Wednesday, June 6, 2018

ಚಪ್ಪಾಳೆ ತಟ್ಟುವ ದೇವರು


ನೀವು ಆ ಬಾಗಿಲಿನಿಂದ ಇಳಿಯುವಾಗ
ನಾ ಅದೇ ಬಾಗಿಲಿನಿಂದ ಹತ್ತುತ್ತಿದ್ದೆ.
ನಿಮ್ಮ ಹಾಗೆ ನಾನೂ ಅಂದುಕೊಂಡೆ,
ಎರಡು ಚಮಚ ಉಭಯಕುಶಲೋಪರಿ
ಚಿಟಿಕೆ ವಿಶ್ವಾಸದ ನಗು ಸಾಕೆಂದು.
ಆದರೆ…     

ಟಾಟಾ ಮಾಡುವ ಬಸ್ಸಿನೊಳಗಿನ ಕೂಸಿಗೇನು ಗೊತ್ತು?
ಕಿಟಕಿಯಾಚೆಯ ಕೈಗಿಲಕಿ ಸೀಟಿಊದುವತನಕವೆಂದು. 

ಮರಗಳು ರಸ್ತೆಯನ್ನೋ ರಸ್ತೆಯು ಮರಗಳನ್ನೋ
ಯಾವುದನ್ನು ಯಾವುದು ನುಂಗುತ್ತಿದೆ?;
ಕೂಸಿಗಿದು ನಿಲುಕದಿರಬಹುದು.
ಅದರೆ, ಕೊಸರಿಕೊಂಡ ಕೈಗಳ ನೆನಪು?
ಉಮ್ಮಳಿಸುವ ದುಃಖಕ್ಕೆ ಹತ್ತಾರು ಕೈಗಳ ಸಾಂತ್ವನ,
ಕೂಸಿನ ಚಿತ್ತವೋ ಅದೇ ಕಿಟಕಿಯತ್ತ.

ಪಕ್ಕದ ಕಿಟಕಿಗಾತಿರುವ ನಿಮಗೆ
ಯಾರೋ ‘ಸ್ಟ್ಯಾಚೂ’ ಹೇಳಿಹೋದಂತಿದೆ.
ಅರ್ಥವಾಗುತ್ತಿಲ್ಲವಲ್ಲ?  
-ಮರವು ರಸ್ತೆಯನ್ನೋರಸ್ತೆಯು ಮರವನ್ನೋ...
ನಿಮ್ಮ ಬೆರಳುಗಳು ಸರಳಿಗೆ ಬಿಗಿಯುತ್ತಿವೆ,  
ಮುಚ್ಚಿದ ಕಿಟಕಿಯಿಂದಲೂ ಕಸ ಹಾರುತ್ತಿದೆ
ಕರೆಯದೆ ಕರವಸ್ತ್ರ ಇಣುಕುತ್ತಿದೆ;  
ದೂರದ ಹೊಲದಲ್ಲಿ ಒಡೆದ ಒಡ್ಡನ್ನು
ಯಾರೋ ಕಟ್ಟುತ್ತಿರುವ ದೃಶ್ಯ
ಸರಕ್ಕನೆ ಸರಿದುಹೋಗಿದೆ.   

ಮತ್ತೂ ಕೂಸಿನ ಕಣ್ಣನ್ನೇ ಹಿಂಬಾಲಿಸುತ್ತಿದ್ದೀರಿ…

ದಾರಿಯ ಅಂಬಾಹೊಳೆಯ ನೀರು 
ಹೆಚ್ಚಿದ ಸವತೆಬಿಚ್ಚಿದ ದಾಳಿಂಬೆ
ಬಣ್ಣದ ಗಿರಗಿಟ್ಲೆ, ಕಪ್ಪು ಕನ್ನಡಕ
ಉದ್ದ ಪೆನ್ನು, ಹಾರುವ ಹದ್ದು
ಬೂದು ಮೋಡ, ತಪ್ಪಿಸಿಕೊಂಡ ತೋಳ
ಕೊರೆದಿಟ್ಟ ಹಸಿರಹೊಲಅಬ್ಬಲಿಗೆಯ ದಂಡೆ
ಗಡಗಡೆಯಿಲ್ಲದ ಬಾವಿಒಂಟಿ ಗುಡಿಸಲಿ ದಂಟಿನಪಡಕು 
ಹಾರಿ ಚೀರುವ ಪೀಪಿಚಪ್ಪಾಳೆ ತಟ್ಟು ದೇವರು...

ಸೀಟಿ ಊದುವತನಕ ಹಾದಿಸೀಳುವ ಬಸ್ಸು.

ಆಗಾಗ ಮಗುವಿನ ಕಣ್ಣಗೊಂಬೆಗೆ ಕಣ್ಣ ಜೋಡಿಸುತ್ತೀರಿ
ಬದಲಾಗದ ಅವೇ ಸಾಲುಗಳು ಮತ್ತದೇ ರಾಗ.
ಅದರ ಅಳ್ಳೆತ್ತಿ ಸವರಿ ಪರಿಮಳವ ಹೀರಬೇಕೆನ್ನುತ್ತೀರಿ
ತಬ್ಬಿ ಕಾಡುತ್ತದೆ ಎಂದೋ ಕಳೆದ ನಿಮ್ಮದೇ ಗಿಲಕಿ,
ಸಣ್ಣಗೆ ಬೆವರಿದ ಕೈಗಳನ್ನು ಜೇಬಿನೊಳಗಿಳಿಬಿಡದೆ  
ಎದೆಗೆ ಕಟ್ಟಿಕೊಂಡುಬಿಡುತ್ತೀರಿ.  

ಸೀಟಿ ಇರುವುದೇ ಊದಲು; ಬಸ್ಸೂ ನಿಲ್ಲುತ್ತದೆ
-ಸದ್ದೂ ಮಾತು ಮುನಿಸೂ.
ಭುಜಬಳಸಿ ನಿದ್ದೆಹೋದ ಕೂಸಿನ‌ ಕೈ
ಗಾಳಿಯಲ್ಲಿ ಕಿಟಕಿ ಹುಡುಕುತ್ತಿದ್ದರೆ
ಅದರೆದೆಯೊಳಗೆ ಗಿಲಕಿಯದೇ ಕನಸು.

ಎದ್ದ ದೂಳುರಸ್ತೆಗುಂಟ ಮಗುವ ಹಿಂಬಾಲಿಸುತ್ತೀರಿ.

ರಿಂವ್ ರಿಂವ್ ಗಾಳಿ ಟಿಂವ್ವ ಟಿಂವ್ವ ಹಕ್ಕಿ
ಬೆಚ್ಚಿದ ಮಗು ಚಿಟ್ಟನೇ ಚೀರುತ್ತದೆ;
ಬಿದಿರೊಳಗೆ ತೂರಿದ ಆಳೆತ್ತರ ಕಾಲು
ಮರದಗಲದ ಕೈ, ಹೋಳಿಟ್ಟ ತೆಂಗಿನಬಟ್ಟಲಗಣ್ಣು
ಕಿವಿಯಿಂದ ಕಿವಿಗೆ ಸೀಳಿದ ಬಾಯಿ, ಜೋತುಬಿದ್ದ ತೊಂಡೆಮೂಗು
ನಿಮ್ಮನ್ನು ನೀವು ಎರಡೂ ಕೈಗಳಿಂದ ಮುಟ್ಟಿಕೊಳ್ಳುತ್ತಿದ್ದೀರಿ
ಮಗುವದು ಕೇಕೆ ಹಾಕುತ್ತಿದೆ.
ಅಲ್ಲೆಲ್ಲೋ ಹೊಡೆದುಕೊಳ್ಳುತ್ತಿವೆ ಗುಡಿಯೊಳಗಿನ ಗಂಟೆಜಾಗಟೆಶಂಖಗಳು
ಸ್ಪರ್ಷಕ್ಕೂ ನಿಲುಕದೆ ಶಬ್ದಕ್ಕೂ…  

ಕಾಲಬುಡದ ನೆರಳನ್ನು ಮತ್ತೆ ಮತ್ತೆ ನೋಡುತ್ತಿದ್ದೀರಿ;
ಪುಟ್ಟ ಗಿಲಕಿಯೊಂದು ಕಾಲಿಗಪ್ಪಿಕೊಂಡಿದ್ದರೆ,
ಕೂಸಿನ ಕಣ್ಣಲ್ಲಿ ಚಂದಿರ ಉಂಗುರ ತೊಟ್ಟು ನಿಂತಿದ್ದಾನೆ.  

-ಶ್ರೀದೇವಿ ಕಳಸದ.
(೬/೫/೧೮, ಮುಕ್ತಛಂದ, ಪ್ರಜಾವಾಣಿ)