಗಿಲು ಎಳೆಯುತ್ತಿದ್ದಂತೆ ನನ್ನೊಳಗಿನ ಗದ್ದಲವೂ ಕರಗಿತು, ಷಡ್ಜದ ಮೇಲೆ ಕೇಂದ್ರೀಕರಿಸಿದೆ. ಹತ್ತು ನಿಮಿಷ ರಿಯಾಝ್ ಮಾಡಿದ ನಂತರ ಸಂಪೂರ್ಣ ನನ್ನೊಳಗೆ ನಾ ನಿಂತೆ. ಅದು ಆ ಮಠದಲ್ಲಿ ನನಗೆ ಮೊದಲ ಕಾರ್ಯಕ್ರಮ. ಆದರೆ, ಖುಷಿಯೊಂದಿಗೆ ನಿಧಾನ ಆತಂಕ ಆವರಿಸಿದ್ದು ಆಮಂತ್ರಣದಲ್ಲಿ ಮಲ್ಲಿಕಾರ್ಜುನ ಮನ್ಸೂರರ ಹೆಸರು ನೆನಪಾಗಿ! ಹೇಗೆ ಅವರೆದುರು ಹಾಡುವುದು ಎಂದು ಒಳಗೊಳಗೆ ಮತ್ತೆ ಮೆತ್ತಗಾಗತೊಡಗಿದೆ. ಆಗಲೇ ಆ ಮರಿಸ್ವಾಮಿಯು ಈಬತ್ತಿ ಹಚ್ಚುತ್ತೇನೆಂದು ಬಂದಿದ್ದು! ನನ್ನ ಕಛೇರಿ ಮುಗಿಯುವ ತನಕವೂ ನೋಡೇನೋಡಿದೆ ಮನ್ಸೂರರು ಬರಲೇ ಇಲ್ಲ. ಕೊನೆಗೆ ಅವರಿಗೆ ಹುಷಾರಿಲ್ಲದ ಕಾರಣ ಬರಲಿಲ್ಲ ಎಂಬುದು ತಿಳಿಯಿತು. 'ಅಕ್ಕಾ ಕೇಳವ್ವಾ ನಾನೊಂದ ಕನಸ ಕಂಡೆ' ಕನಸಾಗೇ ಉಳಿಯಿತು. ಮುಂದಿನ ವರ್ಷದ ಶ್ರಾವಣದಲ್ಲಿ ಅವರ ಮಗಳು ನೀಲಾ ಎಂ. ಕೊಡ್ಲಿ ಆ ವಚನ ಹಾಡಿದರಾದರೂ ಯಾಕೋ ಗುಂಗು ಹಿಡಿಯಲಿಲ್ಲ. ಕಾರ್ಯಕ್ರಮ ಮುಗಿದ ನಂತರ... ರುಚಿಯಾದ ಗೋಧಿಹುಗ್ಗಿ, ಬದನೆಕಾಯಿ ಪಲ್ಯ, ಕಟಕರೊಟ್ಟಿ, ಬ್ಯಾಳಿಸಾರು, ಅನ್ನ ಎಂಬ ಪ್ರಸಾದ ಸ್ವೀಕರಿಸಿದ್ದಾಯಿತು. ಸಮಯ ಹನ್ನೆರಡಾಗಲು ಬಂದಿತ್ತು.‌ ಮಠದವರು ಫಲ ತಾಂಬೂಲು ಸಂಭಾವನೆಯೊಂದಿಗೆ ನಮ್ಮನ್ನು ಮಠದ ಕಾರಿನಲ್ಲಿ ಹತ್ತಿಸಿ ಬೀಳ್ಕೊಟ್ಟರು. ಮಧ್ಯರಾತ್ರಿ ಒಂದೂವರೆಗಂಟೆ ದೊಡ್ಡವಾಡದ ಮನೆ ತಲುಪಿದಾಗ. ಅಮ್ಮ ಡ್ರೈವರಿಗೆ ಚಹಾ ಮಾಡಿಕೊಟ್ಟರು. ಅಪ್ಪಾಜಿ ಅವರಿಗೆ ನಿಧಾನ ಹೊರಡಿ ಎಂದರು.

ಈಗ ಹೀಗೆ ಬರೆಯುತ್ತಿರುವಾಗ ಆರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ನೆನಪಾಗುತ್ತಿದೆ. ಅದೊಂದು ರಂಗಸಂಸ್ಥೆ. ಪ್ರತೀ ತಿಂಗಳು ಒಬ್ಬೊಬ್ಬ ಕವಿಗಳನ್ನು ಅತಿಥಿಗಳನ್ನಾಗಿ ಕರೆದು ಅವರಿಂದ ಅವರದೇ ಕಾವ್ಯವಾಚನ ಮಾಡಿಸುವ ಪರಿಕಲ್ಪನೆ ಅದಾಗಿತ್ತು. ಅದಕ್ಕೆ ಸರಕಾರದ ಪ್ರಾಯೋಜಕತ್ವವೂ ಇತ್ತು. ನನ್ನನ್ನೂ ಒಮ್ಮೆ ಕರೆದು, ನಿಮ್ಮ ಕವನಗಳನ್ನು ಓದಬೇಕು ಎಂದರು. ಕಾರ್ಯಕ್ರಮ ಮುಗಿದಾದ ಮೇಲೆ ಮನೆಗೆ ಹೋಗಲು ವ್ಯವಸ್ಥೆಯಾಗಬೇಕು, ರಾತ್ರಿಯಾಗುತ್ತದಲ್ಲ ಎಂದಿದ್ದೆ. ಅದಕ್ಕೇನಂತೆ ನಾವೆಲ್ಲ ವ್ಯವಸ್ಥೆ ಮಾಡುತ್ತೇವೆ ಬನ್ನಿ ಎಂದರು. ಕಾರ್ಯಕ್ರಮ ಮುಗಿದಾಗ ಒಂಬತ್ತೂ ಕಾಲು. ಆಯೋಜಕರಿಗೆ ನೆನಪಿಸಿದೆ. ಕೇಳಿಯೂ ಕೇಳದ ಹಾಗೆ ಓಡಾಡತೊಡಗಿದರು‌. ಮೂರು ಸಲ ಸಂಕೋಚದಿಂದ ಕೇಳಿದ್ದಕ್ಕೆ, 'ನನ್ನ ಸ್ಟೂಡೆಂಟ್ ಇದಾನೆ ಅವನೊಂದಿಗೆ ಬೈಕ್ ಮೇಲೆ ಹೋಗ್ತೀರಾ?' ಎಂದರು. ಮಾತು ಬರಲಿಲ್ಲ ಥಣ್ಣಗೆ ನಕ್ಕೆ. ಗಂಟೆ ಹತ್ತಾಗಿತ್ತು. ಯಾಕೆಂದರೆ ಆಯೋಜಕಿ ಕಲಾಮನೆತನದಿಂದ ಬಂದವರು. (ಮೈಸೂರು ರಸ್ತೆಯ ಮೇಲ್ಸೇತುವೆಯ ಮೇಲೆ ವರ್ಷಗಟ್ಟಲೆ ರಾತ್ರಿಯೂ ಒಬ್ಬಳೇ ಓಡಾಡಿದ್ದು ಬೇರೆ ಮಾತು) ಅವರ ಮಗಳೂ ಈವತ್ತು ಸೆಲೆಬ್ರಿಟಿ. ತಮ್ಮ ಮಗಳನ್ನು ಹೀಗೆ ಯಾರಾದರೂ ಟ್ರೀಟ್ ಮಾಡಿದರೆ ಸುಮ್ಮನಿರುತ್ತಿದ್ದರೆ? ಎನ್ನಿಸಿ ಕತ್ತಲಲ್ಲೇ ಅವರಿಂದ ದೂರ ದೂರ ಸರಿದೆ. ಹೀಗೆಲ್ಲ ಜಗತ್ತು! ಎಂದು ಆಕಾಶ ನೋಡುವ ಹೊತ್ತಿಗೆ ತಲೆಯ ಮೇಲೆ ಬೀದಿದೀಪದ ಬೆಳಕಿತ್ತು, ಮಳೆಯ ಸೆಳಕೂ ಇತ್ತು. ತೆಳುಬೇಗಡೆಯೊಳಗೆ ಜರ್ಬೇರಾ ತನ್ನ ಬಳಗದೊಂದಿಗೆ ನಗುತ್ತಿದ್ದಳು. ಆ ಗೊಂಚಲಿನ ಬೆಲೆ ನೂರು ರೂಪಾಯಿ ಇರಬಹುದು. ಅರೆ, ಇದರ ಬದಲಾಗಿ ಅಷ್ಟೇ ಹಣ ಕೊಟ್ಟಿದ್ದರೂ ಅದೊಂದು ಗೌರವ ಮತ್ತು ಪ್ರಯಾಣದ ವೆಚ್ಚಕ್ಕಾಗುತ್ತಿತ್ತಲ್ಲ? ಎಂದೆನಿಸಿತು...

ಹೀಗೆ ಇನ್ನೂ ಒಂದು ಪ್ರಸಂಗ ನೆನಪಾಗುತ್ತಿದೆ. ಬೆಂಗಳೂರಿನ ಪ್ರತಿಷ್ಠಿತ ರಂಗಮಂದಿರದಲ್ಲಿ ಒಂದು ನಾಟಕ. ಆ ನಾಟಕಕ್ಕೆ ನನ್ನ ಸಂಗೀತ ನಿರ್ದೇಶನ. ಬೆಳಗ್ಗೆ ನಾಟಕದ ತಾಲೀಮಿಗೆ ಒಂದು ಏರಿಯಾಗೆ ಬರಬೇಕೆಂದು ಹೇಳಿದ ಕಾರ್ಯಕ್ರಮದ ನಿರ್ದೇಶಕಿ ಫೋನ್ ತೆಗೆಯುತ್ತಿಲ್ಲ. ಅಡ್ರೆಸ್ ಗೊತ್ತಾಗದೆ ತಿರುಗಿದಾಗ ಆಟೋ ಬಿಲ್ ೪೦೦ ದಾಟಿತ್ತು. ಸುಮಾರು ಹತ್ತು ಹುಡುಗರು ಮುಕ್ಕಾಲು ದಿನ ತಾಲೀಮು ಮಾಡಿ ದಣಿದಿದ್ದರು. ಹಸಿವಾದರೂ ತೋರ್ಪಡಿಸದೆ ನಗುನಗುತ್ತಲೇ ಇದ್ದರು. ಕಾರ್ಯಕ್ರಮದ ನಿರ್ದೇಶಕಿ, ಇಷ್ಟು ಗಂಟೆಗೆ ವೇದಿಕೆಯ ಹತ್ತಿರ ಇರಬೇಕು ಎಂದು ಹೇಳಿಹೋದರು. ನನಗೋ ಈ ಮಕ್ಕಳು ರಾತ್ರಿಯತನಕ ಹೇಗಿರಬೇಕು? ತ್ರಾಣ ಬೇಡವಾ ಪ್ರದರ್ಶನಕ್ಕೆ ಎನ್ನಿಸಿ, ಎಲ್ಲರನ್ನೂ ಕರೆದುಕೊಂಡು ಅಲ್ಲೇ ಇದ್ದ ಹೋಟೆಲ್ ಗೆ ಹೋದೆ. ಹಸಿದಿದ್ದವು ಪಾಪ, ಗಬಗಬನೆ ದೋಸೆಯೋ ಮತ್ತೇನನ್ನೋ ತಿಂದವು. ನೀರುಗ್ಗಿದಾಗ ಸೊಪ್ಪು ಅರಳುವಂತೆ ಮುಖಗಳು ಅರಳಿದವು.‌

ನಾಟಕ ಮುಗಿದ ಮೇಲೆ ಕಾರ್ಯಕ್ರಮ ನಿರ್ದೇಶಕಿ, ಬಹಳ ಚೆನ್ನಾಗಾಯಿತು ಷೋ ಎಂದು ಹೊಗಳಿ ಖುಷಿಪಟ್ಟು ಬೀಳ್ಕೊಟ್ಟರು. ಹೊರಗೆ ಬಂದರೆ ಮೋಡಕ್ಕೂ ಗಂಟಲುಬ್ಬಿತ್ತು. 'ಹೆಂಗೋ‌ ಮಗಾ ಮನೆಗೆ ಹೋಗುವುದು' ಎಂದು ಹುಡುಗರು ಮುಖ‌ ಸಣ್ಣ ಮಾಡಿಕೊಂಡಿದ್ದರು. ಹುಡುಗಿಯರು, 'ನಮ್ ಅಮ್ಮ ಬೈತಾರೆ‌' ಎಂದು ಸೊಂಡಿ ಇಳಿಬಿಟ್ಟುಕೊಂಡಿದ್ದರು. ನಿಮಗೆಲ್ಲಾ ಮೊದಲ ನಾಟಕವಾ ಅಂದೆ. ಪಿಯು ಓದುವ ಹುಡುಗರು ಹೌದೆಂದು ಗೋಣು ಹಾಕಿದರು. ಅಷ್ಟರಲ್ಲಿ ಒಂದು  ಗುಂಪಿನಲ್ಲಿದ್ದ ಒಂದು ಹುಡುಗ ತನ್ನ ಅಪ್ಪನ‌ ಕಾರಿನಲ್ಲಿ‌ ಒಬ್ಬೊಬ್ಬರನ್ನೂ ಡ್ರಾಪ್ ಮಾಡುತ್ತೇನೆಂದ. ಮನೆಗೆ ಮರಳುವಾಗ ಬಿಳಿಕವರು ತೆಗೆದುನೋಡಿದರೆ ಐನೂರರ ನೋಟಿತ್ತು! ಪರ್ಸಿನೊಳಗೆ ವಾಪಸ್ ಇಡುವಾಗ ಬಿಳಿಚೀಟಿಯೊಂದು ಆಚೆಬಂದಿತು. ನೋಡಿದರೆ ಎಂಟನೂರು ರೂಪಾಯಿಯ ಹೋಟೆಲ್ ಬಿಲ್ಲು. ದೋಸೆ ತಿಂದಮೇಲೆ ಸಂತೃಪ್ತ ಮುಖಭಾವದ, ಆ ಕುಲುಕುಲು ಮಕ್ಕಳ ಮುಖ ನೆನಪಾಗಿ ಕಣ್ಣು ತುಂಬಿತು. ನೀನು ಮನೆಗೆ ತಲುಪಿದಾಗ ಒಂದು ಮೆಸೇಜ್ ಮಾಡು ಅಂದೆ ಡ್ರಾಪ್ ಮಾಡಿದ ಹುಡುಗನಿಗೆ.

ಯಾಕೋ ನಿದ್ದೆ ಹತ್ತಲಿಲ್ಲ. ಮುಗಿಲು ಹರಿದುಕೊಂಡು‌ ಬೀಳುತ್ತಿತ್ತು. ಮೊಬೈಲಿನ‌ ಎಡಮೂಲೆ ಮಿಣುಕಿತು. 'Madam, just now reached home, thanks for dhosa' ಎಂದು ಮೆಸೇಜ್ ಹಾಕಿದ್ದ ಆ ಹುಡುಗ. ಗಂಟೆ ಎರಡೂವರೆ, ಹೊರಗೆ ಧೋಮಳೆ. ಒಳಗೆ ಧಗೆ.

3 comments:

sunaath said...

ಮನಸ್ಸು ತುಂಬಿ ಬಂದಿತು; ಕಣ್ಣು ತುಂಬಿ ಬಂದವು. ಶ್ರೀದೇವಿ, ನೀವು ನಿಮ್ಮ ಅನುಭವಗಳನ್ನು ಬರೆಯುತ್ತಲೇ ಇದ್ದೀರಿ. ನಾನು ಓದಿ ಸಂತೋಷ ಪಡುತ್ತಲೇ ಇದ್ದೇನೆ.

ಆಲಾಪಿನಿ said...

thank u uncle.

Shailendra Bandagadde said...

ಮನಸು ಗಾಂಧಿ ಬಝಾರು!
ಅದೆಷ್ಟು ಮನಕಲಕುವಂತಿದೆ ಬರವಣಿಗೆ.